ಶುಕ್ರವಾರ, ನವೆಂಬರ್ 15, 2019
20 °C
ಹೂತಿಟ್ಟ ಶವಕ್ಕೆ 8 ವರ್ಷದ ಬಳಿಕ ಪಂಚನಾಮೆ

ಕೊಲೆ ಶಂಕೆ: ಆರೋಪಿ ಬಂಧನ

Published:
Updated:

ಮಳವಳ್ಳಿ: ಎಂಟು ವರ್ಷಗಳ ಹಿಂದೆ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ ಮನೆಯ್ಲ್ಲಲಿ ಶವ ಹೂತಿದ್ದ ಪ್ರಕರಣವನ್ನು ಭೇದಿಸಿರುವ ಗ್ರಾಮಂತರ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.



ತಾಲ್ಲೂಕಿನ ನೆಲಮಾಕನಹಳ್ಳಿಯ ಲೋಕೇಶ್ ಬಂಧಿತ ಆರೋಪಿ. ಈತ ಇದೇ ಊರಿನ ಸಿದ್ದೇಗೌಡ ಎಂಬಾತನನ್ನು ಕೊಲೆ ಮಾಡಿ ಕೃಷಿ ಸಲಕರಣೆಗಳನ್ನು ಇಡುವ ಮನೆಯಲ್ಲಿ ಹೂತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.



ಘಟನೆ ವಿವರ: ಸಿದ್ದೇಗೌಡ ಹಾಗೂ ಲೋಕೇಶ್ ನಡುವೆ ಜಗಳ ನಡೆದಿತ್ತು. ಈ ಜಿದ್ದಿನ ಮೇರೆಗೆ ಲೋಕೇಶ್ ಸಿದ್ದೇಗೌಡನನ್ನು ಕೊಲೆ ಮಾಡಿ ತನ್ನ ಕೃಷಿ ಪರಿಕರ ಹಾಗೂ ಇತರ ವಸ್ತುಗಳನ್ನು ಇಡುವ ಮನೆಯಲ್ಲಿ ಹೂತಿದ್ದನು. ಯಾರಿಗೂ ಈ ಬಗ್ಗೆ ಅನುಮಾನ ಬಾರದಿರಲಿ ಎಂದು ಆ ಸ್ಥಳದಲ್ಲಿ  ಮಂಚ ಹಾಕಿಕೊಂಡು ಮಲಗುತ್ತಿದ್ದ ಎನ್ನಲಾಗಿದೆ.



2005ರಿಂದ ತನ್ನ ಅಣ್ಣ ಕಾಣೆಯಾಗಿದ್ದಾನೆ ಎಂದು ಸಿದ್ದೇಗೌಡನ ಸಹೋದರ ಕೆಂಪೇಗೌಡ 2008ರಲ್ಲಿ ನೀಡಿದ ದೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.



ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಚೆಗೆ ಡಿವೈಎಸ್ಪಿಗೆ ರಿಜಿಸ್ಟ್ರರ್ ಪೋಸ್ಟ್‌ನಲ್ಲಿ ಅನಾಮದೇಯ ಪತ್ರ ಹಾಗೂ ಗ್ರಾಮಾಂತರ ಪೋಲಿಸ್ ಠಾಣೆಗೆ ದೂರವಾಣಿ ಕರೆ ಬಂದಿತ್ತು. ದೂರವಾಣಿ ಕರೆ ಹಾಗೂ ಅಂಚೆ ಚೀಟಿ ಜಾಡು ಹಿಡಿದು ಡಿವೈಎಸ್ಪಿ ಜಿ.ಕೆ. ಚಿಕ್ಕಣ್ಣ, ಸರ್ಕಲ್ ಇನ್‌ಸ್ಪೆಕ್ಟರ್ ಪ್ರತಾಪರೆಡ್ಡಿ ಅವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‌ಐ ಎಚ್. ಸುಬ್ಬಯ್ಯ ತನಿಖೆ ಕೈಗೊಂಡಿದ್ದರು.



ಇದರ ಸಂಬಂಧ ಗುರುವಾರ ಉಪವಿಭಾಗಾಧಿಕಾರಿ ಶಾಂತ ಎಲ್. ಹುಲ್ಮನಿ ಅವರ ಉಪಸ್ಥಿತಿಯಲ್ಲಿ ಹೂತಿಟ್ಟಿದ್ದ ಶವವನ್ನು ಹೊರತೆಗೆದು ಪಂಚನಾಮೆ ನಡೆಸಿ ತನಿಖೆ ಮುಂದುವರಿಸಿದ್ದಾರೆ.



ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ಡಾ.ಗಣೇಶ್, ಕಂದೇಗಾಲ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಸಂಜಯ್, ಡಾ.ಸೋಮಸುಂದರ್, ಗ್ರಾಮಾಂತರ ಸರ್ಕಲ್ ಇನ್‌ಸ್ಪೆಕ್ಟರ್ ಎನ್. ಪ್ರತಾಪರೆಡ್ಡಿ, ಕಂದಾಯ ನಿರೀಕ್ಷಕ ಕೃಷ್ಣಮೂರ್ತಿ ಇದ್ದರು.

ಪ್ರತಿಕ್ರಿಯಿಸಿ (+)