ಕೋಟಿ ರೂ. ಯುಜಿಸಿ ಹಣ ದುರುಪಯೋಗ

ಸೋಮವಾರ, ಜೂಲೈ 22, 2019
27 °C

ಕೋಟಿ ರೂ. ಯುಜಿಸಿ ಹಣ ದುರುಪಯೋಗ

Published:
Updated:

ಬೆಂಗಳೂರು: ನಗರದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳನ್ನು ಆರಂಭಿಸಲು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ನೀಡಿದ್ದ 1.26 ಕೋಟಿ ರೂಪಾಯಿ ಅನುದಾನ ದುರುಪಯೋಗವಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಾಗಿದ್ದ ತುಷಾರ್ ಗಿರಿನಾಥ್ (ಈಚೆಗೆ ವರ್ಗಾವಣೆಯಾಗಿದ್ದಾರೆ) ಅವರು ಈ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಿ ಏಪ್ರಿಲ್ ಮೊದಲ ವಾರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಅವ್ಯವಹಾರಕ್ಕೆ ಕಾರಣರಾದ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್.ಸಿದ್ದಪ್ಪ, ಹಿಂದೆ ವ್ಯವ ಸ್ಥಾಪಕರಾಗಿದ್ದ ಎ.ಎಸ್.ನಾಗರಾಜಚಾರ್ (ಈಗ ಶಿವಮೊಗ್ಗದ ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿಯಲ್ಲಿದ್ದಾರೆ) ಮತ್ತು ಅಧೀಕ್ಷಕ ಎಸ್.ಬಿ. ರಾಜಕಂಠೀರವ ಅವರನ್ನು ಅಮಾನತುಗೊಳಿಸುವಂತೆ ಶಿಫಾರಸು ಮಾಡಿದ್ದಾರೆ.ಈ ವರದಿಯನ್ನು ಆಧರಿಸಿ ಪ್ರಾಂಶುಪಾಲರನ್ನು ಅಮಾನತುಗೊಳಿಸುವಂತೆ ಕಾಲೇಜು ಶಿಕ್ಷಣ ಇಲಾಖೆಯ ಹಿಂದಿನ ಹಾಗೂ ಹಾಲಿ ಪ್ರಧಾನ ಕಾರ್ಯದರ್ಶಿ ಅವರು ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ಅವರಿಗೆ ಪತ್ರ ಬರೆದಿದ್ದಾರೆ. ಆದರೆ ಸರ್ಕಾರ ಒತ್ತಡಕ್ಕೆ ಮಣಿದು ಕ್ರಮಕೈಗೊಳ್ಳಲು ಹಿಂಜರಿಯುತ್ತಿದೆ ಎಂದು ಉನ್ನತ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಕಾಲೇಜಿನ ಪ್ರಾಂಶುಪಾಲರು ತಮಗಿರುವ ಎಲ್ಲ ಪ್ರಭಾವವನ್ನು ಬಳಸಿ ಅಮಾನತು ಆದೇಶ ಹೊರ ಬೀಳದಂತೆ ನೋಡಿಕೊಂಡಿದ್ದಾರೆ. ಒಂದು ತಿಂಗಳ ಹಿಂದೆಯೆ ಅಮಾನತು ಮಾಡಿ ಎಂದು ಪ್ರಧಾನ ಕಾರ್ಯದರ್ಶಿ ಪತ್ರ ಬರೆದಿದ್ದರೂ, ಇದುವರೆಗೆ ಯಾವುದೇ ಶಿಸ್ತುಕ್ರಮಕೈಗೊಂಡಿಲ್ಲ. ಕಾಲೇಜಿನ ಶೈಕ್ಷಣಿಕ ವಾತಾವರಣ ಹಾಳಾಗಿದ್ದು, ಮುಂದೆ ಯುಜಿಸಿ ಅನುದಾನವೂ ರದ್ದಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.ಈಗಾಗಲೇ ಬಂದಿರುವ ಅನುದಾನದ ಬಳಕೆ ಪ್ರಮಾಣ ಪತ್ರವನ್ನು ಮೇ 31ರ ಒಳಗೆ ಕಳುಹಿಸಿಕೊಟ್ಟಿದ್ದರೆ ಯುಜಿಸಿ ಈ ವರ್ಷ ಮತ್ತೆ 2.5 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡುತ್ತಿತ್ತು. ಆದರೆ ಇದುವರೆಗೆ ಬಳಕೆ ಪ್ರಮಾಣ ಪತ್ರ ನೀಡಿಲ್ಲ. ಇಷ್ಟೆಲ್ಲ ಅವ್ಯವಹಾರಗಳು ಆಗಿರುವುದರಿಂದ ಒಂದು ವೇಳೆ ಕಾಲೇಜು ಕಪ್ಪುಪಟ್ಟಿಗೆ ಸೇರಿದರೆ ಮುಂದೆ ಹತ್ತು ವರ್ಷಗಳ ಕಾಲ ಯುಜಿಸಿಯಿಂದ ಯಾವುದೇ ಅನುದಾನ ಬರುವುದಿಲ್ಲ ಎಂಬ ಆತಂಕ ಕಾಲೇಜಿನ ಸಿಬ್ಬಂದಿ ವರ್ಗವನ್ನು ಕಾಡುತ್ತಿದೆ.ವಿವಿಧ ಯೋಜನೆಗಳಿಗಾಗಿ ಯುಜಿಸಿ ನೀಡಿದ್ದ 1.26 ಕೋಟಿ ರೂಪಾಯಿ ಹಣವನ್ನು ಪ್ರಾಂಶುಪಾಲರು ನಿಯಮಾನುಸಾರ ಬಳಕೆ ಮಾಡಿಲ್ಲ ಎಂದು ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘ ಸಲ್ಲಿಸಿದ್ದ ದೂರನ್ನು ಆಧರಿಸಿ ತನಿಖೆ ನಡೆಸಿದ ಆಯುಕ್ತರು, ಸರ್ಕಾರಕ್ಕೆ ವಿವರವಾದ ವರದಿಯನ್ನು ಸಲ್ಲಿಸಿದ್ದು, ಅದರಲ್ಲಿ ಪಾರದರ್ಶಕ ಕಾಯ್ದೆಯನ್ನು ಉಲ್ಲಂಘಿಸಿ, ಟೆಂಡರ್ ಕರೆಯದೆ ಕಾಮಗಾರಿಗಳನ್ನು ನೀಡಿರುವುದು, ಕೊಟೇಷನ್ ಇಲ್ಲದೆ ಇಷ್ಟ ಬಂದ ಹಾಗೆ ಪೀಠೋಪಕರಣಗಳನ್ನು ಖರೀದಿಸಿರುವುದು ಸೇರಿದಂತೆ ಹಲವು ಅವ್ಯವಹಾರಗಳು ನಡೆದಿರುವುದು ಕಂಡು ಬಂದಿದೆ.ಸರ್ಕಾರದ 59 ಲಕ್ಷ ರೂಪಾಯಿ ಅನುದಾನ ಮತ್ತು ಯುಜಿಸಿಯ ಸುಮಾರು 27 ಲಕ್ಷ ರೂಪಾಯಿ ನೆರವನ್ನು ಕೊಟೇಷನ್ ಮೂಲಕ ಖರ್ಚು ಮಾಡಲಾಗಿದೆ. ಆದರೆ ಕೊಟೇಷನ್ ಅನ್ನು ನಿಯಮಾನುಸಾರ ಕರೆದಿಲ್ಲ. ಕೊಟೇಷನ್ ಸಲ್ಲಿಸಿರುವ ಮೊಹರು ಮಾಡಿದ ಲಕೋಟೆಗಳು ಇಲ್ಲ. ದಿನಾಂಕವನ್ನೂ ನಮೂದಿಸಿಲ್ಲ. ಕೇವಲ ನೆಪ ಮಾತ್ರಕ್ಕೆ ಕೊಟೇಷನ್ ಕರೆದು ತಮ್ಮ ಇಷ್ಟಾನುಸಾರ ಖರೀದಿಸಿದ್ದಾರೆ. ಪೀಠೋಪಕರಣಗಳ ದಾಸ್ತಾನು ಪುಸ್ತಕವನ್ನು ಒದಗಿಸಿಲ್ಲ.ಗಣಿತ ವಿಭಾಗದಲ್ಲಿ ಅಗತ್ಯವಿರುವಷ್ಟು ಉಪನ್ಯಾಸಕರು ಇದ್ದರೂ, ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಅಲ್ಲದೆ ಕೆಲವು ವಿಭಾಗಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.ಒಂದು ಲಕ್ಷಕ್ಕೂ ಮೀರಿದ ಪಾವತಿಗೆ ಟೆಂಡರ್ ಕರೆಯುವುದು ಕಡ್ಡಾಯ. ಇದನ್ನು ತಪ್ಪಿಸಲು ಉದ್ದೇಶಪೂರ್ವಕವಾಗಿ ಬಿಲ್ಲುಗಳನ್ನು ವಿಭಾಗ ಮಾಡಿ ಒಟ್ಟು 35 ಬಿಲ್ಲುಗಳಲ್ಲಿ ಕೊಟೇಷನ್ ಆಧಾರದ ಮೇಲೆ ಹಣ ಪಾವತಿಸಿರುವುದು ತನಿಖೆಯಿಂದ ಗೊತ್ತಾಗಿದೆ. ಬೇಡಿಕೆ ಅನುಗುಣವಾಗಿ ವಸ್ತುಗಳನ್ನು ಖರೀದಿಸದೆ ಇಷ್ಟಕ್ಕೆ ಅನುಗುಣವಾಗಿ ಖರೀದಿಸಲಾಗಿದೆ. ಅನುದಾನದ ಬಳಕೆ ಪ್ರಮಾಣ ಪತ್ರವನ್ನು ಕೇಂದ್ರ ಕಚೇರಿಗೆ ಕಳುಹಿಸಿಲ್ಲ ಎಂಬುದು ಸೇರಿದಂತೆ ಪ್ರಮುಖವಾಗಿ 12 ಲೋಪ ಗುರುತಿಸಲಾಗಿದೆ.1921ರಲ್ಲಿ ಕಾಲೇಜು ಆರಂಭವಾಗಿದ್ದು, ಕಾಲೇಜು ಹೊಂದಿರುವ ಭೂಮಿ ಮತ್ತು ಕಟ್ಟಡಗಳ ಸ್ಥಿರಾಸ್ತಿ, ಚರಾಸ್ಥಿಗಳ ಲೆಕ್ಕವನ್ನೇ ಇಟ್ಟಿಲ್ಲ. ಕಾಲೇಜಿಗೆ ಖರೀದಿಸಿರುವ ಸಾಮಗ್ರಿಗಳ ದಾಸ್ತಾನು ವಿವರಗಳು ಲಭ್ಯವಿಲ್ಲ. ಹಳೆಯ ಮತ್ತು ಅನುಪಯುಕ್ತ ಪೀಠೋಪಕರಣಗಳನ್ನು ವಿಲೇವಾರಿ ಮಾಡಿರುವ ಬಗ್ಗೆಯೂ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ಆಯುಕ್ತರು ವರದಿಯಲ್ಲಿ ಆಕ್ಷೇಪಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry