ಸೋಮವಾರ, ಮೇ 16, 2022
30 °C

ಕೊಳ್ಳೆ ಹೊಡೆದವರಿಗೆ ಶಿಕ್ಷೆ ಆಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷ್ಣಾ ಮೇಲ್ದಂಡೆ ಯೋಜನೆಯ ಕೆಲ ಕಾಮಗಾರಿಗಳನ್ನು ತುಂಡು  ಗುತ್ತಿಗೆ ಮೂಲಕ ನಿರ್ವಹಿಸಿ ಕೋಟ್ಯಂತರ ರೂಪಾಯಿ ಹಣ ಲೂಟಿ ಹೊಡೆದ ಹಗರಣಕ್ಕೆ ಮತ್ತೆ ಜೀವಬಂದಿದೆ.

1995-98ರ ಅವಧಿಯಲ್ಲಿ ನಡೆದ ತುಂಡು ಗುತ್ತಿಗೆ ಅಕ್ರಮಗಳ ತನಿಖೆಗೆ ರಾಜ್ಯ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಕೆಯಾಗಿತ್ತು. ವಿಚಾರಣೆ ನಡೆಸಿದ ಹೈಕೋರ್ಟ್ ಅರ್ಜಿದಾರರಿಗೆ ಸರ್ಕಾರಕ್ಕೆ ದೂರು ಸಲ್ಲಿಸುವಂತೆ ಸೂಚನೆ ನೀಡಿತ್ತು.ಅರ್ಜಿದಾರರ ದೂರಿನ ಅನ್ವಯ ಸರ್ಕಾರ ತನಿಖೆಯನ್ನು ಸಿಐಡಿ ಪೊಲೀಸರಿಗೆ ಒಪ್ಪಿಸಿತ್ತು. ಪ್ರಾಥಮಿಕ ತನಿಖೆಯಲ್ಲೇ ತುಂಡು ಗುತ್ತಿಗೆಯಲ್ಲಿ ಅವ್ಯವಹಾರ ನಡೆದಿರುವುದು ಕಂಡುಬಂದಿದೆ.ಸರ್ಕಾರಿ ಅಧಿಕಾರಿಗಳು, ಗುತ್ತಿಗೆದಾರರು ಮತ್ತು ಸರ್ಕಾರೇತರ ವ್ಯಕ್ತಿಗಳು ಶಾಮೀಲಾಗಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಭಾರೀ ಹಣ ಕೊಳ್ಳೆ ಹೊಡೆದಿರುವುದನ್ನು ಖಚಿತಪಡಿಸಿಕೊಂಡು ಇನ್ನೂ ಹೆಚ್ಚಿನ ತನಿಖೆಗಾಗಿ ಸಿಐಡಿ ಪೊಲೀಸರು ದೂರು ದಾಖಲಿಸಿದ್ದಾರೆ.ರಾಜ್ಯದ ಜನರು ಮರೆತೇಹೋಗಿದ್ದ ಈ ದೊಡ್ಡ ಹಗರಣದ ಮರುತನಿಖೆಗೆ ಸಿಐಡಿ ಪೊಲೀಸರು ಮುಂದಾಗಿರುವುದು ಅತ್ಯಂತ ಸ್ವಾಗತಾರ್ಹ ಬೆಳವಣಿಗೆ. ರಾಜಕೀಯ ಅಧಿಕಾರ ಬಳಸಿಕೊಂಡು ತುಂಡು ಗುತ್ತಿಗೆ ಅವ್ಯವಹಾರವನ್ನು ಮುಚ್ಚಿ ಹಾಕಲಾಗಿತ್ತು.

 

ಜನರ ತೆರಿಗೆ ಹಣವನ್ನು ಕೊಳ್ಳೆ ಹೊಡೆದ ವ್ಯಕ್ತಿಗಳು ಎಷ್ಟೇ ದೊಡ್ಡವರಿರಲಿ ಅವರಿಗೆ ಶಿಕ್ಷೆ ಆಗಲೇಬೇಕು. ಇದು ಹಳೆಯ ಪ್ರಕರಣ, ಈಗ ಅದರ ತನಿಖೆ ನಡೆಸುವುದರ ಹಿಂದೆ ರಾಜಕೀಯ ದುರುದ್ದೇಶವಿದೆ ಎಂಬ ಟೀಕೆಗಳು ಕೇಳಿ ಬಂದಿವೆ. ಸರ್ಕಾರ ಅಂತಹ ಟೀಕೆಗಳಿಗೆ ಗಮನ ಕೊಡಬೇಕಿಲ್ಲ.ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಸಮರ ಆರಂಭವಾಗಿದೆ. ಲೋಕಾಯುಕ್ತ ವ್ಯವಸ್ಥೆ ಜಾರಿಗೆ ಬಂದ ಮೇಲೆ ಹಲವಾರು ಭ್ರಷ್ಟಾಚಾರದ ಪ್ರಕರಣಗಳು ಬೆಳಕಿಗೆ ಬಂದಿವೆ. ವಿವಿಧ ಪ್ರಕರಣಗಳ ತನಿಖೆ ನ್ಯಾಯಾಲಯಗಳಲ್ಲಿ ನಡೆಯುತ್ತಿದೆ. ಅಕ್ರಮಗಳಲ್ಲಿ ಭಾಗಿಯಾದ ರಾಜಕೀಯ ಮುಖಂಡರು ಜೈಲು ಸೇರಿದ್ದಾರೆ. ಇನ್ನೂ ಹಲವರು ಜೈಲಿಗೆ ಹೋಗುವ ನಿರೀಕ್ಷೆಯೂ ಇದೆ.ಹಗರಣಗಳ ತನಿಖೆಯ ವಿಷಯದಲ್ಲಿ ತಾರತಮ್ಯಕ್ಕೆ ಅವಕಾಶ ಇರಬಾರದು. ಹಳೆಯ ಪ್ರಕರಣಗಳ ತನಿಖೆಯನ್ನು ಕೈಬಿಡಬಾರದು. ಹಿಂದಿನ ಸರ್ಕಾರಗಳ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ ಪ್ರಕರಣಗಳ ಬಗ್ಗೆ ಈಗ ತನಿಖೆ ನಡೆಸುವ ಅಗತ್ಯವಿದೆ. ಅಂತೆಯೇ ಅಕ್ರಮ ಗಣಿಗಾರಿಕೆ ಕುರಿತು ಬಯಲಿಗೆ ಬಂದಿರುವ ಹೊಸ ಪ್ರಕರಣಗಳ ತನಿಖೆಗಳಿಗೆ ತಡೆ ಒಡ್ಡಬಾರದು.

 

ಸರ್ಕಾರಿ ಭೂಮಿ ಕಬಳಿಕೆ  ಕುರಿತು ಎ.ಟಿ ರಾಮಸ್ವಾಮಿ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಬಾಲಸುಬ್ರಹ್ಮಣಿಯನ್ ಸಮಿತಿಗಳು ಕೂಲಂಕಷ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿವೆ.ಈ ವರದಿಗಳ ಬಗ್ಗೆ ಹೆಚ್ಚಿನ ತನಿಖೆ ಹಾಗೂ ಕಾನೂನು ಕ್ರಮಕ್ಕೆ ಸರ್ಕಾರ ಮುಂದಾಗಬೇಕು. ಮಾದರಿ ರಾಜ್ಯ ಎಂದೇ ಹೆಸರಾಗಿದ್ದ ಕರ್ನಾಟಕಕ್ಕೆ ಈಗ ಭ್ರಷ್ಟ ಹಾಗೂ ಅಕ್ರಮ ವ್ಯವಹಾರಗಳ ರಾಜ್ಯ ಎಂಬ ಕೆಟ್ಟ ಹೆಸರು ಬಂದಿದೆ. ಎಲ್ಲ ಬಗೆಯ ಕೊಳಕನ್ನೂ ತೊಳೆಯುವ ಕೆಲಸಕ್ಕೆ ಸರ್ಕಾರ ಮುಂದಾಗಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.