ಕೋ.ಚೆ. ವಿರೋಧಿಗಳನ್ನು ಗಡಿಪಾರು ಮಾಡಿ

7
ವಕೀಲ ಎ.ಕೆ. ಸುಬ್ಬಯ್ಯ ಒತ್ತಾಯ

ಕೋ.ಚೆ. ವಿರೋಧಿಗಳನ್ನು ಗಡಿಪಾರು ಮಾಡಿ

Published:
Updated:

ಮಡಿಕೇರಿ: ಸಾಹಿತಿ ಕೋ.ಚೆನ್ನಬಸಪ್ಪ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿರುವ ವ್ಯಕ್ತಿಗಳನ್ನು ಗಡಿಪಾರು ಮಾಡುವ ಮೂಲಕ ಜ.7ರಿಂದ ನಡೆಯಲಿರುವ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಾಂಗವಾಗಿ ನಡೆಸಿಕೊಡಬೇಕೆಂದು ವಿಧಾನಪರಿಷತ್ತಿನ ಮಾಜಿ ಸದಸ್ಯ   ಎ.ಕೆ. ಸುಬ್ಬಯ್ಯ ಸರ್ಕಾರವನ್ನು ಒತ್ತಾಯಿಸಿದರು.ಇಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ’ಅಪ್ರತಿಮ ದೇಶಭಕ್ತ ಟಿಪ್ಪು ಸುಲ್ತಾನ್‌’ ಪುಸ್ತಕದಲ್ಲಿ ಹಿರಿಯ ಸಾಹಿತಿ ಕೋ.ಚೆನ್ನಬಸಪ್ಪ ಅವರು ಕೊಡವರಿಗೆ ಯಾವುದೇ ರೀತಿಯಲ್ಲಿ ಅವಹೇಳನ ಮಾಡಿಲ್ಲ. ನಾನೂ ಒಬ್ಬ ಕೊಡವನಾಗಿದ್ದರಿಂದ ಈ ರೀತಿ ಹೇಳುತ್ತಿದ್ದೇನೆ’ ಎಂದರು.ಟಿಪ್ಪು ಸುಲ್ತಾನ್‌ ನೆಪದಲ್ಲಿ ಕೊಡವ ಹಾಗೂ ಮುಸ್ಲಿಮರ ನಡುವೆ ಕೋಮುದ್ವೇಷ ಬೆಳೆಸಲು ಕೆಲವು ಸಂಘಟನೆಗಳು ಪ್ರಯತ್ನಿಸುತ್ತಿವೆ. ಇದರ ಭಾಗವಾಗಿ ಕೋ.ಚೆ ವಿರುದ್ಧ ಪ್ರತಿಭಟನೆ ನಡೆಸಲು ಅವು ಪ್ರಯತ್ನಿಸುತ್ತಿವೆ ಎಂದು ಅವರು ಹೇಳಿದರು.ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷರಾಗಿದ್ದ ಕೋ.ಚೆ. ಅವರು ಸಮ್ಮೇಳನಾಧ್ಯಕ್ಷರ ಅಧಿಕಾರವನ್ನು ಹಸ್ತಾಂತರಿಸಲು ಜ.7ರಂದು ಮಡಿಕೇರಿಗೆ ಆಗಮಿಸುತ್ತಿದ್ದಾರೆ. ಇವರಿಗೆ ಸರ್ಕಾರ ಸೂಕ್ತ ಭದ್ರತೆ ಕಲ್ಪಿಸಬೇಕು ಹಾಗೂ ಕೋಮುದ್ವೇಷ ಬಿತ್ತಲು ಪ್ರಯತ್ನಿಸುತ್ತಿರುವವರನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.ಕೊಡವರಿಗೆ ಅಪಮಾನ ಮಾಡುವ ರೀತಿಯಲ್ಲಾಗಲೀ ಅಥವಾ ಟಿಪ್ಪು ಸುಲ್ತಾನ್‌ ಅವರನ್ನು ವೈಭವೀಕರಿಸುವ ಯಾವುದೇ ಲೇಖನಗಳನ್ನು ಸಾಹಿತಿ ಕೋ.ಚೆನ್ನಬಸಪ್ಪ ಅವರು ಬರೆದಿಲ್ಲ. ತನ್ನ ಮಕ್ಕಳನ್ನು ಒತ್ತೆಯಿಟ್ಟು ಬ್ರಿಟಿಷರ ವಿರುದ್ಧ ಹೋರಾಡಿದ ಟಿಪ್ಪು ಸುಲ್ತಾನ್‌ ಅವರದ್ದು ಆಕಾಶದೆತ್ತರದ ವ್ಯಕ್ತಿತ್ವ. ಅವರನ್ನು ವೈಭವೀಕರಿಸಲು ಸಾಧ್ಯವಿಲ್ಲ ಎಂದರು.ಮನುಷ್ಯನ ಇತಿಹಾಸವನ್ನು ಕೆಣಕಿದರೆ ಇಂದು ನಾವು ನೋಡುವ ಎಲ್ಲ ಜನಾಂಗದವರ ಮೂಲವು ಆಫ್ರಿಕಾ ಖಂಡದಿಂದ ಬಂದಿರುವುದು. ಹೀಗಾಗಿ ಬೇರೆ ಬೇರೆ ಪ್ರದೇಶಗಳಲ್ಲಿ ವಾಸಿಸುವ ಜನರ ನಡುವೆ ಸಾಮ್ಯತೆ ಕಂಡುಬರುತ್ತದೆ. ಇದೇ ಆಧಾರದ ಮೇಲೆ ಕೋ.ಚೆ. ಅವರು ಕೊಡವರು ವಾಯವ್ಯ ಭಾಗದಿಂದ ಬಂದವರೆಂದು ಉಲ್ಲೇಖಿಸಿದ್ದಾರೆ. ಇದರಲ್ಲೇನು ಅವಮಾನಕರ ಸಂಗತಿ ಇದೆ? ಎಂದು ಪ್ರಶ್ನಿಸಿದರು.ವಕೀಲ ಕೆ.ಆರ್‌. ವಿದ್ಯಾಧರ್‌ ಮಾತನಾಡಿ, ಕೋ.ಚೆನ್ನಬಸಪ್ಪ ಆಗಮನಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವವರ ವಿರುದ್ಧ ಟಿಪ್ಪು ಸುಲ್ತಾನ್‌ ಹೋರಾಟ ಸಮಿತಿಯವರು ಜ. 4ರಂದು ನಡೆಸಲಿರುವ ಪ್ರತಿಭಟನಾ ಮೆರವಣಿಗೆಗೆ ಪ್ರಗತಿಪರ ಚಿಂತಕರ ವೇದಿಕೆಯು ಬೆಂಬಲ ನೀಡುತ್ತದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಕುಂಞೆ ಅಬ್ದುಲ್ಲಾ, ರಫೀಕ್‌ ಖಾನ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry