ಮಂಗಳವಾರ, ಮೇ 11, 2021
20 °C

ಕೊಪ್ಪಳ: ಶೇ 71 ಮತದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸೋಮವಾರ ಶಾಂತಿಯುತವಾಗಿ ನಡೆದಿದ್ದು ಒಟ್ಟಾರೆ ಶೇ 71.49ರಷ್ಟು ಮತದಾನವಾಗಿದೆ.ಕಣದಲ್ಲಿದ್ದ 14 ಅಭ್ಯರ್ಥಿಗಳ ಹಣೆಬರಹವನ್ನು ಮತದಾರರು ಸೋಮವಾರ ಬರೆದಿದ್ದು, ವಿಜಯದ ಮಾಲೆ ಯಾರಿಗೆ ಎಂಬುದು ಇದೇ 29ರಂದು ಮಧ್ಯಾಹ್ನ ಬಹಿರಂಗವಾಗಲಿದೆ. ಬೆಳಿಗ್ಗೆ 8ಕ್ಕೆ ಮತದಾನ ಆರಂಭವಾಗುತ್ತಿದ್ದಂತೆಯೇ ಜನ ಗುಂಪಿನಲ್ಲಿ ಬಂದು ಮತ ಚಲಾಯಿಸಿದರು. ಆರಂಭದಲ್ಲಿ ಮಂದಗತಿಯಲ್ಲಿ ಸಾಗಿದ ಮತದಾನ ಕ್ರಮೇಣ ಚುರುಕುಗೊಂಡಿತು.ಜೆಡಿಎಸ್- ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಹಾಗೂ ಗ್ರಾಮವೊಂದರಲ್ಲಿ ಮತಯಂತ್ರ ದೋಷದಿಂದಾಗಿ ಮತದಾನ ತಡವಾಗಿ ಆರಂಭಗೊಂಡ ಘಟನೆಗಳನ್ನು ಹೊರತುಪಡಿಸಿದರೆ ಮತದಾನ ಪ್ರಕ್ರಿಯೆ ಸುಗಮವಾಗಿ ನಡೆಯಿತು.ಬಿಜೆಪಿಯ ಅಭ್ಯರ್ಥಿ ಸಂಗಣ್ಣ ಕರಡಿ ಅವರು ಇಲ್ಲಿನ ವಿಜಯನಗರ ಬಡಾವಣೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.ಕಾಂಗ್ರೆಸ್ ಅಭ್ಯರ್ಥಿ ಕೆ.ಬಸವರಾಜ ಹಿಟ್ನಾಳ್ ಸ್ವಗ್ರಾಮ ಹಿಟ್ನಾಳ್‌ನಲ್ಲಿ ಹಾಗೂ ಜೆಡಿಎಸ್ ಅಭ್ಯರ್ಥಿ ಪ್ರದೀಪಗೌಡ ಮಾಲಿಪಾಟೀಲ ಅವರು ಕವಲೂರು ಗ್ರಾಮದಲ್ಲಿ ಹಕ್ಕು ಚಲಾಯಿಸಿದರು.ತಾಲ್ಲೂಕಿನ ಹೊರತಟ್ನಾಳ ಗ್ರಾಮದಲ್ಲಿ ಮತದಾರರಿಗೆ ಹಣ ಹಂಚುತ್ತಿದ್ದ ಆರೋಪದ ಮೇಲೆ ಗ್ರಾಮೀಣ ಠಾಣೆ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರು ಎನ್ನಲಾದ ಭೀಮರೆಡ್ಡಿ, ಕಾಸೀಂ ಅಲಿ ಹಾಗೂ ಸುಭಾಷ್‌ಚಂದ್ರ ಎಂಬುವವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಬಂಧಿತರಿಂದ 11 ಸಾವಿರ ರೂಪಾಯಿಗಳನ್ನು ಜಪ್ತಿ ಮಾಡಲಾಗಿದೆ.ತಾಲ್ಲೂಕಿನ ಬಿಸರಹಳ್ಳಿ ಗ್ರಾಮದಲ್ಲಿ ಮತ ಯಂತ್ರದಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಮತದಾನ ಪ್ರಕ್ರಿಯೆ 45 ನಿಮಿಷ ತಡವಾಗಿ ಆರಂಭವಾಯಿತು.ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ಜೀಪೊಂದು ತಾಲ್ಲೂಕಿನ ಮೈನಳ್ಳಿ ಗ್ರಾಮದ ಬಳಿ ಪಲ್ಟಿಯಾದ ಪರಿಣಾಮ ಒಬ್ಬ ಸಬ್‌ಇನ್‌ಸ್ಪೆಕ್ಟರ್, ಇಬ್ಬರು ಪೊಲೀಸ್ ಕಾನ್‌ಸ್ಟೆಬಲ್‌ಗಳು ಗಾಯಗೊಂಡಿದ್ದಾರೆ. ತಲೆಗೆ ಪೆಟ್ಟು ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಗಾಯಗಳಾಗಿರುವ ಗುಲ್ಬರ್ಗ ಗ್ರಾಮೀಣ ಠಾಣೆ ಸಬ್‌ಇನ್‌ಸ್ಪೆಕ್ಟರ್ ಬಸವರಾಜ ಹಾಗರಗಿ ಎಂಬುವವರನ್ನು ತಾಲ್ಲೂಕಿನ ಹಿರೇಸಿಂದೋಗಿ ಗ್ರಾಮದ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.