ಶುಕ್ರವಾರ, ನವೆಂಬರ್ 15, 2019
23 °C

ಕೊಳೆಗೇರಿ ಜನರು ಜಾಗೃತರಾಗಲು ಒತ್ತಾಯ

Published:
Updated:

ದಾವಣಗೆರೆ: ರಾಜ್ಯದಲ್ಲಿ ಅಸ್ತಿತ್ವ ಕಂಡ ಸರ್ಕಾರಗಳು ಕೊಳೆಗೇರಿ ನಾಗರಿಕರನ್ನು ನಿರ್ಲಕ್ಷಿಸುತ್ತಾ ಬಂದಿದ್ದು, ಕೊಳೆಗೇರಿ ಜನರ ಬದುಕು-ಬವಣೆ ಇನ್ನೂ ಸುಧಾರಣೆ ಕಂಡಿಲ್ಲ.ಕೊಳೆಗೇರಿ ಜನತೆ ಆಳುವ ಸರ್ಕಾರದ ಲಜ್ಜೆಗೇಡಿತನವನ್ನು ಖಂಡಿಸುವಂತಾಗಬೇಕು. ಸದ್ಯ ವಿಧಾನಸಭೆ ಚುನಾವಣೆ ಎದುರಾಗಿದ್ದು, ಅರ್ಹ ವ್ಯಕ್ತಿಗಳನ್ನು ಆಯ್ಕೆ ಮಾಡುವಲ್ಲಿ ಕೊಳೆಗೇರಿ ಜನರು ಇನ್ನಾದರೂ ಜಾಗ್ರತೆ ವಹಿಸಬೇಕು ಎಂದು ಮಾನವ ಹಕ್ಕುಗಳ ವೇದಿಕೆ ಸಂಚಾಲಕ ಎಲ್.ಎಚ್. ಅರುಣಕುಮಾರ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ  ಹೊರಡಿಸಿದ  ಪ್ರಣಾಳಿಕೆಯಲ್ಲಿ  ಕೊಳೆಗೇರಿ ಜನರ  ಪರವಾಗಿ  ಘೋಷಿಸಿದಂತಹ  ಯೋಜನೆಗಳು  ಜಾರಿಗೊಂಡಿಲ್ಲ. ಕೇಂದ್ರ ಸರ್ಕಾರದಿಂದ ಬಂದ ಅನುದಾನ ಐಎಚ್‌ಎಸ್‌ಡಿಪಿ ಮತ್ತು ಬಿಎಸ್‌ಯುಪಿ ಯೋಜನೆಗಳಲ್ಲಿ ಕೊಳೆಗೇರಿ ನಿವಾಸಿಗಳಿಗೆ ಮನೆ ನಿರ್ಮಿಸುವುದನ್ನು ಬಿಟ್ಟರೆ ಯಾವ  ಸೌಲಭ್ಯವನ್ನು ಸರ್ಕಾರ ಕಲ್ಪಿಸಿಲ್ಲ. ರಾಜೀವ್ ಆವಾಸ್ ಯೋಜನೆ ಜಾರಿಗೆ ಪೂರಕವಾದ ಸ್ಲಂ ನೀತಿಯನ್ನು ಮಾತ್ರ ರೂಪಿಸಿರುವ ಸರ್ಕಾರ, ಕೊಳೆಗೇರಿ ಅಭಿವೃದ್ಧಿ ಮಂಡಳಿ ಕಾಯಿದೆಯನ್ನು ಸಹ ಜಾರಿಗೊಳಿಸಿಲ್ಲ. ಕೊಳೆಗೇರಿ  ನಿವಾಸಿಗಳನ್ನು  ಸುಧಾರಿಸು ವಂತಹ ನೀತಿ ರೂಪಿಸುವಲ್ಲಿ ಸರ್ಕಾರ ಗಳು ವಿಫಲಗೊಂಡಿವೆ. ಬಿಜೆಪಿ ಸರ್ಕಾರ ಒಬ್ಬ ವ್ಯಕ್ತಿಗೆ ತಿಂಗಳಿಗೆ ಕೇವಲ 4 ಕೆ.ಜಿ. ಅಕ್ಕಿ ಸಾಕೆಂದು ಹೇಳುವ ಮೂಲಕ ಪಡಿತರ ವ್ಯವಸ್ಥೆಯನ್ನು ಸರ್ವನಾಶ ಮಾಡಿದೆ ಎಂದು ಸರ್ಕಾರದ ವಿರುದ್ಧ ಅವರು ಹರಿಹಾಯ್ದರು.`ಭೂ ಒಡೆತನ , ಪ್ರತ್ಯೇಕ ಸಚಿವಾಲಯ ಘೋಷಣೆ, ಜನಗಣತಿ ಆಧಾರ ಮೇಲೆ ಕೊಳೆಗೇರಿ ನಿವಾಸಿಗಳಿಗೆ ಬಜೆಟ್ ನಿಗದಿ, ಪಡಿತರ ವ್ಯವಸ್ಥೆ ಸಾರ್ವತ್ರೀಕರಣ, ನಗರ ಭೂಮಿತಿ ಕಾಯ್ದೆ ಪುನರ್ ಜಾರಿ ...' ಇತರೆ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಅಭ್ಯರ್ಥಿಗಳಿಗೆ ಮತ ನೀಡುವಂತೆ ಅವರು ಸಲಹೆ ನೀಡಿದರು.ಸ್ಲಂ ಜನಾಂದೋಲನಾ ಕರ್ನಾಟಕ ಜಿಲ್ಲಾ ಸಮಿತಿ ಸಂಚಾಲಕ ಸಿದ್ಲಿಂಗಮೂರ್ತಿ, ಷಮಿಮ್‌ಬಾನು, ದಾವಣಗೆರೆ ನಗರ ಕೊಳಚೆ ನಿವಾಸಿಗಳ ಸಂಘದ ಗೌರವ ಅಧ್ಯಕ್ಷ ಪ್ರಭುಲಿಂಗಪ್ಪ, ಸಾಹಿತಿ ಮುದ್ದು ವೀರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)