ಶುಕ್ರವಾರ, ಮೇ 14, 2021
21 °C

ಕೊಯ್ನಾ ನಿರೀಕ್ಷೆಯಲ್ಲಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯ ಸರ್ಕಾರ ಪಟ್ಟಿ ಮಾಡಿದ ಬರಪೀಡಿತ ತಾಲ್ಲೂಕುಗಳಲ್ಲಿ ಉತ್ತರ ಕರ್ನಾಟಕದ ವಿಜಾಪುರ, ಬಾಗಲಕೋಟೆ, ಬೆಳಗಾವಿ, ಗದಗ, ಧಾರವಾಡ ಜಿಲ್ಲೆಗಳದ್ದೇ ಸಿಂಹಪಾಲು. ಅಂತೆಯೇ ಬೇಸಿಗೆ ಆರಂಭದಿಂದಲೂ ಇಲ್ಲಿ ನೀರಿನ ಹಾಹಾಕಾರ ಹೆಚ್ಚಾಗಿದೆ.ಜಿಲ್ಲಾಡಳಿತವು ಅತಿ ಅವಶ್ಯವಿರುವ ಗ್ರಾಮ ಹಾಗೂ ನಗರದ ಬಡಾವಣೆಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸುತ್ತಿದೆ. ಆದರೆ ಅದು ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ!  ಬೆಳಗಾವಿ ಜಿಲ್ಲೆಯ ಅಥಣಿ, ರಾಯಬಾಗ, ಚಿಕ್ಕೋಡಿ, ಬಾಗಲಕೋಟೆ ಜಿಲ್ಲೆಯ ಜಮಖಂಡಿ, ಮುಧೋಳ, ವಿಜಾಪುರ ಜಿಲ್ಲೆಯ ಇಂಡಿ, ವಿಜಾಪುರ ತಾಲ್ಲೂಕುಗಳು ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಬರುವ ನೀರಿಗಾಗಿ ಕಾಯುತ್ತಿವೆ. ಆಲಮಟ್ಟಿ ಅಣೆಕಟ್ಟೆಯಲ್ಲಿ ಕಳೆದ ವರ್ಷಕ್ಕೆ  ಹೋಲಿಸಿದರೆ ಈ ಬಾರಿ 23ಟಿಎಂಸಿಯಷ್ಟು ನೀರು ಕಡಿಮೆಯಾಗಿದೆ.ಬರದ ಬವಣೆ ಹೆಚ್ಚುತ್ತಿರುವ ಅವಿಭಜಿತ ವಿಜಾಪುರ ಜಿಲ್ಲೆಯ ಜನತೆಗೆ ಇದು ಇನ್ನಷ್ಟು ಕಂಟಕವಾಗಿ ಪರಿಣಮಿಸುವ ಸಾಧ್ಯತೆಯಿದೆ. ಆದರೆ, ಕೊಯ್ನಾ ಜಲಾಶಯದ ನೀರನ್ನು ರಾಜ್ಯಕ್ಕೆ ಹರಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಅಗತ್ಯ ಒತ್ತಡವನ್ನು ಆ ರಾಜ್ಯದ ಮೇಲೆ ಹೇರುತ್ತಿಲ್ಲ ಎಂಬುದು ನಾಗರಿಕರ ಆರೋಪ. ಲಭ್ಯವಿರುವ ನೀರನ್ನೇ ಬಳಸಿಕೊಳ್ಳೋಣ ಎಂದರೂ ವಿದ್ಯುತ್ ಕಡಿತ ಇದಕ್ಕೆ ಅಡ್ಡಿಯಾಗುತ್ತಿದೆ.ತೀವ್ರ ನೀರಿನ ಸಮಸ್ಯೆ ಎದುರಿಸುತ್ತಿರುವ ವಿಜಾಪುರ ಜಿಲ್ಲೆಯ 62 ಗ್ರಾಮಗಳಿಗೆ ಮತ್ತು 100 ಕ್ಕಿಂತ ಅಧಿಕ ಜನವಸತಿ ಇರುವ ಪುಟ್ಟ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಇದೂ ಸಾಕಾಗದೆ ಖಾಸಗಿಯವರಿಂದ ದುಬಾರಿ ಬೆಲೆಗೆ ಟ್ಯಾಂಕರ್ ನೀರನ್ನು ನಾಗರಿಕರು ತುಂಬಿಸಿಕೊಳ್ಳುತ್ತಿದ್ದಾರೆ.ಜಿಲ್ಲಾಡಳಿತ ರೂ 400 ರಿಂದ 415 ರೂಪಾಯಿ (ನಗರದಲ್ಲಿ) ದರದಲ್ಲಿ ಒಂದು ಟ್ಯಾಂಕರ್ ನೀರು ಪೂರೈಕೆ ಮಾಡುತ್ತಿದ್ದರೆ, ಖಾಸಗಿಯವರು ಇದೇ ಅವಕಾಶವನ್ನು ಬಳಸಿಕೊಂಡು ಪ್ರತಿ ಟ್ಯಾಂಕರ್‌ಗೆ ಒಂದು ಸಾವಿರ ರೂಪಾಯಿ ವಸೂಲಿ ಮಾಡುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ಅಲ್ಪಮಟ್ಟಿಗೆ ಪರಿಸ್ಥಿತಿ ಸುಧಾರಿಸಿದೆ. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲಾಡಳಿತ ಜಿಲ್ಲೆಯ ವಿವಿಧೆಡೆ ಇರುವ ಕೊಳವೆ ಬಾವಿಗಳ ಪುನಶ್ಚೇತನಕ್ಕೆ ಹಣ ಬಿಡುಗಡೆ ಮಾಡಿದೆ.ನವಿಲುತೀರ್ಥ ಜಲಾಶಯದಿಂದ 0.25 ಟಿಎಂಸಿ ಹಾಗೂ ಹಿಡಕಲ್ ಜಲಾಶಯದಿಂದ 1.25 ಟಿಎಂಸಿ ನೀರನ್ನು ಜಿಲ್ಲೆಗೆ ಬಿಡುಗಡೆ ಮಾಡಿರುವುದರಿಂದ ಅಷ್ಟರ ಮಟ್ಟಿಗೆ ಸಮಸ್ಯೆ ಎದುರಾಗಿಲ್ಲ. ಒಂದು ತಿಂಗಳು ಕಳೆದರೆ ಕುಡಿಯುವ ನೀರಿನ ಬವಣೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಕೊಯ್ನಾ ಜಲಾಶಯದಿಂದ ನೀರು ಬಿಡುಗಡೆಯಾದರೆ, ಆ ನೀರನ್ನು ಜಿಲ್ಲೆಯ ಜನರಿಗೆ ಸಮರ್ಪಕವಾಗಿ ಪೂರೈಸಲು ಜಿಲ್ಲಾಡಳಿತವು ಸಿದ್ಧತೆ ನಡೆಸಿದೆ.ಬಾದಾಮಿ ತಾಲ್ಲೂಕಿನ ಅನಂತಗಿರಿ ಎಂಬ ಗ್ರಾಮಕ್ಕೆ ಕಳೆದ ಎರಡು ತಿಂಗಳಿಂದ ಟ್ಯಾಂಕರ್ ಮೂಲಕವೇ ನೀರು ಪೂರೈಕೆ ಮಾಡಲಾಗುತ್ತಿದೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಕುಡಿಯುವ ನೀರಿಗಾಗಿಯೇ ರೂ 4.72 ಕೋಟಿ ಹಣವನ್ನು ಖರ್ಚು ಮಾಡಲಾಗಿದೆ.

 

ಅರ್ಧ ಅರೆ ಮಲೆನಾಡು, ಇನ್ನರ್ಧ ಬಯಲು ಸೀಮೆಯ ಪ್ರದೇಶ ಇರುವ ಬೆಳಗಾವಿ ಜಿಲ್ಲೆಯ 23ಗ್ರಾಮಗಳಿಗೆ ನೀರಿನ ಕೊರತೆಯ ಹಿನ್ನೆಲೆಯಲ್ಲಿ ನಿತ್ಯ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಅಥಣಿ ತಾಲ್ಲೂಕಿನ 11, ರಾಯಬಾಗ ತಾಲ್ಲೂಕಿನ 9 ಹಾಗೂ ಚಿಕ್ಕೋಡಿಯ ಮೂರು ಗ್ರಾಮಗಳಿಗೆ ಟ್ಯಾಂಕರ್ ನೀರು ಪೂರೈಸಲಾಗುತ್ತಿದೆ.ಗದಗ ಜಿಲ್ಲೆಯ ಎಲ್ಲ ಐದು ತಾಲ್ಲೂಕುಗಳನ್ನೂ (ಗದಗ, ರೋಣ, ಮುಂಡರಗಿ, ಶಿರಹಟ್ಟಿ, ನರಗುಂದ) ಬರಪೀಡಿತ ಪ್ರದೇಶಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಆದರೆ ಮಲಪ್ರಭಾ ನದಿ ನೀರನ್ನು ಇಲ್ಲಿಗೆ ಪೂರೈಕೆ ಮಾಡುತ್ತಿರುವುದರಿಂದ ವಿಜಾಪುರ, ಬಾಗಲಕೋಟೆ ಜಿಲ್ಲೆಗಳಷ್ಟು ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲ.

 

ಆದರೆ ವಿದ್ಯುತ್ ಕಡಿತದಿಂದ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಧಾರವಾಡ ಜಿಲ್ಲೆಯಲ್ಲಿಯೂ ಮಲಪ್ರಭಾ ನೀರು ಪೂರೈಕೆ ಇರುವುದರಿಂದ ನೀರಿನ ಬವಣೆ ಅಷ್ಟಾಗಿ ಕಾಣಿಸಿಕೊಂಡಿಲ್ಲ.ಕಲಘಟಗಿಯಂಥ ಅರೆ ಮಲೆನಾಡಿನ ಪ್ರದೇಶದಲ್ಲಿ ಹಸಿರು ಮೇವೂ ಲಭ್ಯವಾಗುತ್ತಿದೆ. ಆದರೆ, ಕುಂದಗೋಳ ತಾಲ್ಲೂಕಿನಲ್ಲಿ ಇರುವ ಕೆರೆಗಳು ಬತ್ತಿರುವುದರಿಂದ ಹಾಗೂ ನೀರು ಪೂರೈಕ ಜಾಲ ಅಸಮರ್ಪಕವಾಗಿರುವುದರಿಂದ ದಿನನಿತ್ಯ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ.ಕಳೆದ ಮಳೆಗಾಲದಲ್ಲಿ ಮಹಾರಾಷ್ಟ್ರ ಹೇಳದೇ ಕೇಳದೇ ಕೊಯ್ನಾ ಜಲಾಶಯದಿಂದ ರಾಜ್ಯಕ್ಕೆ ನೀರನ್ನು ಬಿಡುಗಡೆ ಮಾಡಿತ್ತು. ಅಥಣಿ ತಾಲ್ಲೂಕಿನ ಹಲವು ಗ್ರಾಮಗಳು ಆಗ ಮುಳುಗಡೆಯಾಗುವ ಭೀತಿ ಎದುರಿಸಿದ್ದವು. ಇದೀಗ ಅದೇ ಜಲಾಶಯದ ನೀರು ಅತಿ ಅಗತ್ಯವಾಗಿದ್ದು, ನೀರು ಬಿಡುಗಡೆಯಾದರೆ ಮಾತ್ರ ಬರದ ಬೇಗೆಯಿಂದ ಬೇಯುತ್ತಿರುವ ಜನತೆ ಸ್ವಲ್ಪ ಮಟ್ಟಿಗೆ ಚೇತರಿಸಿಕೊಳ್ಳಬಹುದಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.