ಮಂಗಳವಾರ, ನವೆಂಬರ್ 19, 2019
24 °C

ಕೊಳ್ಳೇಗಾಲದಲ್ಲಿ `ಬಲಗೈ' ಪ್ರಾಬಲ್ಯ

Published:
Updated:
ಕೊಳ್ಳೇಗಾಲದಲ್ಲಿ `ಬಲಗೈ' ಪ್ರಾಬಲ್ಯ

ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ, ಪರಿಶಿಷ್ಟ ಜಾತಿಗೆ ಮೀಸಲಾದ ಏಕೈಕ ವಿಧಾನಸಭಾ ಕ್ಷೇತ್ರ. ಆರಂಭದಿಂದಲೂ ಮೀಸಲು ಕ್ಷೇತ್ರವಾಗಿಯೇ ಉಳಿದಿದೆ. ಪರಿಶಿಷ್ಟ ಜಾತಿಯ ಉಪ ಜಾತಿಯಾದ `ಬಲಗೈ' ಸಮುದಾಯದ ಜನಪ್ರತಿನಿಧಿಗಳೇ ಇಂದಿಗೂ ಶಾಸನಸಭೆಗೆ ಆಯ್ಕೆಯಾಗುತ್ತಿರುವುದು ಈ ಕ್ಷೇತ್ರದ ವೈಶಿಷ್ಟ್ಯ.`ಮೈಸೂರು ಹುಲಿ' ಟಿಪ್ಪು ಸುಲ್ತಾನ್ ಪತನದ ನಂತರ ಕೊಳ್ಳೇಗಾಲ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿತು. 1956ರವರೆಗೂ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಗೆ ಸೇರಿತ್ತು. ರಾಜ್ಯಗಳ ಪುನರ್ ವಿಂಗಡಣೆ ಬಳಿಕ ಆಗಿನ ಮೈಸೂರು ರಾಜ್ಯಕ್ಕೆ ಸೇರಿತು. ಹೀಗಾಗಿ, 1952ರ ಪ್ರಥಮ ಚುನಾವಣೆಯಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ಇರಲಿಲ್ಲ.1957ರ ಚುನಾವಣೆಯಲ್ಲಿ ಕೊಳ್ಳೇಗಾಲ (ದ್ವಿಸದಸ್ಯ) ಕ್ಷೇತ್ರವಾಗಿ ರೂಪುಗೊಂಡಿತು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಟಿ.ಪಿ. ಬೋರಯ್ಯ ಹಾಗೂ ಕೆಂಪಮ್ಮ   (ಪರಿಶಿಷ್ಟ ಜಾತಿ ವಿಭಾಗ) ಶಾಸನಸಭೆ ಪ್ರವೇಶಿಸಿದರು. ಬೋರಯ್ಯ ಅವರದು ಮಾತ್ರ ಒಕ್ಕಲಿಗ ಸಮುದಾಯ. ಜಿಲ್ಲೆಯ ಪ್ರಥಮ ದಲಿತ ಶಾಸಕಿ ಕೆಂಪಮ್ಮ ಅವರದು `ಬಲಗೈ' ಸಮುದಾಯ.1962- ಬಿ. ಬಸವಯ್ಯ(ಕಾಂಗ್ರೆಸ್), 1967- ಬಿ. ಬಸವಯ್ಯ(ಕಾಂಗ್ರೆಸ್), 1972-    ಎಂ. ಸಿದ್ದಮಾದಯ್ಯ (ಕಾಂಗ್ರೆಸ್), 1978- ಎಂ. ಸಿದ್ದಮಾದಯ್ಯ       (ಕಾಂಗ್ರೆಸ್- ಇಂದಿರಾ), 1983- ಬಿ. ಬಸವಯ್ಯ (ಜನತಾಪಕ್ಷ), 1985- ಬಿ. ಬಸವಯ್ಯ(ಜನತಾಪಕ್ಷ), 1989- ಎಂ. ಸಿದ್ದಮಾದಯ್ಯ(ಕಾಂಗ್ರೆಸ್), 1994- ಎಸ್. ಜಯಣ್ಣ(ಜನತಾದಳ), 1999- ಜಿ.ಎನ್. ನಂಜುಂಡಸ್ವಾಮಿ(ಕಾಂಗ್ರೆಸ್), 2004- ಎಸ್. ಬಾಲರಾಜು (ಪಕ್ಷೇತರ) ಹಾಗೂ 2008ರ ವಿಧಾನಸಭಾ ಚುನಾವಣೆಯಲ್ಲಿ ಆರ್. ಧ್ರುವನಾರಾಯಣ    (ಕಾಂಗ್ರೆಸ್) ಜಯಭೇರಿ ಬಾರಿಸಿದರು. 2009ರ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕೆ ಇಳಿದ ಜಿ.ಎನ್. ನಂಜುಂಡಸ್ವಾಮಿ ಗೆಲುವು ಸಾಧಿಸಿದರು. ಈ ಎಲ್ಲರೂ `ಬಲಗೈ' ಸಮುದಾಯಕ್ಕೆ ಸೇರಿರುವುದು ವಿಶೇಷ.ಪ್ರಸ್ತುತ ಕ್ಷೇತ್ರದಲ್ಲಿ 1,88,556 ಮತದಾರರು ಇದ್ದಾರೆ. ಇದರಲ್ಲಿ ಅತಿಹೆಚ್ಚಿನ ಮತದಾರರು ಪರಿಶಿಷ್ಟ ಜಾತಿಗೆ ಸೇರಿದ್ದಾರೆ. ಉಪ ಜಾತಿಗಳಲ್ಲಿ `ಬಲಗೈ' ಸಮುದಾಯದ ಪ್ರಾಬಲ್ಯವೇ ಹೆಚ್ಚು. ಹೀಗಾಗಿ, ಐದೂವರೆ ದಶಕದ ಕೊಳ್ಳೇಗಾಲ ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ `ಬಲಗೈ' ಸಮುದಾಯದ ಹಿಡಿತ ಬಿಗಿಯಾಗಿದೆ. ಚುನಾವಣೆ ವೇಳೆ ರಾಜಕೀಯ ಪಕ್ಷಗಳು ಕೂಡ ಟಿಕೆಟ್ ಹಂಚಿಕೆಯಲ್ಲಿ ಸಿದ್ಧಸೂತ್ರ ಪಾಲಿಸುತ್ತಿವೆ. ಪರಿಶಿಷ್ಟ ಜಾತಿಯಲ್ಲಿ `ಬಲಗೈ' ಸಮುದಾಯ ಹೊರತುಪಡಿಸಿ ಉಳಿದ ಉಪ ಜಾತಿಯ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಪ್ರಯೋಗಕ್ಕೆ ಅಪ್ಪಿತಪ್ಪಿಯೂ ಮುಂದಾಗುವುದಿಲ್ಲ. ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯುವ ಪಕ್ಷೇತರರು ಕೂಡ `ಬಲಗೈ' ಸಮುದಾಯ ಪ್ರತಿನಿಧಿಸುತ್ತಿರುವುದು ಈ ಕ್ಷೇತ್ರದ ವಿಶೇಷತೆ.ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲೂ `ಬಲಗೈ' ಸೂತ್ರ ಬದಲಾಗುವ ಲಕ್ಷಣ ಗೋಚರಿಸುತ್ತಿಲ್ಲ. ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಈಗಾಗಲೇ ಟಿಕೆಟ್ ಹಂಚಿಕೆಯಲ್ಲಿ ಸಿದ್ಧಸೂತ್ರಕ್ಕೆ ಶರಣಾಗಿವೆ.`ಕೆಜೆಪಿ'ದಿಂದ ಎಸ್. ಬಾಲರಾಜು ಹಾಗೂ ಕಾಂಗ್ರೆಸ್‌ನಿಂದ ಎಸ್. ಜಯಣ್ಣ ಅಖಾಡಕ್ಕೆ ಇಳಿದಿದ್ದಾರೆ. ಈ ಇಬ್ಬರೂ ಒಂದು ಬಾರಿ ಕ್ಷೇತ್ರದಲ್ಲಿ ಶಾಸಕರಾಗಿ ಸೇವೆಸಲ್ಲಿಸಿದ್ದಾರೆ. ಪುನರಾಯ್ಕೆ ಬಯಸಿರುವ ಜಿ.ಎನ್. ನಂಜುಂಡಸ್ವಾಮಿ ಬಿಜೆಪಿಯಿಂದ ಕಣಕ್ಕೆ ಇಳಿದಿದ್ದಾರೆ. ಈ ಮೂವರು ಕೂಡ `ಬಲಗೈ' ಸಮುದಾಯದವರಾಗಿದ್ದಾರೆ.

ಪ್ರತಿಕ್ರಿಯಿಸಿ (+)