ಕೊಲೆ: ಎಂಟು ಆರೋಪಿಗಳ ಬಂಧನ

7

ಕೊಲೆ: ಎಂಟು ಆರೋಪಿಗಳ ಬಂಧನ

Published:
Updated:
ಕೊಲೆ: ಎಂಟು ಆರೋಪಿಗಳ ಬಂಧನ

ಬೆಂಗಳೂರು: ನಗರದ ಅಗ್ರಹಾರ ದಾಸರಹಳ್ಳಿಯಲ್ಲಿ ಇತ್ತೀಚೆಗೆ (ನ.28) ನಡೆದಿದ್ದ ವೇಣುಗೋಪಾಲ್ ಎಂಬುವರ ಕೊಲೆ ಪ್ರಕರಣವನ್ನು ಭೇದಿಸಿರುವ ಕಾಮಾಕ್ಷಿಪಾಳ್ಯ ಪೊಲೀಸರು ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ರಾಜ್‌ಕುಮಾರ್ (21), ರಾಘವೇಂದ್ರ (23), ಮಂಜುನಾಥ (23), ರಮೇಶ (23), ಮಧುಸೂಧನ್ (19) ರವಿಕುಮಾರ್ (26), ಕುಮಾರ (23) ಮತ್ತು ಕೃಷ್ಣ (23) ಬಂಧಿತರು. ಆರೋಪಿಗಳು ಹಳೆ ದ್ವೇಷದ ಕಾರಣದಿಂದ ಕೃತ್ಯ ಎಸಗಿದ್ದರು.

ಅಗ್ರಹಾರ ದಾಸರಹಳ್ಳಿಯ 12ನೇ ಅಡ್ಡರಸ್ತೆ ನಿವಾಸಿ ಗೋವಿಂದರಾಜು ಎಂಬುವರ ಮಗ ವೇಣುಗೋಪಾಲ್‌ನನ್ನು ದುಷ್ಕರ್ಮಿಗಳು ನವೆಂಬರ್ 28ರಂದು ಹಾಡಹಗಲೇ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದರು.

ಕೊಲೆ ನಡೆದ ದಿನ ವೇಣುಗೋಪಾಲ್ ಮತ್ತು ರಾಜ್‌ಕುಮಾರ್ ನಡುವೆ ಜಗಳ ನಡೆದಿತ್ತು. ಅಲ್ಲದೇ ಕೆಲ ತಿಂಗಳ ಹಿಂದೆ ವೇಣುಗೋಪಾಲ್ ತನ್ನ ಸಹಚರರಾದ ಮಹೇಶ, ಹರೀಶ ಮತ್ತು ಗುರು ಎಂಬುವರ ಜತೆ ಸೇರಿ ರಾಘವೇಂದ್ರ ಎಂಬಾತನ ಮೇಲೆ ಹಲ್ಲೆ ನಡೆಸಿದ್ದ. ಇದರಿಂದ ಕೋಪಗೊಂಡಿದ್ದ ರಾಜ್‌ಕುಮಾರ್ ಮತ್ತು ರಾಘವೇಂದ್ರ ಇತರೆ ದುಷ್ಕರ್ಮಿಗಳ ಜತೆ ಸೇರಿ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಆರೋಪಿಗಳೆಲ್ಲರೂ ಅಗ್ರಹಾರ ದಾಸರಹಳ್ಳಿ ಮತ್ತು ವಿಜಯನಗರದ ಸುತ್ತಮುತ್ತಲಿನ ಬಡಾವಣೆಯ ನಿವಾಸಿಗಳಾಗ್ದ್ದಿದಾರೆ. ಈ ಪೈಕಿ ಕೆಲವರ ಮೇಲೆ ಕೊಲೆ ಯತ್ನ ಪ್ರಕರಣಗಳು ದಾಖಲಾಗಿವೆ. ಹಿಂದಿನಿಂದಲೂ ವೇಣುಗೋಪಾಲ್ ಮತ್ತು ಆರೋಪಿಗಳ ನಡುವೆ ದ್ವೇಷವಿತ್ತು. ಈ ಕಾರಣಕ್ಕಾಗಿ ಕೊಲೆ ನಡೆದಿದೆ. ಕೊಲೆ ನಡೆದ ನಂತರ ದುಷ್ಕರ್ಮಿಗಳು ನಗರದ ವಿವಿಧ ಕಡೆಗಳಲ್ಲಿ ತಲೆಮರೆಸಿಕೊಂಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

ಇಬ್ಬರು ಪೊಲೀಸರ ಅಮಾನತು: ವೇಣುಗೋಪಾಲ್ ಕೊಲೆ ಪ್ರಕರಣದಲ್ಲಿ ಕರ್ತವ್ಯ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಇಬ್ಬರು ಪೊಲೀಸರನ್ನು ಶನಿವಾರ ಅಮಾನತುಗೊಳಿಸಲಾಗಿದೆ. ಕಾಮಾಕ್ಷಿಪಾಳ್ಯ ಠಾಣೆಯ ಎಎಸ್‌ಐ ವಜ್ರವೇಲು ಮತ್ತು ಕಾನ್‌ಸ್ಟೇಬಲ್ ಅಶೋಕ್ ಎಂಬುವರು ಅಮಾನತುಗೊಂಡವರು.

`ಅಗ್ರಹಾರ ದಾಸರಹಳ್ಳಿ 12ನೇ ಅಡ್ಡರಸ್ತೆಯ ಗಸ್ತು ಜವಾಬ್ದಾರಿ ಈ ಇಬ್ಬರು ಪೊಲೀಸರದ್ದಾಗಿತ್ತು. ಕೊಲೆ ನಡೆದ ದಿನ ಬೆಳಿಗ್ಗೆ ವೇಣುಗೋಪಾಲ್ ಮತ್ತು ರಾಜ್‌ಕುಮಾರ್ ನಡುವೆ ನಡೆದಿದ್ದ ಜಗಳದ ವಿಷಯವನ್ನು ಇವರು ತಮ್ಮ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿರಲಿಲ್ಲ. ಈ ಕಾರಣದಿಂದ ಅವರನ್ನು ಅಮಾನತುಗೊಳಿಸಲಾಗಿದೆ' ಎಂದು ಪಶ್ಚಿಮ ವಿಭಾಗದ ಡಿಸಿಪಿ ಡಿ.ಸಿ.ರಾಜಪ್ಪ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry