ಕೊಬ್ಬರಿ ಧಾರಣೆ-ರೈತರ ಬವಣೆ

7

ಕೊಬ್ಬರಿ ಧಾರಣೆ-ರೈತರ ಬವಣೆ

Published:
Updated:

ಕೊಬ್ಬರಿ ಬೆಲೆ ಕುಸಿಯುತ್ತಲೇ ಇದೆ. ನೆರವಿಗೆ ಬರಬೇಕಾದ ಸರ್ಕಾರ ಮೀನಾ-ಮೇಷ ಎಣಿಸುತ್ತಿದೆ. ದಿಕ್ಕು ತೋಚದ ತೆಂಗು ಬೆಳೆಗಾರ ಕೊಬ್ಬರಿ ಸಂಗ್ರಹಿಸಿಡಲು ಸಾಧ್ಯವಾಗದೆ ವಿಧಿಯಿಲ್ಲದೆ ಸಿಕ್ಕಷ್ಟು ಬೆಲೆಗೆ ಮಾರುತ್ತಿದ್ದಾನೆ. ವರ್ಷ ಕಾದರೂ ಪ್ರಯೋಜನ ದೊರಕದಾಗಿದೆ.ರಾಜ್ಯದ ಹದಿಮೂರು ಜಿಲ್ಲೆಗಳಲ್ಲಿ ತೆಂಗು ಬೆಳೆ ದೊಡ್ಡ ಪ್ರಮಾಣದಲ್ಲಿದೆ. ಈ ಜಿಲ್ಲೆಗಳ ಬಹುತೇಕ ಬೆಳೆಗಾರರ ಜೀವನಾಧಾರವೇ ಈ ಬೆಳೆ. ಇವರಲ್ಲಿ ಬಹುತೇಕರು ಸಣ್ಣ ರೈತರು. ಬಹುಸಂಖ್ಯೆಯಲ್ಲಿರುವ ಇವರ ಆರ್ಥಿಕ ಸ್ಥಿತಿಗತಿ ಅಷ್ಟಕಷ್ಟೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುವವರೆಗೂ ಕಾದುಕೂರುವ ಆರ್ಥಿಕ ಪರಿಸ್ಥಿತಿ ಮನಸ್ಥಿತಿ ಇವರಿಗಿಲ್ಲವಾಗಿದೆ.ಪರಿಣಾಮ ಕೆಲವರು ಅನ್ಯಮಾರ್ಗವಿಲ್ಲದೇ ತೆಂಗಿನ ಕಾಯಿಯನ್ನೇ ಮಾರಿಬಿಡುತ್ತಾರೆ.

ತೆಂಗಿನ ಕಾಯಿಯನ್ನು ಕೊಬ್ಬರಿಯಾಗಿಸಲು ಒಂಬತ್ತರಿಂದ ಹನ್ನೆರಡು ತಿಂಗಳು ಬೇಕು. ಇಷ್ಟು ದೀರ್ಘ ಸಮಯ ಕಾಯ್ದರೂ ಮಾರುಕಟ್ಟೆಯಲ್ಲಿ ಕೊಬ್ಬರಿಗೆ `ವೈಜ್ಞಾನಿಕ ಬೆಲೆ~ ದೊರಕುತ್ತಿಲ್ಲ ಎಂಬುದು ಪ್ರಗತಿಪರ ರೈತರ ಅಳಲು.ಯುಗಾದಿ ನಂತರ ಹೊಸ ಕೊಬ್ಬರಿ ಮಾರುಕಟ್ಟೆ ಪ್ರವೇಶಿಸುವುದು ವಾಡಿಕೆ. ಈ ಸಮಯದಲ್ಲೇ ಮುಂಗಾರು ಮಳೆ ಆರಂಭಗೊಳ್ಳುವುದರಿಂದ ಕೃಷಿ ಚಟುವಟಿಕೆಗೆ ಚಾಲನೆ ಸಿಗುತ್ತದೆ. ಆದರೆ, ಕೆಲವೊಮ್ಮೆ ಸಕಾಲಕ್ಕೆ ಬ್ಯಾಂಕ್‌ಗಳಲ್ಲಿ ಬೆಳೆ ಸಾಲ ಸಿಗದು.ಖಾಸಗಿಯಾಗಿ ದುಬಾರಿ ಬಡ್ಡಿ ತೆತ್ತು ಸಾಲ ಪಡೆಯಲು ಕೆಲವರು ಇಚ್ಛಿಸುವುದಿಲ್ಲ. ಅಂತಹವರು ಕೃಷಿ ಚಟುವಟಿಕೆ ಆರಂಭಿಸಲು ಅನಿವಾರ್ಯವಾಗಿ ತಮ್ಮಲ್ಲಿದ್ದ ಕೊಬ್ಬರಿ ದಾಸ್ತಾನು ಮಾರಲು ಮುಂದಾಗುತ್ತಾರೆ.ರೈತರ ಈ ಅನಿವಾರ್ಯತೆಯನ್ನೇ ಬಂಡವಾಳವಾಗಿಸಿಕೊಳ್ಳುವ ವ್ಯಾಪಾರಸ್ಥರು, ಬಂಡವಾಳಶಾಹಿಗಳು, ಮಧ್ಯವರ್ತಿಗಳು ಎಲ್ಲರೂ ಸೇರಿ ಬೆಲೆ ನಿಯಂತ್ರಿಸುತ್ತಾರೆ. ಇಲ್ಲಿನ ಕೊಬ್ಬರಿಗೆ ಪ್ರಮುಖ ಮಾರುಕಟ್ಟೆಯಾಗಿರುವ ಉತ್ತರ ಭಾರತದಲ್ಲಿ ಇದೀಗ ಬೇಡಿಕೆ ಇಲ್ಲ.ಹೊರ ರಾಜ್ಯಗಳ ಕೊಬ್ಬರಿ ಇನ್ನೂ ಕಡಿಮೆ ದರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಅಲ್ಲಿಗೆ ಪೂರೈಕೆಯಾಗುತ್ತಿದೆ ಎಂಬ ಹಳೆಯ ಮಾತುಗಳನ್ನೇ ಮಾರುಕಟ್ಟೆಯಲ್ಲಿ ತೇಲಿ ಬಿಟ್ಟು ಬೆಲೆ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ವ್ಯಾಪಾರಸ್ಥರ ಈ ಕುತಂತ್ರದಿಂದ ಕೊಬ್ಬರಿ ಬೆಳೆಗಾರ ಪ್ರತಿ ವರ್ಷ ಶೋಷಣೆಗೆ ತುತ್ತಾಗುವ ಜತೆ ನೆಮ್ಮದಿ ಕಳೆದುಕೊಂಡು ಸಾಲದ ಶೂಲದಲ್ಲೇ ನರಳುತ್ತಿದ್ದಾನೆ.ವಾರ್ಷಿಕ ವಹಿವಾಟು:

ತುಮಕೂರು ಜಿಲ್ಲೆಯ ತಿಪಟೂರು, ಹಾಸನ ಜಿಲ್ಲೆಯ ಅರಸೀಕೆರೆ ಕೊಬ್ಬರಿ ಮಾರುಕಟ್ಟೆಗಳು ಏಷ್ಯಾದ ಬೃಹತ್ ಕೊಬ್ಬರಿ ಮಾರುಕಟ್ಟೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಕಲ್ಪತರು ನಾಡು ಎಂಬ ಖ್ಯಾತಿಯ ತಿಪಟೂರು, ಅರಸೀಕೆರೆಯ ಕೊಬ್ಬರಿಗೆ ಎಲ್ಲಿಲ್ಲದ ಬೇಡಿಕೆ.ಇಲ್ಲಿನ ಕೊಬ್ಬರಿ ತಿನ್ನಲು ಬಲು ರುಚಿ. ಇಂಥ ಕೊಬ್ಬರಿ ಇನ್ನೆಲ್ಲೂ ಸಿಗದು ಎಂಬ ಮನ್ನಣೆ ಪಡೆದಿದೆ. ಇಡೀ ರಾಜ್ಯದ ಕೊಬ್ಬರಿ ವಹಿವಾಟು ಈ ಎರಡೂ ಮಾರುಕಟ್ಟೆಗಳ ವಹಿವಾಟಿನ ಮೇಲೆ ನಿರ್ಧಾರಗೊಳ್ಳುತ್ತದೆ.ವಾರ್ಷಿಕ ಈ ಎರಡೂ ಮಾರುಕಟ್ಟೆಗಳು ಒಂದು ಸಾವಿರ ಕೋಟಿ ರೂಪಾಯಿಗೂ ಅಧಿಕ ವಹಿವಾಟು ನಡೆಸುತ್ತವೆ. ವಾರಕ್ಕೆ ಎರಡು ದಿನ ಹರಾಜಿನ ಮೂಲಕ ವಹಿವಾಟು ನಡೆಯುತ್ತದೆ. ಪ್ರತಿ ಹರಾಜಿಗೂ ಸಹಸ್ರಾರು ಚೀಲ ಕೊಬ್ಬರಿ ಮಾರುಕಟ್ಟೆಗೆ ಬರುತ್ತದೆ.ವರ್ಷಕ್ಕೆ ಲಕ್ಷಕ್ಕೂ ಅಧಿಕ ಚೀಲಗಳಲ್ಲಿ ಕೊಬ್ಬರಿ ಉತ್ತರ ಭಾರತಕ್ಕೆ ರವಾನೆಯಾಗುತ್ತದೆ. ತಿಪಟೂರು ಮಾರುಕಟ್ಟೆಯಲ್ಲಿ ವರ್ಷಕ್ಕೆ 12 ಲಕ್ಷ ಕ್ವಿಂಟಲ್‌ಗೂ ಅಧಿಕ ಕೊಬ್ಬರಿ ಬಿಕರಿಗೆ ಬರುತ್ತದೆ.ಒಂದು ಚೀಲ ಕೊಬ್ಬರಿಗೆ ಒಂದು ಕೆ.ಜಿ. ವಜಾ! ಆ ಕೊಬ್ಬರಿಯಲ್ಲಿ ಚೂರು, ಹೋಳು, ಉತ್ತಮ ಗಾತ್ರ ಇಲ್ಲ ಎಂದು ಅಂಗಡಿ ಮಾಲೀಕರು ಕೆ.ಜಿ.ಗಟ್ಟಲೆ ಕೊಬ್ಬರಿ ವಜಾ ಹಾಕುತ್ತಾರೆ. ಇದು ಹಿಂದಿನಿಂದಲೂ ನಡೆದು ಬಂದಿದೆ.ಜತೆಗೆ ಇಂದಿನ ಹೈಟೆಕ್ ಯುಗದಲ್ಲೂ ತೂಕಕ್ಕೆ ಅತ್ಯಾಧುನಿಕ ಎಲೆಕ್ಟ್ರಾನಿಕ್ ಯಂತ್ರ ಬಳಸದೆ, ಹಳೆ ತಕ್ಕಡಿಗಳಲ್ಲೇ ತೂಕ ಹಾಕುತ್ತಾ ರೈತರನ್ನು ನಿರಂತರವಾಗಿ ಶೋಷಣೆ ಮಾಡುತ್ತಲೇ ಇದ್ದಾರೆ. ಇದನ್ನು ತಪ್ಪಿಸಲು ಸರ್ಕಾರ ಎಂಥ ಕಠಿಣ ಕಾನೂನು ಜಾರಿಗೆ ತಂದರೂ ಮಾರುಕಟ್ಟೆಯಲ್ಲಿ ಅನುಷ್ಠಾನಕ್ಕೆ ಬಂದಿಲ್ಲ ಎಂಬುದು ರೈತ ಮುಖಂಡರ ಸಾಮೂಹಿಕ ದೂರು.ವ್ಯಾಪಾರಿಗಳು, ರವಾನೆದಾರರಿಗಿಂತ ಮಧ್ಯವರ್ತಿಗಳ ಅಂಗಡಿಗಳೇ ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ರೈತರ ಸುಲಿಗೆ ಕೇಂದ್ರಗಳಾಗಿವೆ. ಜತೆಗೆ `ಸೆಕೆಂಡ್ಸ್~ ವಹಿವಾಟೂ ರಾಜಾರೋಷವಾಗಿ ನಡೆಯುತ್ತದೆ. ಮಾರುಕಟ್ಟೆ ಅಧಿಕಾರಿಗಳು ಎಲ್ಲವೂ ಗೊತ್ತಿದ್ದರೂ ಜಾಣ ಕುರುಡುತನ ಪ್ರದರ್ಶಿಸುವುದು ನಿರಂತರವಾಗಿದೆ ಎಂದು ಅರಸೀಕೆರೆಯ ರೈತ ರಾಜಣ್ಣ ಆಕ್ರೋಶ ವ್ಯಕ್ತಪಡಿಸುತ್ತಾರೆ.ತಿಪಟೂರು ಮಾರುಕಟ್ಟೆ ಮಾತ್ರ ಇದಕ್ಕೆ ಅಪವಾದ. ಎಪಿಎಂಸಿ ಕಾರ್ಯದರ್ಶಿ ಎಸ್.ಬಿ.ನ್ಯಾಮನಗೌಡ ಅವರ ಕಟ್ಟುನಿಟ್ಟಿನ ಕ್ರಮದಿಂದ ಸಾಕಷ್ಟು ವಹಿವಾಟು ಕಾನೂನಿನ ಚೌಕಟ್ಟಿನಡಿ ನಡೆಯುತ್ತಿವೆ. ಇಲ್ಲಿನಂತೆಯೇ ರಾಜ್ಯದ ಉಳಿದ ಮಾರುಕಟ್ಟೆಗಳಲ್ಲೂ ಕಾನೂನು ಕಠಿಣಗೊಂಡರೆ ರೈತರಿಗೆ ಸಾಕಷ್ಟು ಅನುಕೂಲವಾಗಬಲ್ಲದು ಎಂಬುದು ಪ್ರಗತಿಪರ ರೈತರ ಅನಿಸಿಕೆ.ಆರಂಭಗೊಳ್ಳದ ನಾಫೆಡ್

ಕಳೆದ ವರ್ಷ ಕ್ವಿಂಟಲ್ ಕೊಬ್ಬರಿ 7.400 ರೂಪಾಯಿಗೆ ಮಾರಾಟವಾಗಿತ್ತು. ಇದು ಆ ವರ್ಷದ ಅತ್ಯಧಿಕ ಬೆಲೆ. 2012ರ ಫೆಬ್ರುವರಿ ಅಂತ್ಯದಲ್ಲಿ ಕ್ವಿಂಟಲ್ ಕೊಬ್ಬರಿಗೆ 6.5 ಸಾವಿರ ಆಸುಪಾಸಿತ್ತು. ಹೊಸ ಬೆಳೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಂತೆ ಬೆಲೆ ಪಾತಾಳದತ್ತ ಮುಖ ಮಾಡಿದೆ. ಆಗಿನ ಬೆಲೆಗೂ ಈಗಿನದ್ದಕ್ಕೂ ಒಂದೂವರೆ ಸಾವಿರ ರೂಪಾಯಿ ವ್ಯತ್ಯಾಸವಿದೆ.ಕುಸಿತ ನಿರಂತರವಾಗಿದೆ. ಇದೀಗ ಕ್ವಿಂಟಲ್ ಕೊಬ್ಬರಿ ರೂ. 5 ಸಾವಿರದ ಆಸುಪಾಸಿನಲ್ಲಿದೆ. ರೈತ ದಿಕ್ಕುತೋಚದೆ ಕಂಗಾಲಾಗಿದ್ದಾನೆ. ವರ್ಷದ ಕಾರ್ಯಕ್ರಮ ಪಟ್ಟಿ ಅಲ್ಲೋಲ-ಕಲ್ಲೋಲವಾಗಿದೆ. ಶುಭ ಕಾರ್ಯ ಸ್ಥಗಿತಗೊಂಡಿವೆ. ಕನಸುಗಳು ಕಮರಿವೆ.

ನಿರಾಸೆಯ ಕಾರ್ಮೋಡದಲ್ಲೂ ಸಣ್ಣಗೆ ಬೆಳ್ಳಿ ಬೆಳಕು.ಕೇಂದ್ರ ಸರ್ಕಾರ ಕೊಬ್ಬರಿಯ ಬೆಂಬಲ ಬೆಲೆ ಹೆಚ್ಚಿಸಿದೆ. ಕಳೆದ ವರ್ಷ ರೂ. 4.700 ಇದ್ದ ಬೆಂಬಲ ಬೆಲೆಯನ್ನು ಪ್ರಸಕ್ತ ರೂ. 5350ಕ್ಕೆ ನಿಗದಿಪಡಿಸಿದೆ. ಕೊಬ್ಬರಿ ಧಾರಣೆ ಕಡಿಮೆಯಾದ ಸಂದರ್ಭದಲ್ಲಿ ರೈತರಿಗೆ ಈ ಬೆಂಬಲ ಬೆಲೆ ನೀಡಿ ಕೊಬ್ಬರಿ ಖರೀದಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಟಾಸ್ಕ್‌ಪೋರ್ಸ್ ಸಮಿತಿ ಅಧ್ಯಕ್ಷರಿಗೆ ಕೃಷಿ ಮಾರಾಟ ಮಂಡಳಿಯೂ ಪತ್ರ ಬರೆದಿದೆ.ರಾಜ್ಯ ಸರ್ಕಾರ ಇದಕ್ಕೆ ಪೂರಕವಾಗಿ ಕಳೆದ ವರ್ಷ ಕ್ವಿಂಟಲ್ ಕೊಬ್ಬರಿಗೆ ರೂ. 300 ಪ್ರೋತ್ಸಾಹಧನ ನೀಡಿ ನಾಫೆಡ್ ಮೂಲಕ ಕೊಬ್ಬರಿ ಖರೀದಿಸಿತ್ತು. ಪ್ರಸಕ್ತ ವರ್ಷ ಇನ್ನೂ ನಿರ್ಧಾರ ಪ್ರಕಟಿಸಿಲ್ಲ. ಇದು ರೈತರ ನಿರಾಸೆ ಹೆಚ್ಚಿಸಿದೆ.ಮಾರುಕಟ್ಟೆಯಲ್ಲಿ ಧಾರಣೆ ಕುಸಿದಿದೆ. ರಾಜ್ಯ ಸರ್ಕಾರ ಎಲ್ಲೆಡೆ ನಾಫೆಡ್ ತೆರೆದು ಕೊಬ್ಬರಿ ಖರೀದಿಗೆ ಮುಂದಾಗಬೇಕು ಎಂದು ತಿಪಟೂರು, ಚಿಕ್ಕನಾಯಕನಹಳ್ಳಿ, ಹುಳಿಯಾರು, ತುರುವೇಕೆರೆ, ಅರಸೀಕೆರೆ ಇತರೆಡೆ ರೈತರು ಪ್ರತಿಭಟನೆ ನಡೆಸಿ ಆಗ್ರಹಿಸಿದ್ದಾರೆ.ಆರ್ಥಿಕ ಮುಗ್ಗಟ್ಟಿನ ಕಾರಣ ರೈತರ ಕೊಬ್ಬರಿ ದಾಸ್ತಾನು ಆತುರದ ಮಾರಾಟದ ಕಾರಣ ವರ್ತಕರ ಗೋದಾಮು ಸೇರಿರುತ್ತದೆ. ಆನಂತರದಲ್ಲಿ ನಾಫೆಡ್ ಆರಂಭಿಸಿದರೂ ಪ್ರಯೋಜನವಾಗುವುದಿಲ್ಲ.
ತೋಟದಲ್ಲೇ ಮಾರಬೇಡಿ

ಉತ್ತರ ಭಾರತದಲ್ಲಿ ಹಬ್ಬಗಳಿಲ್ಲ. ಬಿಸಿಲ ಝಳ ಹೆಚ್ಚಿರುವುದರಿಂದ ಅಲ್ಲಿನ ಜನ ಕೊಬ್ಬರಿ ತಿನ್ನಲ್ಲ. ಇದರಿಂದ ಬೆಲೆ ಕುಸಿದಿದೆ. ಕಂಗೆಟ್ಟು ಐವತ್ತು, ನೂರು ರೂಪಾಯಿಯ ಜಾಸ್ತಿ ಆಸೆಗಾಗಿ ತೋಟದಲ್ಲಿ, ಮನೆ ಬಾಗಿಲಲ್ಲೇ ಕೊಬ್ಬರಿ ಮಾರಬೇಡಿ. ನಿಮ್ಮ ಉತ್ಪನ್ನವನ್ನು ಮಾರುಕಟ್ಟೆಗೆ ತಂದು ಬೇಡಿಕೆ ಹೆಚ್ಚಿಸಿಕೊಳ್ಳಿ. ಕೊಬ್ಬರಿ ಹೊಡೆಯುವಾಗ ಎಚ್ಚರಿಕೆ ವಹಿಸಿ. ಜಾಸ್ತಿ ಹೋಳು ಮಾಡಬೇಡಿ. ಕೊಬ್ಬರಿಗೆ ಏಟು ಬೀಳಿಸಬೇಡಿ. ಇದರಿಂದ ಉತ್ಕೃಷ್ಟ ಕೊಬ್ಬರಿ ಸಿಗಲ್ಲ ಎಂಬುದು ರೈತರಿಗೆ ತಿಪಟೂರು ಎಪಿಎಂಸಿ ಕಾರ್ಯದರ್ಶಿ ಎಸ್.ಬಿ.ನ್ಯಾಮನಗೌಡ ಅವರ ಸಲಹೆ.

ಇದರಿಂದ ವರ್ತಕರು ಮತ್ತಷ್ಟು ಶ್ರೀಮಂತರಾಗುತ್ತಾರೆಯೇ ಹೊರತು ಬಡ ರೈತರಿಗೆ ಪ್ರಯೋಜನ ಸಿಗದು. ಬೆಲೆ ಕುಸಿತದಿಂದ ಕಂಗೆಟ್ಟಿರುವ ರೈತರ ನೆರವಿಗೆ ಸರ್ಕಾರ ಮುಂದಾಗಬೇಕು. ಬೆಂಬಲ ಬೆಲೆಯನ್ನು ವೈಜ್ಞಾನಿಕವಾಗಿ ನಿಗದಿಪಡಿಸಬೇಕು ಎಂಬುದು ರೈತರ ಒತ್ತಾಯ.

  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry