ಬುಧವಾರ, ಏಪ್ರಿಲ್ 14, 2021
23 °C

ಕೊಳಚೆ ಪ್ರದೇಶದ ಜನರಿಗೆ ಶೀಘ್ರ ಹಕ್ಕುಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದನಂತರ ಇದೇ ಮೊದಲ ಬಾರಿಗೆ `ಸ್ಲಂ ನೀತಿ~ಯೊಂದನ್ನು ಜಾರಿಗೊಳಿಸಲಾಗಿದೆ. ಈ ಯೋಜನೆ ಅಡಿಯಲ್ಲಿ ಶೀಘ್ರವೆ ಕೊಳಚೆ ಪ್ರದೇಶದಲ್ಲಿರುವ ಜನರಿಗೆ ವಸತಿ ಕಲ್ಪಿಸುವುದರೊಂದಿಗೆ ಹಕ್ಕುಪತ್ರಗಳನ್ನು ವಿತರಿಸಲಾಗುವುದು ಎಂದು ವಸತಿ ಸಚಿವ ವಿ. ಸೋಮಣ್ಣ ಸೋಮವಾರ ಇಲ್ಲಿ ಹೇಳಿದರು.

ಕರ್ನಾಟಕ ಗೃಹ ಮಂಡಳಿಯು ನಗರದ ಹೊರವಲಯದಲ್ಲಿ ಆಯೋಜಿಸಿದ್ದ ನೂತನ ಬಡಾವಣೆ ನಿರ್ಮಾಣದ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಗುಡಿಸಲು ರಹಿತ ಗ್ರಾಮ, ಕೊಳಚೆ ರಹಿತ ನಗರ ನಿರ್ಮಿಸುವ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರದ ಸಹಯೋಗದಲ್ಲಿ ವಿವಿಧ ವಸತಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಗುಲ್ಬರ್ಗದಲ್ಲಿ ಗೊಲ್ಲರ್ ಕಾಲನಿಗೆ ತತಕ್ಷಣ ಹಕ್ಕುಪತ್ರ ವಿತರಣೆಗೆ ಸೂಚಿಸಲಾಗಿದೆ. ಧೀನದಯಾಳ್ ಕಾಲನಿ ಸೇರಿದಂತೆ ನಗರದ ವಿವಿಧೆಡೆಯಲ್ಲಿನ ಕೊಳಚೆ ಪ್ರದೇಶದಲ್ಲಿರುವ ಜನರಿಗೆ ಹಕ್ಕುಪತ್ರ ವಿತರಣೆಗೆ ಇದೇ 22ರಂದು ನಡೆಯಲಿರುವ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ವಸತಿ ಯೋಜನೆ ಅನುಷ್ಠಾನಕ್ಕಾಗಿ ಹಿಂದಿನ ಸರ್ಕಾರಗಳು ಇಲಾಖೆಯನ್ನು ಸಾಲಮಯಗೊಳಿಸಿದ್ದವು. ಇದೀಗ ಸುಮಾರು ರೂ 2 ಸಾವಿರ ಕೋಟಿಯಷ್ಟು ಸಾಲ ಚುಕ್ತಾಗೊಳಿಸಲಾಗಿದ್ದು, ಇನ್ನು ಸುಮಾರು ರೂ 200 ಕೋಟಿಯಷ್ಟು ಸಾಲಬಾಕಿ ಇದೆ ಎಂದರು.

ತಹಸೀಲ್ದಾರ ಮೂಲಕ ಹಣ ಹಂಚಿಕೆ: ಗುಲ್ಬರ್ಗ ಜಿಲ್ಲೆಗೆ ಆಶ್ರಯ ಯೋಜನೆ ಅಡಿಯಲ್ಲಿ 36 ಸಾವಿರ ಬಸವ ಇಂದಿರಾ ವಸತಿ, 8 ಸಾವಿರ ಇಂದಿರಾ ಅವಾಸ್ ಮತ್ತು 5138 ವಾಜಪೇಯಿ ವಸತಿಗಳನ್ನು ಹಂಚಿಕೆ ಮಾಡಲಾಗಿದೆ. ದುರ್ದೈವದಿಂದ, ವಸತಿ ಯೋಜನೆ ಯಾರಿಗೆ ತಲುಪಬೇಕೆನ್ನುವ ಉದ್ದೇಶ ಇಟ್ಟುಕೊಳ್ಳಲಾಗಿದೆಯೋ ಅವರಿಗೆ ತಲುಪದಿರುವುದು ಗಮನಕ್ಕೆ ಬಂದಿದೆ. ಇದಕ್ಕಾಗಿ ಜಿಪಿಎಸ್ ವ್ಯವಸ್ಥೆ ಕಡ್ಡಾಯ ಜಾರಿಗೊಳಿಸಲಾಗಿದ ಎಂದರು.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೆಲವು ಪುಢಾರಿಗಳು, ಪಿಡಿಓ ಹಾಗೂ ನೊಡಲ್ ಅಧಿಕಾರಿಗಳು ಸೇರಿಕೊಂಡು ಫಲಾನುಭವಿಗಳಿಂದ ಹಣ ವಸೂಲಿ ಮಾಡಿಕೊಳ್ಳುತ್ತಿರುವ ಬಗ್ಗೆ ಪತ್ತೆಯಾಗಿದೆ. ಕೆಲವು ಅಧಿಕಾರಿಗಳಿಂದಾಗಿ ಇಡೀ ಯೋಜನೆಯ ಉದ್ದೇಶ ಮಣ್ಣುಪಾಲಾಗಬಾರದು. ಹೀಗಾಗಿ ವಸತಿ ಯೋಜನೆಯ ಹಣವನ್ನು ಇನ್ನುಮುಂದೆ ತಹಸೀಲ್ದಾರರ ಮೂಲಕ ಹಂಚಿಕೆ ಮಾಡಲು ಶೀಘ್ರವೆ ಸುತ್ತೋಲೆ ಕಳುಹಿಸಲಾಗುವುದು ಎಂದು ವಿವರಿಸಿದರು.

ಆಶ್ರಯ ಮನೆ ನಿರ್ಮಾಣದ ಹಣವನ್ನು ರೂ 75 ಸಾವಿರದಿಂದ ಒಂದು ಲಕ್ಷಕ್ಕೆ ಏರಿಕೆ ಮಾಡುವ ಮಾಡುವ ಗಂಭೀರ ಚಿಂತನೆ ನಡೆದಿದೆ. ಪ್ರಸಕ್ತ ಸಾಲಿನ ಆಶ್ರಯ ಮನೆ ಯೋಜನೆ ಬರುವ ಡಿಸೆಂಬರ್‌ಗೆ ಪೂರ್ಣಗೊಳಿಸಲು ಆದೇಶ ನೀಡಲಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪಶುಸಂಗೋಪನೆ ಸಚಿವ ರೇವುನಾಯಕ ಬೆಳಮಗಿ ಮಾತನಾಡಿ, `ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎನ್ನುವ ಮಾತನ್ನು ವಸತಿ ಸಚಿವರು ಅನುಷ್ಠಾನಗೊಳಿಸುತ್ತಿದ್ದಾರೆ. ಅವರ ಎಲ್ಲ ಯೋಜನೆಗೂ ಸಹಕಾರ ನೀಡಲಾಗುವುದು. ವಸತಿ ಯೋಜನೆಗಳು ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ನಿಗಾ ವಹಿಸಲಾಗುವುದು~ ಎಂದರು.

ಶಾಸಕರಾದ ದೊಡ್ಡಪ್ಪಗೌಡ ನರಿಬೋಳ, ಮಾಲೀಕಯ್ಯ ಗುತ್ತೇದಾರ, ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ. ನಮೋಶಿ, ಅಮರನಾಥ ಪಾಟೀಲ, ಎಂಎಸ್‌ಐಎಲ್ ಅಧ್ಯಕ್ಷ ವಿಕ್ರಮ ಪಾಟೀಲ ಮತ್ತಿತರರು ಇದ್ದರು.

ಬ್ಯಾಟಿಂಗ್ ಮಾಡುವವರು ಬದಲಾಗಿದ್ದಾರೆ!

ರಾಜ್ಯದಲ್ಲಿ ಒಬ್ಬರ ಬ್ಯಾಟಿಂಗ್ ಮುಕ್ತಾಯವಾಗಿದ್ದು, ಇನ್ನೊಬ್ಬರ ಬ್ಯಾಟಿಂಗ್ ಶುರುವಾಗಿದೆ ಎಂದು ವಸತಿ ಸಚಿವ ಸೋಮಣ್ಣ ಅವರು ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಹಾಗೂ ಬಿ.ಎಸ್. ಯಡಿಯೂರಪ್ಪ ನಡುವಿನ ವಾಕ್ ಸಮರದ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಮಾರ್ಮಿಕವಾಗಿ ಉತ್ತರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.