ಮಂಗಳವಾರ, ನವೆಂಬರ್ 12, 2019
27 °C
ಉಪಗ್ರಹ ಆಧರಿಸಿದ `ಎಫ್‌ಎಎಸ್‌ಎಎಲ್' ತಂತ್ರಜ್ಞಾನ

ಕೊಯ್ಲಿಗೂ ಮುನ್ನವೇ ಇಳುವರಿ ಮಾಹಿತಿ

Published:
Updated:

ನವದೆಹಲಿ (ಪಿಟಿಐ): ಉಪಗ್ರಹ ಒದಗಿಸುವ ಮಾಹಿತಿಗಳನ್ನು ಬಳಸಿಕೊಂಡು ಹೊಲ-ಗದ್ದೆಗಳಲ್ಲಿನ ಬೆಳೆಯ ಇಳುವರಿಯನ್ನು ಖಚಿತವಾಗಿ ತಿಳಿದುಕೊಳ್ಳಬಹುದಾದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ ಬಳಸಿಕೊಳ್ಳಲಾಗುತ್ತಿದೆ ಎಂದು ಕೇಂದ್ರ ಕೃಷಿ ಮತ್ತು ಆಹಾರ ಸಂಸ್ಕರಣೆ ಉದ್ಯಮಗಳ ರಾಜ್ಯ ಸಚಿವ ತಾರೀಖ್ ಅನ್ವರ್ ಹೇಳಿದರು.ಕೊಯ್ಲಿಗೂ ಮುನ್ನವೇ ಫಸಲಿನ ಇಳುವರಿ ಪ್ರಮಾಣವನ್ನು ಉಪಗ್ರಹದ ಮೂಲಕ ತಿಳಿದುಕೊಳ್ಳಬಹುದು. ಅಂತಹುದೊಂದು ತಂತ್ರಜ್ಞಾನ ಆಧರಿಸಿದ (ಸ್ಪೇಸ್ ಆಗ್ರೊ-ಮೆಟಿಯೊರಾಲಜಿ ಅಂಡ್ ಲ್ಯಾಂಡ್ ಬೇಸ್ಡ್ ಒಬ್ಸರ್ವೇಷನ್ಸ್-ಎಫ್‌ಎಎಸ್‌ಎಎಲ್) ಯೋಜನೆಯನ್ನು `ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ'(ಇಸ್ರೊ) ಜತೆಗೂಡಿ ಅಭಿವೃದ್ಧಿಪಡಿಸಲಾಗಿದೆ.ಉಪಗ್ರಹ ಒದಗಿಸುವ ದತ್ತಾಂಶಗಳನ್ನು ಆಧರಿಸಿ ಕೃಷಿ ಕ್ಷೇತ್ರದ ಫಸಲಿನ ಇಳುವರಿ ಲೆಕ್ಕಹಾಕಲಾಗುತ್ತದೆ. ಈ ಯೋಜನೆಗಾಗಿ ಸರ್ಕಾರ ರೂ.8.66 ಕೋಟಿಯನ್ನು ಕಳೆದ ಹಣಕಾಸು ವರ್ಷ ವಿನಿಯೋಗಿಸಿದೆ ಎಂದು ಸಚಿವರು ಲೋಕಸಭೆಗೆ ಮಂಗಳವಾರ ಲಿಖಿತ ಉತ್ತರ ನೀಡಿದರು.ಸದ್ಯ `ಎಫ್‌ಎಎಸ್‌ಎಎಲ್'ನಿಂದ ಭತ್ತ(ಹಿಂಗಾರು ಮತ್ತು ಮುಂಗಾರು), ಗೋಧಿ, ಆಲೂಗಡ್ಡೆ, ಸಾಸಿವೆ ಮತ್ತು ಸೆಣಬು ಬೆಳೆ ಇಳುವರಿಯನ್ನು ಮುಂಚಿತವಾಗಿಯೇ ತಿಳಿಯಬಹುದು. `ಮಹಾಲಾನೋಬಿಸ್ ರಾಷ್ಟ್ರೀಯ ಕೃಷಿ ಮುನ್ಸೂಚನೆ ಕೇಂದ್ರ'ದಲ್ಲಿ 2012ರ ಏಪ್ರಿಲ್‌ನಿಂದಲೇ `ಎಫ್‌ಎಎಸ್‌ಎಎಲ್' ಬಳಸಿಕೃಷಿ ಕ್ಷೇತ್ರ ಅಧ್ಯಯನ ನಡೆಸಲಾಗುತ್ತಿದೆ ಎಂದು ಸಚಿವರು ಉತ್ತರಿಸಿದರು.ಖಾದ್ಯತೈಲ-ಸುಂಕ ಏರಿಕೆ ಇಲ್ಲ

ಖಾದ್ಯ ತೈಲಗಳ ಮೇಲಿನ ಆಮದು ಸುಂಕವನ್ನು ಹೆಚ್ಚಿಸುವ ಪ್ರಸ್ತಾವನೆಯೇನೂ ಸದ್ಯ ಸರ್ಕಾರದ ಮುಂದೆ ಇಲ್ಲ ಎಂದು ಆಹಾರ ಮತ್ತು ನಾಗರಿಕ ವ್ಯವಹಾರಗಳ ಸಚಿವ ಕೆ.ವಿ.ಥಾಮಸ್ ಲೋಕಸಭೆಗೆ ತಿಳಿಸಿದರು.17.22 ಕೋಟಿ ಟನ್ ಹಾಲು

ದೇಶದಲ್ಲಿ 2020ರ ವೇಳೆಗೆ 17.22 ಕೋಟಿ ಟನ್‌ನಷ್ಟು ಹಾಲು ಮತ್ತು ಹಾಲಿನ ವಿವಿಧ ಉತ್ಪನ್ನಗಳಿಗೆ ಬೇಡಿಕೆ ಬರಲಿದ್ದು, ಅಷ್ಟನ್ನೂ ಪೂರೈಸುವ ಸಾಮರ್ಥ್ಯವನ್ನು ದೇಶ ಹೊಂದಿರಲಿದೆ ಎಂದು ಕೃಷಿ ಮತ್ತು ಆಹಾರ ಸಂಸ್ಕರಣೆ ಕೈಗಾರಿಕೆಗಳ ರಾಜ್ಯ ಸಚಿವ ಚರಣ್‌ದಾಸ್ ಮಹಾಂತ ಲೋಕಸಭೆಗೆ ಮಂಗಳವಾರ ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)