ಭಾನುವಾರ, ಏಪ್ರಿಲ್ 18, 2021
23 °C

ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಹಳೇ ದ್ವೇಷದ ಹಿನ್ನೆಲೆಯಲ್ಲಿ ಮಹಿಳೆ ಯೊಬ್ಬಳನ್ನು ಕೊಲೆ ಮಾಡಿದ ಆರೋಪಿಗೆ ನಗರದ ತ್ವರಿತ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.ಬೇಗೂರಿನ ಜೇನು ಕುರುಬರ ಸುರೇಶ ಎಂಬುವನೇ ಶಿಕ್ಷೆಗೊಳಗಾದ ಆರೋಪಿ. ಈತ ಸೋಮವಾರಪೇಟೆ ತಾಲ್ಲೂಕಿನ ನೇಗಳೆ ವಾಸಿ ಮಾದಪ್ಪನವರ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ ಜೇನು ಕುರುಬರ ಮಣಿ ಎಂಬುವರ ಪತ್ನಿ ಜಾನಕಿ (37)ಯನ್ನು ಕೊಲೆ ಮಾಡಿರುವುದು ತನಿಖೆಯಿಂದ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.



2009ರ ಜನವರಿ 31ಕ್ಕಿಂತ ಎರಡು ವರ್ಷಗಳ ಹಿಂದಿನಿಂದ ವಾಲ್ನೂರಿನಲ್ಲಿ ವಾಸವಿದ್ದ ಜಾನಕಿ, ತಂದೆಯ ತಂಗಿಯ ಮನೆಗೆ ಹೋಗಿ ಬರುವುದಾಗಿ ತಿಳಿಸಿ ಹೋದವಳು ವಾಪಸು ಬಂದಿರಲಿಲ್ಲ. ಆನಂತರ ಆಕೆಯನ್ನು ಹುಡುಕಾಡಿದಾಗ ಯಾರೊಂದಿಗೋ ಪರಾರಿಯಾ ಗಿರುವುದು ದೃಢಪಟ್ಟಿತ್ತು. ಆನಂತರ ಜಾನಕಿ ಜೇನು ಕುರುಬರ ಸುರೇಶ ಎಂಬುವನ ಜತೆ ಕೂಡಾವಳಿ ಮಾಡಿಕೊಂಡು ಬೇಗೂರಿನ ದಿಲ್ಲುರವರ ಲೈನ್ ಮನೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದಳು. 2009ರ ಜನವರಿ 30ರಂದು ರಾತ್ರಿ 3 ಗಂಟೆಗೆ ಆರೋಪಿ ಸುರೇಶ ಜಾನಕಿಯನ್ನು ಕೊಲೆ ಮಾಡಿದ್ದ. ಆದರೆ, ರಾತ್ರಿ ತಾವಿಬ್ಬರೂ ಮದ್ಯಪಾನ ಸೇವಿಸಿ ಊಟ ಮಾಡದೆ ಬಂದು ಲೈನ್ ಮಲಗಿದ್ದು, ಏನೂ ತಿನ್ನದೇ ಇರು ವುದರಿಂದ ಜಾನಕಿ ಸತ್ತಿರಬಹುದು ಎಂದು ಸುಳ್ಳು ಹೇಳಿಕೆ ನೀಡಿದ್ದ.



ಈ ಮಧ್ಯೆ, ವೈದ್ಯರು ಜಾನಕಿಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಆಕೆಯನ್ನು ಯಾರೋ ಕತ್ತು ಹಿಸುಕಿ ಕೊಲೆ ಮಾಡಿರುವುದು ದೃಢಪಟ್ಟಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊನ್ನಂಪೇಟೆ ಪೊಲೀಸರು ತನಿಖೆ ಕೈಗೊಂಡಿದ್ದರು.ಈ ನಡುವೆ, ಅನುಮಾನಾಸ್ಪದ ಮೇರೆಗೆ ಜೇನು ಕುರುಬರ ಸುರೇಶನನ್ನು ಪೊಲೀಸರು ವಿಚಾರಣೆಗೊಳಪಡಿಸಿದಾಗ, ಮೃತ ಜಾನಕಿ ಚೆನ್ನಂಗಿ ಗ್ರಾಮದಲ್ಲಿ ವಾಸವಿದ್ದಾಗ ತನ್ನ ವಿರುದ್ಧ 2008ರ ಅಕ್ಟೋಬರ್ 11ರಂದು ಸಿದ್ದಾಪುರ ಠಾಣೆಗೆ ಪುಕಾರು ನೀಡಿ ಜೈಲಿಗೆ ಕಳಿಸಿದ್ದಳು. ಈ ವೈಷಮ್ಯದ ಹಿನ್ನೆಲೆಯಲ್ಲಿ 2009ರ ಜನವರಿ 30ರಂದು ರಾತ್ರಿ 8 ಗಂಟೆಗೆ ಆಕೆಯನ್ನು ಕೊಲೆ ಮಾಡುವ ಉದ್ದೇಶದಿಂದಲೇ ಲೈನ್‌ಮನೆಗೆ ಕರೆದುಕೊಂಡು ಹೋಗಿ ಕೈಯಿಂದ ಹೊಡೆದು ತಳ್ಳಿ, ನೆಲಕ್ಕೆ ಬೀಳಿಸಿ, ಕುತ್ತಿಗೆಗೆ ಕಾಲಿನಿಂದ ಒದ್ದು ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದ. ಆನಂತರ ಪೊಲೀಸರು ಆರೋಪಿ ವಿರುದ್ಧ ಕೊಲೆ ಹಾಗೂ ಕೊಲೆ ಮರೆಮಾಚುವ ಯತ್ನದ ಅಪರಾಧದ ಮೇರೆಗೆ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.



ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ತ್ವರಿತ ನ್ಯಾಯಾಲಯದ ನ್ಯಾಯಾಧೀಶ ಎ.ಬಿ. ಅಸೋದೆ, ಆರೋಪಿ ಜೇನುಕುರುಬರ ಸುರೇಶ ಇಟ್ಟುಕೊಂಡಿದ್ದ ಮಹಿಳೆಯನ್ನು ಕೊಲೆ ಮಾಡಿರುವುದು ಸಾಕ್ಷ್ಯಾಧಾರಗಳಿಂದ ದೃಢಪಟ್ಟಿದೆ ಎಂದು ಅಭಿಪ್ರಾಯಪಟ್ಟು, ಜಾನಕಿಯನ್ನು ಕೊಲೆ ಮಾಡಿದ ಅಪರಾಧಕ್ಕಾಗಿ ಕಠಿಣ ಜೀವಾವಧಿ ಶಿಕ್ಷೆ ಹಾಗೂ ಐದು ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಒಂದು ವೇಳೆ ಆರೋಪಿ ದಂಡ ಪಾವತಿಸಲು ತಪ್ಪಿದಲ್ಲಿ ಮತ್ತೆ ಆರು ತಿಂಗಳ ಸಾದಾ ಸಜೆ ಅನುಭವಿಸುವಂತೆಯೂ ನ್ಯಾಯಾಲಯ ಆದೇಶಿಸಿದೆ.

ಅಲ್ಲದೆ, ಕೊಲೆ ಅಪರಾಧ ಮರೆಮಾಚಿದ ಅಪರಾಧಕ್ಕಾಗಿ ಆರೋಪಿಗೆ ಮತ್ತೆ ಮೂರು ವರ್ಷಗಳ ಕಠಿಣ ಸಜೆ ವಿಧಿಸಿದ್ದಾರೆ. ಈ ಎಲ್ಲಾ ಶಿಕ್ಷೆಯನ್ನು ಆರೋಪಿ ಏಕಕಾಲದಲ್ಲಿ ಅನುಭವಿಸು ವಂತೆಯೂ ನ್ಯಾಯಾಲಯ ಆದೇಶಿಸಿದೆ. ಈ ಪ್ರಕರಣದ ಬಗ್ಗೆ ವಿಶೇಷ ಸರ್ಕಾರಿ ಅಭಿಯೋಜಕ ರಾದ ಎಂ.ಬಿ. ಪೂವಣ್ಣ ಹಾಗೂ ಪಿ.ಸಿ. ಗೋಪಾಲ್ ನ್ಯಾಯಾಲಯದಲ್ಲಿ ವಾದ ಮಂಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.