ಕೋಟಿಯ ಪ್ಯಾಕೇಜ್-ಕಾಣದ ಅಭಿವೃದ್ಧಿ!

7

ಕೋಟಿಯ ಪ್ಯಾಕೇಜ್-ಕಾಣದ ಅಭಿವೃದ್ಧಿ!

Published:
Updated:

ಮಂಗಳೂರು: ಡಾಂಬರು ಕಾಣದ ರಸ್ತೆಗಳು, ವಿದ್ಯುತ್ ಕಾಣದ ಮನೆಗಳು, ಸಾರ್ವಜನಿಕ ವಾಹನ ಸೌಕರ್ಯವಿಲ್ಲ, ಕಿಲೋಮೀಟರ್‌ಗಟ್ಟಲೆ ನಡೆದೇ ಸಾಗಬೇಕಾದ ದಯನೀಯ ಸ್ಥಿತಿ. ಇದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರ ತವರು ಜಿಲ್ಲೆಯಲ್ಲಿ ನಕ್ಸಲ್ ಪೀಡಿತವಾಗಿರುವ ಪ್ರದೇಶದಲ್ಲಿನ ಹಲವು ಗ್ರಾಮಗಳ ವಾಸ್ತವ ಚಿತ್ರಣ!ಶನಿವಾರ ತಡರಾತ್ರಿ ನಕ್ಸಲರು ಹಾಗೂ ಪೊಲೀಸರ ನಡುವಿನ ಗುಂಡಿನ ಕಾಳಗಕ್ಕೆ ಸಾಕ್ಷಿಯಾದ ಬೆಳ್ತಂಗಡಿ ತಾಲ್ಲೂಕಿನ ಇಂದಬೆಟ್ಟು ಗ್ರಾಮದ ನಾವೂರ ಆಸುಪಾಸಿನ ಪ್ರದೇಶಗಳ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಇಷ್ಟು ಸಮಯ ಸಮಸ್ಯೆಗಳ ನಡುವೆ ಹೆಣಗಾಡಿಕೊಂಡಿದ್ದ ಇಲ್ಲಿನ ಜನತೆಗೆ ಗುಂಡಿನ ಕಾಳಗದ ಬಳಿಕ ಹೊಸ ಆತಂಕ ಎದುರಾಗಿದೆ. ಈ ಪ್ರದೇಶದ ಜನರು ಇನ್ನು ಸದಾ ಬಂದೂಕಿನ ನಳಿಕೆಯಡಿ ಆತಂಕದಲ್ಲೇ ಬದುಕು ಸಾಗಿಸಬೇಕಾದ ಪರಿಸ್ಥಿತಿ ಇಲ್ಲಿನ ಜನರದ್ದು...ಕಳೆದ ಐದಾರು ವರ್ಷಗಳಲ್ಲಿ ನಕ್ಸಲ್ ಪೀಡಿತ ಪ್ರದೇಶದ ಅಭಿವೃದ್ಧಿಗೆ ಸರ್ಕಾರ ವಿವಿಧ ಯೋಜನೆಗಳಿಂದ ಕೋಟಿಗಟ್ಟಲೆ ಅನುದಾನ ಬಿಡುಗಡೆ ಮಾಡಿದೆ. ಆದರೆ ಆ ಪ್ರದೇಶಗಳ ಸ್ಥಿತಿಯಲ್ಲಿ ಮಹತ್ತರ ಬದಲಾವಣೆಯೇನೂ ಆಗಿಲ್ಲ. ಸರ್ಕಾರ ಹಮ್ಮಿಕೊಳ್ಳುವ  ಕಾಟಾಚಾರದ ಅಭಿವೃದ್ಧಿ ಕಾರ್ಯಕ್ರಮಗಳೂ ಈ ಪ್ರದೇಶದಲ್ಲಿ ನಕ್ಸಲ್ ಬಲವರ್ಧನೆಗೆ ಪ್ರಮುಖ ಕಾರಣ ಎಂಬ ಆರೋಪವೂ ಇದೆ.ಪಶ್ಚಿಮ ಘಟ್ಟದೊಳಗೆ ಕೆಂಬಾವುಟ ಹಾರಾಟ ಆರಂಭವಾಗಿ ದಶಕವೇ ಸಂದಿದೆ. ಈ ಪರಿಸರದಲ್ಲಿ ನಕ್ಸಲರ ಓಡಾಟ ಮೊದಲು ಬೆಳಕಿಗೆ ಬಂದುದು 2002ರ ನವೆಂಬರ್ 6ರಂದು. ಕೊಪ್ಪ ತಾಲ್ಲೂಕಿನ ಮೆಣಸಿನಹಾಡ್ಯದಲ್ಲಿ ನಕ್ಸಲರ ಬಂದೂಕಿನಿಂದ ಆಕಸ್ಮಿಕವಾಗಿ ಹಾರಿದ ಗುಂಡೊಂದು ಗ್ರಾಮದ ವೃದ್ಧೆ ಚೀರಮ್ಮ ಅವರ ಕಾಲಿಗೆ ತಗುಲಿತ್ತು. ಅದು ಮೊದಲ ಗುಂಡಿನ ಸದ್ದು.ನಂತರದ ದಿನಗಳಲ್ಲಿ ನಕ್ಸಲರ ಗುಂಡಿಗೆ ಕೆಲವು ಗ್ರಾಮಸ್ಥರೂ, ಪೊಲೀಸರೂ ಪ್ರಾಣ ತ್ಯಾಗ ಮಾಡಿದ್ದಾರೆ. ನಕ್ಸಲ್ ತಂಡದಲ್ಲಿಯೂ ಸಾಕಷ್ಟು ಸಾವು-ನೋವು ಸಂಭವಿಸಿದೆ. ನಕ್ಸಲ್ ಹಾಗೂ ಪೊಲೀಸ್ ಜಟಾಪಟಿ ಕಾಡಿನೊಳಗೆ ನಡೆದಿದ್ದರೂ, ಅರಣ್ಯದಂಚಿನ ಗ್ರಾಮಗಳಲ್ಲಿ ಇರುವ ನಾಗರಿಕರ ಸ್ಥಿತಿ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ.`ಒಂದೂವರೆ ತಿಂಗಳ ಹಿಂದೆ ಕುತ್ಲೂರಿನ ಸಂಬಂಧಿಕರೊಬ್ಬರ ಮನೆಗೆ ಬಂದಿದ್ದ ನೆಂಟರೊಬ್ಬರನ್ನು ನಕ್ಸಲ್ ಬೆಂಬಲಿಗ ಎಂದು ಶಂಕಿಸಿ ಪೊಲೀಸರು ವಶಕ್ಕೆ ತೆಗೆದುಕೊಂಡು ದೌರ್ಜನ್ಯ ನಡೆಸಿದರು. ಆರಂಭದಿಂದಲೂ ಗ್ರಾಮಸ್ಥರ ಮೇಲೆ ಪೊಲೀಸರು ಸಂಶಯದ ದೃಷ್ಟಿಯಿಂದಲೇ ನೋಡಿದರು. ಒಂದು ಕಡೆ ಪೊಲೀಸರಿಂದ `ಮಾಹಿತಿ ನೀಡಿ~ ಎಂಬ ಒತ್ತಡ. ಮತ್ತೊಂದೆಡೆ ನಕ್ಸಲರ ಉಪಟಳ. ಇಂತಹ ಪರಿಸ್ಥಿತಿಯಲ್ಲಿ ನಾವು ಹೇಗೆ ಬದುಕಬೇಕು?~ ಎಂಬುದು ನಾವೂರದ ಗ್ರಾಮಸ್ಥರೊಬ್ಬರ ಪ್ರಶ್ನೆ.`1989ರಲ್ಲೇ ಪಶ್ಚಿಮ ಘಟ್ಟ ತಪ್ಪಲಿನಲ್ಲಿ ನಕ್ಸಲರ ಪ್ರವೇಶವಾಗಿದೆ ಎಂಬುದನ್ನು ಸರ್ಕಾರಕ್ಕೆ ತಿಳಿಸಿದ್ದೆವು. ಆದರೆ, ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಘೋಷಣೆ ವಿವಾದ ನಕ್ಸಲ್ ಚಟುವಟಿಕೆ ಈ ಭಾಗದಲ್ಲಿ ತ್ವರಿತಗತಿಯಲ್ಲಿ ಬೆಳೆಯಲು ಕಾರಣವಾಯಿತು. ವನ್ಯಜೀವಿ ಇಲಾಖೆ ಕಿರುಕುಳದಿಂದ ಅತಂತ್ರ ಸ್ಥಿತಿಯಲ್ಲಿದ್ದ ಕಾಡಿನ ಜನರು ನಕ್ಸಲರಿಗೆ ಬೆಂಬಲ ನೀಡುವುದು ಅನಿವಾರ್ಯವಾಯಿತು.`ಕರ್ನಾಟಕ ವಿಮೋಚನಾ ರಂಗ~ ಹೆಸರಿನಲ್ಲಿ ಆರಂಭವಾದ ಹೋರಾಟಕ್ಕೆ ನಕ್ಸಲ್ ಚಟುವಟಿಕೆ ಬಲಪಡಿಸುವ ಗುಪ್ತ ಕಾರ್ಯಸೂಚಿಯೂ ಇತ್ತು. ರಾಷ್ಟ್ರೀಯ ಉದ್ಯಾನವನ ಘೋಷಣೆಯಾಯಿತು. ಇದರ ಬದಲು ಜನರ ಸಹಭಾಗಿತ್ವದಲ್ಲಿ ಜಂಟಿ ಅರಣ್ಯ ಯೋಜನೆ ಜಾರಿಗೊಳಿಸಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ~ ಎಂದು ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಸೋಮನಾಥ ನಾಯಕ್ `ಪ್ರಜಾವಾಣಿ~ಗೆ ಸೋಮವಾರ ತಿಳಿಸಿದರು.`ಸರ್ಕಾರ ಯಾವುದೇ ಆಧಾರ ಇಲ್ಲದೆ, ಸ್ಥಳೀಯ ಮಲೆಕುಡಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆಯೇ ರಾಷ್ಟ್ರೀಯ ಉದ್ಯಾನವನ ಘೋಷಣೆ ಮಾಡಿತು. ಈ ಸಂದರ್ಭ ಕುದುರೆಮುಖ ಕಬ್ಬಿಣದ ಅದಿರು ಸಂಸ್ಥೆಯ 10 ಸಾವಿರ ಎಕರೆ ಜಾಗವನ್ನು ಉದ್ಯಾನವನದಿಂದ ಹೊರಗಿಡಲಾಯಿತು. ಮೂರು ಜಿಲ್ಲೆಗಳಲ್ಲಿರುವ ಸುಮಾರು 3 ಸಾವಿರದಷ್ಟು ಮಲೆಕುಡಿಯ ಕುಟುಂಬಗಳ 8 ಸಾವಿರ ಎಕರೆ ಭೂಮಿಯನ್ನು ಇದರ ವ್ಯಾಪ್ತಿಯೊಳಗೆ ತರಲಾಯಿತು.ಸರ್ಕಾರದ ದ್ವಿಮುಖ ನೀತಿ ಈ ಪ್ರದೇಶದಲ್ಲಿ ನಕ್ಸಲ್ ಚಟುವಟಿಕೆ ಬೇರು ಬಿಡಲು ಕಾರಣವಾಯಿತು~ ಎಂದು ಅವರು ಪ್ರತಿಪಾದಿಸಿದರು. `ವನ್ಯಜೀವಿ ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿ ಮಾಡಬೇಕು. ಜಂಟಿ ಅರಣ್ಯ ಯೋಜನೆ ಸರಿಯಾಗಿ ಜಾರಿ ಮಾಡಬೇಕು. ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಪೊಲೀಸರಿಗೆ ಸೂಕ್ತ ತರಬೇತಿ ನೀಡಬೇಕು~ ಎಂದು ಅವರು ಆಗ್ರಹಿಸಿದರು.`ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ನಕ್ಸಲ್ ಚಟುವಟಿಕೆ ವ್ಯಾಪಕವಾಗಲು ಕಾರಣವಾಗುತ್ತಿದೆ ಎಂದು ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಚಿರಂಜೀವಿ ಸಿಂಗ್ ಅವರಿಗೆ ಮನವಿ ಸಲ್ಲಿಸಿದ್ದೆವು. ವಿದ್ಯುತ್, ರಸ್ತೆ, ಅಂಗನವಾಡಿ, ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಿಕೊಡಿ ಎಂದು ರೂ. 14 ಕೋಟಿ ಅಂದಾಜಿನ ಯೋಜನೆ ರೂಪಿಸಿ ಅವರಿಗೆ ಮನವಿ ಸಲ್ಲಿಸಿದ್ದೆವು.

 

ಗ್ರಾಮಸ್ಥರಿಗೆ ತೊಂದರೆ ಕೊಡಬೇಡಿ ಎಂದು ವನ್ಯಜೀವಿ ಇಲಾಖೆಗೆ ಅವರು ಸ್ಪಷ್ಟ ಸೂಚನೆ ನೀಡಿದ್ದರು. ಬಳಿಕ ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಈಗ ಸಮಸ್ಯೆಗಳಿಗೆ ತೇಪೆ ಹಾಕುವ ಕೆಲಸ ಆಗಿದೆ. ದುರ್ಘಟನೆ ಸಂಭವಿಸಿದಾಗ ಮಾತ್ರ ಸರ್ಕಾರದ ಚಿತ್ತ ಅತ್ತ ಹರಿಯುತ್ತದೆ~ ಎಂಬುದು ಪರಿಸರಾಸಕ್ತರ ಒಕ್ಕೂಟದ ರಾಜೀವ್ ಸಾಲಿಯಾನ್ ಅವರ ಅಸಮಾಧಾನದ ನುಡಿ.`ರಸ್ತೆ, ನೀರು, ವಿದ್ಯುತ್ ಪೂರೈಕೆಗೆ ಸರ್ಕಾರ ಆದ್ಯತೆ ನೀಡಬೇಕು. ವಿಶೇಷ ಪ್ಯಾಕೇಜ್ ನೀಡಬೇಕು. ಶತಮಾನಗಳಿಂದ ಡಾಂಬರೀಕರಣ ಕಾಣದ ರಸ್ತೆಗಳ ಅಭಿವೃದ್ಧಿ ಆಗಬೇಕು. ಕುಗ್ರಾಮಗಳಿಗೂ ವಿದ್ಯುತ್ ಸಂಪರ್ಕ ಒದಗಿಸಬೇಕು. ಆಗ ಮಾತ್ರ ಸಮಸ್ಯೆ ತಕ್ಕಮಟ್ಟಿಗೆ ಬಗೆಹರಿಯುತ್ತದೆ~ ಎಂದು ಸವಣಾಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಮಲಾ `ಪ್ರಜಾವಾಣಿ~ಗೆ ತಿಳಿಸಿದರು.`ಎರಡೂ ತಿಂಗಳ ಹಿಂದೆ ನಾವೂರದಲ್ಲಿ ಜಿಲ್ಲಾಧಿಕಾರಿ ಸಭೆ ನಡೆಸಿ ನಕ್ಸಲ್‌ಪೀಡಿತ ಪ್ರದೇಶದ ಅಭಿವೃದ್ಧಿ ಬಗ್ಗೆ ಚರ್ಚಿಸಿದ್ದರು. ಕಾಟಾಚಾರಕ್ಕೆ ಅಭಿವೃದ್ಧಿ ಕೆಲಸ ನಡೆಯುತ್ತಿದೆ ಎಂಬುದನ್ನು ಗ್ರಾಮಸ್ಥರು ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದರು. ಒಂದು ತಿಂಗಳ ಒಳಗೆ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದ್ದರು. ಆದರೆ, ಈ ಈಗಲೂ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ~ ಎಂದು ಸವಣಾಲು ಗ್ರಾಮಸ್ಥರೊಬ್ಬರು ಬೇಸರ ವ್ಯಕ್ತಪಡಿಸಿದರು.`3 ಹಂತದ ಯೋಜನೆ~

ಸುಮಾರು ಎರಡು ತಿಂಗಳ ಹಿಂದೆ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇತೃತ್ವದಲ್ಲಿ ನಕ್ಸಲ್ ಪೀಡಿತ ಪ್ರದೇಶಕ್ಕೆ ಭೇಟಿ ನೀಡಲಾಯಿತು. ತುರ್ತು ಕಾಮಗಾರಿ ಕೈಗೊಳ್ಳಲು ನಿರ್ಧರಿಸಲಾಗಿದೆ. ಮೂರು ಹಂತದ ಯೋಜನೆಗೆ ಕ್ರಿಯಾಯೋಜನೆ ತಯಾರಾಗಿದೆ. ಮೊದಲ ಹಂತದಲ್ಲಿ ಸೌರದೀಪ ಪೂರೈಕೆ, ಕಡಿಮೆ ವೆಚ್ಚದಲ್ಲಿ ಪೂರ್ಣಗೊಳಿಸಬಹುದಾದ ರಸ್ತೆಗಳ ದುರಸ್ತಿ, ಆರೋಗ್ಯ ಸೇವೆ, ಜಾತಿ- ಆದಾಯ ಪ್ರಮಾಣಪತ್ರ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ. ಈ ಹಿಂದೆ ಕೊಟ್ಟ ಸೌರದೀಪಗಳು ಕೆಟ್ಟು ಹೋಗಿದ್ದರೆ, ಅವುಗಳನ್ನು ದುರಸ್ತಿ ಮಾಡಿ ಕೊಡಲಾಗುತ್ತದೆ. ಎರಡು, 3ನೇ ಹಂತದಲ್ಲಿ ಶಾಶ್ವತ ಕಾಮಗಾರಿಗೆ ಆದ್ಯತೆ ನೀಡಲಾಗುತ್ತದೆ~ ಎಂದು ಜಿ.ಪಂ. ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ. ದ.ಕ: ಅನುದಾನ ಬಿಡುಗಡೆ 1.8 ಕೋಟಿ

ನಕ್ಸಲ್ ಚಟುವಟಿಕೆಯ ಆರಂಭದಲ್ಲಿ ಸರ್ಕಾರ ನಕ್ಸಲ್ ಪ್ಯಾಕೇಜ್ ಘೋಷಿಸಿತು. ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆ ನಡೆಯುತ್ತಿದ್ದ ಪ್ರದೇಶಗಳನ್ನು ಗುರುತಿಸಿ  ಈ ಪ್ಯಾಕೇಜ್ ಅಡಿ ಅಭಿವೃದ್ಧಿಗೆ ಅನುದಾನ ಒದಗಿಸಲಾಯಿತು. ಈ ಪ್ಯಾಕೇಜ್‌ನಲ್ಲಿ ಜಿಲ್ಲೆಗೆ ರೂ 1.8 ಕೋಟಿ ಅನುದಾನ ಬಿಡುಗಡೆಯಾಗಿದೆ.ಬೆಳ್ತಂಗಡಿ ತಾಲ್ಲೂಕಿನ ಕುತ್ಲೂರು, ನಾರಾವಿ, ನಾವುರ, ಪಿಲ್ಯ, ಸುಲ್ಕೇರಿ, ಶಿರ್ಲಾಲು, ಸವಣಾಲು, ನಡ, ಮಲವಂತಿಗೆ, ಮಿತ್ತಬಾಗಿಲು, ಲಾಯಿಲ ಗ್ರಾಮಗಳು ನಕ್ಸಲ್ ಪೀಡಿತ ಗ್ರಾಮಗಳು. ಈ ಗ್ರಾಮಗಳಿಗೆ 2005ರ ನವೆಂಬರ್ 21ರಂದು . ರೂ. 1 ಕೋಟಿ ಬಿಡುಗಡೆಯಾಗಿತ್ತು.ಇದರಲ್ಲಿ ಸವಣಾಲು- 3 ಲಕ್ಷ, ನಾವೂರ- 10.8 ಲಕ್ಷ, ನಡ- 7.5 ಲಕ್ಷ, ಲಾಯಿಲ- 2 ಲಕ್ಷ, ಮಲವಂತಿಗೆ 31.2 ಲಕ್ಷ, ನಾರಾವಿ- 6 ಲಕ್ಷ, ಕುತ್ಲೂರು- 13.1 ಲಕ್ಷ, ಸುಲ್ಕೇರಿ- 15.4 ಲಕ್ಷ, ನಾವರ- 2.5 ಲಕ್ಷ, ಶಿರ್ಲಾಲು- 8.5 ಲಕ್ಷ ವಿನಿಯೋಗ ಆಗಿತ್ತು. ಆ ಬಳಿಕ ರಾಜ್ಯ ಸರ್ಕಾರ ಎಂಟು ಗ್ರಾಮಗಳಿಗೆ ತಲಾ 10 ಲಕ್ಷದಂತೆ ರೂ. 80 ಲಕ್ಷ ಬಿಡುಗಡೆ ಮಾಡಿತ್ತು. ನಮ್ಮಿಂದಾಗಿ ಗ್ರಾಮದ ಅಭಿವೃದ್ಧಿಗೆ ದುಡ್ಡು ಬರುತ್ತಿದೆ ಎಂದು ನಕ್ಸಲರು ಪ್ರಚಾರ ಮಾಡಲಾರಂಭಿಸಿದ್ದನ್ನು ಗಮನಿಸಿದ ಸರ್ಕಾರ, ಆ ಬಳಿಕ `ನಕ್ಸಲ್ ಪ್ಯಾಕೇಜ್~ ವಿನ್ಯಾಸದಲ್ಲಿ ಬದಲಾವಣೆ ಮಾಡಿತು. `ನಕ್ಸಲ್ ಪ್ಯಾಕೇಜ್~ ಎಂಬ ಪದ ಬಳಕೆಯನ್ನು ಸರ್ಕಾರ ಕೈಬಿಟ್ಟಿತ್ತು.`ಕುದುರೆಮುಖ ರಾಷ್ಟ್ರೀಯ ಉದ್ಯಾನವದಿಂದ ಹೊರಬರುವ ಕುಟುಂಬಗಳಿಗೆ ರೂ. 10 ಲಕ್ಷ ನೀಡುವುದಾಗಿ ಸರ್ಕಾರ ಘೋಷಿಸಿತ್ತು. ಕುತ್ಲೂರು, ನಾರಾವಿಯಿಂದ ಈವರೆಗೆ 12 ಕುಟುಂಬಗಳು ಉದ್ಯಾನವನದಿಂದ ಹೊರಬಂದು ನಾವೂರದಲ್ಲಿ ನೆಲೆಸಿವೆ. ಕುಟುಂಬಗಳಿಗೆ ಪುಸಲಾಯಿಸಿ ಕಾಡಿನಿಂದ ಹೊರ ಕರೆ ತರಲಾಗುತ್ತದೆ.ಬಳಿಕ ಅವರಿಗೆ ಹಕ್ಕುಪತ್ರವೂ ಸಿಗುವುದಿಲ್ಲ. ಕುತ್ಲೂರಿನಿಂದ ಹೊರಬಂದು ನಾಯಿದಗುರಿಯಲ್ಲಿ ನೆಲೆಸಿದ ಆರು ಮಲೆಕುಡಿಯ ಕುಟುಂಬಗಳಿಗೆ ಈಗಲೂ ಹಕ್ಕುಪತ್ರ ಸಿಕ್ಕಿಲ್ಲ. ಅಲ್ಲಿಂದಲೂ ಒಕ್ಕಲೆಬ್ಬಿಸಲು ಯತ್ನಿಸಲಾಗಿತ್ತು. ಇಂತಹ ಘಟನೆಗಳು ಕಾಡಿನಿಂದ ಹೊರಬರುವವರಿಗೆ ಮತ್ತಷ್ಟು ಭೀತಿಯನ್ನುಂಟು ಮಾಡುತ್ತದೆ. ನಕ್ಸಲರ ಒಲವು ಬೆಳೆಯಲು ಕಾರಣವಾಗುತ್ತದೆ~ ಎಂದು ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಸೋಮನಾಥ ನಾಯಕ್ `ಪ್ರಜಾವಾಣಿ~ಗೆ ತಿಳಿಸಿದರು.`ನಕ್ಸಲ್ ಪೀಡಿತ ಪ್ರದೇಶದ ಅಭಿವೃದ್ಧಿಗೆ ಸರ್ಕಾರ ನಿರ್ಣಯ ಕೈಗೊಂಡು ಅನುದಾನ ಬಿಡುಗಡೆ ಮಾಡಿತು. ರಾಷ್ಟ್ರೀಯ ಉದ್ಯಾನವನ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಅವಕಾಶ ಇಲ್ಲ ಎಂದು ವನ್ಯಜೀವಿ ಇಲಾಖೆ ತಡೆ ಹಾಕಲಾರಂಭಿಸಿತು. ಇದರಿಂದಾಗಿ ಪ್ಯಾಕೇಜ್‌ನಲ್ಲಿ ಬಿಡುಗಡೆಯಾದ ಹಣ ರಾಷ್ಟ್ರೀಯ ಉದ್ಯಾನವನದ ಹೊರಗಿನ ಅಭಿವೃದ್ಧಿ ಕಾರ್ಯಕ್ಕೆ ಬಳಕೆಯಾಯಿತು. ಬಿಡುಗಡೆಯಾದ ಹಣ ಏಕೆ ವಾಪಸ್ ಬಿಡುವುದು ಎಂದು ಗ್ರಾ.ಪಂ. ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡವು. ನಕ್ಸಲ್‌ಪೀಡಿತ ಪ್ರದೇಶದ ಸ್ಥಿತಿ ಹಾಗೆಯೇ ಉಳಿಯಿತು~ ಎಂದು ಅವರು ವಿಶ್ಲೇಷಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry