ಕೋಟಿಗೊಬ್ಬಳು ಮಲ್ಲಿಕಾ!

7

ಕೋಟಿಗೊಬ್ಬಳು ಮಲ್ಲಿಕಾ!

Published:
Updated:
ಕೋಟಿಗೊಬ್ಬಳು ಮಲ್ಲಿಕಾ!

`ಪ್ರೀತಿ ಏಕೆ ಭೂಮಿ ಮೇಲಿದೆ?~ ಎನ್ನುವ ಕನ್ನಡ ಚಿತ್ರದ್ಲ್ಲಲಿ ಒಂದು ಹಾಡಿಗೆ ಬಳುಕಿ ಹೋಗಿದ್ದ ಮಲ್ಲಿಕಾ ಶೆರಾವತ್ ಈಗ ನಾಯಕಿಯಾಗಿ ಹೆಚ್ಚೇನೂ ಕಾಣಿಸಿಕೊಳ್ಳುತ್ತಿಲ್ಲ.ಆದರೆ, ಅವರ ಬೇಡಿಕೆ ಮಾತ್ರ ವಿಪರೀತ ಏರಿದೆ. ಸಂಕೋಚವಿಲ್ಲದೆ ಮೈದೋರುವ, ಮುಜುಗರವಿಲ್ಲದೆ ಮುತ್ತಿಕ್ಕುವ ಕಾರಣಕ್ಕೆ ಪದೇಪದೇ ಸುದ್ದಿಯಾಗುವ ಮಲ್ಲಿಕಾಗೆ `ಆತ್ಮಕಥೆ ಬರೆದುಕೊಡಿ~ ಎಂದು ದುಂಬಾಲು ಬೀಳುವವರ ಸಂಖ್ಯೆ ಈಗ ಏರಿದೆ. ಪ್ರಕಾಶನ ಸಂಸ್ಥೆಯೊಂದು ಆತ್ಮಕಥೆ ಬರೆದುಕೊಟ್ಟರೆ 20 ಕೋಟಿ ರೂಪಾಯಿ ಸಂಭಾವನೆ ಕೊಡುವುದಾಗಿ ಹೇಳಿದೆಯಂತೆ. ಈ ಆಹ್ವಾನವನ್ನು ಮಲ್ಲಿಕಾ ಸಾರಾಸಗಟಾಗಿ ನಿರಾಕರಿಸಿದ್ದಾರೆ.`ಇಪ್ಪತ್ತು ಕೋಟಿ ಕೊಡಲು ಮುಂದಾಗಿದ್ದಾರೆ ಅನ್ನೋದೆಲ್ಲಾ ಉತ್ಪ್ರೇಕ್ಷೆಯ ಮಾತು. ನಟನೆಗೆ ನಾನು ಪಡೆಯುವ ಸಂಭಾವನೆಗಿಂತ ಹೆಚ್ಚಿನ ಹಣವನ್ನು ಆತ್ಮಕಥೆಗೆ ಆಫರ್ ಮಾಡಿದ್ದಂತೂ ನಿಜ. ಅದಕ್ಕೆ ಮನಸೋತು ನಾನು ತಕ್ಷಣ ಆತ್ಮಕಥೆ ಬರೆಯಲಾರೆ. ಇಷ್ಟು ಬೇಗ ನನ್ನ ಬಗ್ಗೆ ನಾನೇ ಬರೆದುಕೊಳ್ಳುವುದು ಇಷ್ಟವಿಲ್ಲ. ಅಷ್ಟು ಎತ್ತರಕ್ಕೆ ನಾನು ಬೆಳೆದೂ ಇಲ್ಲ. ಮುಂದಿನ ಎರಡು ಮೂರು ವರ್ಷ ನಾನು ಏನಾಗುವೆ ಎಂಬುದನ್ನು ಇಡೀ ಜಗತ್ತೇ ನೋಡುತ್ತದೆ~- ಇದು ಮಲ್ಲಿಕಾ ಪ್ರತಿಕ್ರಿಯೆ.ಮಲ್ಲಿಕಾ ಹಾಡುಗಳನ್ನು ಒಪ್ಪಿಕೊಳ್ಳಲು ಸದಾ ಮುಂದು. `ಡಬಲ್ ಧಮಾಲ್~ ಚಿತ್ರದಲ್ಲಿ ಅಷ್ಟೇನೂ ಮುಖ್ಯವಲ್ಲದ ಪಾತ್ರವನ್ನು ಅವರು ಒಪ್ಪಿಕೊಳ್ಳಲು ಕಾರಣ `ಜಲೇಬಿ ಬಾಯ್~ ಎಂಬ ಹಾಡು. `ಗುರು~ ಚಿತ್ರದಲ್ಲಿ `ಮಯ್ಯಾ ಮಯ್ಯಾ~ ಹಾಡು ಮಲ್ಲಿಕಾಗೆ ತುಂಬಾ ಇಷ್ಟವಾಗಿತ್ತು. ಆನಂತರ ಅವರು ಸದಾ ಗುನುಗುತ್ತಿರುವ ಹಾಡೆಂದರೆ `ಜಲೇಬಿ ಬಾಯ್~. `ಥ್ಯಾಂಕ್ ಯೂ~ ಚಿತ್ರದ `ರಜಿಯಾ...~, `ಬಿನ್ ಬುಲಾಯೆ ಬಾರಾತ್~ ಚಿತ್ರದ `ಶಾಲೂ ಕೆ ಟುಮ್ಕೆ ಕೀ ದುನಿಯಾ ದಿವಾನಿ~ ಐಟಂಗೀತೆಗಳಿಗೂ ಹೆಜ್ಜೆ ಹಾಕಿದ್ದ ಈ ನಟಿಗೆ ಆ ಗೀತೆಗಳು ಅಷ್ಟಾಗಿ ಹಿಡಿಸಿರಲಿಲ್ಲ.`ಮುನ್ನಿ ಬದ್ನಾಮ್ ಹುಯೀ...~ ಹಾಗೂ `ಶೀಲಾ ಕೀ ಜವಾನಿ~ ಗೀತೆಗಳಿಗಿರುವ ಐಟಂ ಗುಣಲಕ್ಷಣಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿತು. ಮಾದಕ ನೃತ್ಯ ಮಾಡಲು ನಾಯಕಿಯರೇ ಹಿಂದೇಟು ಹಾಕದ ಕಾಲವಿದು. ಹಾಗಿದ್ದೂ ಮಲ್ಲಿಕಾ ಬರೀ ಗೀತಕನ್ಯೆಯೇ ಯಾಕೆ ಆಗುತ್ತಿದ್ದಾರೆಂಬುದು ಸದ್ಯದ ಪ್ರಶ್ನೆ.`ಜನರನ್ನು ಚಿತ್ರಮಂದಿರಕ್ಕೆ ಕರೆದುಕೊಂಡು ಬರುವುದು ಹಾಡು. ಅದೊಂದು ರೀತಿ ಸಿಗ್ನೇಚರ್ ತರಹ. ಸಿನಿಮಾದಲ್ಲಿ ಅಭಿನಯಿಸುವುದಕ್ಕಿಂತ ಹಾಡುಗಳಿಗೆ ಅದ್ಭುತವಾಗಿ ನೃತ್ಯ ಮಾಡುವುದು ಕಷ್ಟದ ಕೆಲಸ. ಚೆನ್ನಾಗಿರುವ ಹಾಡಿಗೆ ಲಯಬದ್ಧವಾಗಿ ನರ್ತಿಸಬೇಕು. ಜೊತೆಗೆ ಮುಖಭಾವದ ಮೂಲಕ ಜೀವಂತಿಕೆ ತುಂಬಬೇಕು. ಏಕಕಾಲದಲ್ಲಿ ಇವೆರಡನ್ನೂ ಮಾಡುವುದು ಸುಲಭವಲ್ಲ. ಶಾಲೂ ಹಾಡು ವೈಯಕ್ತಿಕವಾಗಿ ನನಗಿಷ್ಟವಾಗಿರಲಿಲ್ಲ.ಪ್ರೇಕ್ಷಕರು ಅದನ್ನು ನೋಡಲೆಂದೇ ಚಿತ್ರಮಂದಿರಕ್ಕೆ ಹೋಗುತ್ತೇವೆ ಎಂದು ನನಗೆ ಪತ್ರಗಳನ್ನು ಬರೆದರು. ಆ ಹಾಡನ್ನು ನೋಡಿದ ಮೇಲಂತೂ ಮನಸೋ ಇಚ್ಛೆ ಹೊಗಳಿದರು. ಯಾವುದೇ ನಿರ್ದೇಶಕ ಅಥವಾ ನಿರ್ಮಾಪಕ ನನ್ನಲ್ಲಿಗೆ ಬಂದು ನಿಮಗಾಗಿಯೇ ಒಂದು ಹಾಡು ಇದೆ ಎಂದರೆ ನಾನು ಥ್ರಿಲ್ ಆಗುತ್ತೇನೆ. ನನ್ನನ್ನೇ ದೃಷ್ಟಿಯಲ್ಲಿಟ್ಟುಕೊಂಡು ಅವರು ಹಾಡು ಸಿದ್ಧಪಡಿಸಿಕೊಂಡು ಬಂದಿರುತ್ತಾರೆ.ನಟಿಯೊಬ್ಬಳಿಗೆ ಇದಕ್ಕಿಂತ ಇನ್ನೆಂಥಾ ಅಭಿಮಾನ ಬೇಕು? ನಟನೆಗೆ ಇರುವ ಮಿತಿ ಹಾಡಿಗೆ ಇಲ್ಲ. ಕೇವಲ ಸಿದ್ಧ ಸಂಭಾಷಣೆಯನ್ನು ಒಪ್ಪಿಸುತ್ತಾ, ಒಂದಿಷ್ಟು ಸೂತ್ರಬದ್ಧವಾದ ಮುಖಭಾವ, ದೇಹಭಾಷೆ ತೋರಿದಷ್ಟು ಸುಲಭವಲ್ಲ ಹಾಡುಗಳನ್ನು ಹಸನಾಗಿಸುವುದು. ಮುಖದ ಮೇಲೆ ಮೇಕಪ್ ಇರುತ್ತದೆ. ಬಿಗಿಯಾದ ವಸ್ತ್ರದ ಮೇಲೆ ವೋಲ್ಟುಗಟ್ಟಲೆ ಬೆಳಕು ಚೆಲ್ಲುತ್ತದೆ. ದೇಹ ದಂಡಿಸಿದರೂ ಬೆವರು ಕಾಣುವಂತಿಲ್ಲ.ಸುಮ್ಮನೆ ಕುಣಿದರೆ ಆಗದು, ಮುಖಭಾವದ ಮೂಲಕ ಜೀವತುಂಬುವುದು ತುಂಬಾ ಮುಖ್ಯ. ಅದಕ್ಕೂ ಮಿಗಿಲಾಗಿ ನಮ್ಮ ದೇಹದ ಉಬ್ಬುತಗ್ಗುಗಳು ಹಸನಾಗಿಯೇ ಇರಬೇಕು. ಹೊಟ್ಟೆ ತುಸುವೂ ದಪ್ಪವಾಗಕೂಡದು. ತುಟಿಗಳ ಸಣ್ಣ ಚಲನೆಯೂ ಸೆಕ್ಸಿ ಆಗಿರಬೇಕು. ನಾನು ಹಾಡು-ಕುಣಿತದ ಕುರಿತು ಇಷ್ಟೆಲ್ಲಾ ಮಾತನಾಡುತ್ತಿದ್ದೇನೆ ಎಂದರೆ ಅದು ಎಷ್ಟು ಮುಖ್ಯ ಎಂಬುದು ಯಾರಿಗಾದರೂ ಅರ್ಥವಾದೀತು...~ ಮಲ್ಲಿಕಾ ಗೀತಲಹರಿ ಹೀಗೆ ಮುಂದುವರಿಯುತ್ತದೆ.`ಕ್ವಾಯಿಷ್~ ಚಿತ್ರದಲ್ಲಿ ಬರೋಬ್ಬರಿ ಹದಿನೇಳು ಮುತ್ತುಗಳನ್ನು ನಾಯಕನ ಜೊತೆ ಹಂಚಿಕೊಂಡ ಮಲ್ಲಿಕಾ ನಟೀಮಣಿಯರ ತುಟಿಯ ಸಂಕೋಚವನ್ನು ದೂರ ಮಾಡಿದ ಖ್ಯಾತಿಗೂ ಭಾಜನರಾಗಿದ್ದಾರೆ. ಇಂದು ಬಾಲಿವುಡ್‌ನಲ್ಲಿ ಅಧರಚುಂಬನಕ್ಕೆ ಒಲ್ಲೆ ಎನ್ನುವ ನಟಿಯೇ ಇಲ್ಲವೇನೋ ಎಂಬಷ್ಟು ಬದಲಾವಣೆ ಆಗಿಬಿಟ್ಟಿದೆ. ಅದಕ್ಕೆ ಪರೋಕ್ಷವಾಗಿ ಮಲ್ಲಿಕಾ ಒಡ್ಡಿದ ಸ್ಪರ್ಧೆಯೇ ಕಾರಣ ಎನ್ನುವವರೂ ಉಂಟು.`ನನ್ನಿಂದಲೇ ಸ್ಫೂರ್ತಿ ಪಡೆದು ಅನೇಕ ನಟಿಯರು ಸಂಕೋಚ ಬಿಟ್ಟು ಲವ್ ಮೇಕಿಂಗ್ ಸೀನ್ಸ್‌ನಲ್ಲಿ ತೊಡಗುತ್ತಿದ್ದಾರೆ ಎಂದು ಎಷ್ಟೋ ಜನ ಹೇಳಿದ್ದಾರೆ. ಆ ಕ್ರೆಡಿಟ್ ನಿಜಕ್ಕೂ ನನ್ನದಾದರೆ ನನಗೇನೂ ಅಭ್ಯಂತರವಿಲ್ಲ. ಅದು ಕೂಡ ಬಾಲಿವುಡ್‌ಗೆ ನನ್ನ ಕಾಣಿಕೆಯೇ ಅಲ್ಲವೇ? ಅಪರಿಚಿತ ನಟನನ್ನು ಕೊಲ್ಲುವಂತೆ ನೋಡುತ್ತಾ, ನಿಸ್ಸಂಕೋಚವಾಗಿ ಅವನ ಚುಂಬನಕ್ಕೆ ಒಡ್ಡಿಕೊಳ್ಳುವ ನನ್ನ ಧೈರ್ಯ ಮೆಚ್ಚಿಯೇ ಹಾಲಿವುಡ್‌ನಲ್ಲೂ ನನಗೆ ಅವಕಾಶಗಳು ಸಿಗುತ್ತಿರುವುದು.ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರೂ ನನ್ನನ್ನು ಮೆಚ್ಚಿ ಮಾತಾಡಿದರು. ಅವರ ಜೊತೆ ಎರಡು ಸಲ ಡಿನ್ನರ್ ಮಾಡಿದ ಭಾಗ್ಯವತಿ ನಾನು. ಸಿನಿಮಾಲೋಕಕ್ಕೆ ಬಂದಮೇಲೆ ನಾಚಿಕೆ ಗೀಚಿಕೆಯನ್ನು ಆಚೆಗೆ ಬಿಡಬೇಕು. ಇಲ್ಲವಾದರೆ ಮನೆಯಲ್ಲೇ ಇರಬೇಕು~- ಹೀಗಿದೆ ಮಲ್ಲಿಕಾ ಮಾತಿನ ಗುಂಡು.ಕಾನ್ ಚಿತ್ರೋತ್ಸವಕ್ಕೆ ಹೋದಾಗ ಮಲ್ಲಿಕಾ ತೊಟ್ಟಿದ್ದ ಉಡುಪು ಅನೇಕರ ಹುಬ್ಬೇರಿಸಿತ್ತು. ಎರಿಕ್ ತಿಬುಷ್ ಎಂಬ ವಿದೇಶಿ ವಿನ್ಯಾಸಕ ಆ ಉಡುಪು ಸಿದ್ಧಪಡಿಸಲು 1500 ಗಂಟೆ ತೆಗೆದುಕೊಂಡರಂತೆ. ಅದರ ಬೆಲೆ ಒಂದು ಲಕ್ಷ ಯೂರೋ ಅರ್ಥಾತ್ ಅಂದಾಜು 64.8 ಲಕ್ಷ ರೂಪಾಯಿ! `ಪಾಲಿಟಿಕ್ಸ್ ಆಫ್ ಲವ್~ ಎಂಬ ಅಮೆರಿಕನ್ ಸಿನಿಮಾದಲ್ಲಿ ನಟಿಸಿರುವ ಮಲ್ಲಿಕಾ ವರ್ಷದ ಆರು ತಿಂಗಳಷ್ಟೇ ಭಾರತದಲ್ಲಿರುತ್ತಾರೆ. ಆದರೂ ಅವರಿಗೆ ಅಮೆರಿಕದ ಪೌರತ್ವದ ಮೋಹವಿಲ್ಲ.`ನಾನು ಅಮೆರಿಕದಲ್ಲಿ ಸುದ್ದಿಯಾಗಿರಬಹುದು. ಅದಕ್ಕೆ ಕಾರಣ ನಾನು ಭಾರತೀಯಳು ಎಂಬುದೇ ಆಗಿದೆ. ಒಂದು ಕಾಲದಲ್ಲಿ ನಮ್ಮ ದೇಶದ ಹುಡುಗಿಯರನ್ನು ಅವರೆಲ್ಲಾ ತುಚ್ಛವಾಗಿ ನೋಡಿದರು. ಈಗ ನನ್ನ ಕಣ್ಣೋಟದಿಂದಲೇ ಅಲ್ಲಿನ ಅನೇಕರನ್ನು ಆಡಿಸಬಲ್ಲೆ. ನಾನು ಕೋಟಿಗೊಬ್ಬಳು. ಅದಕ್ಕೇ ನನ್ನ ವ್ಯವಹಾರವೆಲ್ಲಾ ಕೋಟಿಗಳಲ್ಲೇ...~- ಇದು ಮಲ್ಲಿಕಾ ಸಿಡಿಸುವ ಕೊನೆಯ ಬಾಂಬ್. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry