ಶುಕ್ರವಾರ, ನವೆಂಬರ್ 22, 2019
27 °C
`ನಿವೃತ್ತಿ ವಿಚಾರದಲ್ಲಿ ಸಚಿನ್ ಸ್ವತಂತ್ರರು'

ಕೊಹ್ಲಿಗೆ ರಿಚರ್ಡ್ಸ್ ಶ್ಲಾಘನೆ

Published:
Updated:

ನವದೆಹಲಿ (ಪಿಟಿಐ): ಭಾರತದ ಯುವ ಕ್ರಿಕೆಟಿಗ ವಿರಾಟ್ ಕೊಹ್ಲಿ, ವೆಸ್ಟ್ ಇಂಡೀಸ್‌ನ  ಕ್ರಿಕೆಟ್ ದಂತಕತೆ ವಿವಿಯನ್ ರಿಚರ್ಡ್ಸ್ ಅವರಿಂದ ಶ್ಲಾಘನೆಗೆ ಪಾತ್ರರಾಗಿದ್ದಾರೆ.`ವಿರಾಟ್ ಕೊಹ್ಲಿ ಬ್ಯಾಟಿಂಗ್ ನೋಡಲು ನನಗೆ ಬಹಳ ಸಂತಸವಾಗುತ್ತದೆ. ನಾನು ಹೊಂದಿದ್ದ ರೀತಿಯ ಆಕ್ರಮಣಕಾರಿ ಶೈಲಿ ಮತ್ತು ಗಾಂಭೀರ್ಯವನ್ನು ಅವರೂ ಹೊಂದಿದ್ದಾರೆ. ಅವರನ್ನು ನೋಡುತ್ತಿದ್ದರೆ ನನಗೆ ಹಿಂದೆ ನಾನು ಆಡುತ್ತಿದ್ದ ದಿನಗಳ ನೆನಪಾಗುತ್ತಿದೆ' ಎಂದು ರಿಚರ್ಡ್ಸ್ ಪ್ರಶಂಸೆ ವ್ಯಕ್ತಪಡಿಸಿದರು.

`ಕೊಹ್ಲಿ ಸವಾಲಿಗೆ ಬೆನ್ನುಕೊಟ್ಟು ಹೋಗುವ ಜಾಯಮಾನದವರಲ್ಲ. ಒತ್ತಡದ ನಡುವೆಯೂ ಗಟ್ಟಿಯಾಗಿ ನಿಲ್ಲುವ ಸಾಮರ್ಥ್ಯ ಹೊಂದಿದ್ದಾರೆ' ಎಂದರು. ಕ್ರಿಕೆಟ್ ಇತಿಹಾಸ ಕಂಡ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರಾದ 61ರ ಹರೆಯದ ರಿಚರ್ಡ್ಸ್, ಕೊಹ್ಲಿ ಅವರ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಶೈಲಿಯ ಬಗ್ಗೆ ಮಾತನಾಡಿದರು.`ನಿವೃತ್ತಿ ತೆಗೆದುಕೊಳ್ಳುವ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳಲು ಸಚಿನ್ ತೆಂಡೂಲ್ಕರ್ ಸ್ವತಂತ್ರರು. ಅದು ಅವರ ವೈಯಕ್ತಿಕ ನಿರ್ಧಾರವಾಗಬೇಕೇ ಹೊರತು ಯಾರೂ ಒತ್ತಡ ಹೇರಬಾರದು' ಎಂದು   ರಿಚರ್ಡ್ಸ್ ಹೇಳಿದರು.`ಸಚಿನ್ ಬಳಿಗೆ ಹೋಗಿ ನಾಳೆ ನೀವು ನಿವೃತ್ತಿ ತೆಗೆದುಕೊಳ್ಳಿ ಎಂದು ಹೇಳುವ ಧೈರ್ಯ ನನಗಂತೂ ಖಂಡಿತ ಇಲ್ಲ. ನಾನು ಅವರ ಅಭಿಮಾನಿ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇಂದಿಗೂ ಅವರು ಶ್ರೇಷ್ಠ ಆಟಗಾರ. ಕ್ರಿಕೆಟ್ ಪ್ರಪಂಚದಲ್ಲಿ ನೂತನ ಶೈಲಿಯಾಗಿರುವ ಟ್ವೆಂಟಿ-20 ಕ್ರಿಕೆಟ್‌ನಲ್ಲೂ ಅವರು ಯಶಸ್ವಿಯಾಗಿದ್ದಾರೆ. ಒಂದುವೇಳೆ ಅವರು ತಮ್ಮ 50ನೇ ವರ್ಷಕ್ಕೆ ನಿವೃತ್ತಿ ಪಡೆದರೂ ನಾನು ಅವರ ಆಟವನ್ನು ವೀಕ್ಷಿಸುತ್ತೇನೆ' ಎಂದರು.

ಪ್ರತಿಕ್ರಿಯಿಸಿ (+)