ಬುಧವಾರ, ಜೂನ್ 23, 2021
24 °C

ಕೊಳವೆಬಾವಿಗೆ ಅನುಮತಿ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಅಂತರ್ಜಲ ಸಂರಕ್ಷಣಾ ಕಾಯಿದೆ ಅನ್ವಯ `ಅಂತರ್ಜಲ ಸಂರಕ್ಷಣಾ ಅಥಾರಿಟಿ~ ಜಿಲ್ಲೆಯಲ್ಲಿ ಅಸ್ವಿತ್ವಕ್ಕೆ ಬಂದಿದೆ. ಇನ್ನು ಮುಂದೆ ಜಿಲ್ಲೆಯಲ್ಲಿ ಕೊಳವೆಬಾವಿ ಕೊರೆಯಲು ಅನುಮತಿ  ಪಡೆಯುವುದು ಕಡ್ಡಾಯ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿ.ಎನ್.ಶ್ರೀನಿವಾಸಾಚಾರಿ ಹೇಳಿದರು.ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ಕೊಳವೆಬಾವಿಗಳನ್ನು ನೋಂದಾಯಿಸಿಕೊಳ್ಳಬೇಕು. ಬಾವಿ ಕೊರೆಯುವ ಮುನ್ನ ನೀರು ಲಭ್ಯವಿರುವ ಬಗ್ಗೆ ಖಾತರಿ ಪಡಿಸಿಕೊಳ್ಳಬೇಕು.

 

ಆ ಬಗ್ಗೆ ಸ್ಟಷ್ಟ ಮಾರ್ಗಸೂಚಿಗಳನ್ನು ಸದ್ಯದಲ್ಲೇ ಬಿಡುಗಡೆ ಮಾಡಲಾಗುವುದು. ಕುಡಿಯುವ ನೀರು ಪೂರೈಸುಲ್ಲಿ ನಿರ್ಲಕ್ಷ್ಯ- ಅಸಡ್ಡೆ ತೋರುವ ಅಧಿಕಾರಿಗಳನ್ನು ತಕ್ಷಣವೇ ಅಮಾನತುಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ತೀವ್ರ ಸಮಸ್ಯೆ ಇದೆ. ಎಲ್ಲೆಡೆ ಟ್ಯಾಂಕರ್‌ಗಳಲ್ಲಿ ನೀರು ಸಾಗಣೆ ಮಾಡಲಾಗುತ್ತಿದೆ. ಇನ್ನೂ ಎರಡು ತಿಂಗಳಲ್ಲಿ ಸಮಸ್ಯೆ ಹೆಚ್ಚಾಗಲಿದೆ. ಎಲ್ಲ ಇಲಾಖೆ ಅಧಿಕಾರಿಗಳು ಸೇರಿ ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸಬೇಕು.ಜಿಲ್ಲೆಯಲ್ಲಿ ಭೂ ವಿಜ್ಞಾನ ಅಧಿಕಾರಿಗಳ ಸರ್ವೆ ಪ್ರಕಾರ ಶೇಕಡ 32 ರಿಂದ 40 ರಷ್ಟು ಕೊಳವೆ ಬಾವಿಗಳು ಬತ್ತಿವೆ. ಈಗ ಒಂದು ಕೊಳವೆ ಬಾವಿ ಕೊರೆದು ಪಂಪ್ -ಮೋಟರ್ ಅಳವಡಿಸಲು ರೂ 4 ಲಕ್ಷ ಬೇಕು. ಕೊಳವೆಬಾವಿ ಕೊರೆದು ನೀರು ಸಿಕ್ಕಿದರೂ ನಾಲ್ಕೈದು ತಿಂಗಳಲ್ಲಿ ಬತ್ತುತ್ತಿವೆ. ಹೀಗಾಗಿ ಇರುವ ನೀರನ್ನೆ ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕು. ನೀರಿನ ಸಮಸ್ಯೆ ನಿವಾರಿಸಲು ಈಗಾಗಲೇ ರೂ 7 ಕೋಟಿ ಬಿಡುಗಡೆಯಾಗಿದೆ.  ಈಗ ರೂ 2.50 ಕೋಟಿ ಬಿಡುಗಡೆಯಾಗಿದೆ ಎಂದರು.ಈಗಾಗಲೇ ಶೇ. 200ರಷ್ಟು ಅಂತರ್ಜಲವನ್ನು ಉಪಯೋಗಿಸಲಾಗಿದೆ.  ಮಳೆ ಬಂದರೆ ಮಾತ್ರ ನೀರು ಇಂಗಲು ಸಾಧ್ಯ. ಇನ್ನಾದರೂ ಕೊಳವೆಬಾವಿ ಕೊರೆಯುವುದನ್ನು ಕಡಿಮೆ ಮಾಡಬೇಕು. ಬರಪರಿಹಾರದಲ್ಲಿ ತಹಶೀಲ್ದಾರರಿಗೆ ನೀಡುವ ಹಣವನ್ನು ನೀರು ಸಾಗಾಣಿಕೆಗೆ ಮಾತ್ರ ಬಳಸಬೇಕು. ಪಂಪ್ ಮೋಟರು ಖರೀದಿಸಲು ಬಳಸಬಾರದು ಎಂದರು.ಟ್ಯಾಂಕರ್‌ಗಳ ಮೂಲಕ 150 ಗ್ರಾಮಗಳಿಗೆ ನೀರು ಪೂರೈಸಲಾಗುತ್ತಿದೆ. 190 ಹಳ್ಳಿಗಳಲ್ಲಿ ಸಮಸ್ಯೆ ಇದೆ. ಕೋಲಾರದ 20, ಮಾಲೂರಿನ 40, ಬಂಗಾರಪೇಟೆಯ 57, ಮುಳಬಾಗಿಲುವಿನ 36, ಶ್ರೀನಿವಾಸಪುರದ 37 ಗ್ರಾಮಗಳಿವೆ.ಆ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ರೂ 6 ಕೋಟಿ ವೆಚ್ಚದ ಕ್ರಿಯಾ ಯೋಜನೆ ಸಲ್ಲಿಸಲಾಗಿದೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ  ಪಿ.ರಾಜೇಂದ್ರ ಚೋಳನ್ ತಿಳಿಸಿದರು. ಜಿಪಂ ಅಧ್ಯಕ್ಷೆ  ಮಂಜುಳ ವೆಂಕಟೇಶ್, ಉಪಾಧ್ಯಕ್ಷ ಡಿ.ವಿ.ಹರೀಶ್, ಜಿಲ್ಲಾಧಿಕಾರಿ ಮನೋಜ್ ಕುಮಾರ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ರಾಮ್ ನಿವಾಸ್ ಸೆಪಟ್ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.