ಗುರುವಾರ , ಮಾರ್ಚ್ 4, 2021
29 °C
ನಗರ ಸಂಚಾರ- ಸ್ಮಾರ್ಟ್ ಸಿಟಿ ನಿರೀಕ್ಷೆಯಲ್ಲಿರುವ ಶಿವಮೊಗ್ಗಕ್ಕೆ ಅನೈರ್ಮಲ್ಯದ ಕಾಟ, ಸಾಂಕ್ರಾಮಿಕ ರೋಗಗಳ ಭೀತಿ

ಕೊಳಚೆ ಪ್ರದೇಶಗಳ ಸ್ವಚ್ಛತೆಯೇ ಸವಾಲು

ಅರ್ಚನಾ ಎಂ. Updated:

ಅಕ್ಷರ ಗಾತ್ರ : | |

ಕೊಳಚೆ ಪ್ರದೇಶಗಳ ಸ್ವಚ್ಛತೆಯೇ ಸವಾಲು

ಶಿವಮೊಗ್ಗ: ಸ್ಮಾರ್ಟ್ ಸಿಟಿಯ ಆಯ್ಕೆ ನಿರೀಕ್ಷೆಯಲ್ಲಿರುವ ಶಿವಮೊಗ್ಗಕ್ಕೆ ಈಗ ಕೊಳಚೆ ಪ್ರದೇಶಗಳ ನಿರ್ವಹಣೆಯೇ ದೊಡ್ಡ ಸವಾಲು.  ವಿದ್ಯುತ್ ಮತ್ತು ರಸ್ತೆ ಸೌಲಭ್ಯವಿದ್ದರೂ  ಅನೈರ್ಮಲ್ಯ ಮಾತ್ರ ಇನ್ನೂ ಇದೆ.ಈ ಭಾಗದಲ್ಲಿ ನಿತ್ಯವೂ ಹಂದಿಗಳ ಹಾವಳಿ, ಸನಿಹದಲ್ಲಿಯೇ ಹರಿಯುವ ಚರಂಡಿ ನೀರಿನ ನಡುವೆ ಇಲ್ಲಿನ ನಿವಾಸಿಗಳು ಅನಿವಾರ್ಯವಾಗಿ ಬದುಕು ದೂಡುತ್ತಿದ್ದಾರೆ.   ಸ್ಮಾರ್ಟ್ ಸಿಟಿ ಆಗಿ ಬದಲಾಗುವುದಕ್ಕೆ ಎಲ್ಲ ದಿಕ್ಕಿನಿಂದಲೂ ಶಿವಮೊಗ್ಗ ತಯಾರಾಗಿದ್ದರೂ  ನಗರಾಡಳಿತಕ್ಕೆ ಕೊಳಚೆ ಪ್ರದೇಶಗಳಲ್ಲಿನ ಅನೈರ್ಮಲ್ಯ ನಿಯಂತ್ರಣ  ಸಾಧ್ಯವಾಗಿಲ್ಲ.ಕೊಳಚೆ ಪ್ರದೇಶಗಳ ವಿವರ: ನಗರದಲ್ಲಿ ಸುಮಾರು 47 ಕೊಳಚೆ ಪ್ರದೇಶಗಳಿವೆ. ರಾಜೀವ್‌ ಗಾಂಧಿ ಬಡಾವಣೆಯ ಕೊಳಚೆ ಪ್ರದೇಶ, ಟಿಪ್ಪು ನಗರ, ಮಿಳಘಟ್ಟ, ಬಸ್‌ ನಿಲ್ದಾಣದ ಹಿಂಭಾಗದ ಪ್ರದೇಶ, ವಿದ್ಯಾನಗರ, ಮಾರ್ನಾಮಿ ಬೈಲ್,

ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ಕೆಲ ಬ್ಲಾಕ್‌ಗಳು, ನವುಲೆ ಕೆರೆ ಏರಿಯಾ, ಟ್ಯಾಂಕ್ ಮೊಹಲ್ಲಾದ ಕೆಲ ಭಾಗಗಳು ಕೊಳಚೆ ಪ್ರದೇಶ ಎಂದು ಗುರುತಿಸಲಾಗಿದೆ. ಸಾಮಾನ್ಯವಾಗಿ ನಾಲೆ ಸಮೀಪದ ಭಾಗಗಳಲ್ಲಿಯೂ ಕೊಳಚೆಯ ದೃಶ್ಯ ಕಣ್ಣಿಗೆ ರಾಚುತ್ತದೆ.ಕಾರ್ಮಿಕರ ಸಂಖ್ಯೆ ಅಧಿಕ: ಕೊಳಚೆ ಪ್ರದೇಶಗಳಲ್ಲಿ ವಾಸಿಸುವವರ ಪೈಕಿ ಕೂಲಿ, ಗಾರೆ, ಸುಣ್ಣ, ಬಣ್ಣ ಬಳಿಯುವ ಕಾರ್ಮಿಕರು ಅಧಿಕ. ಇಕ್ಕಟ್ಟಾಗಿರುವ ಮನೆಗಳು ಅವ್ಯವಸ್ಥೆಯ ಆಗರ. ಹೀಗಿದ್ದೂ ಮನೆಗಳ ಬಾಡಿಗೆ ದರ ಅಧಿಕವಾಗಿದ್ದು, ಒಂದೊಂದು ಮನೆಯಲ್ಲಿ 6ರಿಂದ 7  ಮಂದಿ ವಾಸ ಮಾಡುತ್ತಿದ್ದಾರೆ. ಕೆಲವರು ಆಶ್ರಯಕ್ಕಾಗಿ ಸರ್ಕಾರ ನಿರ್ಮಿಸಿದ ಶೌಚಾಲಯವನ್ನು ಅವಲಂಬಿಸಿದ್ದಾರೆ.ಶೌಚಾಲಯದ ವ್ಯವಸ್ಥೆಯೇ ಇಲ್ಲದವರು ಬಹಿರ್ದೆಸೆಗೆ ತುಂಗಾನದಿ ಸಮೀಪಕ್ಕೆ ತೆರಳುತ್ತಾರೆ. ಮನೆ ಎದುರಿನ ಕಿರಿದಾದ ರಸ್ತೆಯಲ್ಲೇ ಪಾತ್ರೆ, ಬಟ್ಟೆ ತೊಳೆಯುತ್ತಾರೆ. ಜತೆಗೆ ಮಕ್ಕಳ ಸ್ನಾನ ಕಾರ್ಯವೂ ಅಲ್ಲೇ ನಡೆಯುತ್ತದೆ.ಹಿಂದೆ ಸಾಗುವ ಹಂದಿಗಳು: ರಾಜೀವ್‌ ಗಾಂಧಿ ಕೊಳಚೆ ಪ್ರದೇಶಕ್ಕೆ ಮಹಾನಗರ ಪಾಲಿಕೆಯ ಕಸ ಸಾಗಣೆ ಮಾಡುವ ವಾಹನ ಎರಡು ದಿನಕ್ಕೊಮ್ಮೆ  ಬಂದರೂ ಯಾವುದೇ ಪ್ರಯೋಜನವಾಗಿಲ್ಲ.ಕಸ ಹಾಕಲು ಜನರು ಹೊರಟರೆ ಹಿಂದೆಯೇ ಹಂದಿಗಳೂ ಸಾಗುತ್ತವೆ. ಮಳೆಗಾಲದ ಸಮಯದಲ್ಲಿ ಕಸದ ರಾಶಿಯೇ ಹಂದಿಗಳಿಗೆ ಆವಾಸಸ್ಥಾನ. ಸೊಳ್ಳೆಗಳ ಕಾಟದಿಂದ ನಿವಾಸಿಗಳಿಗೆ ಪದೇ ಪದೇ ಮಲೇರಿಯಾ, ಡೆಂಗಿ, ಚಿಕೂನ್‌ ಗುನ್ಯಾದಂತಹ ಸಾಂಕ್ರಾಮಿಕ ಕಾಯಿಲೆ ಗಳ ಪ್ರಕರಣಗಳು  ಕಂಡು ಬಂದಿವೆ.  ನಲ್ಲಿಗಳಲ್ಲಿ ಮೂರು ದಿನಕ್ಕೊಮ್ಮೆ ನೀರು ಪೂರೈಕೆ ಯಾಗುತ್ತದೆ. ಅನಿವಾರ್ಯ ವಾಗಿ ಟ್ಯಾಂಕ್‌ನಲ್ಲಿ ಬರುವ ಕೊಳವೆ ಬಾವಿ ನೀರಿಗೆ ಮೊರೆ ಹೋಗುತ್ತಾರೆ.‘ಸರ್ಕಾರದ ನಿವೇಶನಕ್ಕಾಗಿ ಅರ್ಜಿ ಹಾಕಲಾಗಿದೆ. ಆಶ್ರಯ ಮನೆಗೂ ಅರ್ಜಿ ಸಲ್ಲಿಸಿದ್ದೇವೆ. ಆದರೂ ಲಂಚ ನೀಡಿದವರಿಗೆ ಮಾತ್ರ ಸರ್ಕಾರ ನಿವೇಶನ ನೀಡುತ್ತಿದೆ’ ಎಂದು ಅಸಮಾ ಧಾನ ವ್ಯಕ್ತಪಡಿ ಸುತ್ತಾರೆ ನಿವಾಸಿ ಸಾಹಿರಾ ಬಾನು.‘ಬಡಾವಣೆಯ ಕೆಲ ನಿವಾಸಿಗಳಿಗೆ ಮನೆಗಳ ಹಕ್ಕು ಪತ್ರ ನೀಡಲಾಗಿದೆ. ಆದರೆ, ಬ್ಯಾಂಕ್‌ನಲ್ಲಿ ಇದಕ್ಕೆ ಸಾಲ ದೊರೆ ಯುತ್ತಿಲ್ಲ. ಅಧಿಕಾರಿಗಳು ಈ ಹಕ್ಕುಪತ್ರ ನಕಲಿ ಎನ್ನುತ್ತಾರೆ. ನಮಗೆ ನಿಜವಾದ ಹಕ್ಕುಪತ್ರ ನೀಡಬೇಕು’ ಎಂದು ಪರಶುರಾಮಪ್ಪ ಒತ್ತಾಯಿಸುತ್ತಾರೆ.‘ಮಳೆ ಬಂದಾಗ ರಸ್ತೆ ಕೆಸರಾಗಿರುತ್ತದೆ. ವೃದ್ಧರು ಓಡಾಡಲು ಸಾಧ್ಯವಾಗುವುದಿಲ್ಲ. ಹಂದಿಗಳ ಹಾವಳಿ ಹೆಚ್ಚಾಗಿದೆ.  ಈ ಸಮಸ್ಯೆಗಳಿಂದ ನಮಗೆ ಮುಕ್ತಿ ನೀಡಿ’ ಎಂದು ಆಗ್ರಹಿಸುತ್ತಾರೆ ಸಾವಿತ್ರಮ್ಮ.

*

ಕೊಳಚೆ ಪ್ರದೇಶಗಳಿಗೆ ತಿಂಗಳಿಗೊಮ್ಮೆ ಭೇಟಿ ನೀಡಿ ಅವರಲ್ಲಿ ಸ್ವಚ್ಛತೆ, ಆರೋಗ್ಯದ ಕುರಿತು ಜಾಗೃತಿ ಮೂಡಿಸಲಾಗುತ್ತದೆ

ಮಲ್ಲೇಶಪ್ಪ, ಕೊಳಚೆ ನಿರ್ಮೂಲನಾ ಮಂಡಳಿಯ ಅಧಿಕಾರಿ                         

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.