ಸೋಮವಾರ, ಜೂನ್ 21, 2021
27 °C
ಬಹದ್ದೂರ್‌ ಬಂಡಿಯಲ್ಲಿ ರಾಷ್ಟ್ರೀಯ ಹೋಳಿ ಉತ್ಸವ

ಕೋಟೆಯ ಕೆಳಗೆ ಲಂಬಾಣಿಗರ ಸಂಭ್ರಮ

ಪ್ರಜಾವಾಣಿ ವಾರ್ತೆ/ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಕೊಪ್ಪಳ: ಹೋಳಿ ಹಬ್ಬದ ಅಂಗವಾಗಿ ಶನಿವಾರ ರಾತ್ರಿಯಿಡೀ ಹಾಡು– ಪಾಡು ಕುಣಿತದಿಂದ ಬಹದ್ದೂರ್‍ ಬಂಡಿ ಗ್ರಾಮ ಸಂಭ್ರಮಿಸಿತು.

ಕೂಪಳ್‍ಗಡ ಬಾದ್ದರ ಬಂಡಾ ಸೇವಾ ಟ್ರಸ್ಟ್‍ ವತಿಯಿಂದ ಇಲ್ಲಿ ನಡೆದ ರಾಷ್ಟ್ರೀಯ ಹೋಳಿ ಹಬ್ಬ ಆಚರಣೆ­ಯಲ್ಲಿ ರಾಜ್ಯದ ಮೂಲೆ ಮೂಲೆ­ಯಿಂದಲೂ ಲಂಬಾಣಿ ಜನರು ಆಗಮಿಸಿ ತಮ್ಮ ಕಲಾ ಪ್ರದರ್ಶನ ನೀಡಿದರು.ಇಲ್ಲಿ ಬಾವಾಜಿ ಗುರುವಿನ ಕಟ್ಟೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಕೋಟೆಯ ಬುಡದ ಬಯಲಲ್ಲಿ ಸಾವಿರಾರು ಲಂಬಾಣಿ ಜನರು ತಮ್ಮದೇ ಆದ ಉಡುಗೆ, ತೊಡುಗೆಗಳೊಂದಿಗೆ ವಿಶಿಷ್ಟ ನೃತ್ಯ ಪ್ರದರ್ಶಿಸಿದರು. ವಿಜಾಪುರದ ತಂಡವು ಇಲ್ಲಿ ಲಂಬಾ­ಣಿ ಅಪ್ಪಟ ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಿತು. ಗದಗದ ತಂಡ ಕನ್ನಡ ಹಾಗೂ ಲಂಬಾಣಿ ಭಾಷೆಯ ಹಾಡು­ಗ­ಳಲ್ಲಿ ನೃತ್ಯ ಹಾಗೂ ಕೋಲಾಟ ಪ್ರದರ್ಶಿ­ಸಿತು. ಗಜೇಂದ್ರಗಡದಿಂದ ಬಂದ ತಂಡವು ‘ಸತ್ಯಂ ಶಿವಂ ಸುಂದರಂ’ ಹಾಡಿಗೆ ಮೂಲ ಲಂಬಾಣಿ ಹೆಜ್ಜೆಗಳಿಗೆ ಆಧು­ನಿಕ ನೃತ್ಯದ ಸ್ಪರ್ಶ ನೀಡಿ ಗಮ­ನ­ಸೆಳೆಯಿತು. ಗಿಣಿಗೇರಿ ತಾಂಡಾದ ಪುಟ್ಟ ಮಕ್ಕಳೂ ತಮ್ಮ ಪ್ರತಿಭೆ ಪ್ರದರ್ಶಿಸಿದರು.ಇದರ ಮಧ್ಯೆ ಇತಿಹಾಸ ತಜ್ಞ ಪ್ರದೀಪ್‌ ರಾಠೋಡ್‌ ಮಾತನಾಡಿ, ಬಹದ್ದೂರ್‌ ಬಂಡಿ ಕ್ಷೇತ್ರವು ಲಂಬಾಣಿ ಸಮಾಜದ ಸಾಂಸ್ಕೃತಿಕ ಕೇಂದ್ರ ಮಾತ್ರ­ವಲ್ಲ. ಇದು ಬಂಜಾರ ಸಮುದಾಯದ ಕಾಶಿಯಾಗಬೇಕು. 1792ರಿಂದ 2014­ರವರೆಗೆ ಇಲ್ಲಿಯವರೆಗೆ 222 ವರ್ಷ­ಗಳ ಕಾಲ ನಿರಂತರವಾಗಿ ಬಂಜಾರ ಸಂಸ್ಕೃತಿಯ ಹೋಳಿ ಹಬ್ಬ­ವನ್ನು ಆಚರಿಸುತ್ತಾ ಬರಲಾಗುತ್ತಿದೆ. ಬ್ರಿಟಿಷರ ವಿರುದ್ಧ ಸೇರಿದಂತೆ ಅನ್ಯಾಯ, ದೇಶ ದ್ರೋಹದ ವಿರುದ್ಧ ಹೋರಾಡಿ, ಪರಾಕ್ರಮ ಮೆರೆದ ಸಮುದಾಯವಿದು.ಹಾಗಿದ್ದರೂ ಶೈಕ್ಷಣಿಕ, ಔದ್ಯೋಗಿ­ಕವಾಗಿ ಹಿಂದುಳಿದಿರುವ ಈ ಸಮಾಜಕ್ಕೆ ಸೂಕ್ತ ಸರ್ಕಾರಿ ಸೌಲಭ್ಯಗಳು ದೊರೆತು ಮುಖ್ಯವಾಹಿನಿಯಲ್ಲಿ ಬರುವಂತಾ­ಗಬೇಕು ಎಂದು ನುಡಿದರು. ರಾತ್ರಿ ನೃತ್ಯ, ಪೂಜಾ ಕಾರ್ಯಕ್ರಮದ ನಂತರ ಕಾಮದಹನವೂ ನಡೆಯಿತು.

ಬಹದ್ದೂರ್‌ ಬಂಡಿ ಕೋಟೆಯ ಹಿನ್ನೆಲೆ

ಬೆಳಗಾವಿಯ ಸುಬೇದಾರ ಬಾಜಿರಾಯ ಕೊಪ್ಪಳ ಸಮೀಪದ ಗುಂಟಾಪುರ (ಬಹದ್ದೂರ್‌ ಬಂಡಿಯ ಮೊದಲ ಹೆಸರು)ಕ್ಕೆ ಬಂದು 1076ರಲ್ಲಿ ಕೋಟೆ ಕಟ್ಟಿಸಿದರು. ಕೋಟೆಯೊಳಗೆ ಮಹಾದೇವರ ಗುಡಿಯಿದೆ. ಅವರ ತಂಡದ ನಾಯಕರಾದ ರಾಜೂಜಿ ನಾಯ್ಕ, ಲಷ್ಕರಿ ನಾಯ್ಕ ಅವರು ಗೊಸಾಯಿ ಬಾವ ಇವರನ್ನು ಕೋಟೆ ಕಾವಲಿಗೆ ನೇಮಕ ಮಾಡಿದರು. ಬಳಿಕ ಟಿಪ್ಪು ಸುಲ್ತಾನ್‌ ಈ ಕೋಟೆ ವಶಪಡಿಸಿಕೊಂಡು ಹೆಸರು ಬದಲಾಯಿಸಿದ. ನಂತರ ಬ್ರಿಟಿಷರ ವಶಕ್ಕೂ ಹೋಯಿತು.ರಾಜೂಜಿ ಹಾಗೂ ಲಷ್ಕರಿ ನಾಯ್ಕ ಅವರಿಗೆ ಬಾಜೀರಾಯರು ಇಲ್ಲಿನ 400 ಎಕರೆ ಜಮೀನನ್ನು ಬಹುಮಾನವಾಗಿ ಕೊಟ್ಟಿದ್ದರು. ಪ್ರತಿ ವರ್ಷ ಇಲ್ಲಿ ಲಂಬಾಣಿ ಜನರು ಬಂದು ಹೋಳಿ ಆಚರಿಸುತ್ತಾರೆ. ಈ ಬಾವಾಜಿ ಗುರುವಿನ ಕಟ್ಟಿಯಲ್ಲಿ ಗುರು ಹಾತಿರಾಮ ಬಾವಜಿಯವರು 41 ದಿನ ಉಪವಾಸ ಮಾಡಿದ್ದರು. ಬಳಿಕ ತಿರುಪತಿಯಲ್ಲಿ  ನೆಲೆಸಿದರು ಎಂದು ಇತಿಹಾಸಕಾರರು ಹೇಳುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.