ಕೊಲೆ ಆರೋಪಿಯ ಬಂಧನ

ಶನಿವಾರ, ಜೂಲೈ 20, 2019
27 °C

ಕೊಲೆ ಆರೋಪಿಯ ಬಂಧನ

Published:
Updated:

ಬೆಂಗಳೂರು:  ಮತ್ತೀಕೆರೆಯಲ್ಲಿ ನಡೆದಿದ್ದ ಮೋಹನ್ (65) ಎಂಬುವರ ಕೊಲೆ ಪ್ರಕರಣ ಸಂಬಂಧ ಶ್ರೀನಿವಾಸ್ (55) ಎಂಬಾತನನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.ಮೂಲತಃ ಬಂಗಾರಪೇಟೆ ತಾಲ್ಲೂಕಿನ ದೊಡ್ಡಕರಪ್ಪನಹಳ್ಳಿಯ ಶ್ರೀನಿವಾಸ್, ಹಮಾಲಿ ಕೆಲಸ ಮಾಡುತ್ತಿದ್ದ. ಮತ್ತೀಕೆರೆಯ ಚಿನ್ನಪ್ಪ ಗಾರ್ಡನ್ ನಿವಾಸಿಯಾಗಿದ್ದ ಮೋಹನ್ ಮತ್ತು ಆರೋಪಿ ಬಾರ್‌ನಲ್ಲಿ ಪರಸ್ಪರ ಪರಿಚಿತರಾಗಿದ್ದರು. ಮೋಹನ್, ಮದ್ಯಪಾನ ಮಾಡಲು ಹಣ ಕೊಡುವಂತೆ ಶ್ರೀನಿವಾಸ್‌ಗೆ ಬೆದರಿಕೆ ಹಾಕುತ್ತಿದ್ದ. ಇದರಿಂದ ಕೋಪಗೊಂಡಿದ್ದ ಆತ ಜುಲೈ 6ರಂದು ರಾತ್ರಿ ಮೋಹನ್‌ಗೆ ಮದ್ಯಪಾನ ಮಾಡಿಸಿ ನಂತರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಕೊಲೆ ನಡೆದ ಸ್ಥಳದಲ್ಲಿ ಚೆಲ್ಲಾಡಿದ್ದ ರಕ್ತ ಶ್ರೀನಿವಾಸ್‌ನ ಪಾದರಕ್ಷೆಗಳಿಗೆ ಮೆತ್ತಿಕೊಂಡಿತ್ತು. ಕೃತ್ಯ ಎಸಗಿದ ನಂತರ ಆತ ರಾತ್ರಿ 12.15ರ ಸುಮಾರಿಗೆ ಮತ್ತೀಕೆರೆ ಬಸ್ ನಿಲ್ದಾಣಕ್ಕೆ ಬಂದು ಮಲಗಿದ್ದ. ಆತ ಘಟನಾ ಸ್ಥಳದಿಂದ ಬಸ್ ನಿಲ್ದಾಣದವರೆಗೆ ನಡೆದು ಬರುವಾಗ ಆತನ ಪಾದರಕ್ಷೆಗೆ ಮೆತ್ತಿಕೊಂಡಿದ್ದ ರಕ್ತದಿಂದ ರಸ್ತೆಯುದ್ದಕ್ಕೂ ರಕ್ತದ ಗುರುತು ಮೂಡಿತ್ತು.ಅಲ್ಲದೇ, ಆತ ಬಸ್ ನಿಲ್ದಾಣಕ್ಕೆ ಬಂದು ಮಲಗಿ ಒಂದು ತಾಸಿನ ನಂತರ ಎದ್ದು ಹೋಗುವ ದೃಶ್ಯ ನಿಲ್ದಾಣದ ಬಳಿಯ ಬೇಕರಿಯೊಂದರ ಮುಂಭಾಗದಲ್ಲಿ ಅಳವಡಿಸಿದ್ದ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ದಾಖಲಾಗಿತ್ತು. ಈ ಸುಳಿವುಗಳನ್ನು ಆಧರಿಸಿ ಆತನನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ. ಇನ್‌ಸ್ಪೆಕ್ಟರ್ ಕೆ.ಎಲ್.ಕೃಷ್ಣ ಮತ್ತು ಸಿಬ್ಬಂದಿ ಆರೋಪಿಯನ್ನು ಬಂಧಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry