ಮಂಗಳವಾರ, ಮೇ 18, 2021
22 °C

ಕೊಳೆಗೇರಿಗಳಲ್ಲಿ ಶೌಚ `ಲಯ'!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ  57 ಘೋಷಿತ, 7 ಅಘೋಷಿತ ಕೊಳೆಗೇರಿಗಳಿವೆ. ಬಡ ಮಹಿಳೆಯರೇ ವಾಸವಾಗಿರುವ ಕೊಳೆಗೇರಿಗಳಲ್ಲಿ ಮಲ, ಮೂತ್ರ ವಿಸರ್ಜನೆ  ಎಂದರೆ ಮಹಿಳೆಯರಿಗೆ ಸ್ವಾಭಿಮಾನದ ಪ್ರಶ್ನೆ ಎಂಬಂತಾಗಿದೆ. ಇದರಿಂದಾಗಿ ಕೀಳರಿಮೆಯಲ್ಲಿ ನಲುಗುತ್ತಿದ್ದಾರೆ. ಹೆಚ್ಚಿನ ಸ್ಲಂ- ಕಾಲೊನಿಗಳಲ್ಲಿ ಶೌಚಾಲಯಗಳೇ ಇಲ್ಲ, ಇನ್ನು ಕೆಲವು ಕಡೆ ಇದ್ದರೂ `ಲೆಕ್ಕಕ್ಕುಂಟು ಆಟಕ್ಕಿಲ್ಲ' ಎಂಬಂತಿದ್ದು ಮಹಿಳೆಯರ ಪಡಿಪಾಟಲು ಹೆಚ್ಚಿದೆ.ಬುದ್ಧನಗರ, ಸ್ತ್ರೀಶಕ್ತಿನಗರ, ಆಶ್ರಯ ಕಾಲೊನಿ, ಅರಳಿಗಿಡ ಬಸವಣ್ಣನಗರ, ಸಿದ್ಧಾರೂಢ ನಗರ, ಲಂಗಾರ ಹನುಮಾನ ನಗರ ಮುಂತಾದ ಸ್ಲಂ-ಕಾಲೊನಿಗಳಲ್ಲಿ ಶೌಚಾಲಯಗಳನ್ನೇ ಕಟ್ಟಿಸಿಲ್ಲ. ಇಲ್ಲಿ ಮಹಿಳೆಯರು ಮಲಮೂತ್ರ ವಿಸರ್ಜನೆಗಾಗಿ ಒತ್ತಡ ಸಹಿಸುತ್ತಾ ಚೊಂಬು ಹಿಡಿದು ಕತ್ತಲಾಗುವುದನ್ನೇ ಕಾಯಬೇಕಿದೆ.`ಸ್ತ್ರೀ ಶಕ್ತಿ ಕಾಲೊನಿ, ಸಿದ್ಧಾರೂಡ ಕಾಲೊನಿ ಶೌಚಾಲಯಗಳೇ ಇಲ್ಲ. ಬಯಲು ಶೌಚವನ್ನೇ ಅವಲಂಬಿಸಬೇಕಿದೆ. ಹೀಗೆ ತೆರಳುವ ಒಂಟಿ ಮಹಿಳೆಯರು ಕಾಮುಕರ ಕೀಟಲೆಗೆ ಒಳಗಾದ ಉದಾಹರಣೆಗಳಿವೆ. ಶೌಚಕಾರ್ಯಕ್ಕೂ ಮಹಿಳೆಯರು ಗುಂಪಾಗಿ ಹೋಗಬೇಕಿದೆ.ಸಿದ್ಧಾರೂಡ ಕಾಲೊನಿಯಲ್ಲಂತೂ ಸುರಕ್ಷತೆಗಾಗಿ ಎರಡು ಬಯಲುಗಳಲ್ಲಿ ಒಂದನ್ನು ಪುರುಷರು, ಇನ್ನೊಂದನ್ನು ಮಹಿಳೆಯರು ಬಳಸುವ ಒಪ್ಪಂದವಾಗಿದೆ! 

ಲಂಗೂರ ಹನುಮನಗರದ, ಅರಳಿಗಿಡಬಸವಣ್ಣ ನಗರ, ಬುದ್ಧನಗರ ಸ್ಥಿತಿಯೂ ಶೋಚನೀಯವಾಗಿದೆ. ಪಂಚಶೀಲ ನಗರಗಳಲ್ಲಿ ಶೌಚಕಾರ್ಯಕ್ಕೂ ರಾಜಕೀಯವಿದೆ. ಇದ್ದ ಶೌಚಾಲಯವನ್ನು ಕೆಲವರು ಬಳಸಬಹುದು, ಕೆಲವರು ಬಳಸಬಾರದು ಎಂದು ಸ್ಥಳೀಯರೇ ನಿರ್ಬಂಧ  ಹಾಕಿದ್ದಾರೆ.ಕುಳಗೇರಿ ಸ್ಮಶಾನ ಮತ್ತಿತರ ಕಡೆ ಜಾಲಿ ಪೊದೆಗಳನ್ನೇ ಮಕ್ಕಳು, ಬಸುರಿ  -ಬಾಣಂತಿ, ವೃದ್ಧಮಹಿಳೆಯರು  ಆಶ್ರಯಿಸುವಂತಾಗಿದೆ. ಶೌಚಾಲಯದ ನಿರ್ವಹಣೆ ಖಾಸಗಿಯವರಿಗೆ ಇದ್ದರೆ ರಸೀದಿ ರಹಿತ ವಸೂಲಿ ಹೆಚ್ಚಾಗಿರುತ್ತದೆ. ಹಾಗಾಗಿ ಇಲ್ಲೆಲ್ಲ ಸರ್ಕಾರಿ ವೆಚ್ಚದಲ್ಲಿ ಶೌಚಾಲಯ ಕಟ್ಟಿಸಿ, ನಗರಪಾಲಿಕೆಯ ನೇರ ನಿರ್ವಹಣೆ ಇರಬೇಕು' ಎನ್ನುತ್ತಾರೆ  ಈ ಬಗ್ಗೆ ಹೋರಾಟ ನಡೆಸುತ್ತಿರುವ `ಸ್ಲಂ ಜನಾಂದೋಲನ ಸಂಘಟನೆ ಮಹಿಳಾ ಘಟಕ'ದ ಅಧ್ಯಕ್ಷೆ ರೇಣುಕಾ ಸರಡಗಿ.ಇಂದಿರಾನಗರ ಸ್ಲಂ- ಕಾಲೊನಿಯ ಕಥೆಯೇ ಬೇರೆ. ಇಲ್ಲಿ ಮಹಿಳೆಯರಿಗೆ-ಪುರುಷರಿಗೆ ಪ್ರತ್ಯೇಕ ಶೌಚಾಲಯವೇನೋ ಇದೆ. ಆದರೆ ಅದು ಒಂದೇ ಕಡೆ ಇದೆ. ಮಹಿಳೆಯರು ಮುಜುಗರಪಡುವಂತಿದೆ. ರೂ. 3 ಶುಲ್ಕ ಪಾವತಿಸಬೇಕು. ಇದನ್ನು ಪಾವತಿಸಲು ಕಷ್ಟವಾಗುತ್ತಿದೆ, ಪಾಲಿಕೆಯೇ ನಿರ್ವಹಿಸಬೇಕು ಅನ್ನುತ್ತಾರೆ  ನಿವಾಸಿಗಳಾದ ನರಸಮ್ಮ, ಗೌರಮ್ಮ ಮುಂತಾದವರು., ತಾರಫೈಲ್ ನಗರಗಳಲ್ಲಿ ಮಹಿಳಾ ಶೌಚಾಲಯ ಇದೆ. ಆದರೆ ಇದರ ಬಳಕೆಗೆ ಎಲ್ಲರಿಗೂ ಅವಕಾಶ ನೀಡುತ್ತಿಲ್ಲ ಎಂದು ಸ್ಥಳೀಯರು                   ಹೇಳುತ್ತಿದ್ದಾರೆ. `ಹಾಗೇನೂ ಇಲ್ಲ, ಇಲ್ಲಿ ಬಳಕೆದಾರರಿಗೆ ಕಾರ್ಡು ವ್ಯವಸ್ಥೆ ಇದೆ. ಮಹಿಳೆಯರಿಗಾಗಿ ಒಂದು ಸರ್ಕಾರಿ ಶೌಚಾಲಯ ಇದೆ. ಇನ್ನೊಂದು ಶುಲ್ಕ ಸಹಿತ ಶೌಚಾಲಯ ಇದ್ದು ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆ' ಎಂದು ಕಾಲೊನಿ ನಿವಾಸಿ ಮಾಜಿ ಮೇಯರ್ ನಂದಕುಮಾರ್ ಪಾಟೀಲ ಹೇಳುತ್ತಾರೆ.`ಮಹಿಳಾ ಶೌಚಾಲಯಗಳ ಸಮಸ್ಯೆ ಗಂಭೀರವಾಗಿದ್ದ ಕಡೆಗಳಲ್ಲಿ ಸ್ಥಳೀಯ ಪಾಲಿಕೆ ಸದಸ್ಯರ ಮೂಲಕ ಠರಾವು ಅಂಗೀಕರಿಸಿದರೆ ನಗರಪಾಲಿಕೆ ಕ್ರಮ ಜರುಗಿಸಲು  ಸುಗಮವಾಗುತ್ತದೆ. ಕೊಳೆಗೇರಿಗಳ ನಿರ್ವಹಣೆ ನಗರಪಾಲಿಕೆಯದ್ದಾಗಿದ್ದರೂ, ಕೊಳೆಗೇರಿ ಅಭಿವೃದ್ಧಿ ಮಂಡಳಿ ಅದನ್ನು ಹಸ್ತಾಂತರಿಸಿರಬೇಕು' ಎಂದು ಗುಲ್ಬರ್ಗ ಮಹಾನಗರಪಾಲಿಕೆಯ ಪ್ರಭಾರ ಆರೋಗ್ಯ ಅಧಿಕಾರಿ ಹನುಮಂತ ಗೌಡ ಪ್ರತಿಕ್ರಿಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.