ಕೊಳಚೆ ನೀರು ಸಾಗಿಸಲು ಕೊಳವೆ ಮಾರ್ಗ

7

ಕೊಳಚೆ ನೀರು ಸಾಗಿಸಲು ಕೊಳವೆ ಮಾರ್ಗ

Published:
Updated:
ಕೊಳಚೆ ನೀರು ಸಾಗಿಸಲು ಕೊಳವೆ ಮಾರ್ಗ

ಹುಬ್ಬಳ್ಳಿ: ಕೊಳಚೆ ನೀರು ಸಾಗಿಸಲು ಕೊಳವೆ ಮಾರ್ಗದ ನಿರ್ಮಾಣ ಕಾಮಗಾರಿ ನಗರದ ವಿವಿಧ ಕಡೆ ಬಲು ತುರುಸಿನಿಂದ ನಡೆದಿದ್ದು, ಕೆಲವೇ ತಿಂಗಳಲ್ಲಿ ತೆರೆದ ಚರಂಡಿ ಹಾಗೂ ಅವುಗಳು ಹೊರಸೂಸುವ ದುರ್ವಾಸನೆಯಿಂದ ನಗರದ ಜನತೆ ಮುಕ್ತಿ ಪಡೆಯುವ ವಿಶ್ವಾಸ ಮೂಡಿದೆ.ಕೊಲ್ಲಾಪುರ ಮೂಲದ ಈಗಲ್ ಕನ್‌ಸ್ಟ್ರಕ್ಷನ್ ಕಂಪೆನಿ ಈ ಕಾಮಗಾರಿಯನ್ನು ಗುತ್ತಿಗೆ ಪಡೆದಿದ್ದು, ಏಕಕಾಲದಲ್ಲಿ ಪ್ರಧಾನ ಹಾಗೂ ಉಪ ಕೊಳವೆ ಮಾರ್ಗಗಳ ನಿರ್ಮಾಣ ಕೆಲಸ ಶುರುವಾಗಿದೆ. ಏಷ್ಯನ್ ಅಭಿವೃದ್ಧಿ ಬ್ಯಾಂಕ್ ನೆರವಿನ ಉತ್ತರ ಕರ್ನಾಟಕ ನಗರ ಪ್ರದೇಶ ಹೂಡಿಕೆ ಕಾರ್ಯಕ್ರಮದ (ಎನ್‌ಕೆಯುಎಸ್‌ಐಪಿ) ವತಿಯಿಂದ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.ಮುಖ್ಯ ಕೊಳವೆ ಮಾರ್ಗ ನಿರ್ಮಾಣಕ್ಕೆ ನಗರವನ್ನು ಮೂರು ವಲಯಗಳನ್ನಾಗಿ ವಿಭಜನೆ ಮಾಡಲಾಗಿದ್ದು, ಆ ಪೈಕಿ ಸಾಯಿನಗರದಿಂದ ಗಬ್ಬೂರುವರೆಗಿನ ಮಾರ್ಗ ಸಹ ಒಂದಾಗಿದೆ. 2000 ಎಂ.ಎಂ. ಸುತ್ತಳತೆಯ ಮುಖ್ಯ ಕೊಳವೆ ಮಾರ್ಗವನ್ನು ಅಳವಡಿಸುವ ಕೆಲಸ ಸದ್ಯ ವಿದ್ಯಾನಗರದ ಶಕುಂತಲಾ ಆಸ್ಪತ್ರೆ ಮುಂಭಾಗದಲ್ಲಿ ನಡೆಯುತ್ತಿದೆ.ಚರಂಡಿ ಜಾಲ ನಿರ್ಮಾಣಕ್ಕಾಗಿ ಪಾಲಿಕೆಗೆ ಮೊದಲ ಹಂತದಲ್ಲಿ ರೂ 144 ಕೋಟಿ ರೂಪಾಯಿ ನೆರವು ಸಿಕ್ಕಿದೆ. ಆದರೆ, ಅವಳಿನಗರದಲ್ಲಿ ಸುಸಜ್ಜಿತ ಒಳಚರಂಡಿ ವ್ಯವಸ್ಥೆಗಾಗಿ ರೂ 700 ಕೋಟಿಯಷ್ಟು ಬೃಹತ್ ಮೊತ್ತ ಬೇಕಾಗುತ್ತದೆ ಎಂದು ಪಾಲಿಕೆ ಆಯುಕ್ತ ಡಾ.ಕೆ.ವಿ.ತ್ರಿಲೋಕಚಂದ್ರ ಹೇಳುತ್ತಾರೆ.ಮಂಜೂರಾದ 144 ಕೋಟಿ ಮೊತ್ತದಲ್ಲಿ 100 ಕೋಟಿ ವೆಚ್ಚದ ಕಾಮಗಾರಿಯನ್ನು ಹುಬ್ಬಳ್ಳಿ ಮತ್ತು 44 ಕೋಟಿ ವೆಚ್ಚದ ಕೆಲಸವನ್ನು ಧಾರವಾಡಕ್ಕೆ ಹಂಚಲಾಗಿದೆ. ಪಾಲಿಕೆ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆಯೇ ಈ ಹಂಚಿಕೆ ಮಾಡಲಾಗಿದೆ ಎಂದು ಅವರು ವಿವರಿಸುತ್ತಾರೆ.ಹುಬ್ಬಳ್ಳಿಯ ಮೂರು ವಲಯಗಳಲ್ಲದೆ ಧಾರವಾಡದಲ್ಲಿ ಆರು ಹಾಗೂ ನವನಗರದಲ್ಲಿ ಒಂದು ವಲಯವನ್ನು ರಚಿಸಲಾಗಿದೆ. ಚರಂಡಿ ನೀರಿನ ಹರಿವೂ ಸೇರಿದಂತೆ ಕೆಲವು ಮಾನದಂಡಗಳ ಆಧಾರದ ಮೇಲೆ ಈ ವಲಯಗಳ ರಚನೆಯಾಗಿದೆ. ಹಣಕಾಸಿನ ವ್ಯವಸ್ಥೆ ಆದಂತೆ ಉಳಿದ ಕೆಲಸಗಳು ಹಂತ-ಹಂತವಾಗಿ ನಡೆಯಲಿವೆ ಎನ್ನುತ್ತಾರೆ ಡಾ. ತ್ರಿಲೋಕಚಂದ್ರ.ಗಬ್ಬೂರಿನಲ್ಲಿ ಸ್ಥಾಪನೆಯಾಗುತ್ತಿರುವ ಕೊಳಚೆ ನೀರಿನ ಸಂಸ್ಕರಣಾ ಘಟಕ (ಎಸ್‌ಟಿಪಿ)ಕ್ಕೆ ರೂ 29.4 ಕೋಟಿ ಹಣ ತೆಗೆದಿಡಲಾಗಿದ್ದು, ನವದೆಹಲಿಯ ಎಸ್.ಎನ್. ಎನ್ವಿರೊ-ಟೆಕ್ ಪ್ರೈವೇಟ್ ಲಿಮಿಟೆಡ್ ಮತ್ತು ಎಸ್‌ಎಫ್‌ಸಿ ಎನ್ವಿರಾನ್ಮೆಂಟಲ್ ಟೆಕ್ನಾಲಜೀಸ್ ಸಂಸ್ಥೆಗಳು ಜಂಟಿಯಾಗಿ ಕಾಮಗಾರಿ ಗುತ್ತಿಗೆ ಪಡೆದಿವೆ. ಈ ಎಸ್‌ಟಿಪಿ ಘಟಕ ಸಿದ್ಧಗೊಂಡ ಬಳಿಕ ಪ್ರತಿದಿನ 40 ಲಕ್ಷ ಲೀಟರ್ ಕೊಳಚೆ ನೀರನ್ನು ಸಂಸ್ಕರಿಸಿ ಬಿಡಲಿದೆ.ಆಯಾ ಪ್ರದೇಶದ ಅಗತ್ಯಕ್ಕೆ ತಕ್ಕಂತೆ 500, 700, 800 ಎಂ.ಎಂ. ಸುತ್ತಳತೆ ಪೈಪ್‌ಗಳನ್ನು ಉಪ ಕಾಲುವೆಗಳಿಗೆ ಬಳಸಲಾಗುತ್ತದೆ. ಸಾಯಿನಗರದ ಟಿಂಬರ್ ಯಾರ್ಡ್ ಸೇರಿದಂತೆ ಕೆಲ ಪ್ರದೇಶಗಳಲ್ಲಿ ಉಪ ಕಾಲುವೆಗಳ ನಿರ್ಮಾಣ ಕಾರ್ಯವೂ ಶುರುವಾಗಿದೆ.

 

ಈ ಉಪ ಕಾಲುವೆಗಳಿಗೆ ಮನೆ-ಮನೆಯಿಂದ ಸಂಪರ್ಕ ಜಾಲ ಕಲ್ಪಿಸಿ ಕೊಳಚೆ ನೀರು ಸೀದಾ ಗಬ್ಬೂರು ಘಟಕ ಸೇರುವಂತೆ ಯೋಜನೆ ರೂಪಿಸಲಾಗಿದೆ ಎಂದು ಕೆಯುಐಡಿಎಫ್‌ಸಿ ಅಧಿಕಾರಿಗಳು ಹೇಳುತ್ತಾರೆ.ಗೋಕುಲ ರಸ್ತೆಯಿಂದ ಶಿರೂರು ಪಾರ್ಕ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ನಡೆದಿರುವ ಕಾಮಗಾರಿ ತುಸು ಮಂದಗತಿಯಲ್ಲಿ ಸಾಗಿದ್ದರಿಂದ ಸುತ್ತಲಿನ ಪ್ರದೇಶದ ನಿವಾಸಿಗಳು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ರಸ್ತೆ ಮಧ್ಯದಲ್ಲೇ ಕೊಳವೆ ಮಾರ್ಗ ಹಾದು ಹೋಗುವುದರಿಂದ ಇಡೀ ರಸ್ತೆಯನ್ನು ಬಗೆದು ಹಾಕಲಾಗಿದೆ. ಸಿಮೆಂಟಿನ ದೊಡ್ಡ, ದೊಡ್ಡ ಪೈಪುಗಳು ದಾರಿಯುದ್ದಕ್ಕೂ ಬಿದ್ದಿವೆ.`ಅಗತ್ಯವಾದ ಎಲ್ಲ ಪೂರ್ವಾನುಮತಿ ಪಡೆದುಕೊಂಡೇ ಕಾಮಗಾರಿ ಆರಂಭಿಸಲಾಗಿದೆ. ಚರಂಡಿ ಮಾರ್ಗ ತುಂಬಾ ಗಟ್ಟಿಯಾಗಿರುವುದರಿಂದ ಕೆಲಸದಲ್ಲಿ ತುಸು ಏರು-ಪೇರಾಗಿದೆ. ಆದರೆ, ನಿರೀಕ್ಷಿತ ವೇಗದಲ್ಲೇ ಕಾಮಗಾರಿ ಸಾಗಿದೆ. ಸುತ್ತಲಿನ ಪ್ರದೇಶದ ಜನರಿಗೆ ಆಗುತ್ತಿರುವ ತೊಂದರೆ ಕುರಿತು ನಮಗೂ ಅರಿವಿದೆ.ಅದಕ್ಕಾಗಿ ನಾವು ವಿಷಾದವನ್ನೂ ವ್ಯಕ್ತಪಡಿಸುತ್ತೇವೆ. ಆದರೆ, ಇಡೀ ನಗರದ ಹಿತದೃಷ್ಟಿಯಿಂದ ಕೆಲಕಾಲ ಅವರೆಲ್ಲ ಅನಿವಾರ್ಯವಾಗಿ ಇಂತಹ ತೊಂದರೆಯನ್ನು ಸಹಿಸಿಕೊಳ್ಳಬೇಕಿದೆ~ ಎಂದು ಕಾಮಗಾರಿ ಸ್ಥಳದಲ್ಲಿದ್ದ ಅಧಿಕಾರಿಗಳು ಹೇಳುತ್ತಾರೆ.`ಕಾಮಗಾರಿಗೆ 18 ತಿಂಗಳ ಕಾಲಮಿತಿ ನಿಗದಿ ಮಾಡಲಾಗಿದ್ದು, ಅಷ್ಟರಲ್ಲಿ ಕೆಲಸ ಮುಗಿಯುವಂತೆ ನೋಡಿಕೊಳ್ಳಲು ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ~ ಎಂದು ಆಯುಕ್ತರು ಸಮಜಾಯಿಷಿ ನೀಡುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry