ಕೊಳೆತ ಸ್ಥಿತಿಯಲ್ಲಿ ತರುಣಿ ಶವ ಪತ್ತೆ

7

ಕೊಳೆತ ಸ್ಥಿತಿಯಲ್ಲಿ ತರುಣಿ ಶವ ಪತ್ತೆ

Published:
Updated:

ದೇವನಹಳ್ಳಿ: ಪಟ್ಟಣದ ಸೂಲಿಬೆಲೆ ರಸ್ತೆಯಲ್ಲಿರುವ ಗಜೇಂದ್ರ ಲೇ ಔಟ್‌ನಲ್ಲಿ ಹೊರರಾಜ್ಯದ ಯುವತಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.ಮೃತ ಯುವತಿ ಸುಮಾರು 22 ವರ್ಷ ಇರಬಹುದು ಎಂದು ಅಂದಾಜಿಸಲಾಗಿದೆ. `ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶವವನ್ನು ಗಮನಿಸಿದರೆ ಘಟನೆ ನಡೆದು ಒಂದು ವಾರವೇ ಕಳೆದಿರಬಹುದು' ಎಂದು ಸರ್ಕಲ್ ಇನ್‌ಸ್ಪೆಕ್ಟರ್ ಕನಕಕುಮಾರ್ `ಪ್ರಜಾವಾಣಿ'ಗೆ ತಿಳಿಸಿದರು.ಘಟನಾ ಸ್ಥಳದಲ್ಲಿ ಕೆಲವು ದೂರವಾಣಿ ಸಂಖ್ಯೆಗಳು ದೊರೆತಿದ್ದು ಈಕೆ ಕೋಲ್ಕತ್ತಾ ಮೂಲದ ಯುವತಿಯಾಗಿರಬಹುದು ಎಂದು ಶಂಕಿಸಲಾಗಿದೆ.ಸೂಲಿಬೆಲೆ ರಸ್ತೆಯಲ್ಲಿರುವ ಗಜೇಂದ್ರ ಲೇ ಔಟ್‌ನಲ್ಲಿರುವ ಕೃಷ್ಣಪ್ಪ ಮತ್ತು ಜಯಮ್ಮ ಎಂಬುವರ ಮಾಲೀಕತ್ವದ ಮೂರನೇ ಅಂತಸ್ತಿನ ಮನೆಯಲ್ಲಿ ಈ ಯುವತಿ ಬಾಡಿಗೆ ಇದ್ದರು. ಈಕೆಯ ಜೊತೆ ರಾಜು ಎಂಬ ಹೆಸರಿನ ಇನ್ನೊಬ್ಬ ತರುಣನೂ ಇದ್ದ. ಯುವತಿ ಮನೆಬಿಟ್ಟು ಹೊರಗೆ ಎಲ್ಲೂ ಹೋಗುತ್ತಿರಲಿಲ್ಲ. ಯುವಕ ಯಾವಾಗಲೋ ಹೊರಗೆ ಹೋಗುತ್ತಿದ್ದ ಹಾಗು ಬರುತ್ತಿದ್ದ ಎನ್ನಲಾಗಿದೆ.ಮನೆ ಮಾಲೀಕರು ಹೇಳುವಂತೆ, `ಈ ಯುವತಿ ಈ ಮನೆಯನ್ನು ಆರೇಳು ತಿಂಗಳ ಹಿಂದೆ ಬಾಡಿಗೆ ಪಡೆದಿದ್ದರು. ಸ್ಥಳೀಯ ನಿವಾಸಿ ಅಕ್ಬರ್ ಎಂಬುವನು ಇವರಿಗೆ ಈ ಮನೆ ಕೊಡಿಸಿದ್ದ. 10 ಸಾವಿರ ಮುಂಗಡ ಹಾಗೂ 3 ಸಾವಿರ ರೂಪಾಯಿ ಬಾಡಿಗೆ ಕೊಡುತ್ತಿದ್ದರು. ಯುವಕ ಬೆಂಗಳೂರಿನಲ್ಲಿ ಕೆಲಸಕ್ಕೆ ಹೋಗುತ್ತಿದ್ದ' ಎಂದು ಹೇಳಲಾಗಿದೆ.ಮನೆಯಲ್ಲಿ ದೊರೆತ ಕೆಲವು ಚೀಟಿಗಳಲ್ಲಿ ಬಂಗಾಳಿ ಅಕ್ಷರಗಳಲ್ಲಿದ್ದ ಕೈಬರಹ ಮತ್ತು ಕೆಲವು ಫೋನ್ ನಂಬರ್‌ಗಳು ಕಂಡು ಬಂದಿವೆ. ಈ ನಂಬರ್‌ಗಳಿಗೆ ಕನಕಕುಮಾರ್ ಫೋನ್ ಮಾಡಿದಾಗ ಕರೆಗಳೂ ಸಂಪರ್ಕ ಸಾಧಿಸಲಿಲ್ಲ.ಹೆಚ್ಚಿನ ಬಾಡಿಗೆಯ ಆಸೆ: `ದೇವನಹಳ್ಳಿಗೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹತ್ತಿರ ಇರುವುದರಿಂದ ಹೊರ ರಾಜ್ಯಗಳಿಂದ ಬರುವವರ ಸಂಖ್ಯೆ ಈ ಭಾಗದಲ್ಲಿ ದಿನೇ ದಿನೇ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಸ್ಥಳೀಯರು ಪರಭಾಷಿಕರಿಗೆ ಹಾಗೂ ಇತರರಿಗೆ ಮನೆಗಳನ್ನು ಬಾಡಿಗೆ ನೀಡುವಾಗ ಕಟ್ಟುನಿಟ್ಟಿನ ನಿಯಮಗಳನ್ನು ಅನುಸರಿಸಬೇಕು. ಬಾಡಿಗೆದಾರರ ಚಲನವಲನಗಳ ಬಗ್ಗೆ ನಿಗಾ ಇರಿಸಬೇಕು ಎಂದು ಸೂಚಿಸಿದ್ದೇವೆ. ಈಗಾಗಲೇ ಅನೇಕ ಬಾರಿ ಸಭೆ ನಡೆಸಿ ಈ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗಿದೆ. ಆದರೂ ಬಹುತೇಕ ಮನೆ ಮಾಲಿಕರು ಈ ವಿಷಯದಲ್ಲಿ ಎಚ್ಚರ ವಹಿಸುತ್ತಿಲ್ಲ. ಹೆಚ್ಚಿನ ಬಾಡಿಗೆಯ ಆಸೆಗೆ ಬಲಿಯಾಗಿ ಅನವಶ್ಯಕ ತೊಂದರೆ ಎದುರು ಹಾಕಿಕೊಳ್ಳುತ್ತಿದ್ದಾರೆ' ಎಂದು ಕನಕಕುಮಾರ್ ತಿಳಿಸಿದರು. ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry