ಕೊಬ್ಬರಿಗೆ ಬಂಪರ್ ಬೆಲೆ... ಭರವಸೆಯ ವರಸೆ

7

ಕೊಬ್ಬರಿಗೆ ಬಂಪರ್ ಬೆಲೆ... ಭರವಸೆಯ ವರಸೆ

Published:
Updated:

ತೆಂಗು ಬೆಳೆಗಾರರ ಮೊಗದಲ್ಲಿ ಇದೀಗ ಮಂದಹಾಸ. ದಶಕದಿಂದ ಸಂಕಷ್ಟದ ಮಡುವಿನಲ್ಲೆ ಮುಳುಗಿದ್ದ ಕೃಷಿಕರಲ್ಲಿ ಭರವಸೆಯ ಹೊಂಬೆಳಕು. ‘2010ರ ಡಿಸೆಂಬರ್’ ಕಮರಿದ ರೈತರ ಕನಸುಗಳು ಮತ್ತೆ ಚಿಗುರುವಂತೆ ಮಾಡಿದೆ.ತೆಂಗು ಬೆಳೆ ಪ್ರಮುಖ ಉತ್ಪನ್ನ ‘ಕೊಬ್ಬರಿ’ ಧಾರಣೆಯಲ್ಲಿ ಹದಿನೈದು ದಿನದೊಳಗೆ ಕ್ವಿಂಟಲ್‌ಗೆ ಎರಡು ಸಾವಿರ ರೂಪಾಯಿ ಏರಿಕೆ ಕಂಡು ಬಂದಿದ್ದೇ ಇದಕ್ಕೆ ಕಾರಣ. ನಿರಂತರ ಬಾಧೆಯಿಂದ ಬಳಲಿದ್ದ ಕೊಬ್ಬರಿ ಬೆಳೆಗಾರ ಇದೀಗ ಮಾರುಕಟ್ಟೆಯಲ್ಲಿನ ಬೆಲೆಯಿಂದ ಕೊಂಚ ನಿರಾಳ.ತಿಪಟೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಡಿಸೆಂಬರ್ 18ರ ಶನಿವಾರ ಕೊಬ್ಬರಿ ಕ್ವಿಂಟಲ್‌ಗೆ  ್ಙ 5866ರಿಂದ ್ಙ 6660 ವರೆಗೆ ಮಾರಾಟವಾಯಿತು. ನಂತರ ಬೆಲೆ ಕೊಂಚ ಕೊಂಚ ಏರುತ್ತಲೆ ಇದೆ. ಅರಸೀಕೆರೆ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲೂ ಡಿ.28ರ ಮಂಗಳವಾರ ಕ್ವಿಂಟಲ್‌ಗೆ ್ಙ 6900ರಿಂದ ್ಙ 7406ಗೆ ಮಾರಾಟವಾಗುವ ಮೂಲಕ ದಾಖಲೆ ನಿರ್ಮಿಸಿದೆ. 29ರ ಬುಧವಾರ ತಿಪಟೂರಿನಲ್ಲಿ ್ಙ 7,600ಗೆ ಮಾರಾಟವಾಗಿದೆ. ಇದು ತೆಂಗು ಬೆಳೆಗಾರರ ಪಾಲಿಗೆ ಶುಕ್ರದೆಸೆ.ಕೊಬ್ಬರಿ ಮಾರುಕಟ್ಟೆಯಲ್ಲಿ ಏಷ್ಯಾ ಖಂಡದಲ್ಲೆ ತನ್ನದೇ ಆದ ಮಹತ್ವ ಹೊಂದಿರುವ ತಿಪಟೂರು ಹಾಗೂ ಅರಸೀಕೆರೆ ಮಾರುಕಟ್ಟೆಗಳು 2010ರ ಡಿಸೆಂಬರ್ ತಿಂಗಳಲ್ಲಿ ಪೈಪೋಟಿಗೆ ಇಳಿದಂತೆ ದಾಖಲೆ ಬೆಲೆಗೆ ಕೊಬ್ಬರಿ ಖರೀದಿ ನಡೆಸಿವೆ. ಬೇಳೆಕಾಳು ಕ್ವಿಂಟಲ್‌ಗೆ ಹತ್ತು ಸಹಸ್ರ ರೂಪಾಯಿ ದಾಟಿದ್ದರೂ; ಕೊಬ್ಬರಿ ಆರು ಸಹಸ್ರ ದಾಟಿದ್ದೇ ಹೆಚ್ಚು. 1992ರಲ್ಲಿ ಒಮ್ಮೆ ಮಾತ್ರ ಎಂಟು ಸಹಸ್ರಕ್ಕೆ ಮಾರಾಟವಾಗಿತ್ತು. ತುರುವೇಕೆರೆ ಮಾರುಕಟ್ಟೆಯಲ್ಲಿ 2005ರ ಅಕ್ಟೋಬರ್‌ನಲ್ಲಿ ್ಙ 8,500ಗೆ ಮಾರಾಟವಾದ ದಾಖಲೆ ಇದೆ. ಆದರೆ ಅದು ಆ ದಿನಕ್ಕೆ ಸೀಮಿತವಾಗಿ, ಅಲ್ಲಿಂದ ಮತ್ತೆ ಪಾತಾಳಕ್ಕೆ ಕುಸಿಯಿತು.ಎಷ್ಟೆಲ್ಲ ಏರಿಳಿತ ಸಂಭವಿಸಿದರೂ; ಕೊಬ್ಬರಿ ಬೆಲೆ ಕಳೆದ ಎರಡು ದಶಕದಿಂದ ನಾಲ್ಕರಿಂದ ಐದು ಸಾವಿರ ರೂಪಾಯಿ ಆಸುಪಾಸಿನಲ್ಲೆ ತೊಯ್ದಾಡುತ್ತಿದೆ.  ಈ ಬೆಲೆ ಹೊಯ್ದಾಟದ ಲಾಭ ರೈತರಿಗಿಂತ ವರ್ತಕರು, ದಲ್ಲಾಳಿಗಳಿಗೆ ಹೆಚ್ಚಿನದಾಗಿ ದಕ್ಕಿದೆ.ವರ್ತಕರ ಕರಾಮತ್ತು: ನಾಫೆಡ್ ಭಣಭಣ

ಕೊಬ್ಬರಿ ಬೆಲೆ ಕುಸಿದಾಗ, ರೈತರ ಸಂಕಷ್ಟಕ್ಕೆ ಸ್ಪಂದಿಸಲು; ಸರ್ಕಾರ, ಕೃಷಿ ಉತ್ಪನ್ನಗಳ ಬೆಲೆ ನಿಯಂತ್ರಣ ಸಂಸ್ಥೆಯಾಗಿರುವ ಭಾರತೀಯ ಕೃಷಿ ಸಹಕಾರಿ ಮತ್ತು ಮಾರಾಟ ಒಕ್ಕೂಟದ (ನಾಫೆಡ್) ಮೂಲಕ ಬೆಂಬಲ ಬೆಲೆಯಲ್ಲಿ ಖರೀದಿಗೆ ಮುಂದಾಗುತ್ತದೆ. ಆಗ ಮಾತ್ರ ಮಾರುಕಟ್ಟೆಯಲ್ಲಿ ಧಾರಣೆ ಏರುತ್ತದೆ. ಪ್ರಸಕ್ತ ವರ್ಷವೂ ಇದೇ ಪುನರಾವರ್ತನೆ. ಬೆಲೆ ಕುಸಿದಾಗ ರೈತರ ಆಗ್ರಹಕ್ಕೆ ಮಣಿದ ಸರ್ಕಾರ ಜೂನ್ ಮೂರರಂದು ನೆಫೆಡ್ ಖರೀದಿ ಕೇಂದ್ರ ಆರಂಭಿಸಿದರೂ; ರೈತನಿಗೆ ಚಿಕ್ಕಾಸಿನ ಉಪಯೋಗವೂ ಸಿಗಲಿಲ್ಲ.ನಿರಂತರ ಬೆಲೆ ಕುಸಿತದಿಂದ ಕಂಗಾಲಾಗಿದ್ದ ಕೊಬ್ಬರಿ ಬೆಳೆಗಾರರ ಆಗ್ರಹಕ್ಕೆ ಮಣಿದ ಕೇಂದ್ರ ಸರ್ಕಾರ ಕೆಲ ವರ್ಷಗಳ ಹಿಂದೆ ಬೆಂಬಲ ಬೆಲೆ ಘೋಷಿಸಿತು. ಇದರ ಜತೆ ರಾಜ್ಯ ಸರ್ಕಾರದ ಸಹಯೋಗದಲ್ಲಿ ನೆಫೆಡ್ ಮೂಲಕ ತಾನೇ ಸ್ವತಃ ಖರೀದಿಗೆ ಮುಂದಾಯಿತು.ನಂತರದ ವರ್ಷಗಳಲ್ಲಿ ಹಂತ ಹಂತವಾಗಿ ಬೆಂಬಲ ಬೆಲೆ ಹೆಚ್ಚಿಸಿತು. ಮಾರುಕಟ್ಟೆಯಲ್ಲಿ ಬೆಲೆ ಏರಿದ್ದರೂ ನಾಫೆಡ್ ್ಙ 4,700ಗೆ ಖರೀದಿಸುತ್ತಿದೆ. ಇದರ ಜತೆ ರಾಜ್ಯ ಸರ್ಕಾರ ಸಹ ್ಙ 300  ಪ್ರೋತ್ಸಾಹಧನ ನೀಡುತ್ತಿದೆ.ನಾಫೆಡ್‌ನ ಹತ್ತಾರು ನಿಯಮಗಳ ಕಿರಿಕಿರಿಗೆ ಬೇಸತ್ತ ರೈತರು ಅತ್ತ ತಲೆ ಹಾಕದೆ ದಲ್ಲಾಳಿಗಳು, ಕಮೀಷನ್ ಏಜೆಂಟರು ಹಾಗೂ ಅಂಗಡಿ ಮಾಲೀಕರಿಗೆ ಕೊಬ್ಬರಿ ಮಾರಾಟ ಮಾಡುತ್ತಿದ್ದರು. ಇದರಿಂದ ನಾಫೆಡ್ ಕೇಂದ್ರಗಳಿಗೆ ಕೊಬ್ಬರಿ ಬಾರದೆ ಭಣಗುಡುತ್ತಿದ್ದವು.ಕೆಲ ದಿನಗಳ ನಂತರ ಸ್ಥಗಿತಗೊಳ್ಳುತ್ತಿದ್ದವು. ಮತ್ತೆ ಯಥಾಪ್ರಕಾರ ಬೆಲೆ ಪಾತಾಳದತ್ತ ಸಾಗುತ್ತಿತ್ತು. ಇದಕ್ಕೆ ವರ್ತಕರ ‘ಕರಾಮತ್ತೇ’ ಕಾರಣ ಎಂಬುದು ರೈತ ಸಮೂಹದ ಪ್ರಮುಖ ಆರೋಪ. ಕೊಬ್ಬರಿ ತುಮಕೂರು, ಹಾಸನ ಜಿಲ್ಲೆಯ ಅರಸೀಕೆರೆ, ಚನ್ನರಾಯಪಟ್ಟಣ, ಬೇಲೂರು, ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆ. ಲಕ್ಷಕ್ಕೂ ಅಧಿಕ ಕುಟುಂಬದ ಜೀವನಾಧಾರ. ಬೆಲೆ ಕುಸಿದ ತಕ್ಷಣವೇ ಇವರ ಬದುಕು ಮೂರಾಬಟ್ಟೆ. ಕಳೆದ ಒಂದು ದಶಕದಿಂದ ಕೊಬ್ಬರಿ ಬೆಳೆಗಾರ ಸದಾ ಸಂಕಷ್ಟದ ಮುಳುಗಿದ್ದ ಬೆಳೆಗಾರರಲ್ಲಿ ಏರಿದ ಬೆಲೆ ಸಂತಸ ತಂದಿದೆ.ಪ್ರಸಕ್ತ ಕೊಬ್ಬರಿ ಬೆಲೆಯಿಂದ ಸಣ್ಣ, ಮಧ್ಯಮ ರೈತರಿಗೆ ಕವಡೆ ಕಾಸಿನ ಲಾಭವಿಲ್ಲ. ನಷ್ಟ ತಪ್ಪಲಿಲ್ಲ. ಆದರೂ ಮನದ ಮೂಲೆಯಲ್ಲಿ ಸಂತಸ ಇದೆ. ಮುಂದಿನ ದಿನಗಳಲ್ಲೂ ‘ಬೆಲೆ’ ಇದೇ ಸ್ಥಿರತೆ ಕಂಡುಕೊಂಡರೆ ಮಾತ್ರ ರೈತನಿಗೆ ‘ಬೆಲೆ’ ಎನ್ನುತ್ತಿದೆ ರೈತ ಸಮೂಹ. ಇ-ಟೆಂಡರ್

ಮೊದಲಿನಂತೆ ಕಮೀಷನ್ ಏಜೆಂಟರು ಟೆಂಡರ್‌ಗೆ ಬಿಡುವವರೆಗೆ ಕಾಯದೆ ನೇರವಾಗಿ ಇದು ಹರಾಜಿಗಿಟ್ಟ ಮಾಲೀಕನ ಲೆಕ್ಕದಲ್ಲಿ ಸೇರುತ್ತದೆ. ರವಾನೆದಾರರು ಹರಾಜು ಕೂಗಿದ ನಂತರ ಆ ಧಾರಣೆಗೆ ಸಮಾಧಾನವಿಲ್ಲದಿದ್ದರೆ ರೈತರು ಅದನ್ನು ತಿರಸ್ಕರಿಸಬಹುದಾದ ವ್ಯವಸ್ಥೆಯೂ ಜಾರಿಗೊಂಡಿದೆ.ಇಲ್ಲಿನ ಎಪಿಎಂಸಿ ಆಡಳಿತ ಮತ್ತು ಮಾರಾಟ ವ್ಯವಸ್ಥೆ ಸಂಪೂರ್ಣ ಗಣಕೀಕರಣಗೊಂಡಿರುವುದು ವಿಶೇಷ. ಹರಾಜಿಗೆ ಬಂದಿರುವ ಒಟ್ಟು ಮಾಲಿನ ಲೆಕ್ಕ ರವಾನೆದಾರರಿಗೆ ಕಂಪ್ಯೂಟರ್ ಮೂಲಕವೇ ಲಭ್ಯವಾಗುತ್ತದೆ. ಹರಾಜು ಕೂಗಲು ಕೂಡ ಇ-ಟೆಂಡರ್ ವ್ಯವಸ್ಥೆ ಜಾರಿಗೆ ಬಂದಿದೆ. ಹಾಗಾಗಿ ಒಳ ಹರಾಜು ವ್ಯವಹಾರಗಳಿಗೆ ಸಂಪೂರ್ಣ ಕಡಿವಾಣ ಬಿದ್ದಿದೆ. ಹೊರ ರಾಜ್ಯಗಳಲ್ಲಿ ಇಲ್ಲಿನ ಕೊಬ್ಬರಿಗೆ ಬೇಡಿಕೆ ದುಪ್ಪಟ್ಟುಗೊಂಡಿದೆ. ಮಾರುಕಟ್ಟೆಗೆ ಕೊಬ್ಬರಿ ಆವಕವೂ ಕಡಿಮೆಯಾಗಿದೆ. ಇದರ ಜತೆಗೆ ಕೇರಳ, ಶ್ರೀಲಂಕಾದಲ್ಲಿ ತೆಂಗು ಫಸಲು ಕೈಕೊಟ್ಟಿದೆ. ಇದರಿಂದ ಬೆಲೆ ಹೆಚ್ಚಳಗೊಂಡಿದೆ ಎನ್ನುತ್ತಿದೆ ವರ್ತಕ ಸಮೂಹ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry