ಬುಧವಾರ, ಜನವರಿ 29, 2020
24 °C

ಕೊರೆಯುವ ಚಳಿಗೆ ಮುಂಡರಗಿ ಗಡಗಡ: ಜನ ತತ್ತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊರೆಯುವ ಚಳಿಗೆ ಮುಂಡರಗಿ ಗಡಗಡ: ಜನ ತತ್ತರ

ಮುಂಡರಗಿ: ಕಳೆದ ಮೂರ್ನಾಲ್ಕು ದಿನಗಳಿಂದ ಪಟ್ಟಣವು ಸೇರಿದಂತೆ ತಾಲ್ಲೂಕಿನಾದ್ಯಂತ ವಿಪರೀತ ಚಳಿ ಬೀಳುತ್ತಿದ್ದು, ಸಾರ್ವಜನಿಕರು ಮೈಕೊರೆಯುವ ಚಳಿಯಿಂದ ತತ್ತರಿಸ­ತೊಡಗಿದ್ದಾರೆ. ಸಂಜೆ ಪಶ್ಚಿಮ ದಿಕ್ಕಿಗೆ ಸೂರ್ಯ ವಾಲುತ್ತಿದ್ದಂತೆಯೆ ನಿಧಾನವಾಗಿ ಎಲ್ಲೆಡೆ ಆವರಿಸುವ ಮೈಕೊರೆಯುವ ಚಳಿಯು ರಾತ್ರಿ­ಯಾಗುತ್ತಿದ್ದಂತೆಯೆ ತನ್ನ ವಿರಾಟ ರೂಪವನ್ನು ಪ್ರದರ್ಶಿಸತೊಡಗುತ್ತದೆ.

ವಿಪರೀತ ಚಳಿಯ ಕಾರಣದಿಂದ ಸಂಜೆ ಮನೆಯೊಳಗೆ ಹೋಗುವ ಜನರು ಮರುದಿವಸ ಮುಂಜಾನೆ 10ಗಂಟೆಯ ನಂತರ ನಿಧಾನವಾಗಿ ಆಚೆ ಬರುತ್ತಾರೆ. ಸಂಜೆಯಾಗುತ್ತಲೆ  ಸ್ವೆಟರ್‌, ಮಾಪ್ಲರ್‌, ಸಾಕ್ಸ್‌, ಸ್ಕಾರ್ಪ್‌ ಮೊದಲಾದ ಉಣ್ಣಿಯ ಉಡುಪುಗಳನ್ನು ಧರಿಸಿಕೊಂಡು ಮೈತುಂಬಾ ಹಾಸಿಗೆ ಹೊದ್ದುಕೊಂಡು ಮಲಗುವ ಜನರು, ಮುಂಜಾನೆ ಯಾಕಾದರೂ ಬೆಳಕು ಹರಿಯುತ್ತದೆಯೊ ಎಂದು ಗೊಣಗುತ್ತಲೆ ಹಾಸಿಗೆ ಬಿಟ್ಟೆಳುತ್ತಿದ್ದಾರೆ. ಕೆಲಸದ ನಿಮಿತ್ಯ ನಿಧಾನವಾಗಿ ಮನೆಯಿಂದ ಹೊರ ಬೀಳುವ ಜನರು ಮಧ್ಯಾಹ್ನ 2ಗಂಟೆಯವರೆಗೂ ಉಣ್ಣೆ ಬಟ್ಟೆಗಳನ್ನು ಮೈಮೇಲೆ ಹಾಕಿಕೊಂಡಿರಬೇಕಾಗಿದೆ.ಪಟ್ಟಣದ ಎಸ್‌.ಎಸ್‌.ಪಾಟೀಲ ನಗರ, ಹೊಡ್ಕೊ ಕಾಲೊನಿ, ಭೀಮಾಂಬಿಕಾ ಕಾಲೊನಿ, ಭೂಮರಡ್ಡಿ ಫ್ಲ್ಯಾಟ್‌, ಕೋಟೆ ಭಾಗ, ದುರ್ಗಾ ನಗರ, ಅಂಬೇಡ್ಕರ್‌ ನಗರ, ಕೇಂದ್ರ ಬಸ್‌ ನಿಲ್ದಾಣ, ಕಡ್ಲಿಪೇಟೆ ಮೊದಲಾದ ಭಾಗಗಳಲ್ಲಿ ಸಣ್ಣ ಸಣ್ಣ ಮನೆ, ಗುಡಿಸಲು, ತಗಡಿನ ಶೆಡ್‌ಗಳಲ್ಲಿ ವಾಸಿಸುತ್ತಿರುವ ಬಡ ಜನತೆಯು ಬೆಳಗಿನ ಜಾವ ಬೀಳುವ ಮೈಕೊರೆಯುವ ಚಳಿಯಿಂದ ತಪ್ಪಿಸಿಕೊಳ್ಳಲು ಮನೆಯ ಮುಂದೆ ಬೆಂಕಿಹಾಕಿಕೊಂಡು ಗಂಟೆಗಟ್ಟಲೆ ಚಳಿ ಕಾಯಿಸುತ್ತಿರುವ ದೃಶ್ಯ ಪಟ್ಟಣದ ಬಹುತೇಕ ಭಾಗಗಳಲ್ಲಿ ಸರ್ವೇ ಸಾಮಾನ್ಯವಾಗಿದೆ.ವಿಪರೀತ ಚಳಿಯಿಂದಾಗಿ ಸಣ್ಣ ಮಕ್ಕಳಂತೂ ಹಾಸಿಗೆ ಬಿಟ್ಟೇಳಲು ನಿತ್ಯ ಹಟ ಮಾಡುವಂತಾಗಿದೆ. ಕೆಲವು ಚಿಕ್ಕ ಮಕ್ಕಳು ಮುಂಜಾನೆ ಪಾಲಕರನ್ನು ಮತ್ತು ಶಿಕ್ಷಕರನ್ನು ಶಪಿಸುತ್ತಾ ಟ್ಯೂಷನ್‌ಗೆ ಹೋಗುವಂತಾಗಿದೆ. ಎಲ್‌ಕೆಜಿ ಹಾಗೂ ಯುಕೇಜಿ ಮಕ್ಕಳು ಶನಿವಾರ ಶಾಲೆಗೆ ಹೋಗಲು ತುಂಬಾ ಹಟ ಮಾಡುತ್ತಿದ್ದು, ಚಳಿಗಾಲ ಯಾವಾಗ ಮುಗಿಯುತ್ತದೆಯೊ ಎಂದು ಪಾಲಕರು ಶಪಿಸುತ್ತಿದ್ದಾರೆ.ಬೇಸಿಗೆಯ ಮುಂಜಾವುಗಳಲ್ಲಿ ವಾಯುವಿಹಾರಿಗಳಿಂದ ತುಂಬಿತುಳುಕುತ್ತಿದ್ದ ಗದಗ, ಹೆಸರೂರ, ಕೊರ್ಲಹಳ್ಳಿ, ಘಟ್ಟಿರಡ್ಡಿಹಾಳ ರಸ್ತೆಗಳು ವಿಪರೀತ ಚಳಿಯಿಂದ ಈಗ ಜನರಿಲ್ಲದೆ ಮುಂಜಾನೆ ಬಿಕೋ ಎನ್ನುತ್ತಿವೆ. ಚಳಿಗಾಲದ ನಿಮಿತ್ಯ ಕೆಲವು ಜನರು ತಮ್ಮ ಮುಂಜಾನೆಯ ವಾಯುವಿಹಾರವನ್ನು ರದ್ದುಗೊಳಿಸಿದ್ದಾರೆ.

ನಿತ್ಯ ಮುಂಜಾನೆ ನಸುಕಿನಲ್ಲಿ ವಾಯುವಿಹಾರಕ್ಕೆ ತೆರಳಲೇ ಬೇಕೆನ್ನುವ ಕೆಲವು ಜನರು ಚಳಿಯ ಕಾರಣದಿಂದಾಗಿ ಈಗ ಮೈತುಂಬಾ ಉಣ್ಣೆ ಬಟ್ಟೆ, ತಲೆಗೆ ಕ್ಯಾಪ್‌, ಸಾಕ್ಸ್‌ ಹಾಕಿಕೊಂಡು ಸ್ವಲ್ಪ ದೂರ ನಡೆದು ವಾಯವಿಹಾರದ ಶಾಸ್ತ್ರ ಮಾಡುತ್ತಿದ್ದಾರೆ. ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವಂತಹ ಅಸ್ತಮಾದಂತಹ ಕಾಯಿಲೆಗಳಿಂದ ಬಳಲುತ್ತಿರುವ ರೋಗಿ­ಗಳಳಂತೂ ಚಳಿಗಾಲಕ್ಕೆ ಶಾಪ ಹಾಕುತ್ತಲಿದ್ದು, ರೋಗ ಉಲ್ಭಣಗೊಳ್ಳದಂತೆ ಎಲ್ಲ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.‘ಪ್ರತಿ ವರ್ಷಕ್ಕಿಂತ ಈ ವರ್ಷ ಅತೀ ಚಳಿ ಬೀಳುತ್ತಿದ್ದು, ವಯಸ್ಸಾದವರಿಗೆ ಬೆಳಗಿನ ಜಾವ ವಾಕಿಂಗ್‌ ಹೋಗುವುದು ತುಂಬಾ ಕಷ್ಟವೆನಿಸುತ್ತಿದೆ. ಡಿಸೆಂಬರ್‌ ಕೊನೆಯ ವಾರದಲ್ಲಿ ಇನ್ನೂ ಹೆಚ್ಚು ಚಳಿ ಬೀಳುವ ಸಾಧ್ಯತೆ ಇದ್ದು, ಜನರು ಮನೆ ಬಿಟ್ಟು ಹೊರಗೆ ಬಾರದಂತಹ ಪರಸ್ಥಿತಿ ನಿರ್ಮಾಣವಾಗಬಹುದು’ ಎಂದು ನಿವೃತ್ತ ಉಪನ್ಯಾಸಕ ಎಂ.ಬಿ.ಗದಗ ತಿಳಿಸಿದರು.

-ಕಾಶೀನಾಥ ಬಿಳಿಮಗ್ಗದ.

ಪ್ರತಿಕ್ರಿಯಿಸಿ (+)