ಬುಧವಾರ, ಜನವರಿ 22, 2020
19 °C

ಕೊಪ್ಪಳ: 722 ಶಿಶು ಮರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುವರ್ಣಸೌಧ (ಬೆಳಗಾವಿ): ಕೊಪ್ಪಳ ಜಿಲ್ಲೆಯಲ್ಲಿ 2012–13ರಲ್ಲಿ ಜನನ­ವಾದ ಒಂದು ತಿಂಗಳೊಳಗೆ 722 ಶಿಶುಗಳು ಮರಣ ಹೊಂದಿವೆ. ಇದೇ ಅವಧಿಯಲ್ಲಿ 921 ಮಕ್ಕಳು ಗರ್ಭಾ­ವಸ್ಥೆಯಲ್ಲಿ ಮರಣಹೊಂದಿವೆ. ಈ ವರ್ಷದ ಮೊದಲ ಆರು ತಿಂಗಳಲ್ಲಿ ಈ ಸಂಖ್ಯೆ ಅನುಕ್ರಮವಾಗಿ 341 ಮತ್ತು 439 ಇದೆ.ವಿಧಾನ ಪರಿಷತ್‌ನಲ್ಲಿ ಸೋಮ­ವಾರ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಹಾಲಪ್ಪ ಆಚಾರ್‌ ಅವರ ಪ್ರಶ್ನೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್‌ ಈ ಉತ್ತರ ನೀಡಿದರು.ಜಿಲ್ಲೆಯಲ್ಲಿ ವೈದ್ಯರ ಕೊರತೆ ಇರುವುದು ಈ ಸಮಸ್ಯೆಗೆ ಪ್ರಮುಖ ಕಾರಣ ಎಂದು ಅವರು ತಿಳಿಸಿದರು.ಕೊಪ್ಪಳ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಮಕ್ಕಳ ತಜ್ಞರ ಕೊರತೆ ಇದೆ. ಅಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲೂ ಮಕ್ಕಳ ತಜ್ಞರು ಇಲ್ಲ. ಜಿಲ್ಲಾ ಆಸ್ಪತ್ರೆಗಳಲ್ಲಿ ಹೆರಿಗೆ ಆದ ಬಳಿಕ ನವಜಾತ ಶಿಶುಗಳನ್ನು ಹೆಚ್ಚಿನ ಚಿಕಿತ್ಸೆ­ಗಾಗಿ ರಾಯಚೂರು ಆಸ್ಪತ್ರೆಗೆ ಕಳುಹಿಸಿ­ಕೊಡಲಾಗುತ್ತಿದೆ. ಇದ­ರಿಂದಾಗಿ ಶಿಶು ಮರಣದ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂಬ ವಿವರ ಒದಗಿಸಿದರು.ಕೊಪ್ಪಳ ಜಿಲ್ಲೆಯ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ 1,220 ಹುದ್ದೆಗಳ ಮಂಜೂರಾತಿ ಇದೆ. ಆದರೆ, 735 ಸಿಬ್ಬಂದಿ ಮಾತ್ರ ಇದ್ದಾರೆ. 485 ಹುದ್ದೆಗಳು ಖಾಲಿ ಇವೆ. 114 ವೈದ್ಯರ ಹುದ್ದೆಗಳ ಪೈಕಿ 59 ಹುದ್ದೆಗಳು ಖಾಲಿ ಇವೆ. ಜಿಲ್ಲಾ ಆಸ್ಪತ್ರೆಗಳಲ್ಲಿ 82 ಹುದ್ದೆಗಳ ಮಂಜೂರಾತಿ ಇದ್ದು, 34 ಖಾಲಿ ಇವೆ ಎಂದು ಸಚಿವರು ತಿಳಿಸಿದರು.ಲಕ್ಷ ಕೊಟ್ಟರೂ ಬರುವುದಿಲ್ಲ: ‘ಕೊಪ್ಪಳದ ಜಿಲ್ಲಾ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರ ನೇಮಕಾತಿಗೆ ಪ್ರಯತ್ನ ಮುಂದುವರಿದಿದ್ದು, ಮಾಸಿಕ ₨1.25 ಲಕ್ಷ ವೇತನ ಕೊಡಲು ಸರ್ಕಾರ ಸಿದ್ಧವಿದ್ದರೂ, ವೈದ್ಯರು ಸಿಗುತ್ತಿಲ್ಲ’ ಎಂದು ಖಾದರ್‌ ಹೇಳಿದರು.‘ಮಕ್ಕಳ ತಜ್ಞರ ಹುದ್ದೆಗೆ ಮಾಸಿಕ ₨ 80 ಸಾವಿರ ವೇತನ ನಿಗದಿ ಮಾಡಲಾ­ಗಿದೆ. ಈ ಜಿಲ್ಲೆ ‘ಸಿ’ ವಲಯದಲ್ಲಿ ಸೇರಿ­ರುವುದರಿಂದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್‌ ಯೋಜನೆಯ ಅಡಿಯಲ್ಲಿ ₨ 20 ಸಾವಿರ ಹೆಚ್ಚುವರಿ ವೇತನ ನೀಡಬಹುದು. ಯುನಿಸೆಫ್‌₨ 25 ಸಾವಿರ ನೆರವು ನೀಡುತ್ತಿದೆ. ಒಟ್ಟು ಮಾಸಿಕ ₨ 1.25 ಲಕ್ಷ ವೇತನ ಕೊಡಲು ಸರ್ಕಾರ ಸಿದ್ಧವಿದೆ. ಆದರೆ, ಯಾರೊಬ್ಬರೂ ಸಂದರ್ಶನಕ್ಕೆ ಹಾಜರಾಗಿಲ್ಲ’ ಎಂದರು.ದಿನದ ಆಧಾರದಲ್ಲಿ, ಗಂಟೆಯ ಆಧಾರದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ನೀಡುವಂತೆ ಖಾಸಗಿ ವೈದ್ಯರಿಗೆ ಮನವಿ ಮಾಡಲಾಗಿದೆ. ಸರ್ಕಾರಿ ಆಸ್ಪತ್ರೆಗಳಿಗೆ ವೈದ್ಯರನ್ನು ನೇಮಿಸಲು ಸರ್ಕಾರ ಎಲ್ಲ ಬಗೆಯ ಪ್ರಯತ್ನವನ್ನೂ ಮಾಡುತ್ತಿದೆ. ಸಂವಿಧಾನದ 371(ಜೆ) ಕಲಂ ಜಾರಿಯಾದ ಬಳಿಕೆ ಈ ಸಮಸ್ಯೆಗೆ ಪರಿಹಾರ ದೊರೆಯುವ ನಿರೀಕ್ಷೆ ಇದೆ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)