ಬುಧವಾರ, ನವೆಂಬರ್ 20, 2019
21 °C
ಚಿತ್ರದುರ್ಗ ವಿಧಾನಸಭಾ ಕ್ಷೇತ್ರ

ಕೋಟೆ ನಾಡಿನಲ್ಲಿ ಪೈಪೋಟಿಗೆ ವೇದಿಕೆ ಸಜ್ಜು

Published:
Updated:

ಚಿತ್ರದುರ್ಗ: ಕೋಟೆ ನಾಡಿನಲ್ಲಿ ರಾಜಕೀಯ ದಿನೇ ದಿನೇ ಶರವೇಗ ಪಡೆದುಕೊಳ್ಳುತ್ತಿದೆ. ಗ್ರಾಮೀಣ ಮತ್ತು ನಗರ ಪ್ರದೇಶ ಹೊಂದಿರುವ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಹಣಾಹಣಿಗೆ ಸ್ಪರ್ಧಿಗಳು ಸಜ್ಜುಗೊಳ್ಳುತ್ತಿದ್ದಾರೆ.ಕಾಂಗ್ರೆಸ್ ಭದ್ರಕೋಟೆಗೆ ನುಗ್ಗಲು ಇತರ ರಾಜಕೀಯ ಪಕ್ಷಗಳು ನಡೆಸಿದ ಪ್ರಯತ್ನ ಕೆಲವೇ ಬಾರಿ ಮಾತ್ರ ಯಶಸ್ವಿಯಾಗಿದೆ. ಆದರೆ, ಇತ್ತೀಚಿನ ಎಲ್ಲ ಚುನಾವಣೆಗಳಲ್ಲಿ ಛಿದ್ರವಾಗಿರುವ ಕಾಂಗ್ರೆಸ್ ಕೋಟೆಯನ್ನು ಮತ್ತೆ ಕಟ್ಟುವ ಪ್ರಯತ್ನಗಳು ಸಾಗಿದ್ದರೂ ಪರಿಪೂರ್ಣವಾಗಿ ಪಕ್ಷದ ಸಂಘಟನೆಗೆ ಚೈತನ್ಯ ನೀಡುವ ಪ್ರಯತ್ನಗಳು ಇನ್ನೂ ಸರಿಯಾದ ದಿಕ್ಕಿನಲ್ಲಿ ಸಾಗಿಲ್ಲ. ಶಿಥಿಲವಾಗಿರುವ ಕಾಂಗ್ರೆಸ್ ಕೋಟೆಯನ್ನು ಭದ್ರಪಡಿಸಿಕೊಳ್ಳಲು ಚಾಣಾಕ್ಷತನದಿಂದ ಯೋಜನೆ ರೂಪಿಸಿದರೆ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ.ಕಳೆದ ವಿಧಾನಸಭೆ ಚುನಾವಣೆಗೆ ಮುನ್ನ ನಡೆದ ಕ್ಷೇತ್ರ ಮರುವಿಂಗಡಣೆ ನಂತರ ಚಿತ್ರದುರ್ಗ ವಿಧಾನಸಭೆ ಕ್ಷೇತ್ರ ಸಾಮಾನ್ಯ ಕ್ಷೇತ್ರವಾಗಿಯೇ ಮುಂದುವರಿಯಿತು. ಚಿತ್ರದುರ್ಗ ತಾಲ್ಲೂಕಿನ ಕಸಬಾ ಮತ್ತು ಹಿರೇಗುಂಟನೂರು ವೃತ್ತ, ಚಿತ್ರದುರ್ಗ ನಗರಸಭೆ ವ್ಯಾಪ್ತಿಯನ್ನು ಈ ಕ್ಷೇತ್ರ ಹೊಂದಿದೆ. ಈ ಕ್ಷೇತ್ರದಲ್ಲಿ ನಗರಸಭೆಯ 35 ವಾರ್ಡ್‌ಗಳು ಹಾಗೂ 21 ಗ್ರಾಮ ಪಂಚಾಯ್ತಿಗಳಿವೆ.ಚಿತ್ರದುರ್ಗ ವಿಧಾನಸಭಾ ಕ್ಷೇತ್ರ 3,06,000 ಜನಸಂಖ್ಯೆ ಹೊಂದಿದ್ದು, 1,55,088 ಪುರುಷರು ಮತ್ತು 1,50,912 ಮಹಿಳೆಯರು ಇದ್ದಾರೆ. ಈ ಜನಸಂಖ್ಯೆಯಲ್ಲಿ ಒಟ್ಟು 2,10,064 ಮತದಾರರಿದ್ದಾರೆ. ಇದರಲ್ಲಿ 1,05,962 ಪುರುಷರು ಮತ್ತು 1,04,102 ಮಹಿಳಾ  ಮತದಾರರಿದ್ದಾರೆ.ಜನಸಂಖ್ಯೆಗೆ ಹೋಲಿಸಿದರೆ ಶೇ 68.65ರಷ್ಟು ಮತದಾರರಿದ್ದಾರೆ. ಇದರಲ್ಲಿ ಶೇ 68.32 ಪುರುಷರು ಮತ್ತು ಶೇ 68.98 ಮಹಿಳೆಯರು ಸೇರಿದ್ದಾರೆ.

2008ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಎಸ್.ಕೆ. ಬಸವರಾಜನ್ ಈ ಬಾರಿಯೂ ಪುನರಾಯ್ಕೆ ಬಯಸಿ ಕಣಕ್ಕಿಳಿಯಲಿದ್ದಾರೆ.ಬಿಜೆಪಿಯಿಂದ ಹಾಲಿ ವಿಧಾನಪರಿಷತ್ ಸದಸ್ಯ ಜಿ.ಎಚ್. ತಿಪ್ಪಾರೆಡ್ಡಿ ಹಾಗೂ ಕೆಜೆಪಿಯಿಂದ ಮಾಜಿ ಶಾಸಕ ಎ.ವಿ. ಉಮಾಪತಿ ಸ್ಪರ್ಧಿಸುವುದು ಖಚಿತವಾಗಿದೆ. ಕಾಂಗ್ರೆಸ್ ಮತ್ತು ಬಿಎಸ್‌ಆರ್ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲ.ಜಿ.ಎಚ್. ತಿಪ್ಪಾರೆಡ್ಡಿ ಮತ್ತು ಎಸ್.ಕೆ. ಬಸವರಾಜನ್ ನಡುವೆ ಮತ್ತೊಮ್ಮೆ ಜಿದ್ದಾಜಿದ್ದಿ ನಡೆಯಲಿದೆ. 2008ರಲ್ಲಿ ಒಟ್ಟು 55,906 ಮತಗಳಿಸಿದ ಬಸವರಾಜನ್, ಪ್ರತಿಸ್ಪರ್ಧಿ ತಿಪ್ಪಾರೆಡ್ಡಿ ಅವರಿಗಿಂತ 16,322 ಮತಗಳ ಹೆಚ್ಚು ಅಂತರದಿಂದ ಜಯದ ನಗೆ ಬೀರಿದ್ದರು.2004ರಲ್ಲೂ ಈ ಇಬ್ಬರೂ ಮುಖಾಮುಖಿಯಾಗಿದ್ದರು. ತಿಪ್ಪಾರೆಡ್ಡಿ 53,314 ಮತಗಳನ್ನು ಪಡೆದು, ಪ್ರತಿಸ್ಪರ್ಧಿ ಬಸವರಾಜನ್ ಅವರಿಗಿಂತ ಕೇವಲ 1,973 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದರು. ಈಗ ಮೂರನೇ ಬಾರಿ ಇಬ್ಬರು ಮುಖಾಮುಖಿ ಆಗುತ್ತಿರುವುದು ಕುತೂಹಲ ಮೂಡಿಸಿದೆ.ತಿಪ್ಪಾರೆಡ್ಡಿ 1994ರಿಂದ ಸತತವಾಗಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 1994 ಮತ್ತು 1999ರಲ್ಲೂ ಪಕ್ಷೇತರರಾಗಿ ಹಾಗೂ 2004ರಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು. 2008ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಪರಾಭವಗೊಂಡ್ದ್ದಿದರು. ಅಧಿಕಾರ ಇಲ್ಲದೆ ತಿಪ್ಪಾರೆಡ್ಡಿ ಬಹುದಿನಗಳ ಕಾಲ ಉಳಿಯಲು ಸಾಧ್ಯವಾಗಲಿಲ್ಲ. ಬಿಜೆಪಿಗೆ ಸೇರ್ಪಡೆಗೊಂಡು ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಜಯಗಳಿಸಿದ್ದರು.ಈಗ ವಿಧಾನಪರಿಷತ್ ಸದಸ್ಯರಾಗಿದ್ದರೂ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಜೆಡಿಎಸ್, ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿ ನೀಡಲು ಈಗಿನಿಂದಲೇ ತಮ್ಮದೇ ಆದ ಕಾರ್ಯತಂತ್ರ ರೂಪಿಸಿದ್ದಾರೆ.ಇದುವರೆಗೆ ನಡೆದ ಒಟ್ಟು 13 ಚುನಾವಣೆಗಳಲ್ಲಿ ಕಾಂಗ್ರೆಸ್ 7 ಬಾರಿ ಜಯಗಳಿಸಿದ್ದರೆ, ಜನತಾ ಪರಿವಾರ ಮೂರು ಬಾರಿ, ಎರಡು ಬಾರಿ ಪಕ್ಷೇತರ, ಒಂದು ಬಾರಿ ಜೆಡಿಎಸ್ ಹಾಗೂ ಎಸ್‌ಒಪಿ ಅಭ್ಯರ್ಥಿ ಆಯ್ಕೆಯಾಗಿದ್ದರು.ಕಾಂಗ್ರೆಸ್‌ನ ಈ ಭದ್ರಕೋಟೆಯಲ್ಲಿ ಮತ್ತೊಮ್ಮೆ ರಣರಂಗ ಸಜ್ಜುಗೊಂಡಿದೆ. ಎಲ್ಲ ರಾಜಕೀಯ ಪಕ್ಷಗಳು ಮತ್ತೊಮ್ಮೆ ಕಾಂಗ್ರೆಸ್ ಕೋಟೆಗೆ ಲಗ್ಗೆ ಹಾಕುತ್ತಿವೆ. ಲಿಂಗಾಯತರು, ಮುಸ್ಲಿಂರು, ಪರಿಶಿಷ್ಟ ಜಾತಿ ಬಹುಸಂಖ್ಯಾತರಿರುವ ಈ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರದ ಸಮೀಕರಣದ ನಡುವೆ ಅಭ್ಯರ್ಥಿಗಳು, ಮತದಾರರ ಮನವೊಲಿಸಲು ಆರಂಭಿಸಿದ್ದಾರೆ.ಪಕ್ಷ ಬೆನ್ನೆಲುಬಿಗೆ ಇದ್ದರೂ ಅಭ್ಯರ್ಥಿಗಳ ವೈಯಕ್ತಿಕ ವರ್ಚಸ್ಸು, ಹಿನ್ನೆಲೆ ಈ ಚುನಾವಣೆಯಲ್ಲಿ ಮುಖ್ಯ ಪಾತ್ರವಹಿಸಲಿದೆ. ಅಭ್ಯರ್ಥಿ ಮತದಾರರ ಮೇಲೆ ಯಾವ ರೀತಿ ಪ್ರಭಾವ ಬೀರುತ್ತಾನೆ ಎಂಬುದು ಮತದಾರರ ವಿಶ್ಲೇಷಣೆ.

ಪ್ರತಿಕ್ರಿಯಿಸಿ (+)