ಶುಕ್ರವಾರ, ನವೆಂಬರ್ 15, 2019
22 °C

ಕೊಯ್ನಾ ನೀರು ಕೃಷ್ಣೆಗೆ ನಿರಂತರ: ಬಿಎಸ್‌ವೈ ಆಶ್ವಾಸನೆ

Published:
Updated:

ಬನಹಟ್ಟಿ: ಈ ರಾಜ್ಯದ ಎರಡು ಕಣ್ಣುಗಳಾದ ರೈತ ಮತ್ತು ನೇಕಾರರ ಒಂದು ಲಕ್ಷದವರೆಗಿನ ಸಾಲವನ್ನು ಸಂಪೂರ್ಣ ಮನ್ನಾ ಮಾಡುವ ಭರವಸೆ ನೀಡುತ್ತೇನೆ. 65 ವರ್ಷ ಮೇಲ್ಪಟ್ಟ ರೈತರಿಗೆ ರೂ.500 ಮಾಸಾಶನ ನೀಡುವ ತೀರ್ಮಾನವನ್ನು ಕೈಗೊಂಡಿದ್ದೇನೆ. ರೈತ ಮತ್ತು ನೇಕಾರರ ಮಕ್ಕಳು ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ಪದವಿ ಶಿಕ್ಷಣ ಪಡೆಯುವುದರ ಸಲುವಾಗಿ ಅವರ ಹಣಕಾಸಿನ ಸೌಲಭ್ಯವನ್ನು ಸರ್ಕಾರ ಭರಿಸುವಂತೆ ಮಾಡುತ್ತೇನೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.ಬುಧವಾರ ನಗರದ ಈಶ್ವರಲಿಂಗ ಮೈದಾನದಲ್ಲಿ ಕೆಜೆಪಿ ಅಭ್ಯರ್ಥಿ ಪರವಾಗಿ ಬಹಿರಂಗ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಈ ಭಾಗದ ನೇಕಾರರ ಮಜೂರಿಯನ್ನು ಮಾಲೀಕರು ಹೆಚ್ಚು ಮಾಡಬೇಕು. ಪವರ್‌ಲೂಮ್ ಮಗ್ಗಗಳಿಗೆ ಕಡಿಮೆ ದರದಲ್ಲಿ ವಿದ್ಯುತ್ ಸಿಗುವಂತೆ ಮಾಡುತ್ತೇನೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಕೊಯ್ನಾ ನೀರು ಕೃಷ್ಣಾ ನದಿಗೆ ನಿರಂತರ ಹರಿದು ಬರುವಂತೆ ಮಾಡುತ್ತೇನೆ.

ಜಗದೀಶ ಶೆಟ್ಟರ್ ನೀರು ಬಿಡಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಅಲ್ಪಸಂಖ್ಯಾತರಿಗೆ ಬರುವ ದಿನಗಳಲ್ಲಿ ಎರಡು ಸಾವಿರ ಕೋಟಿಯಷ್ಟು ಹಣ, ಪರಿಶಿಷ್ಟ ಜಾತಿ ಮತ್ತು ಜನಾಂಗದವರ ಅಭಿವೃದ್ಧಿಗಾಗಿ ಐದು ಸಾವಿರ ಕೋಟಿ ಹಣವನ್ನು ಮೀಸಲಿಡಲಿದ್ದೇನೆ. ಮುಂಬರುವ ದಿನಗಳಲ್ಲಿ ರಾಜ್ಯದ ಪ್ರತಿಯೊಬ್ಬ ವ್ಯಕ್ತಿ ಸ್ವಾವಲಂಬನೆಯ ಬದುಕನ್ನು ಕಟ್ಟಿಕೊಳ್ಳಲು ಅನುಕೂಲ ಮಾಡಿಕೊಡುತ್ತೇನೆ ಎಂದು ಯಡಿಯೂರಪ್ಪ ತಿಳಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ಆಯೋಗದ ಅಧ್ಯಕ್ಷ ಕೆ. ಮುಕಡಪ್ಪ ಸಭೆಯಲ್ಲಿ ಮಾತನಾಡಿದರು. ವೇದಿಕೆಯ ಮೇಲೆ ತೇರದಾಳ ಕೆಜೆಪಿ ಅಧ್ಯಕ್ಷ ವಿನೋದ ಪತ್ತಾರ, ಅಹಮ್ಮದ ಖಾನ, ಮಲ್ಲು ಬಾಳಿಕಾಯಿ ರೂಪಾ ಬಾಳಿಕಾಯಿ, ವಿವೇಕಾನಂದ ಹುಲ್ಯಾಳ ಮುಂತಾದವರು ಉಪಸ್ಥಿತರಿದ್ದರು.

ಕೆಜೆಪಿ ಅಭ್ಯರ್ಥಿ ಬಸವರಾಜ ಬಾಳಿಕಾಯಿ ಸ್ವಾಗತಿಸಿದರು. ನಗರ ಕೆಜೆಪಿ ಅಧ್ಯಕ್ಷ ವಿನೋದ ಪತ್ತಾರ ನಿರೂಪಿಸಿದರು.

ಪ್ರತಿಕ್ರಿಯಿಸಿ (+)