ಗುರುವಾರ , ಮೇ 6, 2021
27 °C
ಆರ್ಸೆನಿಕ್ ವಿಷದ್ರವ್ಯ , 100 ಕ್ಕೂ ಹೆಚ್ಚು ಪ್ರಕರಣ

ಕೊಳವೆಬಾವಿಬಂದ್ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಯಚೂರು ಮತ್ತು ಯಾದಗಿರಿ ಜಿಲ್ಲೆಯ 63 ಗ್ರಾಮಗಳಲ್ಲಿನ ಕುಡಿಯುವ ನೀರಿನಲ್ಲಿ ವಿಷ ದ್ರವ್ಯ (ಆರ್ಸೆನಿಕ್ ರಾಸಾಯನಿಕ) ಇರುವುದು ಪತ್ತೆಯಾಗಿದ್ದು, ಅಂತಹ 100ಕ್ಕೂ ಹೆಚ್ಚು ಕೊಳವೆಬಾವಿಗಳನ್ನು ತಕ್ಷಣ ಬಂದ್ ಮಾಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಶುಕ್ರವಾರ ಇಲ್ಲಿ  ತಿಳಿಸಿದರು.ರಾಯಚೂರು ಜಿಲ್ಲೆಯ ಮಾನ್ವಿ, ಲಿಂಗಸುಗೂರು, ದೇವದುರ್ಗ ಮತ್ತು ಸಿಂಧನೂರು ತಾಲ್ಲೂಕುಗಳ 44 ಗ್ರಾಮ ಹಾಗೂ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ 19 ಗ್ರಾಮಗಳಲ್ಲಿ ಈ ಸಮಸ್ಯೆ ಇದೆ. ಈ ತಿಂಗಳ 30ರೊಳಗೆ ವಿಷ ದ್ರವ್ಯ ಇರುವ ಕೊಳವೆಬಾವಿಗಳನ್ನು ಮುಚ್ಚಬೇಕು. ಅಷ್ಟರೊಳಗೆ ಈ ಗ್ರಾಮಗಳಿಗೆ ಬೇರೆ ಜಲಮೂಲಗಳಿಂದ ಯೋಗ್ಯ ನೀರು ಸರಬರಾಜು ಮಾಡುವುದಕ್ಕೂ ಸೂಚಿಸಲಾಗಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.`ಒಂದು ಲೀಟರ್ ನೀರಿನಲ್ಲಿ 0.05 ಗ್ರಾಂ ಗಿಂತ ಹೆಚ್ಚು ಆರ್ಸೆನಿಕ್ ಅಂಶ ಇದ್ದರೆ ಅಂತಹ ನೀರು ಕುಡಿಯಲು ಯೋಗ್ಯ ಅಲ್ಲ. ಈ ಗ್ರಾಮಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಆರ್ಸೆನಿಕ್ ಅಂಶ ಇರುವ ಕಾರಣ ಕೊಳವೆಬಾವಿಗಳನ್ನು ಮುಚ್ಚಿಸಲು ಸೂಚಿಸಲಾಗಿದೆ. ಕೆಂಪು ಬಣ್ಣದ ಬಟ್ಟೆ ಸುತ್ತಿ, ಅದರಲ್ಲಿನ ನೀರು ಬಳಸದಂತೆ ಸ್ಥಳೀಯರಿಗೆ ಸಲಹೆ ನೀಡಲು ತೀರ್ಮಾನಿಸಲಾಗಿದೆ' ಎಂದು ಅವರು ಹೇಳಿದರು.ಈ ಭಾಗದ ಗ್ರಾಮಗಳಲ್ಲಿನ ನೀರು ಯಾವ ಕಾರಣಕ್ಕೆ ಹೀಗೆ ಆಗಿದೆ ಎಂಬುದು ಗೊತ್ತಾಗಿಲ್ಲ. ವಿಷಯ ಗೊತ್ತಾದ ನಂತರ ಈ ಎರಡೂ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು, ಪರಿಸ್ಥಿತಿ ಅಧ್ಯಯನ ಮಾಡಿರುವುದಾಗಿ ವಿವರಿಸಿದರು.ಹೊಸದಾಗಿ ಕೊರೆಸುವ ಕೊಳವೆಬಾವಿಗಳಲ್ಲೂ ಈ ವಿಷ ದ್ರವ್ಯ ಕಂಡರೆ, ಪರ್ಯಾಯ ಮಾರ್ಗ ಹುಡುಕಲಾಗುವುದು. ಟ್ಯಾಂಕರ್‌ಗಳ ಮೂಲಕ ನೀರು ಒದಗಿಸುವುದಕ್ಕೂ ಹಿಂದೇಟು ಹಾಕುವುದಿಲ್ಲ. ಮುಂದಿನ ದಿನಗಳಲ್ಲಿ ನದಿ ಮೂಲದಿಂದ ಕುಡಿಯುವ ನೀರು ಸರಬರಾಜು ಮಾಡುವ ಬಗ್ಗೆ ಯೋಜನೆ ರೂಪಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.ನೀರಿನಲ್ಲಿನ ಆರ್ಸೆನಿಕ್ ಅಂಶ ಪತ್ತೆಗೆ ಪ್ರಯೋಗಾಲಯ ಸ್ಥಾಪಿಸಿದ್ದು, ಅದನ್ನು ಮತ್ತಷ್ಟು ಮೇಲ್ದರ್ಜೆಗೇರಿಸಲಾಗುವುದು. ಈ ಸಲುವಾಗಿ ರಾಜ್ಯ ಸರ್ಕಾರ ಒಂದು ಕೋಟಿ ರೂಪಾಯಿ ಬಿಡುಗಡೆ ಮಾಡಿದೆ ಎಂದು ವಿವರಿಸಿದರು.ರಾಜ್ಯದ ಇತರ ಕಡೆಗಳಲ್ಲಿನ ನೀರನ್ನು ಪರೀಕ್ಷೆಗೆ ಒಳಪಡಿಸುವ ಸಂಬಂಧ ತಜ್ಞರ ಜತೆ ಚರ್ಚಿಸಲಾಗುವುದು. ಸಾಧ್ಯವಾದರೆ ತ್ವರಿತವಾಗಿ ಪರೀಕ್ಷೆ ಮಾಡಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.