ಕೊಳಗೇರಿ ನಿವಾಸಿಗಳಿಗೆ ಆಶ್ರಯ: ವಿರೋಧ

7

ಕೊಳಗೇರಿ ನಿವಾಸಿಗಳಿಗೆ ಆಶ್ರಯ: ವಿರೋಧ

Published:
Updated:

ಬೆಂಗಳೂರು: ಖಾಲಿ ನಿವೇಶನದಲ್ಲಿ ಕೊಳೆಗೇರಿ ನಿವಾಸಿಗಳಿಗೆ ಆಶ್ರಯ ಕಲ್ಪಿಸಿರುವುದನ್ನು ವಿರೋಧಿಸಿ ಜೆ.ಪಿ.ನಗರದ ಕೆಲ ಖಾಸಗಿ ಅಪಾರ್ಟ್‌ಮೆಂಟ್‌ಗಳ ನಿವಾಸಿಗಳು ತೀವ್ರ ವಿರೋಧ ವ್ಯಕ್ತಪಡಿಸಿದರು.ಸಿಂಧೂರ ಕನ್ವೆನ್ಷನ್ ಹಾಲ್ ಮುಂಭಾಗದಲ್ಲಿರುವ ನಿವೇಶನದಲ್ಲಿ ಆಟದ ಮೈದಾನವನ್ನು ನಿರ್ಮಿಸುವ ಬದಲು ಪಾಲಿಕೆಯು ಕೊಳೆಗೇರಿ ನಿವಾಸಿಗಳಿಗೆ ಆಶ್ರಯ ಕಲ್ಪಿಸುವ ಮೂಲಕ ಆಟದ ಮೈದಾನ ನಿರ್ಮಾಣ ಯೋಜನೆಯನ್ನು ಕೈಬಿಡಲು ನಿರ್ಧರಿಸಿದೆ ಎಂಬ ಆತಂಕ ಸ್ಥಳೀಯ ನಿವಾಸಿಗಳನ್ನು ಕಾಡುತ್ತಿದೆ. ಪಾಲಿಕೆಯು ಮೂರು ತಿಂಗಳ ಹಿಂದೆಯಷ್ಟೇ ನಿವೇಶನದ ಸುತ್ತ ಕಾಂಪೌಂಡ್ ನಿರ್ಮಾಣ ಮಾಡಿದೆ. ಆದರೆ ಇದ್ದಕ್ಕಿದ್ದಂತೆಯೇ ಕೊಳೆಗೇರಿ ನಿವಾಸಿಗಳಿಗೆ ತಾತ್ಕಲಿಕ ಶೆಡ್‌ಗಳನ್ನು ನಿರ್ಮಿಸಿಕೊಟ್ಟಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ಅಪಾರ್ಟ್‌ಮೆಂಟ್‌ನ ನಿವಾಸಿಗಳು ದೂರಿದರು.ಈ ಬಗ್ಗೆ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ನಿವಾಸಿ ಬಿ.ಆರ್.ಜನಾರ್ದನ ಅಯ್ಯಂಗಾರ್, `ಇಪ್ಪತ್ತು ವರ್ಷಗಳಿಂದ ಈ ಭಾಗದಲ್ಲಿ ವಾಸ ಮಾಡುತ್ತಿದ್ದೇವೆ. ಆಟದ ಮೈದಾನ ನಿರ್ಮಾಣ ಮಾಡುವಂತೆ ಕಳೆದ ಎಂಟು ವರ್ಷಗಳಿಂದ ಪಾಲಿಕೆಗೆ ಸತತವಾಗಿ ಮನವಿ ಸಲ್ಲಿಸುತ್ತಿದ್ದೇವೆ. ಈವರೆಗೆ ಆಯ್ಕೆಯಾದ ಪಾಲಿಕೆ ಸದಸ್ಯರು ಈ ವಿಚಾರವನ್ನು ಕೈಗೆತ್ತಿಕೊಳ್ಳದೇ ಇರುವುದಕ್ಕೆ ಬೇಸರ ಉಂಟಾಗಿದೆ~ ಎಂದು ತಿಳಿಸಿದರು.

 

`ಅಪಾರ್ಟ್‌ಮೆಂಟ್‌ನ ಮಕ್ಕಳಿಗೆ ಆಟವಾಡಲು ಮೈದಾನವಿಲ್ಲ. ಇದೇ ಜಾಗವನ್ನು ಬಳಸಿಕೊಂಡು ಆಟದ ಮೈದಾನವನ್ನು ನಿರ್ಮಾಣ ಮಾಡಬಹುದಿತ್ತು. ಆದರ ಪಾಲಿಕೆ ಹಿಂದೇಟು ಹಾಕುತ್ತಿದೆ. ಇನ್ನು, ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್ ಸ್ಥಳವೂ ಈ ನಿವೇಶನಕ್ಕೆ ಹೊಂದಿಕೊಂಡಂತಿದೆ.

ಕೆಲವು ದಿನಗಳಿಂದೀಚೆಗೆ ಈ ನಿವೇಶನದಲ್ಲಿ ತ್ಯಾಜ್ಯದ ರಾಶಿಯನ್ನು ಸುರಿಯಲಾಗುತ್ತಿದ್ದು, ಸೊಳ್ಳೆ ಮತ್ತು ನೊಣದ ಕಾಟ ಹೆಚ್ಚಾಗಿದೆ. ಇದರಿಂದ ಚರ್ಮರೋಗಗಳು ಕಾಣಿಸಿಕೊಳ್ಳುತ್ತಿವೆ~ ಎಂದು ಅಳಲು ತೋಡಿಕೊಂಡರು.ಕೊಳೆಗೇರಿ ನಿವಾಸಿಗಳಲ್ಲೂ ಭೀತಿ: ಅಪಾರ್ಟ್‌ಮೆಂಟ್ ನಿವಾಸಿಗಳ ಪ್ರತಿಭಟನೆಗೆ ಮಣಿದು ಈ ಜಾಗದಿಂದ ತಮ್ಮನ್ನು ತೆರವುಗೊಳಿಸುತ್ತಾರೆ ಎಂಬ ಭೀತಿ ಕೊಳೆಗೇರಿ ನಿವಾಸಿಗಳನ್ನು ಕಾಡುತ್ತಿದೆ. ಬಹುತೇಕ ನಿವಾಸಿಗಳು ಕೂಲಿ ಕಾರ್ಮಿಕರಾಗಿದ್ದು, ಬೇರೆ ಕಡೆಗೆ ಸ್ಥಳಾಂತರಿಸಿದರೆ ಒಪ್ಪತ್ತಿನ ಊಟಕ್ಕೆ ಏನು ಮಾಡುವುದು ಎಂಬ ಪ್ರಶ್ನೆ ಎದುರಾಗಿದೆ.`ಎರಡು ದಶಕಗಳಿಂದ ಇದೇ ನಿವೇಶನದಲ್ಲಿ ವಾಸ ಮಾಡುತ್ತಿದ್ದೇವೆ. ಪಾಲಿಕೆಯೂ ಆರು ತಿಂಗಳ ಒಳಗೆ ಮನೆಗಳನ್ನು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದೆ. ಈ ಭಾಗದಲ್ಲಿರುವ ಅಪಾರ್ಟ್‌ಮೆಂಟ್ ನಿವಾಸಿಗಳು ಈ ನಿವೇಶನದಿಂದ ನಮ್ಮನ್ನು ಹೊರಹಾಕಲು ಪ್ರತಿಭಟನೆ ನಡೆಸುತ್ತಾರೆ. ಆದರೆ ನಾವು ಎಲ್ಲಿಗೆ ಹೋಗಬೇಕು~ ಎಂದು ಕೊಳೆಗೇರಿ ನಿವಾಸಿ ಹರೀಶ್ ಪ್ರಶ್ನಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry