ಶುಕ್ರವಾರ, ಅಕ್ಟೋಬರ್ 18, 2019
28 °C

ಕೊಳೆಗೇರಿಗೆ ಹಕ್ಕುಪತ್ರ

Published:
Updated:

ಬೆಂಗಳೂರು: ಕೊಳೆಗೇರಿಗಳಿಗೆ ಮೂಲ ಸೌಕರ್ಯ ಒದಗಿಸುವ ಉದ್ದೇಶದಿಂದ ವಸತಿ ಇಲಾಖೆ ಸಿದ್ಧಪಡಿಸಿರುವ ಕರಡು `ಕೊಳೆಗೇರಿ ನೀತಿ~ಗೆ ವಿರೋಧದ ನಡುವೆಯೂ ಸಚಿವ ಸಂಪುಟ ಸಭೆ ಶುಕ್ರವಾರ ಅನುಮೋದನೆ ನೀಡಿತು. ಇದಕ್ಕೆ ಪೂರಕವಾಗಿ ನಗರ ಮತ್ತು ಗ್ರಾಮ ಯೋಜನಾ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ.

ರಾಜ್ಯದ ನಗರ ಪ್ರದೇಶಗಳಲ್ಲಿ ಶೇ 22.56ರಷ್ಟು ಜನ ಕೊಳೆಗೇರಿಗಳಲ್ಲಿ ನೆಲೆಸಿದ್ದಾರೆ. ಅವರಿಗೆ ಹಕ್ಕುಪತ್ರ ನೀಡುವ ಕುರಿತು ಮತ್ತು ಅಲ್ಲಿ ಮನೆ ನಿರ್ಮಿಸಲು ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಈ ನೀತಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದು ಕಾನೂನು ಸಚಿವ ಎಸ್.ಸುರೇಶ್‌ಕುಮಾರ್ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್. ಆಚಾರ್ಯ ಅವರು ಸಂಪುಟ ಸಭೆ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದರು.

ರಾಜ್ಯದಲ್ಲಿನ ಒಟ್ಟು 2,722 ಕೊಳೆಗೇರಿಗಳಲ್ಲಿ ಸುಮಾರು 40 ಲಕ್ಷ ಜನ ನೆಲೆಸಿದ್ದಾರೆ. ಇವುಗಳಲ್ಲಿ 2,251 ಘೋಷಿತ ಕೊಳೆಗೇರಿಗಳು. 471 ಘೋಷಣೆಯಾಗದ ಕೊಳೆಗೇರಿಗಳು. ಬೆಂಗಳೂರು ನಗರದಲ್ಲೇ ಸುಮಾರು 597 ಕೊಳೆಗೇರಿಗಳಿದ್ದು, ಅಲ್ಲಿ 18 ಲಕ್ಷ ಜನ ನೆಲೆಸಿದ್ದಾರೆ. ಈ ಪ್ರದೇಶಗಳನ್ನು ಅಭಿವೃದ್ಧಿಪಡಿಸಿ, ಅಲ್ಲಿನ ನಿವಾಸಿಗಳಿಗೆ ಮೂಲಸೌಲಭ್ಯ ಕಲ್ಪಿಸುವುದು ಈ ನೀತಿಯ ಪ್ರಮುಖ ಉದ್ದೇಶ ಎಂದು ಅವರು ವಿವರಿಸಿದರು.

ಸರ್ಕಾರಿ ಜಮೀನುಗಳಲ್ಲಿ 496, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸರ್ಕಾರಿ ಜಮೀನುಗಳಲ್ಲಿ 1,084, ಖಾಸಗಿಯವರ ಜಮೀನುಗಳಲ್ಲಿ 666 ಮತ್ತು ರೈಲ್ವೆ, ರಕ್ಷಣಾ ಪಡೆಗೆ ಸೇರಿದ ಜಾಗಗಳಲ್ಲಿ ಐದು ಕೊಳೆಗೇರಿಗಳಿವೆ. ಮೂಲ ಸೌಕರ್ಯ ಕೊರತೆ ಎದುರಿಸುತ್ತಿರುವ ಈ ಪ್ರದೇಶಗಳಲ್ಲಿ ಕುಡಿಯುವ ನೀರು, ವಿದ್ಯುತ್, ಒಳಚರಂಡಿ ವ್ಯವಸ್ಥೆ ಸೇರಿದಂತೆ ಇತರ ಸೌಕರ್ಯಗಳನ್ನು ಕಲ್ಪಿಸಲಾಗುವುದು. ಅಂತೆಯೇ ಕೊಳೆಗೇರಿಗಳು ಹೊಸದಾಗಿ ತಲೆಎತ್ತದಂತೆ ನೋಡಿಕೊಳ್ಳಲಾಗುವುದು ಎಂದರು.

ಈ ನೀತಿ ಜಾರಿಗೆ ನಗರ ಮತ್ತು ಗ್ರಾಮ ಯೋಜನಾ ಕಾಯ್ದೆಗೆ ಕೆಲ ತಿದ್ದುಪಡಿಗಳನ್ನು ಮಾಡಬೇಕಿದ್ದು, ಆ ಕುರಿತು ಮುಖ್ಯಮಂತ್ರಿಯವರೇ ಇಲಾಖೆ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ, ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ಖಾಸಗಿ ಜಮೀನಿನಲ್ಲಿರುವ ಕೊಳೆಗೇರಿಗಳ ಅಭಿವೃದ್ಧಿಗೂ ಕ್ರಮ ತೆಗೆದುಕೊಳ್ಳಲಾಗುವುದು. ಜಮೀನು ಮಾಲೀಕರಿಗೆ ಸ್ಥಳೀಯವಾಗಿ ಇರುವ ಆಸ್ತಿ ತೆರಿಗೆಯ ಶೇ 300ರಷ್ಟು ಹಣವನ್ನು ಕೊಟ್ಟು ಆ ಜಮೀನನ್ನು ಇಲಾಖೆಯೇ ಪಡೆದು, ಅಲ್ಲಿ ಮನೆಗಳನ್ನು ನಿರ್ಮಿಸಲಿದೆ. ಅದರ ನಂತರ ಹಕ್ಕುಪತ್ರಗಳನ್ನು ನೀಡಲಾಗುವುದು ಎಂದು ವಿವರಿಸಿದರು.

ಈ ನೀತಿ ಜಾರಿಗೆ 5ರಿಂದ 8 ವರ್ಷಗಳ ಸಮಯ ಬೇಕಾಗಬಹುದು. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳಡಿ ಇರುವ ಹಣ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಕೊಳೆಗೇರಿಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.

ವಿರೋಧ: ಕೊಳೆಗೇರಿ ನೀತಿಗೆ ಹಣಕಾಸು ಮತ್ತು ನಗರಾಭಿವೃದ್ಧಿ ಇಲಾಖೆ ತೀವ್ರ ವಿರೋಧ ವ್ಯಕ್ತಪಡಿಸಿವೆ. ಈ ಹಿನ್ನೆಲೆಯಲ್ಲಿ ಹೊಸ ನೀತಿ ಬೇಡ ಎಂದೂ ಕೆಲ ಸಚಿವರು ಆಕ್ಷೇಪ ವ್ಯಕ್ತಪಡಿಸಿದ ಪ್ರಸಂಗವೂ ಸಂಪುಟ ಸಭೆಯಲ್ಲಿ ನಡೆಯಿತು.

ಇದೊಂದು ದೊಡ್ಡ ಯೋಜನೆಯಾಗಲಿದ್ದು, ಇದಕ್ಕೆ ಹಣಕಾಸಿನ ಮೂಲಗಳನ್ನು ಹುಡುಕಿಕೊಂಡಿಲ್ಲ.

12ನೇ ಪಂಚವಾರ್ಷಿಕ ಯೋಜನೆಯಲ್ಲೂ ಅವಕಾಶ ಕಲ್ಪಿಸಿಕೊಂಡಿಲ್ಲ. ಇಂತಹ ಸನ್ನಿವೇಶದಲ್ಲಿ ಈ ನೀತಿ ಜಾರಿ ಮಾಡುವುದು ಅಸಾಧ್ಯದ ಮಾತು ಎಂದೂ ಹಣಕಾಸು ಇಲಾಖೆ ಅಭಿಪ್ರಾಯ ತಿಳಿಸಿದೆ. ಬಡವರಿಗೆ ಮನೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ರಾಜೀವ್ ಆವಾಸ್ ಯೋಜನೆ (ರೇ) ಜಾರಿ ಮಾಡಿದೆ. ಇಂತಹ ಸಂದರ್ಭದಲ್ಲಿ ಹೊಸ ಯೋಜನೆ ಅಗತ್ಯ ಇರಲಿಲ್ಲ ಎಂದು ಹೇಳಿದೆ.

ನಗರಾಭಿವೃದ್ಧಿ ಇಲಾಖೆ ಕೂಡ ಈ ನೀತಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಇದಕ್ಕೆ ಸಂಬಂಧಿಸಿದ ಕಾನೂನು, ಆಡಳಿತಾತ್ಮಕ ವಿಷಯಗಳ ಕುರಿತು ತಕರಾರು ತೆಗೆದಿದೆ. ಹಕ್ಕು ಪತ್ರ ನೀಡುವುದಕ್ಕೂ ಅದು ವಿರೋಧ ವ್ಯಕ್ತಪಡಿಸಿದೆ. ಸರ್ಕಾರಿ ಆಸ್ತಿಯನ್ನು ಹೀಗೆ ನೀಡಿದರೆ, ಅದನ್ನು ಮಾರಾಟ ಮಾಡುವ ಸಾಧ್ಯತೆಯೂ ಇರುತ್ತದೆ. ಇದಕ್ಕೆ ಹೇಗೆ ಕಡಿವಾಣ ಹಾಕಬೇಕು ಎಂಬುದನ್ನು ತಿಳಿಸಿಲ್ಲ. ಇಷ್ಟೇ ಅಲ್ಲದೆ, ಖಾಸಗಿ ಜಮೀನುಗಳಲ್ಲಿನ ಕೊಳೆಗೇರಿಗಳ ಅಭಿವೃದ್ಧಿಗೂ ಮುನ್ನ ಅದರ ಮೂಲ ಮಾಲೀಕರಿಗೆ ಪರಿಹಾರ ನೀಡುವ ವ್ಯವಸ್ಥೆಯಲ್ಲೂ ಗೊಂದಲ ಇದೆ. ಟಿ.ಡಿ.ಆರ್ ಪದ್ಧತಿ ಜಾರಿಯಲ್ಲಿದ್ದು, ಅದಕ್ಕೆ ತದ್ವಿರುದ್ಧವಾಗಿ ಮತ್ತೊಂದು ನೀತಿ ಮಾಡುವುದು ಎಷ್ಟು ಸಮಂಜಸ ಎಂದೂ ಪ್ರಶ್ನೆ ಮಾಡಿದೆ.

ಗುತ್ತಿಗೆ ಆಧಾರದ ಮೇಲೆ ನೇಮಕ:

ನಕ್ಸಲ್‌ಪೀಡಿತ ಜಿಲ್ಲೆಗಳಾದ ಚಿಕ್ಕಮಗಳೂರು, ಉಡುಪಿ ಮತ್ತು ತುಮಕೂರು ಜಿಲ್ಲೆಗಳ 9 ತಾಲ್ಲೂಕುಗಳ 107 ಗ್ರಾಮ ಹಾಗೂ 709 ಉಪ ಗ್ರಾಮಗಳಲ್ಲಿ ಸೇವೆ ಸಲ್ಲಿಸುತ್ತಿರುವ ವಿವಿಧ ಇಲಾಖೆಗಳ ಸಿಬ್ಬಂದಿಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಸಂಪುಟ ಸಭೆ ನಿರ್ಧರಿಸಿದೆ.

ನಕ್ಸಲ್‌ಪೀಡಿತ ಪ್ರದೇಶಗಳಿಗೆ ವರ್ಗಾವಣೆಯಾದ ಸರ್ಕಾರಿ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಇದರಿಂದ ಆಡಳಿತದ ಮೇಲೆ ಪ್ರತಿಕೂಲ ಪರಿಣಾಮ ಆಗುತ್ತಿದೆ. ಹೀಗಾಗಿ ವಿವಿಧ ಇಲಾಖೆಗಳಿಗೆ ಸ್ಥಳೀಯರನ್ನು ಅರ್ಹತೆ ಅನುಸಾರ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಪ್ರಾಥಮಿಕ ಶಾಲಾ ಶಿಕ್ಷಕರು, ಕೃಷಿ ಸಹಾಯಕರು, ಅರಣ್ಯ ರಕ್ಷಕರು, ಗ್ರಾಮ ಸಹಾಯಕರು, ಅಂಗನವಾಡಿ ಕಾರ್ಯಕರ್ತರು, ಸರ್ಕಾರಿ ಆಸ್ಪತ್ರೆಗಳಲ್ಲಿನ ಎ.ಎನ್.ಎಂ ಕಾರ್ಯಕರ್ತರು, ನರ್ಸ್, ಆಶಾ ಕಾರ್ಯಕರ್ತೆಯರು, ಕುಡಿಯುವ ನೀರು ಸರಬರಾಜುದಾರರು, ಪಂಪ್‌ಸೆಟ್ ಮೆಕ್ಯಾನಿಕ್ ಸೇರಿದಂತೆ ಇತರ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ನೇಮಕ ಪ್ರಕ್ರಿಯೆಯನ್ನು ನಡೆಸಲಿದೆ.

ಕುಂದಾಪುರ, ಶೃಂಗೇರಿ, ಮೂಡಿಗೆರೆ, ಕೊಪ್ಪ, ಹೊಸನಗರ, ತೀರ್ಥಹಳ್ಳಿ, ಬೆಳ್ತಂಗಡಿ ಮತ್ತು ಪಾವಗಡ ತಾಲ್ಲೂಕಿನ ನಕ್ಸಲ್‌ಪೀಡಿತ ಗ್ರಾಮಗಳಿಗೆ ಮಾತ್ರ ಈ ತೀರ್ಮಾನ ಅನ್ವಯವಾಗಲಿದೆ. ಸರ್ಕಾರಿ ಸಿಬ್ಬಂದಿಯೇ ಈ ಭಾಗದಲ್ಲಿ ಕೆಲಸ ನಿರ್ವಹಿಸಲು ಒಪ್ಪಿ ಮುಂದೆ ಬಂದರೂ ಅಂತಹವರಿಗೆ ಆದ್ಯತೆ ಕೊಟ್ಟು ನಿಯೋಜನೆ ಮಾಡಲಾಗುವುದು ಎಂದು ಹೇಳಿದರು.

ವಿದ್ಯುತ್ ಖರೀದಿಗೆ ಒಪ್ಪಿಗೆ:

2010ರ ಸೆಪ್ಟೆಂಬರ್‌ನಿಂದ 2011ರ ಮೇ ತಿಂಗಳವರೆಗೆ ಪ್ರತಿನಿತ್ಯ 1,000 ಮೆಗಾವಾಟ್ ವಿದ್ಯುತ್ ಖರೀದಿ ಮಾಡಿದ್ದು, ಇದಕ್ಕೆ ರೂ 3,847 ಕೋಟಿ ಖರ್ಚು ಮಾಡಲಾಗಿದೆ. ಹೀಗೆ ಖರ್ಚು ಮಾಡಿದ್ದಕ್ಕೆ ಸಂಪುಟ ಸಭೆ ಘಟನೋತ್ತರ ಅನುಮೋದನೆ ನೀಡಿತು.

ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ), ವಿದ್ಯುತ್ ಪರಿಸ್ಥಿತಿ ನೋಡಿಕೊಂಡು 5,000 ದಶಲಕ್ಷ ಯೂನಿಟ್‌ವರೆಗೆ ಖರೀದಿಗೆ ಸಲಹೆ ನೀಡಿದೆ. ಈ ಪ್ರಕಾರ ಈ ಖರೀದಿ ಮಾಡಲಾಗಿದೆ. ಪ್ರತಿ ಯೂನಿಟ್‌ಗೆ ಕನಿಷ್ಠ ರೂ 3.75ರಿಂದ ಗರಿಷ್ಠ ರೂ 5.08 ಕೊಟ್ಟು ವಿದ್ಯುತ್ ಖರೀದಿ ಮಾಡಲಾಗಿದೆ. 2011-12ನೇ ಸಾಲಿನಲ್ಲಿ 990 ಮೆಗಾವಾಟ್ ವಿದ್ಯುತ್ ಖರೀದಿ ಮಾಡುತ್ತಿದ್ದು, ಪ್ರತಿ ಯೂನಿಟ್‌ಗೆ ಸರಾಸರಿ ರೂ 4.87 ನೀಡಲಾಗುತ್ತಿದೆ.

ಇದೇ ರೀತಿ ಪರಿಸ್ಥಿತಿ ನೋಡಿಕೊಂಡು 2013ರವರೆಗೂ ವಿದ್ಯುತ್ ಖರೀದಿ ಮಾಡಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.

ಇತರ ಪ್ರಮುಖ ತೀರ್ಮಾನಗಳು-

* `ಅರಸು~ ಅಥವಾ `ಅರಸ್~ ಜಾತಿಯನ್ನು ಹಿಂದುಳಿದ ವರ್ಗಗಳ 2(ಎ) ಪ್ರವರ್ಗಕ್ಕೆ ಸೇರಿಸಲು ತೀರ್ಮಾನ. ಈ ಜಾತಿಯವರು ಸುಮಾರು 40 ಸಾವಿರ ಇದ್ದಾರೆ. ಈ ಜಾತಿ 22/2/1977ರಲ್ಲಿ ಹಿಂದುಳಿದ ವರ್ಗಗಳ ಜಾತಿಯ ಪಟ್ಟಿಯಲ್ಲೇ ಇತ್ತು. ನಂತರ ಅದನ್ನು ಬದಲಿಸಲಾಗಿತ್ತು.

* ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಮಾಡುವ ಯೋಜನೆಗೆ ಕಳೆದ ಮೂರು ವರ್ಷಗಳಿಂದ ಹಣ ಕೊಟ್ಟಿಲ್ಲ. ಇದರ ಬಾಕಿ ರೂ 141.37 ಕೋಟಿ ಇದ್ದು, ತಕ್ಷಣ ಬಿಡುಗಡೆ ಮಾಡಲು ನಿರ್ಧಾರ. ಮುಂದಿನ ದಿನಗಳಲ್ಲಿ ಶುಲ್ಕ ಮರುಪಾವತಿಯನ್ನು ಯಾವ ರೀತಿ ಮಾಡಬೇಕು ಎಂಬುದರ ಬಗ್ಗೆ ಹೊಸದಾಗಿ ನಿಯಮ ರೂಪಿಸಲು ನಿರ್ಧರಿಸಲಾಗಿದೆ. ಆದಾಯದ ಮಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಶುಲ್ಕ ಮರುಪಾವತಿ ಮಾಡಲು ನಿರ್ಧರಿಸಲಾಗಿದೆ.

* ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಸೇರಿದ ಎರಡು ಎಕರೆ ಜಾಗದಲ್ಲಿ ರೂ 12 ಕೋಟಿ ವೆಚ್ಚದಲ್ಲಿ ಬಾಬು ಜಗಜೀವನರಾಮ್ ಭವನ ನಿರ್ಮಾಣಕ್ಕೂ ಸಂಪುಟ ಸಭೆ ಒಪ್ಪಿಗೆ ನೀಡಿದೆ.

* ಜಮ್ಮಾ ಬಾಣೆ ಜಾಗವನ್ನು ಹಿಡುವಳಿದಾರರಿಗೇ ಬಿಟ್ಟುಕೊಡುವ ಸಂಬಂಧದ ಮಸೂದೆ ವಿಧಾನಮಂಡಲ ಅಧಿವೇಶನದಲ್ಲಿ ಅಂಗೀಕಾರವಾಗಿದ್ದು, ಅದಕ್ಕೆ ಸಂಪುಟ ಸಭೆ ಘಟನೋತ್ತರ ಅನುಮೋದನೆ ನೀಡಿತು.

30ರಿಂದ ಅಧಿವೇಶನ

ಬೆಂಗಳೂರು: ವಿಧಾನಮಂಡಲ ಅಧಿವೇಶನವನ್ನು ಇದೇ 30ರಿಂದ 10 ದಿನಗಳ ಕಾಲ ನಡೆಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಜನವರಿ 30ರಂದು ನಡೆಯುವ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಅಂದಿನಿಂದ ಫೆಬ್ರುವರಿ 10ರವರೆಗೆ ಅಧಿವೇಶನ ನಡೆಯಲಿದೆ ಎಂದು ಸಚಿವ ಸುರೇಶ್‌ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.

Post Comments (+)