ಶನಿವಾರ, ಜೂನ್ 19, 2021
26 °C

ಕೊಲ್ಲುವೆನೆಂಬ ಭಾಷೆ ದೇವನದಾದರೆ, ಗೆಲ್ಲುವೆನೆಂಬ ಭಾಷೆ ಭಕ್ತನದಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಿಳೆಯರ ಹಕ್ಕಿನ ಹೋರಾಟದ ಪ್ರಶ್ನೆಯಾಗಬೇಕಾಗಿದ್ದ ಮಹಿಳಾ ದಿನಾಚರಣೆಯು ಅಂಧಾನುಕರಣೆಯಾಗಿ ಅಥವಾ ಗುಣಗಾನದ ಪರಾಕುಗಳಾಗಿ ಅವತಾರ ತಾಳುತ್ತಿರುವುದು ದುರಂತದ ಸಂಗತಿ.ಮಹಿಳಾ ದಿನಾಚರಣೆ ಇದು ವ್ಯಕ್ತಿಯೊಬ್ಬರ ಹುಟ್ಟುಹಬ್ಬ ಅಥವಾ ಪುಣ್ಯತಿಥಿಯ ನೆನಪಿಗಾಗಿ ಹುಟ್ಟಿಕೊಂಡದ್ದಲ್ಲ. ಯಾವುದೇ ಪ್ರಭುತ್ವವೂ ಮಹಿಳೆಯರನ್ನು ಸಂತುಷ್ಟಿಗೊಳಿಸಲೆಂದು ಆರಂಭಿಸಿದ್ದೂ ಅಲ್ಲ.ಮಹಿಳೆಯರು ಬದುಕುವ ಹಕ್ಕಿಗಾಗಿ ನಡೆಸಿದ ಧೀರ ಹೋರಾಟದ ನೆನಪಿಗಾಗಿ ಇದನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಒಂದು ಶತಮಾನದಷ್ಟು ದೀರ್ಘ ಪರಂಪರೆ ಹೊಂದಿರುವ ಇದು ಜಗತ್ತಿನಾದ್ಯಂತ ಮಹಿಳೆಯರ ಆತ್ಮಸಮ್ಮಾನ ಮತ್ತು ಸ್ವಾಭಿಮಾನದ ದಿನ.1908 ರಲ್ಲಿ ನ್ಯೂಯಾರ್ಕಿನ ಸಿದ್ಧ ಉಡುಪು ತಯಾರಿಕಾ ಕಾರ್ಖಾನೆಯ ಮಹಿಳೆಯರು ಸಮಾನ ವೇತನ, ಎಂಟು ತಾಸಿನ ದುಡಿಮೆ ಅವಧಿ, ವಾರಕ್ಕೊಮ್ಮೆ ರಜೆ ಇತ್ಯಾದಿ ಬೇಡಿಕೆಗಳನ್ನಿಟ್ಟುಕೊಂಡು ಹೋರಾಟ ಮಾಡಿದ್ದರು. ಸಮಾಜವಾದಿ ಸಿದ್ಧಾಂತವಾದಿ ಕ್ಲಾರಾ ಜೆಟ್ಕಿನ್‌ಳ ನೇತೃತ್ವದಲ್ಲಿ ಮೊದಲ ಬಾರಿಗೆ ಇಪ್ಪತ್ತೊಂದು ಸಾವಿರ ಮಹಿಳೆಯರು ಸತತ ಮೂರು ತಿಂಗಳು ಹೋರಾಟ ನಡೆಸಿದ್ದರು.ಅವರಲ್ಲಿ 160 ಮಹಿಳೆಯರು ಹೋರಾಟ ಮಾಡುತ್ತಲೇ ಪ್ರಾಣ ತ್ಯಾಗ ಮಾಡಿದ್ದರು. ಹೋರಾಟದ ಮೂಲಕವೇ ತಮ್ಮ ಬೇಡಿಕೆಗಳನ್ನು ಪೂರೈಸಿಕೊಂಡರು. ಈ ಯಶಸ್ಸು ಅವರಲ್ಲಿ ಸಂಘರ್ಷದ ಮೂಲಕವೇ ಸಮಾನತೆ ಸಾಧಿಸಬಹುದೆಂಬುದನ್ನು ತೋರಿಸಿತ್ತು.

 

1911 ರಲ್ಲಿ ಡೆನ್ಮಾರ್ಕಿನಲ್ಲಿ ನಡೆದ ಎರಡನೇ ಅಂತರರಾಷ್ಟ್ರೀಯ ಕಾರ್ಮಿಕ ಸಮ್ಮೇಳನದಲ್ಲಿ 17ದೇಶಗಳಿಂದ ಬಂದಿದ್ದ 100 ಮಹಿಳಾ ಪ್ರತಿನಿಧಿಗಳು ಮಾರ್ಚ್ 8 ರಂದು ನಡೆದ ಹೋರಾಟದ ನೆನಪಿಗೆ ಅದನ್ನು ಮಹಿಳೆಯರ ದಿನವನ್ನಾಗಿ ಆಚರಿಸಬೇಕೆಂದು ಕರೆ ಕೊಟ್ಟರು.

 

ಅನೇಕ ಸಮಾಜವಾದಿ ದೇಶಗಳಲ್ಲಿ ಮಹಿಳಾ ದಿನಾಚರಣೆ ಆರಂಭವಾಯಿತು. ವಿಶ್ವದುದ್ದಕ್ಕೂ ಆಧುನಿಕ ಕಾಲದಲ್ಲಿ ಎದ್ದ ಸ್ತ್ರೀವಾದಿ ಚಿಂತನೆ ಮತ್ತು ಗಂಭೀರ ಹೋರಾಟಗಳ ಪರಿಣಾಮವಾಗಿ 1975ರಲ್ಲಿ ವಿಶ್ವಸಂಸ್ಥೆಯು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲು ಕರೆ ನೀಡಿತು.ಜಾಗತಿಕ ಮಟ್ಟದಲ್ಲಿಯೂ ಮಾರ್ಚ್ ಎಂಟರಂದು ಮಹಿಳಾ ದಿನವನ್ನಾಗಿ ಆಚರಿಸಬೇಕೆಂದು ಘೋಷಿಸಿತು. ಭಾರತವು ವಿಶ್ವಸಂಸ್ಥೆಯ ಕರೆಯಂತೆ ಕಳೆದ 35 ವರ್ಷಗಳಿಂದ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಿಕೊಂಡು ಬರುತ್ತಿದೆ. ಸಂವಿಧಾನವು ಸರ್ವ ಸಮಾನತೆಯನ್ನು ಘೋಷಿಸಿ 60 ವರ್ಷಗಳೇ ಸಂದಿವೆ.ವರದಕ್ಷಿಣೆ ನಿಷೇಧ ಕಾಯ್ದೆ, ಬಾಲ್ಯವಿವಾಹ ತಡೆ ಕಾಯ್ದೆ, ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ, ಹೆಣ್ಣು ಭ್ರೂಣ ಹತ್ಯೆ ನಿಷೇಧ ಮುಂತಾದ ಚಾರಿತ್ರಿಕ ಕಾಯ್ದೆಗಳು ಜಾರಿಯಾಗಿ ಹಲವಾರು ವರ್ಷಗಳು ಕಳೆದಿವೆ. ಆದರೂ ಮಹಿಳೆಯರ ಸ್ಥಿತಿಯಲ್ಲಿ ಹೇಳಿಕೊಳ್ಳುವ ಬದಲಾವಣೆಯಾಗಿಲ್ಲ.2011ರ ಜನಗಣತಿಯು ಮಹಿಳೆಯರ ಬದುಕು ಈ ಕ್ಷಣದವರೆಗೂ ಶೋಚನೀಯವಾಗಿದೆ ಎಂಬುದನ್ನು ನಿಚ್ಚಳವಾಗಿ ಹೇಳಿದೆ. ನಗರದಿಂದ ಗ್ರಾಮ ಮಟ್ಟದವರೆಗೆ ಲಿಂಗಾನುಪಾತದಲ್ಲಿ ಇಳಿಕೆ ಕಂಡು ಬಂದಿದೆ. ಕರ್ನಾಟಕದಲ್ಲಿ ಶೇ 70 ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ.

 

ಶೇ 55 ಮಕ್ಕಳು ಅವಶ್ಯಕತೆಗಿಂತ ಕಡಿಮೆ ತೂಕ ಹೊಂದಿದ್ದಾರೆ. 15ರಿಂದ 45ರ ನಡುವಿನ ವಯೋಮಾನದ ಶೇ 60 ಮಹಿಳೆಯರಲ್ಲಿ ರಕ್ತಹೀನತೆ ಇದೆ. ಶೇ 51ರಷ್ಟು ಬಾಣಂತಿಯರು ತಮ್ಮ ಮಕ್ಕಳಿಗೆ ಕನಿಷ್ಠ ಆರು ತಿಂಗಳವರೆಗಾದರೂ ಎದೆ ಹಾಲು ಕುಡಿಸುವಷ್ಟು ಶಕ್ತರಾಗಿಲ್ಲ.ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳು ಕಳೆದ ಐದು ವರ್ಷದಲ್ಲಿ ತಿಂಗಳಲ್ಲಿ ಸರಾಸರಿ 4000 ಮಹಿಳೆಯರು ರಾಜ್ಯದಿಂದ ಕಾಣೆಯಾಗುತ್ತಿದ್ದಾರೆ ಎಂದು ತಿಳಿಸಿವೆ. ಅವರಲ್ಲಿ ಹೆಚ್ಚಿನ ಪಾಲು ಮಹಿಳೆಯರು ಬಲವಂತದಿಂದ  ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಅಧ್ಯಯನದ ಪ್ರಕಾರ ವಿಶ್ವದಲ್ಲಿ ಒಟ್ಟು ಮಹಿಳೆಯರ ಶೇ 30ರಷ್ಟು ಮಹಿಳೆಯರು ವಿವಿಧ ಇಲಾಖೆಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಒಟ್ಟು ಉತ್ಪಾದನೆಯಲ್ಲಿ ಶೇ 60ರಷ್ಟು ಮಹಿಳೆಯರ ಪಾಲುದಾರಿಕೆ ಇದೆ. ವೇತನದಲ್ಲಿ ಮಾತ್ರ ಇವತ್ತಿಗೂ ತಾರತಮ್ಯ ಮುಂದುವರಿದುಕೊಂಡು ಬರುತ್ತಿದೆ. ಭಾರತೀಯ ಕುಟುಂಬದ ಒಟ್ಟು ಆದಾಯದಲ್ಲಿ ಶೇ 2 ರಷ್ಟು ಹಣವನ್ನು ಸಹ ಆ ಮನೆಯ ಸ್ತ್ರೀಯರಿಗಾಗಿ ಬಳಸುತ್ತಿಲ್ಲ.

 

ಹತ್ತಾರು ಸಾವಿರ ಸಂಬಳ ತರುತ್ತಿರುವ ಮಹಿಳೆಯರು ತಮಗಾಗಿ ವಿನಿಯೋಗಿಸುತ್ತಿರುವ ಹಣ ನಗಣ್ಯ ಎನಿಸುವಷ್ಟು ಕಡಿಮೆ ಇದೆ. ಇನ್ನೊಂದೆಡೆ ವರದಕ್ಷಿಣೆ ಎಂಬ ಪೆಡಂಭೂತ ಹಿಂದೆಂದಿಗಿಂತಲೂ ಕರಾಳರೂಪ ತಾಳುತ್ತಿದೆ. ಇತ್ತೀಚೆಗೆ ಬಾಲ್ಯವಿವಾಹಗಳು ಹೆಚ್ಚುತ್ತಿವೆ. ವಿಧವೆಯರ ಸಂಖ್ಯೆಯಲ್ಲಿ ಹಿಂದಿಗಿಂತಲೂ ಹೆಚ್ಚಳ ಕಂಡು ಬರುತ್ತಿದೆ.ಅವರಿಗೆ ಯಾವ ರೀತಿಯ ಕೌಟುಂಬಿಕ ಮತ್ತು ಸಾಮಾಜಿಕ ಗೌರವ, ಹಕ್ಕು ಇಲ್ಲವಾಗಿದೆ. ದುರಂತದ ಸಂಗತಿ ಎಂದರೆ ವರದಕ್ಷಿಣೆ ಪದ್ಧತಿಯನ್ನು ಅನುಸರಿಸದ ಜನಸಮುದಾಯಗಳಲ್ಲಿಯೂ ಇತ್ತೀಚೆಗೆ ವರದಕ್ಷಿಣೆ ಪ್ರತಿಷ್ಠೆಯ ಮಾನದಂಡವಾಗಿ ಹಬ್ಬಿಕೊಳ್ಳುತ್ತಿದೆ. ಪುನರ್ ವಿವಾಹಕ್ಕೆ ಅವಕಾಶವಿದ್ದ ಸಮುದಾಯಗಳಲ್ಲಿಯೂ ವೈದಿಕಶಾಹಿಯ ಹಿಡಿತದಿಂದಾಗಿ ಇಂದು ವಿಧವಾ ವಿವಾಹಗಳು ನಿಂತು ಹೋಗಿವೆ.ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನಗಳು ಹರಡಿಕೊಳ್ಳುತ್ತಿರುವ ಈ ಯುಗದಲ್ಲಿ ಮಹಿಳೆಯರ ಬದುಕು ಹಿಮ್ಮುಖವಾಗಿ ಚಲಿಸುತ್ತಿರುವುದು ಗಾಬರಿ ಹುಟ್ಟಿಸುತ್ತಿದೆ.

ಮುಕ್ತ ಮಾರುಕಟ್ಟೆ ವ್ಯವಸ್ಥೆಯಲ್ಲಿ ಮಹಿಳೆಯರು ಕಾರ್ಪೊರೇಟ್ ಸಂಸ್ಥೆಗಳಿಗೆ ಬಂಡವಾಳ ಆಗುತ್ತಿದ್ದಾರೆ. ಹಣದ ಹೊಳೆಯು ಮಹಿಳೆಯರನ್ನು ಇನ್ನಿಲ್ಲದ ಆಮಿಷ ಮತ್ತು ಒತ್ತಡಕ್ಕೆ ಒಡ್ಡಿ ಅವರು ತಾವಾಗಿಯೇ ಶೋಷಣೆಗೆ ಒಳಗಾಗುವಂತೆ ಮಾಡುತ್ತಿವೆ.ಶತಮಾನಗಳ ಹಿಂದೆ ಮಹಿಳೆಯರು ತಮ್ಮ ವೈರಿಗಳನ್ನು ಸ್ಪಷ್ಟವಾಗಿ ಗುರುತಿಸಿಕೊಳ್ಳಬಹುದಿತ್ತು. ಅಂದು ಅವರು ಮುಗ್ಧರಾಗಿದ್ದರು. ಅಸಹಾಯಕರಾಗಿದ್ದರು. ಆದರೆ ಇಂದು ಅವರು ಗೊಂದಲದಲ್ಲಿದ್ದಾರೆ. ಭಾವಲೋಲುಪ್ತತೆಯಲ್ಲಿ ಕಳೆದು ಹೋಗುತ್ತಿದ್ದಾರೆ. ಪ್ರಸ್ತುತ ವ್ಯವಸ್ಥೆಯು ಮಹಿಳೆಯರ ಪರ ಮಾತನಾಡುತ್ತಲೇ ಅವರಿಗೆ ಹೊಸ ಘೋಷಣೆಗಳನ್ನು ಹುಟ್ಟುಹಾಕಿ ದಿಕ್ಕು ತಪ್ಪಿಸುತ್ತಿದೆ.ಮಹಿಳಾ ಸಬಲೀಕರಣ ಎಂಬುದು ಪ್ರಭುತ್ವಕ್ಕೆ ಮಹಿಳೆಯರನ್ನು ಹಳ್ಳಕ್ಕೆ ಬೀಳಿಸುವ ತಂತ್ರವಾಗಿ ಪರಿಣಮಿಸಿದೆ. ಕಳೆದ 25 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಮಹಿಳಾ ಮೀಸಲಾತಿ ಮಸೂದೆಯೇ ಇದಕ್ಕೆ ಸಾಕ್ಷಿ.ಈ ಎಲ್ಲ ಅವಘಡಗಳನ್ನು ಮೀರಿ ಮಹಿಳೆಯರು ಇಂದು ಬೆಳೆಯಬೇಕಾಗಿದೆ. ಸಮಾನತೆ ಸಾಧಿಸುವ ಪೂರಕ ಪರಿಸ್ಥಿತಿ ಇಲ್ಲವಾದರೂ ಮಹಿಳೆಯರು ಕೈ ಚೆಲ್ಲಿ ಯಾರದೋ ಸಹಾಯಹಸ್ತಕ್ಕಾಗಿ ಕಾದು ಕೂಡುವಂತಿಲ್ಲ. ಅವರು ತಮ್ಮಲ್ಲಿರುವ ಅಗಾಧ ಧಾರಣ ಶಕ್ತಿ ಮತ್ತು ಬಹುಮುಖಿ ಪ್ರತಿಭೆಯನ್ನು ಸಂಚಯಿಸಿಕೊಂಡು ಮೇಲೆದ್ದು ಬರಬೇಕಾಗಿದೆ.ಮಹಿಳಾ ಲೋಕವನ್ನು ಇಂಥ ಸ್ಥಿತಿಗೆ ದೂಡಿರುವುದರ ಹಿಂದೆ ನವ ಉದಾರವಾದಿ ನೀತಿ ಅಡಗಿದೆ. ಜಗತ್ತಿನಾದ್ಯಂತ ಹರಿಬಿಡುತ್ತಿರುವ ಆಧುನಿಕೋತ್ತರ ಸಿದ್ಧಾಂತವು ಮಹಿಳೆಯರನ್ನೂ ದಿಕ್ಕು ತಪ್ಪಿಸುತ್ತಿದೆ. ನೈಜ ವಿಮೋಚನೆಯತ್ತ ಸಾಗದಂತೆ ತಡೆಯೊಡ್ಡಲಾಗುತ್ತಿದೆ.

 

ಬಸವಣ್ಣ ಹೇಳಿದಂತೆ, `ಕೊಲ್ಲುವೆನೆಂಬ ಭಾಷೆ ದೇವನದಾದರೆ, ಗೆಲ್ಲುವೆನೆಂಬ ಭಾಷೆ ಭಕ್ತನದಾಗಬೇಕಿದೆ.~ ವಚನಕಾರ್ತಿ ನೀಲಾಂಬಿಕೆ ಅಂದು ಹೇಳಿದ `ಹಂದೆಯಲ್ಲ ನಾನು, ಹರುಷದ ಧೈರ್ಯವುಳ್ಳ ಹೆಣ್ಣು ನಾನು~ ವಚನದಂತೆ ಹೋರಾಟದ ದಾರಿಯಲ್ಲಿ ಮುಂದೆ ಸಾಗಬೇಕಿದೆ. ಹೋರಾಟಕ್ಕೆ ಸ್ಫೂರ್ತಿ ತುಂಬುವ ದಿನವೇ ಮಹಿಳಾ ದಿನಾಚರಣೆ ಎಂಬುದನ್ನು ನಾವೆಲ್ಲರೂ ಮನವರಿಕೆ ಮಾಡಿಕೊಳ್ಳಬೇಕಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.