ಕೋಟಿ ಕೊಟ್ಟರೂ ಬಿಕಿನಿ ಒಲ್ಲೆ...

7

ಕೋಟಿ ಕೊಟ್ಟರೂ ಬಿಕಿನಿ ಒಲ್ಲೆ...

Published:
Updated:
ಕೋಟಿ ಕೊಟ್ಟರೂ ಬಿಕಿನಿ ಒಲ್ಲೆ...

`ಮೊದಲ ಸಲ ಸ್ಕರ್ಟ್ ತೊಟ್ಟಾಗಲೇ ನಾಚಿಕೊಂಡಿದ್ದವಳು ನಾನು. ಇನ್ನು ಬಿಕಿನಿ ಹಾಕ್ತೀನಾ? ಹತ್ತು ಕೋಟಿ ಕೊಟ್ಟರೂ ಬಿಕಿನಿ ಹಾಕಲ್ಲ' ಎಂದರು ನಟಿ ಮೈತ್ರಿಯಾ.ಮಾಡೆಲಿಂಗ್ ಲೋಕ ಪ್ರವೇಶಿಸಿದ ನಂತರ ಗ್ಲಾಮರ್ ಅಗತ್ಯ. ಅಂದಮಾತ್ರಕ್ಕೆ ಎಕ್ಸ್‌ಪೋಸ್ ಮಾಡಲ್ಲ. ಇದುವರೆಗೂ ಎಲ್ಲಿಯೂ ಮಿತಿ ಮೀರಿಲ್ಲ' ಎಂದು ಗಂಭೀರವಾಗಿ ಹೇಳಿದರು.`ಸೂರ್ಯ ದಿ ಗ್ರೇಟ್' ಮೈತ್ರಿಯಾ ನಟಿಸಿದ ಮೊದಲ ಸಿನಿಮಾ. ಬಳಿಕ `ಹೃದಯಾ ಐ ಮಿಸ್ ಯು', `ನಂದಾ', ತಮಿಳಿನ `ತಿಕುಚಿ' ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ `ಟೋಪಿವಾಲಾ'ನಿಗೆ ಜೊತೆಯಾಗಿದ್ದಾರೆ.ಹಾಲಿನಂಥ ಮೈಬಣ್ಣ, ಅಗಲವಾದ ಕಣ್ಣುಗಳು, ಮೋಹಕ ಮೈಕಟ್ಟು ಅವರದು. 5.8 ಎತ್ತರ ಇರುವ ಮೈತ್ರಿಯಾ ಮಂಡ್ಯದ ನಾಗಮಂಗಲದವರು. ಪದವಿ ಪಡೆದಿರುವ ಅವರಿಗೆ ಸಿನಿಮಾ ನಾಯಕಿಯಾಗಬೇಕೆಂಬಾಸೆ ಇತ್ತಂತೆ. `ನನಗೆ ಸಿನಿಮಾಗಳ ಬಗ್ಗೆ ಎಷ್ಟು ಆಸಕ್ತಿ ಇತ್ತು ಎಂದರೆ ಹತ್ತನೇ ತರಗತಿ ಪರೀಕ್ಷೆ ಇದ್ದಾಗಲೂ ಟೀವಿ ನೋಡ್ತಿದ್ದೆ' ಎಂದು ನೆನಪಿಗೆ ಜಾರುತ್ತಾರೆ. ಪರಭಾಷೆಗಳಲ್ಲಿ ಅವಕಾಶಗಳು ಬರುತ್ತಿದ್ದರೂ ಕನ್ನಡದಲ್ಲಿ ನೆಲೆ ಕಂಡುಕೊಳ್ಳಬೇಕು ಎನ್ನುವುದು ಅವರ ಆಸೆ.`ಟೋಪಿವಾಲಾ' ಚಿತ್ರದಲ್ಲಿ ಭಾವನಾ ಮೊದಲ ನಾಯಕಿ. ಅದರಿಂದ ಆರಂಭದಲ್ಲಿ ನಟಿಸಲು ಮೈತ್ರಿಯಾ ಒಲ್ಲೆ ಎಂದಿದ್ದರಂತೆ. ಆದರೆ ಉಪೇಂದ್ರ ಸಿನಿಮಾ ನಾಯಕ ಎಂದು ತಿಳಿದಾಗ ಒಪ್ಪದೇ ಇರಲಾಗಲಿಲ್ಲ ಎನ್ನುವ ಅವರಿಗೆ ತಮ್ಮ ಅಭಿನಯ ಸಾಮರ್ಥ್ಯ ತೋರಿಸುವಾಸೆ. ವಿಜಯಾ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ಅಭಿನಯ, ನೃತ್ಯದ ತರಬೇತಿ ಪಡೆದುಕೊಂಡಿರುವ ಅವರು, `ಟೋಪಿವಾಲಾ' ಚಿತ್ರದ ನಂತರ ಉತ್ತಮ ಅವಕಾಶಗಳು ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.ಇದುವರೆಗೂ ಸಾಕಷ್ಟು ರ‌್ಯಾಂಪ್ ಶೋಗಳು, ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವ ಈ ಚೆಲುವೆ `ನೋಡಲಷ್ಟೇ ಚೆನ್ನಾಗಿದ್ದರೆ ಸಾಲದು. ನಟಿಸಲೂ ಬರಬೇಕು' ಎಂಬ ಮಾತಿನಲ್ಲಿ ವಿಶ್ವಾಸ ಇಟ್ಟವರು.ಕನ್ನಡವನ್ನು ಸೊಗಸಾಗಿ ಮಾತನಾಡುವ ಈ ಸುಂದರಿಗೆ ಡಬ್ಬಿಂಗ್ ಮಾಡುವಾಸೆಯೂ ಇದೆ. `ಕನ್ನಡದಲ್ಲಿ ಕನ್ನಡದ ಹುಡುಗಿಯರಿಗೆ ಅವಕಾಶ ಕಡಿಮೆ. ಕನ್ನಡದವರಿಗೆ ಮಾನ್ಯತೆ ನೀಡುವುದಾದರೆ ನಾವ್ಯಾಕೆ ಪರಭಾಷೆಗೆ ಹೋಗಬೇಕು' ಎಂದು ಪ್ರಶ್ನೆ ಕೇಳುವ ಮೈತ್ರಿಯಾಗೆ, `ಆಪ್ತಮಿತ್ರ' ಚಿತ್ರದಲ್ಲಿ ಸೌಂದರ್ಯ ನಟಿಸಿದ್ದ ಸವಾಲಿನಂಥ ಪಾತ್ರ ಇಷ್ಟವಂತೆ.`ನನಗೆ ಹುಚ್ಚಿ ಪಾತ್ರ ಇಷ್ಟ. ಪೆದ್ದಿ ಪಾತ್ರ ಇಷ್ಟ. ಯಾಕೆಂದರೆ ಪೆದ್ದು ಪೆದ್ದಾಗಿರುವ ಹುಡುಗಿಯರು ಮುದ್ದಾಗಿ ಕಾಣ್ತಾರೆ. ಇಷ್ಟವಾಗ್ತಾರೆ' ಎಂದು ತುಂಟು ನಗೆ ನಗುವ ಅವರಿಗೆ ಬಾಲ್ಯದಲ್ಲಿ ಒಮ್ಮೆ ಐಪಿಎಸ್ ಅಧಿಕಾರಿಯಾಗಬೇಕು ಎನಿಸಿತ್ತಂತೆ. ಆ ಆಸೆಯನ್ನು ಈಡೇರಿಸುವಂಥ ಪಾತ್ರ ಸಿನಿಮಾದಲ್ಲಿ ಸಿಕ್ಕರೆ ಧನ್ಯೋಸ್ಮಿ ಎನ್ನುತ್ತಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry