ಕೊಹ್ಲಿ, ಗಂಭೀರ್‌ಗೆ ಎಚ್ಚರಿಕೆ

7

ಕೊಹ್ಲಿ, ಗಂಭೀರ್‌ಗೆ ಎಚ್ಚರಿಕೆ

Published:
Updated:
ಕೊಹ್ಲಿ, ಗಂಭೀರ್‌ಗೆ ಎಚ್ಚರಿಕೆ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಐಪಿಎಲ್ ಪಂದ್ಯದ ವೇಳೆ ಮಾತಿನ ಚಕಮಕಿ ನಡೆಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ  ಮತ್ತು ಕೋಲ್ಕತ್ತ ನೈಟ್ ರೈಡರ್ಸ್ ನಾಯಕ ಗೌತಮ್ ಗಂಭೀರ್‌ಗೆ ಎಚ್ಚರಿಕೆ ನೀಡಲಾಗಿದೆ.`ಕೊಹ್ಲಿ ಹಾಗೂ ಗಂಭೀರ್ ಅಸಭ್ಯ ಶಬ್ದಗಳನ್ನು ಬಳಸಿ ಪರಸ್ಪರ ಮಾತಿನ ಚಕಮಕಿ ನಡೆಸುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಇಬ್ಬರಿಗೂ ಅಧಿಕೃವಾಗಿ ಎಚ್ಚರಿಕೆ ನೀಡಲಾಗಿದೆ' ಎಂದು ಐಪಿಎಲ್ ಪ್ರಕಟಣೆ ತಿಳಿಸಿದೆ.ಈ ಘಟನೆ ಆರ್‌ಸಿಬಿ ಇನಿಂಗ್ಸ್‌ನ 10ನೇ ಓವರ್‌ನಲ್ಲಿ ನಡೆದಿದೆ. ವಿರಾಟ್ ಕೊಹ್ಲಿ ಅವರು ಲಕ್ಷ್ಮಿಪತಿ ಬಾಲಾಜಿ ಓವರ್‌ನಲ್ಲಿ ಎಯೊನ್ ಮಾರ್ಗನ್‌ಗೆ ಕ್ಯಾಚಿತ್ತು ಔಟಾದರು. ಈ ವೇಳೆ ಗಂಭೀರ್ ಸಹ ಆಟಗಾರರ ಜೊತೆ ಸಂಭ್ರಮಿಸಲು `ಕವರ್' ಕ್ಷೇತ್ರದತ್ತ ಧಾವಿಸಿದರೆ, ಕೊಹ್ಲಿ ಪೆವಿಲಿಯನ್‌ನತ್ತ ಹೆಜ್ಜೆಯಿಡತೊಡಗಿದರು.ಈ ಸಂದರ್ಭ ಇಬ್ಬರೂ ಪರಸ್ಪರರನ್ನು ಕೆಣಕಿದ್ದಾರೆ. ಇದರಿಂದ ಪರಿಸ್ಥಿತಿ ಬಿಗಡಾಯಿಸಿತು. ಪೆವಿಲಿಯನ್‌ನತ್ತ ತೆರಳುತ್ತಿದ್ದ ಕೊಹ್ಲಿ ತಕ್ಷಣ ಗಂಭೀರ್ ಅವರತ್ತ ತಿರುಗಿದರು. ಗಂಭೀರ್ ಕೂಡಾ ಕೊಹ್ಲಿಯತ್ತ ಧಾವಿಸಿದರು. ಇಬ್ಬರೂ ಮಾತಿನ ಚಕಮಕಿ ನಡೆಸಿದರು.ಅಂಪೈರ್ ಹಾಗೂ ಇತರ ಆಟಗಾರರು ಕೂಡಲೇ ಧಾವಿಸಿ ಇಬ್ಬರನ್ನೂ ದೂರ ಮಾಡಿ ಪರಿಸ್ಥಿತಿ ತಿಳಿಗೊಳಿಸಿದರು. ದೆಹಲಿ ಹಾಗೂ ರಾಷ್ಟ್ರೀಯ ತಂಡದ ಪರ ಜೊತೆಯಾಗಿ ಆಡಿದ್ದ ಇಬ್ಬರು ಹೀಗೆ `ಕಚ್ಚಾಟ' ನಡೆಸಿದ್ದು ನೆರೆದ ಪ್ರೇಕ್ಷಕರಲ್ಲಿ ತಳಮಳ ಉಂಟುಮಾಡಿದ್ದು ನಿಜ. ಇತರ ಆಟಗಾರರಿಗೆ ಮಾದರಿಯಾಗಬೇಕಿದ್ದ ನಾಯಕರು ತಾಳ್ಮೆ ಕಳೆದುಕೊಂಡದ್ದು ಸೋಜಿಗದ ಸಂಗತಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry