ಕೊಲಾಜ್ ಡೇ

7

ಕೊಲಾಜ್ ಡೇ

Published:
Updated:

ಚಿತ್ರ: 1ಡೇ

ಇಳಿವಯಸ್ಸಿನವರು ವ್ಯವಸ್ಥೆಯಿಂದ ರೋಸಿಹೋಗಿ, ಆಳುವ ವರ್ಗದ ವಿರುದ್ಧ ಹಿಂಸಾತ್ಮಕವಾಗಿ ಬಂಡೇಳುವ ವಸ್ತುಗಳ ಕನಿಷ್ಠ ಅರ್ಧ ಡಜನ್ ಸಿನಿಮಾಗಳು ಕಳೆದ ಕೆಲವು ವರ್ಷಗಳಲ್ಲಿ ಬಾಲಿವುಡ್‌ನಲ್ಲಿ ಬಂದಿವೆ. ಮಗನ ಸಾವಿನಿಂದಾಗಿ ಬಂದೂಕು ಹಿಡಿಯುವ ಅಪ್ಪನ ಕಥೆಯ ‘ವಿರುದ್ಧ್’, ಹಿಂಸೆಯ ಮಾರ್ಗದಲ್ಲೇ ಜ್ಞಾನೋದಯದ ಬೆಳಕು ಕಾಣಿಸುವ ‘ಆಮೀರ್’, ಅಮಾಯಕ ಗೆಳೆಯನ ಸಾವಿನಿಂದ ರೋಸಿಹೋಗಿ ಭಯೋತ್ಪಾದಕರನ್ನು ಬಯಲಿಗೆಳೆಯಲು ಬಾಂಬ್ ಇಡುವ ವ್ಯವಸ್ಥಿತ ಸಂಚು ರೂಪಿಸುವ ವೃದ್ಧನ ವರಸೆ ತೋರಿದ ‘ಎ ವೆಡ್‌ನೆಸ್‌ಡೇ’ ನಮ್ಮೆದುರು ಇರುವ ಕೆಲವು ನಮೂನೆಗಳು. ‘1ಡೇ’ ಎಂಬ ಶೀರ್ಷಿಕೆಯಲ್ಲೇ ‘ವೆಡ್‌ನೆಸ್‌ಡೇ’ಯ ಪ್ರಾಸವಿದೆ. ಕನ್ನಡದಲ್ಲಿ ಅಂಥ ಚಿತ್ರಗಳೇ ಬರಲಿಲ್ಲವಲ್ಲ ಎನ್ನುತ್ತಿದ್ದವರಿಗೆ ಉತ್ತರೂಪದಲ್ಲಿ ಈ ಕೊಲಾಜ್ ಚಿತ್ರ ಬಂದಿದೆ.

ನಿರ್ದೇಶಕ ನವೀನ್ ‘ಆಮೀರ್’ ಹಾಗೂ ‘ಎ ವೆಡ್‌ನೆಸ್‌ಡೇ’ಗಳನ್ನು ಬೆರೆಸಿ ‘1ಡೇ’ ತಯಾರಿಸಿದ್ದಾರೆ. ಚಿತ್ರರಂಗದಲ್ಲಿ ದೀರ್ಘ ಕಾಲದಿಂದ ದೈಹಿಕ ತರಬೇತುದಾರರಾಗಿರುವ ಅಪ್ಪು ವೆಂಕಟೇಶ್ ಈ ಚಿತ್ರದ ನಾಯಕ. ಅವರು ಶ್ರದ್ಧೆಯಿಂದ ಮೈಹುರಿಗಟ್ಟಿಸಿಕೊಂಡು ಈ ಚಿತ್ರಕ್ಕೆ ತಯಾರಾಗಿದ್ದರೆಂಬುದು ವಿಶೇಷ. ಆದರೆ, ಒಂದು ಹೊಡೆದಾಟದಲ್ಲಷ್ಟೇ ಅವರ ಮೈಕಟ್ಟಿನ ದರ್ಶನ ಬಳಕೆಯಾಗಿದೆ.ಮೈಕಟ್ಟಿರುವ ವೆಂಕಟೇಶ್ ಅವರಿಗೆ ಪಾತ್ರ ಬಯಸುವ ದೇಹಭಾಷೆಯೂ ಇದ್ದಿದ್ದರೆ ಈ ಚಿತ್ರ ಭಾವನಾತ್ಮಕವಾಗಿ ಕಾಡುತ್ತಿತ್ತೇನೋತೀವ್ರವಲ್ಲದ ಸಂಭಾಷಣೆ, ‘ಔಟ್ ಆಫ್ ಫೋಕಸ್’ನ ಆತಂಕವೇ ಇಲ್ಲವೆಂಬಂತೆ ಕುಣಿದಾಡುವ ಕ್ಯಾಮೆರಾ, ದೃಶ್ಯಕ್ಕೂ ತನಗೂ ಸಂಬಂಧವೇ ಇಲ್ಲವೆಂಬಂತೆ ಕೇಳಿಬರುವ ಹಿನ್ನೆಲೆ ಸಂಗೀತ, ಭಾಷಣದ ಧಾಟಿಯ ಏರಿಳಿತದಲ್ಲಿ ಮಾತನಾಡುವ ವೃದ್ಧರು- ಇವೆಲ್ಲವೂ ‘1ಡೇ’ಯಲ್ಲಿವೆ. ವೃದ್ಧರ ಪಾತ್ರವನ್ನು ಅಪ್ಪು ವೆಂಕಟೇಶ್ ಅವರ ತಂದೆ ನಿರ್ವಹಿಸಿದ್ದಾರೆ. ನಟನೆಯಲ್ಲಿ ಅನುನುಭವ ಇರುವ ದಂಡನ್ನು ಇಟ್ಟುಕೊಂಡು ನವೀನ್ ಹೊಸತೇನನ್ನೋ ಹೇಳುವ ಉತ್ಸಾಹ ತೋರಿದ್ದಾರೆ.

ಸಾಮಾನ್ಯ ಸೂತ್ರಗಳ ಚಿತ್ರಗಳಿಂದ ಹೊರತಾಗುವ ಗುಣದ ಕಾರಣಕ್ಕಷ್ಟೇ ‘1ಡೇ’ಯನ್ನು ಮೆಚ್ಚಿಕೊಳ್ಳಬಹುದು. ನಾಟಕದ ತಾಲೀಮಿನಂತೆ ಕಾಣುವ ದೃಶ್ಯಗಳು ಇನ್ನಷ್ಟು ಸಹಜವಾಗಿದ್ದರೆ ಚೆನ್ನಾಗಿತ್ತಲ್ಲವೇ, ಅಪರೂಪದ ಮೈಕಟ್ಟಿನ ಅಪ್ಪು ವೆಂಕಟೇಶ್ ಸಾಮರ್ಥ್ಯದ ದರ್ಶನವನ್ನು ತಾಂತ್ರಿಕ ಬಲದಿಂದ ಇನ್ನೂ ಉತ್ತಮವಾಗಿ ತೋರಬಹುದಿತ್ತಲ್ಲವೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕುವಷ್ಟು ಶಕ್ತಿಯೂ ‘1ಡೇ’ಗೆ ಇದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry