ಶನಿವಾರ, ಮೇ 21, 2022
20 °C

ಕೊಬ್ಬರಿ ಬೆಲೆ ಕುಸಿತ: ಹೆಚ್ಚಿದ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿಪಟೂರು: ಕೊಬ್ಬರಿ ಧಾರಣೆ ಜಿಗಿತದಿಂದ ಹಲವು ವರ್ಷಗಳ ನಂತರ ಕಳೆಗಟ್ಟಿದ್ದ ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಪಟ್ಟಭದ್ರರ ಕುಯುಕ್ತಿಯಿಂದ ಈಗ ಮತ್ತೆ ಕಳವಳ ಕಾಣಿಸಿದೆ.

ಇಲ್ಲಿನ ಎಪಿಎಂಸಿಯಲ್ಲಿ ಕಾರ್ಯದರ್ಶಿ ಎಸ್.ನ್ಯಾಮಗೌಡ ಅವರ ವ್ಯಾಪಕ ಸುಧಾರಣೆ ಮತ್ತು ಕಠಿಣ ಕ್ರಮಗಳ ಫಲವಾಗಿ ರೈತಪರ ವಾತಾವರಣ ನಿರ್ಮಾಣವಾಗಿತ್ತು. ಕಾಕತಾಳೀಯವಾಗಿ ಕೊಬ್ಬರಿ ಧಾರಣೆಯೂ ಜಿಗಿದು ರೈತರು ನೆಮದಿ ನಿಟ್ಟುಸಿರು ಬಿಟ್ಟಿದ್ದರು.ರವಾನೆದಾರರ, ವರ್ತಕರ ಒಳದಾರಿಗಳು ಬಂದ್ ಆದ ಮೇಲೆ ಇಡೀ ಮಾರುಕಟ್ಟೆ ಮಾದರಿ ವ್ಯವಸ್ಥೆ ಕಡೆ ಮುಖ ಮಾಡಿತ್ತು. ಸುಧಾರಣಾ ಕ್ರಮಗಳಿಗೆ ಬಹುತೇಕ ವರ್ತಕರು, ರವಾನೆದಾರರು ಕ್ರಮೇಣ ಒಗ್ಗಿಕೊಂಡಿದ್ದರಿಂದ ಮಾರುಕಟ್ಟೆಯಲ್ಲಿ ಆಶಾದಾಯಕ ಸ್ಥಿತಿ ನಿರ್ಮಾಣವಾಗಿತ್ತು. ಕೊಬ್ಬರಿ ಧಾರಣೆಯಂತೂ ದಿಢೀರ್ ಏರುತ್ತಾ ಕ್ವಿಂಟಲ್‌ಗೆ 7000 ರೂಪಾಯಿ ಮುಟ್ಟಿದಾಗಲಂತೂ ರೈತರಲ್ಲಿ ಅಪರೂಪದ ಆನಂದ ಕಂಡಿತ್ತು. ಹೋಳಿ ವೇಳೆಗೆ ಧಾರಣೆ 8000 ರೂಪಾಯಿ ದಾಟುತ್ತದಂತೆ ಎಂಬ ಮಾತು ವರ್ತಕರಲ್ಲೇ ಹುಟ್ಟಿಕೊಂಡಿದ್ದವು.ಇದು ಹೀಗೆ ನಡೆದರೆ ಸಾಕು ಎಂದು ಬಯಸುವಷ್ಟರಲ್ಲಿ ಕೆಲ ರವಾನೆದಾರರ ಹಿತಾಸಕ್ತಿಯಿಂದ ಮಾರುಕಟ್ಟೆಯಲ್ಲಿ ಕೆಲ ವಾರಗಳಿಂದ ಕಳವಳ ಕಾಣಿಸುತ್ತಿದೆ. ಧಾರಣೆ ನಿರಂತರವಾಗಿ ಕುಸಿಯುತ್ತಿದೆ. ಶನಿವಾರ ಮತ್ತು ಸೋಮವಾರ ಧಾರಣೆ 5500 ರೂಪಾಯಿಗೆ ಕುಸಿದು ರೈತರಲ್ಲಿ ಮತ್ತೆ ಚಿಂತೆ ಶುರುವಾಗುವಂತೆ ಮಾಡಿದೆ.ಹಾಗೆ ನೋಡಿದರೆ ಈಗ ಕೊಬ್ಬರಿ ಧಾರಣೆ ಕುಸಿಯುವ ಸಮಯವಲ್ಲ. ಹಿಂದಿನ ವರ್ಷಗಳ ಹೋಲಿಕೆ ಗಮನಿಸಿದರೆ ಏರಬೇಕಿತ್ತೆ ವಿನಾಃ ಇಳಿಮುಖ ಕಾಣುವ ಹಾಗಿರಲಿಲ್ಲ. ಆವಕ ಕೂಡ ಹೇಳಿಕೊಳ್ಳುವಷ್ಟು ಹೆಚ್ಚಿರಲಿಲ್ಲ. ಆದರೆ ತಮ್ಮ ತಮಲ್ಲೇ ವೈಷಮ್ಯಕ್ಕೆ ಬಿದ್ದಿರುವ ಬಂಡವಾಳಶಾಹಿ ರವಾನೆದಾರರ ಕುಯುಕ್ತಿಯ ಫಲವಾಗಿ ಉದ್ದೇಶಪೂರ್ವಕ ಧಾರಣೆ ಕುಸಿತ ಎದುರಾಗಿದೆ ಎನ್ನಲಾಗಿದೆ. ಈ ಬೆಳವಣಿಗೆ ರೈತರಲ್ಲಷ್ಟೇ ಅಲ್ಲ ಕಮಿಷನ್ ಏಜೆಂಟರಲ್ಲೂ ತಳಮಳ ಉಂಟುಮಾಡಿದೆ. ಮಾರುಕಟ್ಟೆ ಸ್ಥಿರತೆ ಕಾಣದ್ದರಿಂದ ಅನಿಶ್ಚಿತತೆ, ಆತಂಕ ಮನೆ ಮಾಡಿದೆ.ಯುಗಾದಿ ಕಳೆದರೆ ಹೊಸ ಮಾಲು ಶುರುವಾಗುತ್ತದೆ. ಈಗಲೇ ಧಾರಣೆ ಹೀಗಾದರೆ ಮುಂದೇನು ಎಂಬ ಪ್ರಶ್ನೆಯೂ ಎದುರಾಗಿದೆ. ತೆಂಗು ಬೆಳೆಗಾರರ ಆರ್ಥಿಕತೆಯನ್ನೇ ಬುಡಮೇಲು ಮಾಡುವ ಬಂಡವಾಳಶಾಹಿಗಳಿಗೆ ಕಡಿವಾಣ ಹಾಕುವವರು ಯಾರೆಂಬ ಪ್ರಶ್ನೆ ಎದುರಾಗಿದೆ. ಇಲ್ಲಿನ ಮಾರುಕಟ್ಟೆಯಲ್ಲಿ ವ್ಯಾಪಕ ಸುಧಾರಣಾ ಕ್ರಮ ಕೈಗೊಂಡಿದ್ದರೂ ಅಕ್ಕಪಕ್ಕದ ಮಾರುಕಟ್ಟೆಗಳಾದ ತುರುವೇಕೆರೆ, ಅರಸೀಕೆರೆಯಲ್ಲಿ ಇನ್ನೂ ವ್ಯಾಪಾರ ಒಳದಾರಿ ಉಳಿದಿರುವುದರಿಂದ ಅದರ ದುಷ್ಪರಿಣಾಮ ಇಲ್ಲೂ ಕಾಣುತ್ತಿದೆ ಎಂದು ದೂರುವ ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷಬಿ.ಎಸ್.ದೇವರಾಜು.

ರೈತರ ಜತೆ ಚೆಲ್ಲಾಟವಾಡುವ ರವಾನೆದಾರರ ಆಟಾಟೋಪ ನೋಡಿಕೊಂಡು ಸುಮ್ಮನಿರಲಾಗದು ಎಂದು ಅವರು ಎಚ್ಚರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.