ಕೋಟೆ ಮೇಲೆ ಕೆಂಗಣ್ಣು!

7

ಕೋಟೆ ಮೇಲೆ ಕೆಂಗಣ್ಣು!

Published:
Updated:

‘ಚಿತ್ರದಲ್ಲಿ ಬರುವ ಬೀಚ್ ಹಾಡಿನಲ್ಲಿ ಕೆಲವು ಕಟ್ಸ್ ಕೇಳಿದರು. ನಾನು ಒಲ್ಲೆ ಎಂದೆ. ನನಗೆ ಅದು ಕಮರ್ಷಿಯಲ್ ದೃಷ್ಟಿಯಿಂದ ಬೇಕು ಅನ್ನಿಸಿದ್ದರಿಂದ ‘ಎ’ ಪ್ರಮಾಣಪತ್ರವನ್ನೇ ನೀಡಿ ಎಂದು ಹೇಳಿದೆ. ಹೀಗೆ ಅವರು ಚಿಕ್ಕ ಚಿಕ್ಕ ವಿಚಾರಗಳಿಗೆ ಕಟ್ಸ್ ಕೇಳುತ್ತಿದ್ದರೆ ಮುಂದೊಂದು ದಿನ ಸೆನ್ಸಾರ್‌ನವರಿಂದಲೇ ಚಿತ್ರ ನಿರ್ಮಾಣ ನಿಲ್ಲುವ ಕಾಲ ಬರಬಹುದು’.ಏರು ದನಿಯಲ್ಲಿ ಸೆನ್ಸಾರ್ ಧೋರಣೆಯನ್ನು ಟೀಕಿಸಿದ್ದು ‘ಕೋಟೆ’ ಚಿತ್ರದ ನಿರ್ಮಾಪಕ ಮಂಜುನಾಥ್. ಈ ವಾರ (ಫೆ.11) ಬಿಡುಗಡೆಯಾಗುತ್ತಿರುವ ‘ಕೋಟೆ’ ಚಿತ್ರದ ಹಾಡುಗಳ ಪ್ರದರ್ಶನದ ಸಂದರ್ಭದಲ್ಲಿ ಅವರು ಗರಂ ಆಗಿದ್ದರು.‘ಎಲ್ಲರನ್ನೂ ನಾನು ಕೇಳಿಕೊಳ್ಳುವುದು ಇಷ್ಟೇ. ಸೆನ್ಸಾರ್‌ನವರ ಕಿರಿಕಿರಿ ಜಾಸ್ತಿಯಾಗಿದೆ. ಅವರ ವಿರುದ್ಧ ಸಂಘಟಿತವಾಗಿ ಹೋರಾಟ ನಡೆಸಬೇಕು. ಪ್ರಶಸ್ತಿ ಪಡೆದ ‘ಜನುಮದ ಜೋಡಿ’ ಚಿತ್ರದಲ್ಲಿ ನಿಷೇಧಿತ ಪದಗಳನ್ನು ಬಳಸಿದ್ದಾರೆ. ನಾವು ಬಳಸಿದರೆ ಅದನ್ನು ಆಕ್ಷೇಪಿಸುತ್ತಾರೆ.ನಮ್ಮ ಚಿತ್ರಕ್ಕಿಂತಲೂ ಕೆಟ್ಟದಾಗಿರುವ ಚಿತ್ರಗಳಿಗೆ ಯು/ಎ ಪ್ರಮಾಣಪತ್ರ ಕೊಟ್ಟಿದ್ದಾರೆ. ಸೆನ್ಸಾರ್‌ನವರು ತಾರತಮ್ಯ ಮಾಡುತ್ತಿದ್ದಾರೆ’.‘ಚಿತ್ರೋದ್ಯಮದ ದಿಗ್ಗಜರು, ನಾಯಕರು ಸೆನ್ಸಾರ್ ತಾರತಮ್ಯ ನೀತಿ ವಿರುದ್ಧ ಹೋರಾಡಬೇಕು. ಈ ಹೋರಾಟಕ್ಕೆ ವಾಣಿಜ್ಯ ಮಂಡಳಿ ಕೈಜೋಡಿಸಬೇಕು. ವಾಣಿಜ್ಯ ಮಂಡಳಿಯಲ್ಲಿ ದೊಡ್ಡ ದನಿ ಇದ್ದವರದು ಮಾತ್ರ ನಡೆಯುತ್ತದೆ. ಸೆನ್ಸಾರ್ ತನ್ನ ಮಾರ್ಗದರ್ಶಿ ಸೂತ್ರಗಳನ್ನು ಬದಲಿಸಿಕೊಳ್ಳಬೇಕು. ಸೂತ್ರಗಳನ್ನು ಆಧರಿಸಿ ಸಿನಿಮಾ ಮಾಡಲು ಸಾಧ್ಯವಿಲ್ಲ. ಸೆನ್ಸಾರ್‌ನವರೊಂದಿಗೆ ವಾದ ಮಾಡಿ ಸಾಕಾಯ್ತು’ ಎಂದು ಮಂಜುನಾಥ್ ಕೋಪ ಕಾರಿಕೊಂಡರು.ಕೆಲವು ಪತ್ರಕರ್ತರು, ‘ಪ್ರಜ್ವಲ್ ಅಂಥ ಯುವನಾಯಕನ ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ ಸಿಕ್ಕಬಾರದಿತ್ತು’ ಎಂದಾಗ, ಸ್ವತಃ ಪ್ರಜ್ವಲ್ ‘ಈ ಮೊದಲು ಗುಲಾಮ ಚಿತ್ರಕ್ಕೆ ‘ಎ’ ಪ್ರಮಾಣ ಪತ್ರ ಬಂದಿತ್ತು’ ಎಂದು ಕೂಲಾಗಿ ಹೇಳಿ ಹೊರಟರು.ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಶ್ರೀನಿವಾಸರಾಜು, ಹುಬ್ಬಳ್ಳಿಯಲ್ಲಿ ಹದಿನೈದು ದಿನ ಬೆಳಿಗ್ಗೆ 6ರಿಂದ ಮಧ್ಯರಾತ್ರಿ 2 ಗಂಟೆವರೆಗೆ ಕೆಲಸ ಮಾಡಿದ್ದನ್ನು ನೆನಪಿಸಿಕೊಂಡರು.‘ನನ್ನವನು’ ಚಿತ್ರಕ್ಕಿಂತ ಒಂದು ಹಂತ ಹೆಚ್ಚು ಎನ್ನುವಂತೆ ಪ್ರಜ್ವಲ್ ಈ ಚಿತ್ರದಲ್ಲಿ ನಟಿಸಿದ್ದಾರಂತೆ. ತಮಗೆ ಧಾರವಾಡ ಕನ್ನಡ ಮಾತನಾಡಲು ಬರುತ್ತಿರಲಿಲ್ಲ. ಅದರಿಂದ ತುಂಬಾ ಭಯ ಇತ್ತು. ಚಿತ್ರೀಕರಣಕ್ಕೆ 10 ದಿನ ಇರುವಾಗ ಗುರುರಾಜ್ ಸಂಭಾಷಣೆ ಬರೆದುಕೊಟ್ಟರು. ರಘುದೀಕ್ಷಿತ್ ಅವರು ರಾಗ ಸಂಯೋಜಿಸಿರುವ ಹಾಡುಗಳು ಚೆನ್ನಾಗಿವೆ ಎಂದು ಹೇಳಿಕೊಂಡ ಅವರು, ಹುಬ್ಬಳ್ಳಿ ಜನರಿಗೆ ಮತ್ತು ಪೊಲೀಸರಿಗೆ ಧನ್ಯವಾದ ಸಲ್ಲಿಸಿದರು.ವಿತರಕ ಕೆಸಿಎನ್ ಕುಮಾರ್ ಚಿತ್ರದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದರು. ಪಿವಿಆರ್‌ನಲ್ಲಿ ಕನ್ನಡ ಚಿತ್ರಗಳು ಯಶಸ್ವಿಯಾಗಿ ಓಡುತ್ತಿದ್ದರೂ ಅವುಗಳನ್ನು ಎತ್ತಂಗಡಿ ಮಾಡುತ್ತಿರುವ ಬಗ್ಗೆ ಪ್ರಶ್ನಿಸಿದಾಗ, ‘ನಾನೂ ‘ಬಾಸ್’ ಮತ್ತು ‘ಕಳ್‌ಮಂಜ’ ಬಿಡುಗಡೆ ಮಾಡಿದ್ದೇನೆ. ಪಿವಿಆರ್‌ನಲ್ಲಿ ಸಿನಿಮಾ ಇರುವಂತೆ ಮಾಡುವುದು ವಿತರಕನ ಜವಾಬ್ದಾರಿ.ಅವರು ಏನೇ ಮಾಡಿದರೂ ನಮ್ಮ ಪ್ರಯತ್ನ ಚೆನ್ನಾಗಿದ್ದರೆ ಮತ್ತು ಕಲೆಕ್ಷನ್ ಇದ್ದರೆ ಸಿನಿಮಾ ಮುಂದುವರಿಯುತ್ತೆ. ಮಲ್ಟಿಪ್ಲೆಕ್ಸ್‌ನಲ್ಲಿ ಕೆಲವು ನಿಯಮಗಳಿರುತ್ತವೆ. ಅವುಗಳಿಗೆ ತಕ್ಕಂತೆ ನಡೆದುಕೊಂಡರೆ ಸಾಕು, ಅವರು ಯಾವುದೇ ಕಾರಣಕ್ಕೂ ಚಿತ್ರವನ್ನು ತೆಗೆಯಲು ಸಾಧ್ಯವಿಲ್ಲ. ಹಾಗೇನಾದರೂ ಆದರೆ ಅವರಿಗೆ ಸಿನಿಮಾ ಕೊಡಬಾರದು ಎಂದು ವಿತರಕರೆಲ್ಲಾ ತೀರ್ಮಾನಿಸಿದ್ದೇವೆ’ ಎಂದರು.ನಾಯಕ ಪ್ರಜ್ವಲ್‌ಗೆ ‘ಕೋಟೆ’ ಚಿತ್ರದ ಪಾತ್ರ ಕನಸಿನದಂತೆ. ‘ಇದರಲ್ಲಿ ಪ್ರಬುದ್ಧ ಪ್ರಜ್ವಲ್‌ನನ್ನು ನೋಡಲಿದ್ದೀರಿ. ಜನ ನನ್ನನ್ನು ಒಪ್ಪಿಕೊಳ್ಳುತ್ತಾರೆ’ ಎಂದವರು ಭರವಸೆಯ ಮಾತನಾಡಿದರು.ಇದುವರೆಗೂ ಸುಮಾರು 25 ಸಿನಿಮಾಗಳಿಗೆ ಸಹನಿರ್ದೇಶಕರಾಗಿ ಕೆಲಸ ಮಾಡಿರುವ ಗುರುರಾಜ್ ದೇಸಾಯಿ ಈ ಸಿನಿಮಾಗೆ ಸಂಭಾಷಣೆ ಬರೆದಿದ್ದಾರೆ. ‘ಕೋಟೆ’ ಚಿತ್ರದ ಶೇ. 70ರಷ್ಟು ಮಾತು ಹುಬ್ಬಳ್ಳಿ ಶೈಲಿಯಲ್ಲಿ ಇರುತ್ತದೆ ಎಂದ ಅವರು, ಚಿತ್ರೀಕರಣ ಸಂದರ್ಭದಲ್ಲಿ ಹುಬ್ಬಳ್ಳಿ ಜನರನ್ನು ಚಿತ್ರತಂಡ ನಿಭಾಯಿಸಿದ ರೀತಿಯನ್ನು ಮೆಚ್ಚಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry