ಮಂಗಳವಾರ, ನವೆಂಬರ್ 19, 2019
29 °C

ಕೊರಿಯಾ: ಮತ್ತೆ ಯುದ್ಧಭೀತಿ?

Published:
Updated:
ಕೊರಿಯಾ: ಮತ್ತೆ ಯುದ್ಧಭೀತಿ?

ಸೋಲ್ (ಎಪಿ):  ಅಂತರರಾಷ್ಟ್ರೀಯ ಸಮುದಾಯದ ಎಚ್ಚರಿಕೆಯ ಹೊರತಾಗಿಯೂ ಅಣ್ವಸ್ತ್ರ ಪರೀಕ್ಷೆ ಮುಂದುವರೆಸಿರುವ ಉತ್ತರ ಕೊರಿಯಾ ಬುಧವಾರ ಮತ್ತೊಂದು ಅಣ್ವಸ್ತ್ರ ಪರೀಕ್ಷೆ ಅಥವಾ ಕ್ಷಿಪಣಿ ದಾಳಿಗೆ ಭರದ ಸಿದ್ಧತೆ ನಡೆಸಿದ್ದು ಈ ಪ್ರದೇಶದಲ್ಲಿ ಯುದ್ಧಭೀತಿ ಸೃಷ್ಟಿಯಾಗಿದೆ.ಪೂರ್ವ ಕರಾವಳಿಯಲ್ಲಿಯ ತನ್ನ ಕ್ಷಿಪಣಿಗಳನ್ನು ಉತ್ತರ ಕೊರಿಯಾ ಸಜ್ಜುಗೊಳಿಸಿದ್ದು, ಇದೇ ಬುಧವಾರ ಅಣ್ವಸ್ತ್ರ ಪರೀಕ್ಷೆ ಅಥವಾ ಕ್ಷಿಪಣಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ದಕ್ಷಿಣ ಕೊರಿಯಾ ಯುದ್ಧಭೀತಿಯ ಸುಳಿವು ನೀಡಿದೆ. ಅಮೆರಿಕ ಹಾಗೂ ದಕ್ಷಿಣ ಕೊರಿಯಾ ಬುಧವಾರಕ್ಕಾಗಿ ಎದುರು ನೋಡುತ್ತಿದ್ದು ಪ್ರತಿಕ್ಷಣದ ಬೆಳವಣಿಗೆಯನ್ನು ಗಂಭೀರವಾಗಿ ಅವಲೋಕಿಸುತ್ತಿವೆ.ನಾಲ್ಕು ಸಾವಿರ ಕಿ.ಮೀಟರ್ ದೂರ ಚಿಮ್ಮುವ ಸಾಮರ್ಥ್ಯ ಹೊಂದಿರುವ ಉತ್ತರ ಕೊರಿಯಾದ ಕ್ಷಿಪಣಿಗಳು ಗುವಾಮ್‌ದಲ್ಲಿರುವ ಅಮೆರಿಕದ ಸೇನಾ ನೆಲೆಯನ್ನು ಕರಾರುವಕ್ಕಾಗಿ ಹೊಡೆದು ಉರುಳಿಸಬಲ್ಲವು ಎಂದು ದಕ್ಷಿಣ ಕೊರಿಯಾ ರಕ್ಷಣಾ ಸಚಿವರು ಹೇಳಿದ್ದಾರೆ. ಬೆದರಿಕೆ ತಂತ್ರದ ಮೂಲಕ ಅಮೆರಿಕ ಹೇರಿರುವ ನಿರ್ಬಂಧ ತೆರವುಗೊಳಿಸುವ ಉಪಾಯವೂ ಇದರ ಹಿಂದಿರಬಹುದು ಎಂದು ಅವರು ಇದೇ ವೇಳೆ ಶಂಕೆ ವ್ಯಕ್ತಪಡಿದ್ದಾರೆ. ಪ್ಯೊಂಗ್‌ಯಾಂಗ್‌ನಲ್ಲಿರುವ ವಿವಿಧ ರಾಜತಾಂತ್ರಿಕ ಸಿಬ್ಬಂದಿ ತಕ್ಷಣ ದೇಶವನ್ನು ತೊರೆಯುವಂತೆ ಉತ್ತರ ಕೊರಿಯಾ ಮುನ್ನೆಚ್ಚರಿಕೆ ನೀಡಿದೆ. ರಾಜತಾಂತ್ರಿಕ ಸಿಬ್ಬಂದಿಯ ಭದ್ರತೆ ಬಗ್ಗೆ ಯಾವುದೇ ಸ್ಪಷ್ಟ ಭರವಸೆ ನೀಡುವ ಸ್ಥಿತಿಯಲ್ಲಿ ತಾನಿಲ್ಲ ಎಂದು ದಕ್ಷಿಣ ಕೊರಿಯಾ ಅಸಹಾಯಕತೆ ವ್ಯಕ್ತಪಡಿಸಿದೆ. ಆ ಮೂಲಕ ಎರಡೂ ರಾಷ್ಟ್ರಗಳು ಪರೋಕ್ಷವಾಗಿ ಯುದ್ಧದ ಸುಳಿವು ನೀಡಿದ್ದು, ಸೋಮವಾರ ಎರಡೂ ರಾಷ್ಟ್ರಗಳಲ್ಲಿ ತೀವ್ರ ಚಟುವಟಿಕೆಗಳಿಗೆ ಸಾಕ್ಷಿಯಾದವು.ಈ ಬೆಳವಣಿಗೆಯಿಂದಾಗಿ ಅನೇಕ ರಾಷ್ಟ್ರಗಳಲ್ಲಿ ತಮ್ಮ ರಾಜತಾಂತ್ರಿಕ ಅಧಿಕಾರಿಗಳು ಮತ್ತು ಸಿಬ್ಬಂದಿ ಭದ್ರತೆ ಬಗ್ಗೆ ಆತಂಕ ಆರಂಭವಾಗಿದೆ. 24ಕ್ಕೂ ಹೆಚ್ಚು ರಾಷ್ಟ್ರಗಳು ತಮ್ಮ ರಾಜತಾಂತ್ರಿಕ ಸಿಬ್ಬಂದಿಯನ್ನು ಮರಳಿ ಕರೆಸಿಕೊಳ್ಳುವ ಬಗ್ಗೆ ಇನ್ನೂ ಯಾವ ನಿರ್ಧಾರವನ್ನೂ ತೆಗೆದುಕೊಂಡಿಲ್ಲ. ಇಂಡೋನೇಷ್ಯಾ ಮಾತ್ರ ತನ್ನ ರಾಜತಾಂತ್ರಿಕ ಸಿಬ್ಬಂದಿಯನ್ನು ಮರಳಿ ಕರೆಸಿಕೊಳ್ಳುವುದಾಗಿ ಶನಿವಾರ ತನ್ನ ನಿರ್ಧಾರವನ್ನು ಪ್ರಕಟಿಸಿದೆ. ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿರುವುದಾಗಿ ಹೇಳಿವೆ.   ಉಭಯ ರಾಷ್ಟ್ರಗಳ ನಡುವೆ ಉಲ್ಬಣಗೊಂಡಿರುವ ಬಿಕ್ಕಟ್ಟಿನಿಂದಾಗಿ ಸೇನಾ ಮುಖ್ಯಸ್ಥರು ತಮ್ಮ ಪೂರ್ವ ನಿಯೋಜಿತ ಅಮೆರಿಕ ಪ್ರವಾಸವನ್ನು ಕೊನೆಯ ಗಳಿಗೆಯಲ್ಲಿ ಮೊಟಕುಗೊಳಿಸಿರುವುದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿಯಾಗಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಅಮೆರಿಕ ತನ್ನ ಉದ್ದೇಶಿತ ಕ್ಷಿಪಣಿ ಪರೀಕ್ಷಾರ್ಥ ಉಡಾವಣೆಯನ್ನು ಮುಂದೂಡಿದೆ. ಈ ಸಂದರ್ಭದಲ್ಲಿ ಪರೀಕ್ಷಾರ್ಥ ಉಡಾವಣೆ ಅಪಾರ್ಥಕ್ಕೆ ಎಡೆ ಮಾಡಿ ಕೊಡುವ ಸಾಧ್ಯತೆಗಳಿರುವುದರಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಅಮೆರಿಕರ ರಕ್ಷಣಾಇಲಾಖೆ ಹೇಳಿದೆ. ಜಪಾನ್ ಕಟ್ಟೆಚ್ಚರ: ತನ್ನ ಗಡಿಯತ್ತ ನುಗ್ಗುವ ಉತ್ತರ ಕೊರಿಯಾ ಕ್ಷಿಪಣಿಗಳನ್ನು ಹೊಡೆದು ಉರುಳಿಸುವಂತೆ ಜಪಾನ್ ತನ್ನ ಸೇನೆಗೆ ಆದೇಶ ನೀಡಿದೆ. ಯಾವುದೇ ಸಮಯದಲ್ಲಾದರೂ ಉತ್ತರ ಕೊರಿಯಾ ದಾಳಿ ನಡೆಸುವ ಸಾಧ್ಯತೆ ಇದ್ದು ಕಟ್ಟೆಚ್ಚರದಿಂದ ಇರುವಂತೆ ರಕ್ಷಣಾ ಸಚಿವಾಲಯ ಸೇನೆಗೆ ಹೇಳಿದೆ.ಈಗಾಗಲೇ ಉತ್ತರ ಕೊರಿಯಾ ಎರಡು ಮಧ್ಯಗಾಮಿ ಕ್ಷಿಪಣಿಗಳನ್ನು ಉಡಾವಣೆಗೆ ಸಜ್ಜುಗೊಳಿಸಿರುವ ವರದಿಗಳ ಹಿನ್ನೆಲೆಯಲ್ಲಿ ಜಪಾನ್ ಸಾಗರಗಡಿಯಲ್ಲಿ ಸೇನಾ ಕ್ಷಿಪಣಿ ನಿರೋಧಕಗಳನ್ನು ಸ್ಥಾಪಿಸಿದೆ.ಈ ಮಧ್ಯೆ ಶಾಂತಿ ಮತ್ತು ಪ್ರಾದೇಶಿಕ ಸ್ಥಿರತೆ ಕಾಪಾಡುವಂತೆ ಬ್ರಿಟನ್ ಹಾಗೂ ಇರಾನ್ ಮನವಿ ಮಾಡಿಕೊಂಡಿವೆ. ಉತ್ತರ ಕೊರಿಯಾ ತನ್ನ ಸೇನೆಯನ್ನು ಯುದ್ಧಕ್ಕೆ ಸಜ್ಜುಗೊಳಿಸದ ಕಾರಣ ಸದ್ಯ ಅಲ್ಲಿರುವ ತನ್ನ ರಾಜತಾಂತ್ರಿಕ ಸಿಬ್ಬಂದಿಯನ್ನು ಮರಳಿ ಕರೆಸಿಕೊಳ್ಳುವುದಿಲ್ಲ ಎಂದು ಬ್ರಿಟನ್ ಸ್ಪಷ್ಟಪಡಿಸಿದೆ. ಅಮೆರಿಕದ ಸೇನೆಯ ಪ್ರಚೋದನೆಯೇ ಕೊರಿಯಾ ಅಶಾಂತಿಗೆ ಕಾರಣ ಎಂದು ಇರಾನ್ ವಿದೇಶಾಂಗ ಸಚಿವಾಲಯ ಆರೋಪಿಸಿದೆ.

ಪ್ರತಿಕ್ರಿಯಿಸಿ (+)