ಭಾನುವಾರ, ಅಕ್ಟೋಬರ್ 20, 2019
21 °C

ಕೊರೆವ ಚಳಿಗೆ ಮುದುಡಿದ ಜೀವ

Published:
Updated:

ನವದೆಹಲಿ (ಪಿಟಿಐ): ರಾಜಧಾನಿಯಲ್ಲಿ ಈಗ ಗಡಗಡ ಮೈ ನಡುಗಿಸುವ ಚಳಿ. ಕೊರೆಯುವ ಚಳಿಯಿಂದ ರಕ್ಷಣೆ ಪಡೆಯಲು ಅನೇಕ ಜನ ಮನೆಯಲ್ಲಿ ಹೊದಿಕೆ ಹೊದ್ದುಕೊಂಡು ಬೆಚ್ಚಗಿದ್ದಾರೆ. ಆದರೆ, ಸೂರಿಲ್ಲದ ಸಾವಿರಾರು ಮಂದಿ ನಡುಕ ಹುಟ್ಟಿಸುತ್ತಿರುವ ಚಳಿಯಲ್ಲೇ ಬೀದಿ ಬದಿ ಕಾಲ ಕಳೆಯಬೇಕಾಗಿದೆ. ಇದು ವೇಗವಾಗಿ ಬೆಳೆಯುತ್ತಿರುವ ಮತ್ತು ತನ್ನ ಐಷಾರಾಮಿ ಜೀವನಕ್ಕೆ ಹೆಸರಾದ ನವದೆಹಲಿಯ ಇನ್ನೊಂದು ಕರಾಳ ಮುಖ.`ವಾಸಿಸಲು ಕನಿಷ್ಠ ಮನೆಯಿಲ್ಲದ ಲೆಕ್ಕವಿಲ್ಲದಷ್ಟು ಜನ ಅನಿವಾರ್ಯವಾಗಿ ಚಳಿಯಲ್ಲಿ ಕಾಲ ಕಳೆಯುತ್ತಿದ್ದಾರೆ. ಇದರಿಂದಾಗಿ ಕೆಲವರು ತಮ್ಮ ಪ್ರಾಣ ಕಳೆದುಕೊಂಡಿರುವ ಉದಾಹರಣೆಯೂ ಇದೆ. ಇನ್ನೂ ಕೆಲವರು ಕಠಿಣ ಪರಿಸ್ಥಿತಿಯಲ್ಲಿಯೇ ಚಳಿಗಾಲದ ದಿನಗಳನ್ನು ದೂಡುವ ಅನಿವಾರ್ಯತೆಯಲ್ಲಿ ಇದ್ದಾರೆ. ಇದು ಪ್ರತಿ ವರ್ಷವೂ ಘಟಿಸುತ್ತಲೇ ಇರುತ್ತದೆ. ನಿಜಕ್ಕೂ ಇದು ಇಡೀ ದೇಶ ನಾಚಿಕೆಪಡುವಂತಹ ವಿಷಯ~ ಎಂದು ಸಾಮಾಜಿಕ ಕಾರ್ಯಕರ್ತ ಮತ್ತು ಭಾರತ- ಜಾಗತಿಕ ಸಾಮಾಜಿಕ ಸೇವಾ ಸಂಸ್ಥೆಯ ಸಲಹೆಗಾರ ಇಂದು ಪ್ರಕಾಶ್ ಹೇಳಿದ್ದಾರೆ.`ಮಾನವ ಹಕ್ಕುಗಳಲ್ಲಿ ವಸತಿ ಸೌಕರ್ಯ ಕಲ್ಪಿಸುವುದು ಅತಿ ಜರೂರಿನ ವಿಷಯ. ಆದರೆ, ಅದೆಷ್ಟೋ ಜನ ಇದರಿಂದ ವಂಚಿತರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.`ಮನೆ ಇಲ್ಲದೇ ಇರುವುದರಿಂದ ಉಂಟಾಗುವ ಸಮಸ್ಯೆ ಬಗ್ಗೆ ಸ್ವತಃ ಜನರಿಗೆ ಮನವರಿಕೆಯಾಗದ ಹೊರತು ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಕಾಣಲು ಸಾಧ್ಯವಿಲ್ಲ~ ಎಂದು ಆಶ್ರಯ ಅಧಿಕಾರ ಅಭಿಯಾನ ಸಂಘಟನೆಯ ಸಂಜಯ್ ಕುಮಾರ್ ಹೇಳಿದ್ದಾರೆ. ಸಂಜಯ್ ಅವರು ಒಟ್ಟು 14 ರಾತ್ರಿ ನಿವಾಸಗಳನ್ನು ನಡೆಸುತ್ತಿದ್ದು, ಇವುಗಳಲ್ಲಿ ರಾಜಧಾನಿಯಲ್ಲಿ ಮನೆಯಿಲ್ಲದ ಸುಮಾರು 3,000ಕ್ಕೂ ಅಧಿಕ ಮಂದಿ ನೆಲೆಸಿದ್ದಾರೆ.ಮನೆಯಿಲ್ಲದೇ ರಸ್ತೆ ಮೇಲೆ ದಿನ ಕಳೆಯುವ ಜನರಿಗೆ ಬೆಚ್ಚಗಿನ ಬಟ್ಟೆ, ಹೊದಿಕೆ, ಕುಡಿಯಲು ಬಿಸಿ ನೀರು ಸೇರಿದಂತೆ ಇತರೆ ಸೌಕರ್ಯ ಕಲ್ಪಿಸಲು ಜನ ಸ್ವಯಂ ಪ್ರೇರಣೆಯಿಂದ ದೇಣಿಗೆ ನೀಡಬೇಕು ಎಂದು ಅವರು ಕೋರಿದ್ದಾರೆ.2001ರ ಜನಗಣತಿ ಪ್ರಕಾರ ನವದೆಹಲಿಯಲ್ಲಿ 24,966 ಮಂದಿ ಮನೆ ಹೊಂದಿಲ್ಲ. 2000ನೇ ಇಸವಿಯಲ್ಲಿ ಆಶ್ರಯ ಅಧಿಕಾರ ಅಭಿಯಾನ ನಡೆಸಿದ ಸಮೀಕ್ಷೆ ಪ್ರಕಾರ 52,765 ಜನರಿಗೆ ಮನೆಯಿಲ್ಲ. 2008ರಲ್ಲಿ ಐಜಿಎಸ್‌ಎಸ್‌ಎಸ್ ಸಂಸ್ಥೆ ನಡೆಸಿದ ಸಮೀಕ್ಷೆ ಅನ್ವಯ 88,410 ಮಂದಿ ಸೂರು ಹೊಂದಿಲ್ಲ.

 

ಇದೇ ವೇಳೆ ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಪ್ರಕಾರ ದೆಹಲಿಯಲ್ಲಿ 16 ದಶಲಕ್ಷ ಜನ ಮನೆ ಹೊಂದಿಲ್ಲ. ಹೀಗಾಗಿ 1.60 ಲಕ್ಷಕ್ಕೂ ಹೆಚ್ಚು ಜನ ದೆಹಲಿಯ ರಸ್ತೆಗಳಲ್ಲಿ ಜೀವನ ಸಾಗಿಸುತ್ತಿದ್ದಾರೆ.

Post Comments (+)