ಬುಧವಾರ, ಮೇ 12, 2021
22 °C

ಕೊರತೆ ನಡುವೆ ಪೊಲೀಸರ ಉತ್ತಮ ಸೇವೆ: ಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಸಿಬ್ಬಂದಿ ಮತ್ತು ಉಪಕರಣಗಳ ಕೊರತೆಯ ನಡುವೆಯೂ ಪೊಲೀಸ್ ಇಲಾಖೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಅಭಿಪ್ರಾಯಪಟ್ಟರು.ನಗರದ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ಜಿಲ್ಲಾ ಪೊಲೀಸ್ ವತಿಯಿಂದ ಮುಖ್ಯಮಂತ್ರಿ ಪದಕ ಪುರಸ್ಕೃತರಾದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಸನ್ಮಾನಿಸಿ ಅವರು ಮಾತನಾಡಿದರು.ಇಲಾಖೆಯಲ್ಲಿನ ಈ ಕೊರತೆಗಳಿಂದ ಜನರಿಗೆ ಇನ್ನೂ ಹೆಚ್ಚಿನ ಸೇವೆ ಸಲ್ಲಿಸುವುದು ಪೊಲೀಸರಿಗೆ ಕಷ್ಟ ಸಾಧ್ಯವಾಗುತ್ತಿದ್ದು, ಜನರ ನಿರೀಕ್ಷೆ ತಲುಪುವ ಕೆಲಸಗಳಾಗುತ್ತಿಲ್ಲ. ಆದರೂ,  ಹತ್ತು ವರ್ಷಗಳಿಂದ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.ಇಲಾಖೆಯಲ್ಲಿ ಪದಕ, ಪ್ರಶಸ್ತಿ ನೀಡಿ ಅಧಿಕಾರಿ ಮತ್ತು ಸಿಬ್ಬಂದಿಯ ಉತ್ತಮ ಕರ್ತವ್ಯ ಗುರುತಿಸುವುದು ಒಳ್ಳೆಯ ಬೆಳವಣಿಗೆಯಾಗಿದೆ. ಇದೇ ರೀತಿ ಎಲ್ಲ ಇಲಾಖೆಗಳಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಗುರುತಿಸುವಂತಾಗಬೇಕು ಎಂದು ತಿಳಿಸಿದರು.ಕರ್ನಾಟಕದಲ್ಲಿ ಒಟ್ಟು 92 ಪೊಲೀಸರಿಗೆ ಮುಖ್ಯಮಂತ್ರಿ ಪದಕ ಲಭಿಸಿದ್ದು, ಈ ಪೈಕಿ ಚಿತ್ರದುರ್ಗ ಜಿಲ್ಲೆಗೆ 4 ಪದಕ ಲಭಿಸಿರುವುದು ಸಂತಸದ ವಿಷಯ. ನಾನಾ ಇಲಾಖೆಗಳಲ್ಲಿ ಶಿಕ್ಷೆ ನೀಡುವ ಅವಕಾಶಗಳಿವೆ. ಆದರೆ, ಬಡ್ತಿ ನೀಡುವ ಅವಕಾಶ ಕಡಿಮೆಯಿದೆ. ಪ್ರಶಸ್ತಿಯಿಂದ ಎಲ್ಲರ ಜವಾಬ್ದಾರಿ ಹೆಚ್ಚಾಗಿದೆ. ಇನ್ನೂ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಪಡೆಯಬೇಕು ಎಂದು ಆಶಿಸಿದರು.ಪ್ರಭಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಜಿ. ಕ್ಯಾತನ್ ಮಾತನಾಡಿ, 1980ರಿಂದ ಕರ್ನಾಟಕ ಪೊಲೀಸ್ ಇಲಾಖೆ ಕಠಿಣ ಪರಿಶ್ರಮದಿಂದ ಕಾರ್ಯನಿರ್ವಹಿಸಿದ ಎಲ್ಲ ಪೊಲೀಸರಿಗೂ ಪದಕ ನೀಡಿ ಸನ್ಮಾನಿಸುವುದು ಪ್ರಾರಂಭವಾಗಿದ್ದು, ಐದು ವರ್ಷಗಳ ಉತ್ತಮ ಸೇವೆ ಗಣನೆಗೆ ತೆಗೆದುಕೊಂಡು ಪದಕ ನೀಡಿ  ಗೌರವಿಸಲಾಗಿದೆ.

 

ಜಿಲ್ಲೆಯಲ್ಲಿ ತಾವು ಪ್ರಭಾರಿಯಾಗಿ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ನಾಲ್ಕು ಜನರಿಗೆ ಪ್ರಶಸ್ತಿ ಬಂದಿದ್ದು, ಜಿಲ್ಲೆಯ ಪೊಲೀಸ್ ಇಲಾಖೆಯ ಕೀರ್ತಿ ಪತಾಕೆ ಹೆಚ್ಚಿಸಿರುವುದು ಅಭಿನಂದನಾರ್ಹ ಎಂದರು.ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಚಳ್ಳಕೆರೆ ಉಪವಿಭಾಗದ ಡಿವೈಎಸ್‌ಪಿ ಹನುಮಂತರಾಯ, ನಾನು ಮೊದಲು ಐದು ವರ್ಷ ಬ್ಯಾಂಕ್ ಉದ್ಯೋಗಿಯಾಗಿ ಕಾರ್ಯ ನಿರ್ವಹಿಸಿದ್ದು, ಕಳೆದ ಏಳು ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಈ ಪದಕದಿಂದ ಕರ್ತವ್ಯದ ಜವಾಬ್ದಾರಿ ಹೆಚ್ಚಾಗಿದೆ. ಇನ್ನೂ 22 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ಅವಕಾಶವಿದೆ. ಈ ಪ್ರಶಸ್ತಿ ನನ್ನ ಜತೆ ಕೆಲಸ ನಿರ್ವಹಿಸಿದ ಎಲ್ಲರಿಗೂ ಸೇರುತ್ತದೆ ಎಂದು ತಿಳಿಸಿದರು.ಮುಖ್ಯಮಂತ್ರಿ ಪದಕ ಪಡೆದ ಚಿತ್ರದುರ್ಗ ಗ್ರಾಮಾಂತರ ಸಿಪಿಐ ಎಚ್.ಬಿ. ರಮೇಶ್‌ಕುಮಾರ್, ಹಿರಿಯೂರು ಗ್ರಾಮಾಂತರ ಪಿಎಸ್‌ಐ ಎಸ್.ಪಿ. ಪಾಲಬಾವಿ, ಚಿತ್ರದುರ್ಗ ಪ್ರಧಾನ ಪೊಲೀಸ್ ಕಚೇರಿ ಕಂಪ್ಯೂಟರ್ ವಿಭಾಗದ ಸಿ.ಎಸ್. ರಾಘವೇಂದ್ರ  ಅವರನ್ನು ಸನ್ಮಾನಿಸಲಾಯಿತು.ಡಿವೈಎಸ್‌ಪಿ ಗಂಗಯ್ಯ, ಪಿಎಸ್‌ಐ ಶಂಕರಮೂರ್ತಿ, ಶಿವರಾಮ್ ಮತ್ತಿತರರು ಉಪಸ್ಥಿತರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.