ಕೊರೆಯುವ ಚಳಿಯ ಸ್ವಾಗತ

7
ಕ್ರಿಕೆಟ್: ನವದೆಹಲಿಗೆ ಬಂದಿಳಿದ ಭಾರತ-ಪಾಕ್ ತಂಡಗಳು

ಕೊರೆಯುವ ಚಳಿಯ ಸ್ವಾಗತ

Published:
Updated:
ಕೊರೆಯುವ ಚಳಿಯ ಸ್ವಾಗತ

ನವದೆಹಲಿ: ಕಳೆದ ನಾಲ್ಕು ದಶಕಗಳಲ್ಲೇ ಇಲ್ಲಿ ಅತ್ಯಂತ ಕಡಿಮೆ ತಾಪಮಾನ- ಮೂರರಿಂದ ನಾಲ್ಕು ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಕೊರೆಯುವ ಚಳಿಯಲ್ಲೇ ಭಾರತ ಮತ್ತು ಪಾಕಿಸ್ತಾನ ತಂಡಗಳು ಏಕದಿನ ಕ್ರಿಕೆಟ್ ಸರಣಿಯ ಅಂತಿಮ ಪಂದ್ಯ ಆಡಲು ಶುಕ್ರವಾರ ನವದೆಹಲಿಗೆ ಬಂದಿಳಿದವು.ಪಾಕ್, ಎರಡು ಪಂದ್ಯಗಳನ್ನು ಜಯಿಸಿ ಸರಣಿಯಲ್ಲಿ ಗೆಲುವಿನ ಮುನ್ನಡೆ ಗಳಿಸಿದರೂ, ಫಿರೋಜ್ ಷಾ ಕೋಟ್ಲ ಕ್ರೀಡಾಂಗಣದಲ್ಲಿ ಭಾನುವಾರ ನಡೆಯುವ ಅಂತಿಮ ಪಂದ್ಯದಲ್ಲಾದರೂ ಭಾರತ ಚೇತರಿಸಿಕೊಳ್ಳಬಹುದೇ ಎಂಬುದಷ್ಟೇ ಉಳಿದಿರುವ ಕುತೂಹಲ.ಇತ್ತೀಚಿನ ವರ್ಷಗಳಲ್ಲೇ ಶೋಚನೀಯ ಪ್ರದರ್ಶನ ನೀಡುತ್ತಿರುವ ಭಾರತ ತಂಡದ ಪ್ರಮುಖ ಬ್ಯಾಟ್ಸಮನ್ನರಿಗೆ ಪಾಕಿಸ್ತಾನ ವಿರುದ್ಧ ಏಕದಿನ ಸರಣಿಯ ಕೊನೆಯ ಪಂದ್ಯ ಮಹತ್ವದ್ದು. ಈ ಸರಣಿಯ ನಂತರ ಇಂಗ್ಲೆಂಡ್ ವಿರುದ್ಧ ಭಾರತ ಐದು ಒಂದು ದಿನದ ಪಂದ್ಯಗಳ ಸರಣಿ ಆಡಬೇಕಾಗಿದ್ದು, ಅಲ್ಲಿ ಒಬ್ಬಿಬ್ಬರಿಗೆ `ವಿಶ್ರಾಂತಿ'   ಸಾಧ್ಯತೆ ದಟ್ಟವಾಗಿದೆ.ಪಾಕ್ ವಿರುದ್ಧ ಟಿ-20 ಪಂದ್ಯದಲ್ಲಿ ಗಮನ ಸೆಳೆದಿರುವ ಅಜಿಂಕ್ಯ ರೆಹಾನೆ ಏಕದಿನ ತಂಡಕ್ಕೆ ಪುನರಾಗಮನ ಯತ್ನದಲ್ಲಿದ್ದಾರೆ. ಟೆಸ್ಟ್ ಆಟಗಾರ ಸೌರಾಷ್ಟ್ರದ ಚೇತೇಶ್ವರ ಪೂಜಾರ ಏಕದಿನ ತಂಡದಲ್ಲೂ ಸ್ಥಾನ ಪಡೆಯುವ ಪೈಪೋಟಿಯಲ್ಲಿದ್ದಾರೆ. ಪೂಜಾರ, ಇತ್ತೀಚೆಗೆ ಸೌರಾಷ್ಟ್ರದಲ್ಲಿ ಮಧ್ಯಪ್ರದೇಶ ವಿರುದ್ಧ ಸೊಗಸಾದ ದ್ವಿಶತಕ ಬಾರಿಸಿದ್ದರು.ಬೌಲರ್‌ಗಳ ಕೊರತೆ: ಒಂದು ದಿನದ ಕ್ರಿಕೆಟ್ ಪಂದ್ಯದಲ್ಲಿ ಬದಲಾದ ನಿಯಮಗಳು- ಓವರಿಗೆ ಎರಡು ಬೌನ್ಸರ್‌ಗಳ ಅವಕಾಶ, ಪವರ್‌ಪ್ಲೇ ಹೊರತಾದ ಅವಧಿಯಲ್ಲಿ 20 ಯಾರ್ಡ್ ವೃತ್ತದ ಹೊರಗೆ ನಾಲ್ವರು ಕ್ಷೇತ್ರರಕ್ಷಕರನ್ನು ಸೀಮಿತಗೊಳಿಸಿರುವುದು ಒಂದು ರೀತಿ ಬೌಲರ್‌ಗಳಿಗೂ ಮೊದಲ ಬಾರಿ ಸ್ವಲ್ಪ ಸ್ವಾತಂತ್ರ್ಯ ನೀಡಿದೆ.ಆದರೆ ಅದಕ್ಕೆ ಸೂಕ್ತವಾದ ಪರಿಣತ ಬೌಲರ್ ತಂಡದಲ್ಲಿ ಇಲ್ಲ. ಚೆನ್ನೈ ಪಂದ್ಯ ಸೋಲಲು ಭಾರತ ಐವರು ಬೌಲರ್‌ಗಳನ್ನು ಹೊಂದಿಲ್ಲದಿರುವುದು ಕಾರಣ ಎಂದು ಪಾಕ್ ಮಾಜಿ ನಾಯಕ ಜಹೀರ್ ಅಬ್ಬಾಸ್ ವಿಶ್ಲೇಷಿಸಿದ್ದಾರೆ. ಪಾಕಿಸ್ತಾನದಂತೆ, ಭಾರತದ ವೇಗ- ಸ್ಪಿನ್ ಬೌಲಿಂಗ್ ವೈವಿಧ್ಯಮಯವಾಗಿಲ್ಲ. ಇದೂ ಒಂದು ಕೊರತೆಯೇ. ಎಡಗೈ ವೇಗದ ಬೌಲರ್ ಜುನೇದ್ ಖಾನ್ ಅವರನ್ನು ಸಮರ್ಥವಾಯಿ ನಿಭಾಯಿಸಲು ಭಾರತೀಯ ಆಟಗಾರರಿಗೆ ಸಾಧ್ಯವಾಗಿಲ್ಲ.ವೇಗದ ಬೌಲಿಂಗ್ ಆಲ್‌ರೌಂಡರ್‌ಗಳ ಕೊರತೆ ಕೆಲವು ಸಮಯದಿಂದ ತಂಡವನ್ನು ಕಾಡುತ್ತಿದೆ ಎಂದು ನಾಯಕ ದೋನಿ ಸರಣಿಯಲ್ಲಿ ಎರಡು ಬಾರಿ ಹೇಳಿದ್ದಾರೆ. ಕಪಿಲ್ ದೇವ್, ಮನೋಜ್ ಪ್ರಭಾಕರ್ ಹಿಂದೆ ಇಂಥ ಪಾತ್ರ ನಿಭಾಯಿಸಿದ್ದರು.ಕೋಟ್ಲ ಹಿನ್ನೆಲೆ: ಫಿರೋಜ್ ಷಾ ಕೋಟ್ಲ ಕ್ರೀಡಾಂಗಣದಲ್ಲಿ ಭಾರತ, ಪಾಕ್ ವಿರುದ್ಧ ಟೆಸ್ಟ್‌ನಲ್ಲಿ ಎರಡು ಬಾರಿ ಜಯಗಳಿಸಿದೆ. ಎರಡು ಪಂದ್ಯಗಳು ಡ್ರಾ ಆಗಿವೆ. 1999 ಫೆಬ್ರವರಿಯಲ್ಲಿ ಕರ್ನಾಟಕದವರೇ ಆದ ಲೆಗ್‌ಸ್ಪಿನ್ನರ್ ಅನಿಲ್ ಕುಂಬ್ಳೆ ಒಂದೇ ಇನಿಂಗ್ಸ್‌ನಲ್ಲಿ 10 ವಿಕೆಟ್ ಕಬಳಿಸಿ ಇಂಗ್ಲೆಂಡ್‌ನ ಆಫ್ ಸ್ಪಿನ್ನರ್ ಜಿಮ್ ಲೇಕರ್ ಅವರ ಸಾಧನೆ ಸರಿಗಟ್ಟಿದ್ದು ಅವಿಸ್ಮರಣೀಯ.2007ರಲ್ಲಿ ಕೊನೆಯ ಬಾರಿ ಟೆಸ್ಟ್‌ನಲ್ಲಿ ಮುಖಾಮುಖಿಯದಾಗ ಭಾರತವೇ, ಕಟ್ಟಾ ಎದುರಾಳಿ ವಿರುದ್ಧ ಜಯಗಳಿಸಿತ್ತು

ಆದರೆ ಒಂದು ದಿನದ ಪಂದ್ಯದಲ್ಲಿ ಒಮ್ಮೆ ಮಾತ್ರ (2005 ಏಪ್ರಿಲ್ 17) ಈ ಎರಡು ತಂಡಗಳು ಎದುರಾಗಿದ್ದು, ಪಾಕಿಸ್ತಾನ 159 ರನ್‌ಗಳ ಭಾರಿ ಜಯ ಪಡೆದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry