ಕೊಬ್ಬರಿ ಧಾರಣೆ ಕುಸಿತ: ರೈತರ ಕಳವಳ

7

ಕೊಬ್ಬರಿ ಧಾರಣೆ ಕುಸಿತ: ರೈತರ ಕಳವಳ

Published:
Updated:

ತಿಪಟೂರು: ಕೊಬ್ಬರಿ ಧಾರಣೆ ಏರುಮುಖ ಕಂಡು ಸಮಾಧಾನಪಟ್ಟಿದ್ದ ರೈತರಿಗೆ ಮತ್ತೆ ಚಿಂತೆ ಆವರಿಸ ತೊಡಗಿದೆ. ಕಪ್ಪು ತಲೆ ಹುಳುವಿನ ಹಾವಳಿಗೆ ತೆಂಗು ಹಾಳಾಗಿ ಚಿಂತೆಯಲ್ಲಿದ್ದ ರೈತರನ್ನು ಕೊಬ್ಬರಿ ಧಾರಣೆ ಕುಸಿತ ಕಳವಳಕ್ಕೀಡು ಮಾಡಿದೆ.ಎರಡು ವರ್ಷಗಳ ಹಿಂದೆ ಕ್ವಿಂಟಲ್ ಕೊಬ್ಬರಿ ಧಾರಣೆ 5 ಸಾವಿರ ರೂ. ದಾಟದೆ ತೆವಳುತ್ತಿದ್ದರಿಂದ ತೆಂಗು ಬೆಳೆ ರೈತರು ನಿರಾಶೆಯತ್ತ ಮುಖ ಮಾಡಿದ್ದರು. ಆದರೆ ತದನಂತರ ಅನಿರೀಕ್ಷಿತವಾಗಿ ಧಾರಣೆ ದಿಢೀರ್ ಚೇತರಿಸಿಕೊಂಡು ಏರುಗತಿಯಲ್ಲಿ ಸಾಗಿತ್ತು. 2010ರ ಡಿ. 29ರಂದು 7651 ರೂ.ಗೆ ಏರಿ ಧಾರಣೆ ದಾಖಲೆ ಸೃಷ್ಟಿಯಾಗಿತ್ತು.ಪರಿಸ್ಥಿತಿ ಹೀಗೆಯೇ ಮುಂದುವರಿದರೆ 8000 ರೂ. ದಾಟಿಯೇ ಬಿಡಬಹುದೆಂದು ರೈತರು ಆಸೆಪಟ್ಟಿದ್ದರು. ನಂತರ ಅನಿಶ್ಚಿತ ಏರುಪೇರಿನ ಕಳವಳ ದೂರವಾಗಿ ಸ್ಥಿರತೆ ಅಥವಾ ವ್ಯವಧಾನ ಏರಿಳಿಕೆ ಕಾಣತೊಡಗಿತು. 2011ರ ಜನವರಿಯಲ್ಲಿ 6700- 7000ರ ಆಸುಪಾಸಿನಲ್ಲಿದ್ದ ಧಾರಣೆ ಅದೇ ವರ್ಷ ಫೆ. 15ರಂದು ಗರಿಷ್ಠ 6850 ರೂ. ಇತ್ತು.

 

ಮಾರ್ಚ್‌ನಲ್ಲಿ ಕುಸಿತ ಕಂಡರೂ ಮತ್ತೆ ಚೇತರಿಸಿಕೊಂಡು ಜೂನ್ ಅಂತ್ಯದ ವೇಳೆ 6700ರ ಆಸುಪಾಸಿನಲ್ಲಿ ಸ್ಥಿರತೆ ಕಂಡಿತ್ತು. 2011ರ ಡಿಸೆಂಬರ್‌ವರೆಗೂ ಹೆಚ್ಚು ಕಡಿಮೆ 6300ರ ಆಚೀಚೆ ಇತ್ತು. 2012ರ ಜನವರಿಯ ಮಧ್ಯಭಾಗದಿಂದ ಧಾರಣೆ ಕುಸಿತ ಆರಂಭವಾದಾಗ ಇದು ತಾತ್ಕಾಲಿಕವೆಂಬ ಧೈರ್ಯ ರೈತರಲ್ಲಿತ್ತು.ಆದರೆ ಕಳೆದ ಜ. 30ರಂದು 5900ರೂ.ಗೆ ಇಳಿಯುವ ಮೂಲಕ ಆತಂಕ ಕಾಣತೊಡಗಿತು. ಅದಾದ ನಂತರ ಒಂದು ದಿನ ಹೊರತು ಉಳಿದೆಲ್ಲಾ ದಿನಗಳಲ್ಲಿ ಈವರೆಗೆ 5800 ರೂ. ಆಸುಪಾಸಿನಲ್ಲೇ ಧಾರಣೆ ಒದ್ದಾಡುತ್ತಿದೆ. ಕಳೆದ ವರ್ಷದ ಇದೇ ದಿನಕ್ಕೆ ಹೋಲಿಸಿದರೆ ಸುಮಾರು 1000 ರೂ. ಕುಸಿದಂತಾಗಿದೆ.ಬಿಗಿ ಕ್ರಮಕ್ಕೆ ಒತ್ತಾಯ

ಒಂದೂವರೆ ವರ್ಷದಿಂದ ಇಲ್ಲಿನ ಮಾರುಕಟ್ಟೆ ಸುಧಾರಣೆ ಕಂಡಿತ್ತಲ್ಲದೆ ಧಾರಣೆಯೂ ಚೇತರಿಸಿಕೊಂಡಿತ್ತು. ಆದರೆ ಅಕ್ಕಪಕ್ಕದ ತುರುವೇಕೆರೆ, ಅರಸೀಕೆರೆ, ಹುಳಿಯಾರು ಮತ್ತು ಚನ್ನರಾಯಪಟ್ಟಣ ಕೊಬ್ಬರಿ ಮಾರುಕಟ್ಟೆಯಲ್ಲಿ ಬಿಗಿ ಇಲ್ಲದ್ದರಿಂದ ಆ ವ್ಯಾಪ್ತಿಯ ಕೊಬ್ಬರಿ ಅಕ್ರಮವಾಗಿ ಸಾಗಣೆಯಾಗಲು ಅವಕಾಶವಿತ್ತು. ಹಾಗಾಗಿ ಇಲ್ಲಿಯ ವರ್ತಕರು, ತಾವೇಕೆ ಶುಲ್ಕ ಕಟ್ಟಿ ನಷ್ಟ ಮಾಡಿಕೊಳ್ಳಬೇಕೆಂದು ತಕರಾರು ತೆಗೆದು ಸರ್ಕಾರಕ್ಕೆ ದೂರಿತ್ತಿದ್ದರು.ಅನಧಿಕೃತ ಮಾರ್ಗದಲ್ಲಿ ಕೊಬ್ಬರಿ ವ್ಯವಹಾರ ನಿರಾತಂಕವಾಗಿ ಮುಂದುವರಿದಿದ್ದು, ಅದರ ದುಷ್ಪರಿಣಾಮ ಇಲ್ಲಿನ ಮಾರುಕಟ್ಟೆ ಮೇಲೆ ಬಿದ್ದಿದ್ದು, ಧಾರಣೆಗೂ ಪೆಟ್ಟು ಕೊಟ್ಟಿದೆ ಎಂದು ರೈತ ಮುಖಂಡರು ದೂರುತ್ತಿದ್ದಾರೆ. ಎಲ್ಲಾ ಮಾರುಕಟ್ಟೆಗಳಲ್ಲೂ ಬಿಗಿ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry