ಕೊಲ್ನಾಡು ಕೈಗಾರಿಕಾ ವಲಯ: ಬೆಂಕಿ-ಭಾರಿ ಹಾನಿ

7

ಕೊಲ್ನಾಡು ಕೈಗಾರಿಕಾ ವಲಯ: ಬೆಂಕಿ-ಭಾರಿ ಹಾನಿ

Published:
Updated:
ಕೊಲ್ನಾಡು ಕೈಗಾರಿಕಾ ವಲಯ: ಬೆಂಕಿ-ಭಾರಿ ಹಾನಿ

ಮೂಲ್ಕಿ: ಸಮೀಪದ ಕೊಲ್ನಾಡು ಕೈಗಾರಿಕಾ ಪ್ರಾಂಗಣದಲ್ಲಿ ಮಂಗಳವಾರ ಪ್ಲಾಸ್ಟಿಕ್ ದಾಸ್ತಾನು ಇಟ್ಟಿದ್ದ ಖಾಸಗಿ ಮಳಿಗೆಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ್ದು ಕೆಲಕಾಲ ಪರಿಸರದಲ್ಲಿ ಆತಂಕ ಸೃಷ್ಟಿಸಿತ್ತು.ಕೊಲ್ನಾಡು ಕೈಗಾರಿಕಾ ಪ್ರದೇಶದಲ್ಲಿ ಕೇರಳದ ಮಹಮ್ಮದ್ ರಫೀಕ್ ಮಾಲೀಕತ್ವದ ಸಿಟಿ ಪ್ಲಾಸ್ಟಿಕ್ ಎನ್ನುವ ಹಳೆ ಪ್ಲಾಸ್ಟಿಕ್ ದಾಸ್ತಾನು ಇಡುವ ದೊಡ್ಡ ಕಟ್ಟಡದಲ್ಲಿ ಬೆಳಿಗ್ಗೆ 10 ಗಂಟೆ ಸುಮಾರಿಗೆ ಬೆಂಕಿ ತಗುಲಿ ಒಂದು ಭಾಗದಲ್ಲಿ ಶೇಖರಿಸಿಟ್ಟಿದ್ದ ಹಳೆಯ ಪ್ಲಾಸ್ಟಿಕ್ ವಸ್ತುಗಳು ಬೆಂಕಿಗೆ ಆಹುತಿಯಾದವು. ಬೆಂಕಿಯ ಕೆನ್ನಾಲಿಗೆ ಮುಗಿಲೆತ್ತರಕ್ಕೆ ಚಾಚಿತು.ಮಂಗಳವಾರ ಬಂದ್ ಪ್ರಯುಕ್ತ ರಜೆ ಇದ್ದು ಈ ಸಂದರ್ಭದಲ್ಲಿ ಕೇಂದ್ರದಲ್ಲಿ ಕಾರ್ಮಿಕರು ಇರದ ಕಾರಣ ತಕ್ಷಣಕ್ಕೆ ಬೆಂಕಿಯ ಮಾಹಿತಿ ಸಿಗಲಿಲ್ಲ. ಆದರೆ ಬೆಂಕಿ ವ್ಯಾಪಿಸತೊಡಗಿದಾಗ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ದೂರವಾಣಿಯ ಮೂಲಕ ಮಾಹಿತಿ ನೀಡಿದರು.ಕಳೆದ 12 ವರ್ಷದಿಂದ ಈ ಕೇಂದ್ರದಲ್ಲಿ ಹಳೆಯ ಪ್ಲಾಸ್ಟಿಕ್ ಶೇಖರಿಸಿಕೊಂಡು ಅದನ್ನು ಹುಡಿ ಮಾಡಿ ಗೋವಾ, ಕೇರಳ, ಮುಂಬೈ, ದೆಹಲಿಗೆ ಪ್ಲಾಸ್ಟಿಕ್ ಕಚ್ಚಾ ವಸ್ತುವನ್ನಾಗಿ ಬಳಸಲು ಕಳುಹಿಸಲಾಗುತ್ತಿದೆ. ಸುಮಾರು 60 ಜನರು ಕಾರ್ಮಿಕರಿದ್ದು ಅದರಲ್ಲಿ 25 ಮಂದಿ ನೇಪಾಳಿಗಳು.15 ಜನ ಮಹಿಳೆಯರ ಸಹಿತ ಸ್ಥಳೀಯರು ಕೆಲಸದಲ್ಲಿದ್ದಾರೆ. ಮಂಗಳವಾರ ಮುಷ್ಕರ ಪ್ರಯುಕ್ತ ರಜೆ ಇದ್ದುದರಿಂದ ಕೇಂದ್ರವನ್ನು ಮುಚ್ಚಿದ್ದೆವು. ನೇಪಾಳಿ ಕಾರ್ಮಿಕರು ಅಲ್ಲೇ ಹತ್ತಿರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಈ ಘಟನೆ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ ನಂತರ ಬೆಂಕಿ ಆರಿಸಲು ಪ್ರಯತ್ನ ನಡೆಸಿದೆವು ಎಂದು ಕೇಂದ್ರದ ಮೇಲ್ವಿಚಾರಕ ಅಬ್ದುಲ್ ರೆಹಮಾನ್ ಪತ್ರಕರ್ತರಿಗೆ ತಿಳಿಸಿದ್ದಾರೆ.ಮೂಲ್ಕಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಶಶಿಕಾಂತ ಶೆಟ್ಟಿ ಹಾಗೂ ಉಪಾಧ್ಯಕ್ಷ ಯೋಗೀಶ್ ಕೋಟ್ಯಾನ್ ಸ್ಥಳೀಯ ಭೀಮಾಶಂಕರ್, ಮೂಲ್ಕಿ ವೃತ್ತ ನಿರೀಕ್ಷಕ ಬಶೀರ್ ಅಹ್ಮದ್, ಸಬ್ ಇನ್ಸ್‌ಪೆಕ್ಟರ್ ಸುನಿಲ್ ಪಾಟೀಲ್, ಮಂಗಳೂರು ಅಗ್ನಿ ಶಾಮಕದಳದ ಪ್ರಾದೇಶಿಕ ಅಧಿಕಾರಿ ಬಸವಣ್ಣ ಬೆಂಕಿ ನಂದಿಸಲು ಶ್ರಮಿಸಿದ್ದರು.ಅಗ್ನಿಶಾಮಕ ದಳದ ನಾಲ್ಕು ಟ್ಯಾಂಕರ್ ನೀರು ಖಾಲಿಯಾದ ನಂತರ ನೀರಿನ ಕೊರತೆ ಕಾಣಿಸಿಕೊಂಡು ಹೆದ್ದಾರಿ ವಿಸ್ತರಣೆ ಮಾಡುತ್ತಿರುವ ನವಯುಗ ಕನ್‌ಸ್ಟ್ರಕ್ಷನ್ ಸಂಗ್ರಹಿಸಿಟ್ಟಿದ್ದ ನೀರನ್ನು ತರಿಸಲಾಯಿತು. ಮೂಲ್ಕಿಯಲ್ಲಿ  ಅಗ್ನಿಶಾಮಕದಳ ಅವಶ್ಯಕತೆಯಿದೆ ಎಂದು ಕೆಲವು ಉದ್ಯಮಿಗಳು ಈ ಸಂದರ್ಭದಲ್ಲಿ ಆಗ್ರಹಿಸಿದರು.ಬೆಂಕಿಯ ಕೆನ್ನಾಲಿಗೆ ಸುತ್ತಮುತ್ತ ಇದ್ದ ಜನವಸತಿ ಪ್ರದೇಶಕ್ಕೆ ವ್ಯಾಪಿಸುವ ಆತಂಕ ಸ್ಥಳೀಯರಲ್ಲಿ ಮನೆಮಾಡಿತ್ತು ಅಗ್ನಿಶಾಮಕ ದಳದವರು ದೂರದ ಮಂಗಳೂರಿನಿಂದ ಬರಲು ಒಂದು ಗಂಟೆ ತೆಗೆದುಕೊಂಡಿದ್ದರಿಂದ ಹತ್ತಿರದ ಮನೆಯ ಮೇಲಿನ ಛಾವಣಿಗೆ ಬಿಸಿ ತಟ್ಟಿ ಬೆಂಕಿಯ ಕೆಲವು ಕಿಡಿಗಳು ಹಾರಿದ್ದವು.ಎತ್ತರದ ಆವರಣ ಗೋಡೆ ಇದ್ದರೂ ಯಾರೋ ಬೀಡಿ ಅಥವ ಸಿಗರೇಟನ್ನು ಎಸೆದಿದ್ದರಿಂದ ಬೆಂಕಿ ಕಾಣಿಸಲು ಕಾರಣವಿರಬಹುದು ಎನ್ನಲಾಗಿದೆ. ಆದರೆ ಸ್ಥಳೀಯರ ಪ್ರಕಾರ ಕೇಂದ್ರದ ಹೊರಗೆ ಇದ್ದ ಮೋರಿಯಲ್ಲಿದ್ದ ಕಸಕ್ಕೆ ಬೆಂಕಿ ಕೊಟ್ಟಿದ್ದರಿಂದ ಈ ದುರ್ಘಟನೆ ನಡೆದಿರಬಹುದು. ಸ್ಪಷ್ಟ ಕಾರಣ ಗೊತ್ತಾಗಿಲ್ಲ.ಬೆಂಕಿಯಿಂದ ಸುಮಾರು 20 ರಿಂದ 30 ಲಕ್ಷದವರೆಗೆ ನಷ್ಟ ಸಂಭವಿಸಿದೆ. ಕೇಂದ್ರದ ಮೇಲೆ ಹೈ ಟೆನ್ಷನ್ ವಿದ್ಯುತ್ ಲೈನ್ ಸಹ ಇದ್ದು ಬೆಂಕಿಗೆ ಆಹುತಿಯಾಗಿದೆ. ಇದರ ಕಿಡಿ ಯಿಂದಲೂ ಬೆಂಕಿ ಹರಡಿರಬಹುದು ಎಂದು ಸಂಶಯಿಸಲಾಗಿದೆ. ವಿದ್ಯುತ್ ತಂತಿ ಸಹ ಬೆಂಕಿಯಿಂದ ಕಡಿದುಹೋಗಿದ್ದು ಮೂಲ್ಕಿ ಪರಿಸರ ದಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry