ಕೊಪ್ಪ: ಸಂಕಷ್ಟದಲ್ಲಿ ಕರಿಮನೆ ಬ್ಯಾಂಕ್

7

ಕೊಪ್ಪ: ಸಂಕಷ್ಟದಲ್ಲಿ ಕರಿಮನೆ ಬ್ಯಾಂಕ್

Published:
Updated:

ಕೊಪ್ಪ: ತಾಲ್ಲೂಕಿನ ಲೋಕನಾಥಪುರದ ಕರಿಮನೆ ಶ್ರೀರಾಮ ಸೇವಾ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ ಇಂದು ಸಾಲ ವಸೂಲಾತಿ­ಯಲ್ಲಿನ ತೀವ್ರ ಹಿನ್ನಡೆಯಿಂದಾಗಿ ಸರ್ಕಾರ ಮತ್ತು ನಬಾರ್ಡ್ ನೆರವು ಪಡೆ­ಯುವ ಅರ್ಹತೆಯನ್ನೇ ಕಳೆದು­ಕೊಂಡಿದ್ದು,  ಪ್ರಾಮಾಣಿಕ ಸಾಲಗಾರ­ರಿಗೂ ಸಾಲ ವಿತರಿಸಲಾಗದ ಸಂಕಷ್ಟಕ್ಕೆ ಸಿಲುಕಿದೆ. ಮಾತ್ರವಲ್ಲದೆ ಷೇರುದಾರರ ಠೇವಣಿ ಹಣವನ್ನೂ ಸಾಲಗಾರರಿಗೆ ವಿತರಿಸಿ ಇದೀಗ ಠೇವಣಿ ಹಣಕ್ಕೆ ಬಡ್ಡಿ ಪಾವತಿಸಲಾಗದ ದುಃಸ್ಥಿತಿಗೆ ತಲುಪಿದೆ ಎಂದು ಬ್ಯಾಂಕಿನ ಅಧ್ಯಕ್ಷ ಎಚ್.ಸಿ. ವಾಸುದೇವ ಹೇಳಿದರು.ಶುಕ್ರವಾರ ನಡೆದ ಬ್ಯಾಂಕಿನ ನಿರ್ದೇ­ಶಕ ಮಂಡಳಿ ಸಭೆಯ ನಂತರ ಸುದ್ದಿ­ಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕ್‌ ಇಂತಹ ದುಸ್ಥಿತಿ ತಲು­ಪಲು ಕಾರಣರಾಗಿರುವವರು ಹಿಂದಿನ ಕೆಲ ಅಧ್ಯಕ್ಷರೇ ಎಂಬುದು ಗಮನಾರ್ಹ ಸಂಗತಿ. ಅಧಿಕ ಸಾಲಪಡೆದು ಸುಸ್ತ­ದಾರ­ರಾಗಿರುವ  ಬ್ಯಾಂಕಿನ ಮೂವರು ಮಾಜಿ ಅಧ್ಯಕ್ಷರು ಸೇರಿದಂತೆ ನಾಲ್ಕು ಜನ ಸುಸ್ತಿದಾರರ ಆಸ್ತಿ ಹರಾಜಿಗೆ ಬ್ಯಾಂಕ್ ಮುಂದಾಗಿದ್ದು, ಹರಾಜು ದಿನಾಂಕವೂ ನಿಗದಿಯಾಗಿದೆ ಎಂದರು.ನಬಾರ್ಡ್ ಹಾಗೂ ಸ್ವಂತ ನಿಧಿಯಿಂದ ಬ್ಯಾಂಕ್ ನೀಡಿರುವ ರೂ. 5ಕೋಟಿಗೂ ಅಧಿಕ ಸಾಲ ಮರು­ಪಾವತಿ­­ಯಾಗದೆ ಬಾಕಿ ಉಳಿದಿದೆ.  ಸುಮಾರು ರೂ. 2ಕೋಟಿ ಸಾಲ ವಸೂಲಾತಿಗಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಚಿಕ್ಕಮಗಳೂರು ಸಿವಿಲ್ ನ್ಯಾಯಾಲಯದ ಆದೇಶದಂತೆ ಅಧಿಕ ಬಾಕಿದಾರರಾದ ಮಾಜಿ ಅಧ್ಯಕ್ಷ ವಿ.ಸಿ. ಉಮೇಶ್, ಬಿ.ಎನ್. ಭಾಸ್ಕರ್, ಬಿ.ಎಂ. ವಿಜಯೇಂದ್ರ ನಾಯ್ಕ ಹಾಗೂ ಖಾಸಗಿ ಬಸ್ ಮಾಲೀಕ ಕೆ.ಎನ್. ಶ್ರೀನಿವಾಸ್‌ರ ಜಮೀನು ಹರಾಜಿಗೆ ದಿನಾಂಕ ನಿಗದಿಯಾಗಿದೆ ಎಂದರು.ಮಾಜಿ ಅಧ್ಯಕ್ಷರಾದ ವಿ.ಸಿ. ಉಮೇಶ್‌ ಅವರ ಜಮೀನು ಅಕ್ಟೋ­ಬರ್ 9ರಂದು, ಬಿ.ಎನ್. ಭಾಸ್ಕರ್‌ ಅವರ ಜಮೀನು ಅಕ್ಟೋಬರ್ 17­ರಂದು, ಬಿ.ಎಂ. ವಿಜಯೇಂದ್ರ ನಾಯ್ಕರ ಜಮೀನು ಅಕ್ಟೋಬರ್ 22ರಂದು ಹಾಗೂ ಕೆ.ಎನ್. ಶ್ರೀನಿವಾಸ್‌ರ ಜಮೀನು ಅಕ್ಟೋಬರ್ 12ರಂದು ಬಹಿರಂಗ ಹರಾಜು ಮಾಡಲಾಗು­ತ್ತಿದ್ದು, ಬಿಡ್ಡುದಾರರು ಹೆಚ್ಚಿನ ಮಾಹಿತಿಗೆ ಬ್ಯಾಂಕ್‌ನ್ನು ಸಂಪರ್ಕಿಸಲು ಅವರು ಕೋರಿದ್ದಾರೆ.

ಸಾಲ ಮರುಪಾವತಿಯಿಲ್ಲದೆ ಬ್ಯಾಂಕ್ ನಬಾರ್ಡ್ ನೆರವು ಪಡೆಯುವ ಅರ್ಹತೆ ಕಳೆದುಕೊಂಡಿರುವುದರಿಂದ ಸರ್ಕಾರದ ರಿಯಾಯಿತಿ ದರದ ಸಾಲ ಸೌಲಭ್ಯ ರೈತರಿಗೆ ದೊರೆಯದಂತಾಗಿದೆ ಎಂದ ಅವರು, ಪ್ರಾಮಾಣಿಕವಾಗಿ ಮರುಪಾವತಿ ಮಾಡಿರುವ ಸಣ್ಣ ಹಿಡುವಳಿ­ದಾರರು ಪುನಃ ಸಾಲ ಪಡೆಯಲಾಗುತ್ತಿಲ್ಲ ಎಂದರು.ಬ್ಯಾಂಕಿನಲ್ಲಿ ಠೇವಣಿ ಇಟ್ಟಿರುವ ಗ್ರಾಹಕರು ಠೇವಣಿ ಹಿಂತಿರುಗಿಸಲು ಒತ್ತಾಯ ತರುತ್ತಿದ್ದು ಹಿಂತಿರುಗಿಸ­ಲಾಗದ ಅಸಾಹಯಕ ಸ್ಥಿತಿಯಲ್ಲಿ ಬ್ಯಾಂಕ್ ನಡೆಯುತ್ತಿದೆ. ಪ್ರಸಕ್ತ ನಿರ್ದೇ­ಶಕ ಮಂಡಳಿ ಯಾವ ಗೌರವಧನ ಪಡೆ­ಯದೆ ಸೇವೆ ಸಲ್ಲಿಸುತ್ತಿದ್ದು, ಸಾಲ  ಮರುಪಾವತಿಗೆ ಎಲ್ಲಾ ರೀತಿಯಿಂದ ಮನ­ವೊಲಿ­ಸುವ ಪ್ರಯತ್ನ ಮಾಡ­ಲಾಗಿದೆ. ಈಗಾಗಲೇ ದೊಡ್ಡಮೊತ್ತದ ಸಾಲ ವಸೂಲಾತಿಗೆ ಕ್ರಮಕೈಗೊಳ್ಳ­ಲಾಗಿದೆ ಎಂದರು.ಹಿಂದಿನ ಸರ್ಕಾರದಿಂದ ಬರಬೇಕಿದ್ದ ಬಡ್ಡಿ ರಿಯಾಯಿತಿ ಬಾಬ್ತು ರೂ. 8ಲಕ್ಷ ಬಾಕಿ ಉಳಿದುಕೊಂಡಿದೆ. ಹೊಸ ಸರ್ಕಾರಕ್ಕೆ ಪರಿಶಿಷ್ಟ ಜಾತಿ, ಪಂಗಡದವರ ರೂ. 37ಲಕ್ಷ ಸಾಲ ಮನ್ನಾ ಹಣ ಪಾವತಿಗೆ ಕೋರಿಕೆ ಸಲ್ಲಿಸಲಾಗಿದೆ ಎಂದರು. ಪುನಃಶ್ಚೇತನಕ್ಕಾಗಿ ಮೊಟ್ಟಮೊದಲ ಬಾರಿಗೆ ರೂ. 1ಕೋಟಿ ಷೇರು ಧನ ನೀಡುವಂತೆ ಸರ್ಕಾರವನ್ನು ಕೋರ­ಲಾಗಿದೆ. ಶೇ. 90ರಷ್ಟು ರೈತರ ಸಾಲ ಮರು ಹೊಂದಾಣಿಕೆ ಮಾಡಲಾಗಿದೆ. ಮರು ಹೊಂದಾಣಿಕೆಗೆ ಒಳಪಡದ ರೈತರ ಸಾಲ ವಸೂಲಾತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಉಪಾಧ್ಯಕ್ಷೆ ಸೌಮ್ಯ, ನಿರ್ದೇಶಕ­ರಾದ ಕೆ.ಆರ್. ವೇಣುಗೋಪಾಲ್, ಎಚ್.­ವಿ.­ಮಂಜುನಾಥ್, ಬಿ.ಎಂ.­ಸುದೇವ್, ಕೆ.ರಾಮೇಗೌಡ, ಕೆ.ಎಸ್.­ಜಯರಾಜ್, ಸಿ.ಎನ್.ಲಕ್ಷ್ಮೀ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry