ಕೊಳೆ ಪೂರ್ತಿ ತೊಳೆದುಬಿಡಿ

7

ಕೊಳೆ ಪೂರ್ತಿ ತೊಳೆದುಬಿಡಿ

Published:
Updated:

ಕರ್ನಾಟಕ ಲೋಕಸೇವಾ ಆಯೋಗ  (ಕೆಪಿಎಸ್‌ಸಿ) 2011ರಲ್ಲಿ ನಡೆಸಿದ ಗೆಜೆಟೆಡ್‌  ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವುದು ಸಿಐಡಿ ತನಿಖೆಯಿಂದ ದೃಢಪಟ್ಟಿದೆ. ಅದನ್ನು ಒಪ್ಪಿಕೊಂಡಿರುವ ರಾಜ್ಯ ಸರ್ಕಾರ, ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನ ಮತ್ತು ಮರು ಸಂದರ್ಶನ ನಡೆಸಲು ನಿರ್ಧರಿಸಿದೆ.



ಕೆಪಿಎಸ್‌ಸಿ ಸುಧಾರಣೆಗೆ ಸರ್ಕಾರ ಇರಿಸಿದ ಈ ಮೊದಲ ಹೆಜ್ಜೆ ಸ್ವಾಗತಾರ್ಹ.  ಆದರೆ,  ‘ಕೊಳೆ’ ತೊಳೆವ ಕೆಲಸ ಇಷ್ಟಕ್ಕೇ ನಿಲ್ಲಬಾರದು.   ಅಕ್ರಮಗಳಲ್ಲಿ ಭಾಗಿಯಾದ ಕೆಪಿಎಸ್‌ಸಿ ಅಧ್ಯಕ್ಷರು, ಸದಸ್ಯರು ಮತ್ತು ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.



ಆಯೋಗದ ಸುಧಾರಣೆ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಿರುವ ಪಿ.ಸಿ. ಹೋಟಾ ಸಮಿತಿಯ ಶಿಫಾರಸಿನ ಆಧಾರದಲ್ಲಿ ಮರು ಮೌಲ್ಯಮಾಪನ ಮತ್ತು ಮರು ಸಂದರ್ಶನವನ್ನು ನಡೆಸುವುದಾಗಿ ಸರ್ಕಾರ ಹೇಳಿದೆ. ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಆಯೋಗದ  ಹಾಲಿ ಸದಸ್ಯರು ಮತ್ತು ಸಿಬ್ಬಂದಿಯನ್ನು ಈ ಪ್ರಕ್ರಿಯೆಯಿಂದ ಸಂಪೂರ್ಣವಾಗಿ ದೂರವಿಡಬೇಕು. ಮೌಲ್ಯಮಾಪನ ಮತ್ತು ಸಂದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲೇಬೇಕು. ಅದರಲ್ಲಿ  ವಿಷಯ ತಜ್ಞರಿದ್ದರೆ ಮತ್ತೂ ಒಳ್ಳೆಯದು. ಅಲ್ಲದೇ ಹೋಟಾ  ಸಮಿತಿಯ ಎಲ್ಲಾ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಬೇಕು.



ಕೆಪಿಎಸ್‌ಸಿ ಸದಸ್ಯರ ನೇಮಕಾತಿಗೆ ಆಯ್ಕೆ ಸಮಿತಿ ರಚಿಸಬೇಕು ಎಂಬ ಶಿಫಾರಸನ್ನು ಸಾಮಾಜಿಕ ನ್ಯಾಯದ ಹೆಸರಿನಲ್ಲಿ ತಿರಸ್ಕರಿಸಿರುವುದು  ಸಮರ್ಥನೀಯವಲ್ಲ. ಇದು ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾಡಿದ ಅನ್ಯಾಯ. ಸಾಮಾಜಿಕ ನ್ಯಾಯ  ಪಾಲನೆ ಆಗಬೇಕಾಗಿರುವುದು, ಕೆಪಿಎಸ್‌ಸಿಗೆ ನೇಮಕಗೊಳ್ಳುವ ಬೆರಳೆಣಿಕೆಯಷ್ಟು ಸದಸ್ಯರ ವಿಷಯದಲ್ಲಿ  ಅಲ್ಲ. ಸಾವಿರಾರು ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸುವ ನೇಮಕಾತಿ ಪ್ರಕ್ರಿಯೆಯಲ್ಲಿ. ಪ್ರಭಾವ, ಹಣ ಇಲ್ಲದ ತಳ ಸಮುದಾಯಗಳ ಪ್ರತಿಭಾವಂತರಿಗೆ ಉದ್ಯೋಗ ದೊರಕಿಸಿಕೊಡುವುದೇ   ಸಾಮಾಜಿಕ ನ್ಯಾಯ. ಅದನ್ನು  ಎತ್ತಿಹಿಡಿಯಬೇಕಾದುದು ಸರ್ಕಾರದ ಕರ್ತವ್ಯ.



ಕೆಪಿಎಸ್‌ಸಿ ಕಾರ್ಯಶೈಲಿ ಸುಧಾರಣೆಗೆ ಅರೆಮನಸ್ಸಿನ ಪ್ರಯತ್ನದಿಂದ ಹೆಚ್ಚು ಪ್ರಯೋಜನವಾಗದು. ಕೆಪಿಎಸ್‌ಸಿ ಎಂಬುದು ಭ್ರಷ್ಟಾಚಾರದ ಗಣಿ. ಈ ಅಂಶ ಪದೇ ಪದೇ ಸಾಬೀತಾಗಿದೆ. ಅದಕ್ಕೆ  ಮತ್ತೆ ಜೀವದಾನ ನೀಡುವುದೆಂದರೆ ಇನ್ನಷ್ಟು ಕೊಳೆಯಲು ಬಿಡುವುದು ಎಂದೇ ಅರ್ಥ.



ಆಡಳಿತದಲ್ಲಿ ಹೆಮ್ಮರವಾಗಿ ಬೆಳೆದಿರುವ ಭ್ರಷ್ಟಾಚಾರಕ್ಕೆ ಒಂದು ರೀತಿಯಲ್ಲಿ ಇದೇ ಮೂಲ. ಅದನ್ನು ಮೂಲೋತ್ಪಾಟನೆ ಮಾಡಬೇಕು. ಸುಧಾರಣೆ  ಆಮೂಲಾಗ್ರವಾಗಿರಬೇಕು. ಅಂತಹ  ಇಚ್ಛಾಶಕ್ತಿಯನ್ನು ರಾಜ್ಯ ಸರ್ಕಾರ ಪ್ರದರ್ಶಿಸಬೇಕು.



ಮರುಮೌಲ್ಯಮಾಪನ ಮತ್ತು ಮರು ಸಂದರ್ಶನವನ್ನು ಆದಷ್ಟು ಬೇಗ ನಡೆಸಿ,  ನೇಮಕಾತಿ ಪ್ರಕ್ರಿಯೆಯನ್ನು ವಿಳಂಬವಿಲ್ಲದೇ ಪೂರ್ಣಗೊಳಿಸಬೇಕು.  1998, 1999 ಹಾಗೂ 2004ರಲ್ಲಿ  ನಡೆದ ನೇಮಕಾತಿಗಳಲ್ಲೂ ಅಕ್ರಮಗಳು ನಡೆದಿರುವುದು ಬಯಲಾಗಿದೆ. ಈ ಪ್ರಕರಣದ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆದಿದೆ.



ಹೈಕೋರ್ಟ್ ಈಗ ಸತ್ಯಶೋಧನಾ ಸಮಿತಿಯೊಂದನ್ನು ರಚಿಸಿದೆ. ಈ ಮೂರು ವರ್ಷಗಳಲ್ಲಿ ಅಕ್ರಮವಾಗಿ ನೇಮಕಗೊಂಡವರನ್ನು ಮುಲಾಜಿಲ್ಲದೇ ಕೆಲಸದಿಂದ ವಜಾಗೊಳಿಸಬೇಕು. ಅಕ್ರಮದಲ್ಲಿ ಭಾಗಿಯಾದ ಸದಸ್ಯರಿಗೆ, ಅಧಿಕಾರಿಗಳಿಗೆ, ಕೆಪಿಎಸ್‌ಸಿ ಸಿಬ್ಬಂದಿಗೆ ಜೈಲಿನ ದಾರಿ ತೋರಿಸಬೇಕು.  ಈ ಬಗ್ಗೆ  ಸರ್ಕಾರ ಜರೂರಾಗಿ ನಿರ್ಧಾರ ಕೈಗೊಳ್ಳಲಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry