ಕೊಳಚೆ ನಿರ್ಮೂಲನಾ ಯೋಜನೆಗೆ ಕಾಲಮಿತಿ

7

ಕೊಳಚೆ ನಿರ್ಮೂಲನಾ ಯೋಜನೆಗೆ ಕಾಲಮಿತಿ

Published:
Updated:

ಶಿವಮೊಗ್ಗ: ಕೊಳಚೆ ನಿರ್ಮೂಲನೆ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಮುಂದಿನ ಎರಡು ವರ್ಷಗಳ ಕಾಲಮಿತಿಯಲ್ಲಿ ಕಾರ್ಯಯೋಜನೆ ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಹೇಳಿದರು.ನಗರದ ಕುವೆಂಪು ರಂಗಮಂದಿರದಲ್ಲಿ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಶನಿವಾರ ಹಮ್ಮಿಕೊಂಡಿದ್ದ ಶಿವಮೊಗ್ಗ ನಗರದ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಹಕ್ಕುಪತ್ರ ವಿತರಣಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ರಾಜ್ಯವನ್ನು ಕೊಳಚೆ ಮುಕ್ತ ಪ್ರದೇಶ ಮಾಡುವ ಉದ್ದೇಶದಿಂದ ಸರ್ಕಾರ ಇತ್ತೀಚೆಗೆ ಈ ಯೋಜನೆ ಕುರಿತಂತೆ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಂಡಿದ್ದು, ಯುದ್ಧೋಪಾದಿಯಲ್ಲಿ ಕೆಲಸ- ಕಾರ್ಯಗಳು ನಡೆಯಬೇಕಿವೆ. ಈ ನಿಟ್ಟಿನಲ್ಲಿ ಆಯಾ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿಗಳ ಉಸ್ತುವಾರಿಯಲ್ಲಿ ಕಾರ್ಯಯೋಜನೆ ರೂಪಿಸಲಾಗಿದೆ. ಇದಕ್ಕೆ ಹಣದ ಕೊರತೆ ಇಲ್ಲ. ಆದರೆ, ಸಿಬ್ಬಂದಿ ಕೊರತೆ ಇದ್ದು, ಸದ್ಯದಲ್ಲಿ ಹೊರಗುತ್ತಿಗೆಯಲ್ಲಿ ನೇಮಕ ಮಾಡಿ, ಅನುಷ್ಠಾನಗೊಳಿಸಲಾಗುವುದು ಎಂದರು.ರಾಜ್ಯದಲ್ಲಿ ಘೋಷಣೆಯಾದ 2,251 ಕೊಳಚೆ ಪ್ರದೇಶಗಳಿದ್ದು, ಇವುಗಳಲ್ಲಿ ಸುಮಾರು 45 ಲಕ್ಷ ಜನ ವಾಸ ಮಾಡುತ್ತಿದ್ದಾರೆ. ಇವರಿಗೆ ಸೂಕ್ತ ನಿವೇಶನ, ಮನೆ ಸೇರಿದಂತೆ ಮೂಲಸೌಕರ್ಯಗಳನ್ನು ಕಾಲಮಿತಿ ಒಳಗೆ ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.ರಾಜ್ಯದಲ್ಲಿ ಕೊಳಚೆ ಪ್ರದೇಶದ ನಿವಾಸಿಗಳಿಗೆ ರೂ 410 ಕೋಟಿ ವೆಚ್ಚದಲ್ಲಿ 17 ಸಾವಿರ ಮನೆಗಳನ್ನು ನಿರ್ಮಿಸಿಕೊಡುವ ಗುರಿ ಹೊಂದಲಾಗಿದೆ. ಈಗಾಗಲೇ 12 ಸಾವಿರ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಕೊಳಚೆ ನಿರ್ಮೂಲನೆ ಯೋಜನೆ ಅನ್ವಯ ಪ್ರತಿ ಕುಟುಂಬಕ್ಕೆ ಒಂದರಂತೆ ನಿವೇಶನದ ಹಕ್ಕುಪತ್ರ ನೀಡಿ, ಮನೆ ನಿರ್ಮಿಸಿಕೊಡಲಾಗುವುದು. ಸ್ಥಳಾವಕಾಶದ ಕೊರತೆ ಇದ್ದಲ್ಲಿ ಸೂಕ್ತ ಜಮೀನು ಖರೀದಿಸಿ, ನಿವೇಶನ ವಿತರಿಸಲಾಗುವುದು ಎಂದು ತಿಳಿಸಿದರು.ಅನುಷ್ಠಾನಗೊಳಿಸಲಾಗುತ್ತಿರುವ ಹೊಸ ವಸತಿ ಯೋಜನೆಯನ್ನು ಪ್ರತಿ ನಿವೇಶನವು 300 ಚದರ ಅಡಿ ಹಾಗೂ ಆ ಪ್ರದೇಶದ ಪ್ರತಿ ರಸ್ತೆಗಳೂ ಕನಿಷ್ಠ 20 ಅಡಿ ಅಗಲದ ವಿಸ್ತೀರ್ಣ ಇರುವಂತೆ ರೂಪಿಸಲಾಗಿದೆ ಎಂದು ವಿವರಿಸಿದರು.ಶಿವಮೊಗ್ಗದಲ್ಲಿ ಆರಂಭಗೊಂಡ ಈ ಕಾರ್ಯಕ್ರಮ ಇಡೀ ರಾಜ್ಯದಲ್ಲಿ ಕೊಳಚೆ ಪ್ರದೇಶಗಳ ನಿರ್ಮೂಲನೆಗೆ ದಿಕ್ಸೂಚಿಯಾಗಲಿದೆ ಎಂದ ಅವರು, ರಾಜ್ಯವು ವಸತಿ ಯೋಜನೆ ಅಡಿಯಲ್ಲಿ ಸಾಧಿಸಿದ ಪ್ರಗತಿಗಾಗಿ ಕೇಂದ್ರ ಸರ್ಕಾರದ ಪ್ರಶಂಸೆಗೊಳಗಾಗಿರುವುದು ಹರ್ಷದ ಸಂಗತಿ ಎಂದು ಸಚಿವ ವಿ. ಸೋಮಣ್ಣ ಅವರನ್ನು ಪ್ರಶಂಸಿಸಿದರು.ಅತಿಥಿಗಳಾಗಿದ್ದ ವಸತಿ ಸಚಿವ ವಿ. ಸೋಮಣ್ಣ ಮಾತನಾಡಿ, ಮುಂದಿನ ದಿನಗಳಲ್ಲಿ ರಾಜ್ಯದ ಯಾವುದೇ ಪ್ರದೇಶದಲ್ಲಿ ಕೊಳಚೆ ಪ್ರದೇಶಗಳು ನಿರ್ಮಾಣ ಗೊಳ್ಳುವುದನ್ನು  ನಿಯಂತ್ರಿಸಲಾಗುವುದಲ್ಲದೆ, ಒಂದು ವೇಳೆ ನಿರ್ಮಾಣಗೊಂಡಲ್ಲಿ ಅಂತಹ ಪ್ರದೇಶವನ್ನು ಸರ್ಕಾರದಿಂದ ಮುಟ್ಟು ಗೋಲು ಹಾಕಿಕೊಳ್ಳಲಾಗುವುದು ಎಂದರು.ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ, ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ ಮಾತನಾಡಿದರು. ಶಾಸಕ ಕೆ.ಎಸ್. ಈಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಜೆ. ನರಸಿಂಹಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry