ಸೋಮವಾರ, ನವೆಂಬರ್ 18, 2019
24 °C
ರಾಜ್ಯದ ನಿಯೋಗಕ್ಕೆ ಮಹಾರಾಷ್ಟ್ರದ ಭರವಸೆ

ಕೊಯ್ನಾದಿಂದ 1.37 ಟಿಎಂಸಿ ನೀರು

Published:
Updated:

ಬೆಳಗಾವಿ: ನೀರು ಹಂಚಿಕೆ ಕುರಿತು ಮಹಾರಾಷ್ಟ್ರ- ಕರ್ನಾಟಕ ಅಂತರರಾಜ್ಯ ಒಪ್ಪಂದದ ಪ್ರಕಾರ, ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ 1.37 ಟಿಎಂಸಿ ಅಡಿ ನೀರು ಬಿಡಲು ಮಹಾರಾಷ್ಟ್ರ ಸರ್ಕಾರ ಒಪ್ಪಿಗೆ ನೀಡಿದೆ.ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸೋಮವಾರ ಮಹಾರಾಷ್ಟ್ರಕ್ಕೆ ತೆರಳಿದ್ದ ನಿಯೋಗವು 5 ಟಿಎಂಸಿ ಅಡಿ ನೀರು ಬಿಡುವಂತೆ ಅಲ್ಲಿನ ಮುಖ್ಯಮಂತ್ರಿ ಪೃಥ್ವಿರಾಜ್ ಚವ್ಹಾಣ ಅವರಿಗೆ ಮನವಿ ಸಲ್ಲಿಸಿತು. ಸಚಿವರ ನಿಯೋಗದ ಮನವಿಗೆ ಸ್ಪಂದಿಸಿದ ಚವ್ಹಾಣ ಅವರು ನೀರು ಬಿಡುವುದಾಗಿ ಭರವಸೆ ನೀಡಿದರು.ಕೃಷ್ಣಾ ನದಿಗೆ ನೀರು ಬಿಡುವುದರಿಂದ ಬೆಳಗಾವಿ, ಬಾಗಲಕೋಟೆ ಹಾಗೂ ವಿಜಾಪುರ ಜಿಲ್ಲೆಗಳ ಹಲವು ಹಳ್ಳಿಗಳಿಗೆ ಕುಡಿಯುವ ನೀರಿಗೆ ಅನುಕೂಲವಾಗಲಿದೆ.`ಮಂಗಳವಾರದಿಂದ (ಏ.9) ಕೃಷ್ಣಾ ನದಿಗೆ ನೀರು ಬಿಡಲು ಮಹಾರಾಷ್ಟ್ರ ಸರ್ಕಾರ ಒಪ್ಪಿಗೆ ನೀಡಿದೆ. ಅಂತರರಾಜ್ಯ ಒಪ್ಪಂದದ ಪ್ರಕಾರ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ಕೊಯ್ನಾ ಜಲಾಶಯದಿಂದ 3.34 ಟಿಎಂಸಿ ಅಡಿ ನೀರನ್ನು ಕೃಷ್ಣಾ ನದಿಗೆ ಬಿಡಬೇಕು. ಈ ಒಪ್ಪಂದದ ಪ್ರಕಾರ ಮಹಾರಾಷ್ಟ್ರ ಸರ್ಕಾರ ಕೂಡಲೇ 1.37 ಟಿಎಂಸಿ ಅಡಿ ನೀರನ್ನು ಬಿಡಲು ಒಪ್ಪಿಗೆ ಸೂಚಿಸಿದೆ' ಎಂದು ನಿಯೋಗದಲ್ಲಿ ತೆರಳಿದ್ದ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕೃಷಿ ಸಚಿವ ಉಮೇಶ ಕತ್ತಿ `ಪ್ರಜಾವಾಣಿ'ಗೆ ತಿಳಿಸಿದರು.`ಹೆಚ್ಚುವರಿಯಾಗಿ 4 ಟಿಎಂಸಿ ಅಡಿ ನೀರು ಬಿಡಲು ಮನವಿ ಮಾಡಿದ್ದೇವೆ. ಅಧಿಕಾರಿಗಳೊಂದಿಗೆ ಜಲಾಶಯದಲ್ಲಿರುವ ನೀರಿನ ಮಟ್ಟ ಕುರಿತು ಚರ್ಚಿಸಿ ನಾಲ್ಕೈದು ದಿನದೊಳಗೆ ನಿರ್ಧರಿಸಲಾಗುವುದು ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.ಈ ನೀರಿಗಾಗಿ ರಾಜ್ಯ ಸರ್ಕಾರ ಹಣ ನೀಡಲು ಒಪ್ಪಿಗೆ ನೀಡಿದೆ. ಇದಕ್ಕೆ ಸುಮಾರು ್ಙ 20 ಕೋಟಿ ವೆಚ್ಚ ತಗಲಬಹುದು' ಎಂದು ಅವರು ಹೇಳಿದರು.ನೀರು ಬಿಡಲು ಮಹಾರಾಷ್ಟ್ರ ಮೊರೆ: `ಆಲಮಟ್ಟಿ ಜಲಾಶಯದಿಂದ ಸೋಲಾಪುರಕ್ಕೆ ಕುಡಿಯುವ ನೀರಿಗಾಗಿ ಇಂಡಿ ನಾಲೆ ಮೂಲಕ ಭೀಮಾ ನದಿಗೆ ನೀರು ಬಿಡಲು ಮಹಾರಾಷ್ಟ್ರದ ಜಲಸಂಪನ್ಮೂಲ ಸಚಿವ ರಾಮರಾಜೇ ಪ್ರತಾಪಸಿಂಗ್ ನಾಯ್ಕ ನಿಂಬಾಳ್ಕರ ಮನವಿ ಮಾಡಿಕೊಂಡಿದ್ದಾರೆ'.`ಈ ಕುರಿತು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹಾಗೂ ಅಧಿಕಾರಿಗಳ ಜೊತೆಗೆ ಚರ್ಚಿಸಿ ನಾಲ್ಕೈದು ದಿನಗಳೊಳಗೆ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದೇವೆ. ಕೃಷ್ಣಾ ನದಿಗೆ ನೀರು ಬಿಟ್ಟರೆ ಆಲಮಟ್ಟಿಯಿಂದ ಭೀಮಾ ನದಿಗೆ ನೀರು ಬಿಡಲು ತೊಂದರೆ ಇಲ್ಲ' ಎಂದು ಸಚಿವ ಕತ್ತಿ ತಿಳಿಸಿದರು.ಕಳೆದ ಬೇಸಿಗೆಯಲ್ಲಿ ಕೊಯ್ನಾ ಜಲಾಶಯದಿಂದ 4 ಟಿಎಂಸಿ ನೀರು ಬಿಡುವಂತೆ ಮನವಿ ಮಾಡಲಾಗಿತ್ತು. ಆದರೆ, 1.9 ಟಿಎಂಸಿ ನೀರು ಮಾತ್ರ ಬಿಡುಗಡೆ ಮಾಡಲಾಗಿತ್ತು.ಮಾನವೀಯತೆ: `ಕರ್ನಾಟಕದಲ್ಲಿ ಬರಗಾಲ ಇರುವ ಕಾರಣ ಮಾನವೀಯ ದೃಷ್ಟಿಯಿಂದ ಮಹಾರಾಷ್ಟ್ರದ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುವ ಬಗ್ಗೆ ಪರಿಶೀಲಿಸಲಾಗುವುದು' ಎಂದು ಮಹಾರಾಷ್ಟ್ರದ ಗೃಹ ಸಚಿವ ಆರ್.ಆರ್. ಪಾಟೀಲ ಭಾನುವಾರ ಬೆಳಗಾವಿಯಲ್ಲಿ ಪತ್ರಕರ್ತರಿಗೆ ತಿಳಿಸಿದ್ದರು.`ಕೊಯ್ನಾ ಜಲಾಶಯದಲ್ಲಿ ಎಷ್ಟು ಪ್ರಮಾಣದ ನೀರು ಲಭ್ಯವಿದೆ ಎಂಬ ಬಗ್ಗೆ ಜಲಾಶಯದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡಲಾಗುವುದು' ಎಂದು ಹೇಳಿದ್ದರು.

ಪ್ರತಿಕ್ರಿಯಿಸಿ (+)