ಭಾನುವಾರ, ನವೆಂಬರ್ 17, 2019
24 °C

`ಕೋಟ್ಯಾಧಿಪತಿ' ಹುಸೇನ್ ಐಎಎಸ್ ಕನವರಿಕೆ

Published:
Updated:

ಕೊಪ್ಪಳದ ಬಡ ಕೃಷಿಕನ ಮಗ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವಾಗಲೇ ಬುದ್ಧಿವಂತನೆನಿಸಿಕೊಂಡಿದ್ದ. ಮನೆತುಂಬ ಜನ. ನಾಲ್ಕು ಎಕರೆ ಜಮೀನು. ಮಳೆ ಇಲ್ಲ. ಮಳೆ ಇದ್ದಾಗ ಭತ್ತ ಬೆಳೆಯುವುದು. ಮಳೆ ಇಲ್ಲದಿದ್ದಾಗ ಕೂಲಿ ಕೆಲಸಕ್ಕೆ ಹೋಗುವುದು. ಹೀಗಿರುವಾಗ ಹೇಗೋ ಮಾಡಿ ತುಮಕೂರಿನ ಸಿದ್ಧಗಂಗಾ ಮಠದ ಹೈಸ್ಕೂಲಿಗೆ ಸೇರಿದ.ಎಸ್‌ಎಸ್‌ಎಲ್‌ಸಿಯಲ್ಲಿ ಪ್ರಥಮದರ್ಜೆಯಲ್ಲಿ ಪಾಸಾದರೂ ಬಡತನ ಮತ್ತು ಮನೆ ಜವಾಬ್ದಾರಿ ಮುಂದೆ ಓದಲು ಬಿಡಲಿಲ್ಲ. ಮತ್ತೆ ಊರಿಗೆ ಹೋಗಿ ಕೃಷಿಯಲ್ಲಿ ತೊಡಗಿದ. ಓದಬೇಕೆಂಬ ತುಡಿತ ಮಾತ್ರ ಕಡಿಮೆಯಾಗಲಿಲ್ಲ. ನಾಲ್ಕು ವರ್ಷ ದುಡಿದ ನಂತರ ಮತ್ತೆ ಕಾಲೇಜಿಗೆ ಸೇರಿದ. ರಜೆಯಲ್ಲಿ ಬೆಂಗಳೂರಿಗೆ ಬಂದು ಕಂಠೀರವ ಸ್ಟುಡಿಯೊ ಬಳಿ ಲಾರಿ ಕ್ಲೀನರ್ ಕೆಲಸ ಮಾಡಿದ.`ಪೃಥ್ವಿ' ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಪಾತ್ರ ಕಂಡಾಗ ತಾನೂ ಐಎಎಸ್ ಪಾಸು ಮಾಡಬೇಕೆಂಬ ಕನಸು ಹುಟ್ಟಿತು. ಅದಕ್ಕಾಗಿ ತಯಾರಿಯನ್ನೂ ಆರಂಭಿಸಿದ. ಅದರ ಮಧ್ಯೆಯೇ ದೊಡ್ಡದೊಂದು ಅದೃಷ್ಟ ಖುಲಾಯಿಸುತ್ತದೆಂಬ ಕುರುಹೂ ಆತನಿಗೆ ಇರಲಿಲ್ಲ.`ಕನ್ನಡದ ಕೋಟ್ಯಾಧಿಪತಿ' ರಿಯಾಲಿಟಿ ಶೋನ ಮೊದಲ ಕೋಟಿ ಗೆದ್ದ ಹುಡುಗ, ಕೊಪ್ಪಳದ ಸಿಎಂಎನ್ ಕಾಲೇಜಿನ ಪ್ರಥಮ ಬಿ.ಎ.ವಿದ್ಯಾರ್ಥಿ ಹುಸೇನ್ ಬಾಷಾ ಬದುಕಿನ ಹೆಜ್ಜೆಗಳಿವು.ಸುವರ್ಣ ವಾಹಿನಿಯ ಕನ್ನಡದ ಕೋಟ್ಯಾಧಿಪತಿ ತಂಡ ಹುಸೇನ್ ಬಾಷಾ ಅವರನ್ನು ಮಾಧ್ಯಮದ ಮುಂದೆ ಪರಿಚಯಿಸಿದಾಗ ಬಾಷಾ ಮುಖದಲ್ಲಿ ಯಾವ ರೀತಿಯ ಭಾವೋದ್ವೇಗವೂ ಇರಲಿಲ್ಲ. ಅದು ಆತನ ಆತ್ಮವಿಶ್ವಾಸವನ್ನು ತೋರಿಸುತ್ತಿತ್ತು.ಮುಸ್ಲಿಂ ಮನೆಯ ಹುಡುಗ ಹುಸೇನ್ ಬಾಷಾ ಮಾತು ಆರಂಭಿಸಿದ್ದೇ ಭಗವದ್ಗೀತೆಯ `ಕರ್ಮಣ್ಯೇವಾಧಿಕಾರಸ್ಥೆ ಮಾ ಫಲೇಶು ಕದಾಚನಾ...' ಶ್ಲೋಕದಿಂದ. ಕೃಷ್ಣನ ಈ ಸಂದೇಶದಂತೆ ನಾನು ನಡೆಯುತ್ತಿದ್ದೇನೆ. ಇದೆಲ್ಲಾ ಸಿದ್ಧಗಂಗಾಮಠದ ಪ್ರಭಾವ. ನನ್ನ ಎಲ್ಲ ಯಶಸ್ಸನ್ನೂ ನಾನು ಶಿವಕುಮಾರಸ್ವಾಮಿಗಳಿಗೆ ಅರ್ಪಿಸುತ್ತೇನೆ' ಎಂದು ನಮ್ರವಾಗಿ ಹೇಳುತ್ತಾರೆ.`ಮನೆಯ ಮೊದಲ ಮಗನಾಗಿ ನಾಲ್ಕು ತಂಗಿಯರು, ಒಬ್ಬ ತಮ್ಮ, ಅಪ್ಪ-ಅಮ್ಮ, ಅಜ್ಜ-ಅಜ್ಜಿ ಇಷ್ಟೂ ಜನರ ಜವಾಬ್ದಾರಿಯ ಜೊತೆಗೆ ಐಎಎಸ್ ಮಾಡುವ ಕನಸನ್ನು ಸಾಕಾರಗೊಳಿಸಿಕೊಳ್ಳುವ ಉದ್ದೇಶದಿಂದ ಕನ್ನಡದ ಕೋಟ್ಯಾಧಿಪತಿಯ ಹಾಟ್ ಸೀಟ್‌ಗೆ ಹೋಗುವ ಮನಸು ಮಾಡಿದೆ. ಆದರೆ ಕೋಟಿ ಗೆಲ್ಲುವ ಕನಸಿರಲಿಲ್ಲ. ಕೇವಲ ಹತ್ತು ಪ್ರಶ್ನೆಗೆ ಉತ್ತರಿಸುವ ಆಸೆ ಇಟ್ಟುಕೊಂಡಿದ್ದೆ. ಪುನೀತ್ ರಾಜ್‌ಕುಮಾರ್ ನೀಡಿದ ಪ್ರೋತ್ಸಾಹ, ಸ್ಫೂರ್ತಿಯಿಂದ ಕೋಟಿ ಗೆದ್ದೆ. ಇದಕ್ಕೆ ನಾನು ಮಠದಲ್ಲಿ ಕಲಿತ ಶಿಕ್ಷಣ, ಬದುಕು ಕಲಿಸಿದ ಕಷ್ಟವನ್ನು ಗೆಲ್ಲುವ ಹಟವೇ ಕಾರಣ' ಎನ್ನುತ್ತಾರೆ.ಕೋಟಿ ಗೆದ್ದಿದ್ದೀರಿ, ಇಷ್ಟು ಹಣವನ್ನು ಏನು ಮಾಡಬೇಕೆಂದಿದ್ದೀರಿ ಎಂಬ ಪ್ರಶ್ನೆಗೆ, `ಗ್ರಾಮ ಪಂಚಾಯಿತಿ ಸದಸ್ಯನೊಬ್ಬನನ್ನು ಪ್ರಧಾನಿ ಸೀಟಿನಲ್ಲಿ ಕೂರಿಸಿದಂತಾಗಿದೆ. ಏನು ಮಾಡುವುದು ಎಂದು ತೋಚುತ್ತಿಲ್ಲ. ಮೊದಲು ನನ್ನ ಮನೆಯ ಸಾಲವಾದ ನಾಲ್ಕು ಲಕ್ಷ ರೂಪಾಯಿ ತೀರಿಸಬೇಕು. ಮನೆಯವರಿಗೆ ಒಂದಿಷ್ಟು ಅನುಕೂಲ ಮಾಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನಾನು ಐಎಎಸ್ ಮಾಡಬೇಕು' ಎಂದು ಮತ್ತೆ ಮತ್ತೆ ಐಎಎಸ್ ಕನಸನ್ನು ಬಿಚ್ಚಿಡುತ್ತಾರೆ.`ಕೋಟ್ಯಾಧಿಪತಿ ಸ್ಫರ್ಧೆಗೆಂದು ಪ್ರತ್ಯೇಕ ತಯಾರಿ ಮಾಡಿಲ್ಲ. ನಾನು ಈವರೆಗೆ ಕಲಿತ ವಿದ್ಯೆಯೇ ನನಗೆ ಸಹಾಯ ಮಾಡಿದೆ. ಗೊಂದಲವಿದ್ದರೆ ಸುಮ್ಮನೆ ಸ್ಪರ್ಧೆಯಿಂದ ಹಿಂದಕ್ಕೆ ಸರಿಯಿರಿ. ಸಿಕ್ಕಷ್ಟು ಹಣ ಪಡೆದು ಸಮಸ್ಯೆ ಪರಿಹರಿಸಿಕೊಳ್ಳಿ' ಎಂದು ಮುಂದಿನ ಸ್ಪರ್ಧಿಗಳಿಗೆ ಕಿವಿಮಾತು ಹೇಳುತ್ತಾರೆ.ಹಣ ಗೆದ್ದ ನಂತರ ಅನೇಕರು ಸಮಾಜ ಸೇವೆಯ ಮಾತಾಡುತ್ತಾರೆ. ಆದರೆ ಹುಸೇನ್ ಬಾಷಾ ಈ ವಿಷಯದಲ್ಲೂ ಭಿನ್ನ. `ಅದೆಲ್ಲ ಬೊಗಳೆ ಮಾತು. ನಾನು ಈಗಲೇ ಸಮಾಜ ಸೇವೆ ಅದೂ ಇದೂ ಎಂದೆಲ್ಲಾ ಹೇಳುವುದಿಲ್ಲ. ನನಗಿರುವ ಅಗತ್ಯಗಳನ್ನು ಮೊದಲು ಪೂರೈಸಬೇಕು. ಐಎಎಸ್ ಅಧಿಕಾರಿಯಾದ ಮೇಲೆ ಖಂಡಿತ ಅಂತಹ ಕೆಲಸಗಳನ್ನು ಮಾಡುತ್ತೇನೆ. ಮಾಡುವ ಮೊದಲೇ ಹೇಳಲಾರೆ' ಎನ್ನುತ್ತಾರೆ.ಇದೇ ಮೊದಲ ಬಾರಿಗೆ ಮಗನ ಸಾಧನೆಯ ಕಾರಣದಿಂದ ಬೆಂಗಳೂರಿಗೆ ಬಂದಿದ್ದ ಹುಸೇನ್ ಅವರ ತಂದೆ, ತಾಯಿ, ಸಹೋದರಿಯರು ಖುಷಿಯಲ್ಲಿದ್ದರು. ಮಾತು ಸಲೀಸಾಗಿ ಹೊರಡುತ್ತಿರಲಿಲ್ಲ.ಬಡತನದ ಕಾರಣ ಎಂಟನೇ ತರಗತಿಯಲ್ಲೇ ಶಾಲೆಬಿಟ್ಟು ಕೂಲಿಗೆ ಹೋಗುತ್ತಿರುವ ಹುಸೇನ್ ತಂಗಿಯೂ ಕಲಿಯುವುದರಲ್ಲಿ ಮುಂದಿದ್ದಳು ಎಂದು ತಾಯಿ ಹುಸೇನಬಿ ನೆನಪಿಸಿಕೊಂಡರು. ಮತ್ತೊಬ್ಬ ತಂಗಿ ರಾಜ್ಮಾ ಈಗ ಹತ್ತನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ. ಕೋಟ್ಯಾಧಿಪತಿ ಅಣ್ಣನಲ್ಲಿ ಏನು ಕೇಳಿದ್ದೀರಿ ಎಂದರೆ, `ಏನೂ ಇಲ್ಲ, ನಮ್ಮನ್ನು ಚೆನ್ನಾಗಿ ನೋಡಿಕೊಂಡರೆ ಸಾಕು' ಎಂದು ಹೇಳುತ್ತಾಳೆ. ಹುಸೇನ್ ಅವರು ಒಂದು ಕೋಟಿ ರೂಪಾಯಿ ಗೆದ್ದ ಈ ಎಪಿಸೋಡ್ ಇದೇ 28 ಮತ್ತು 29ರಂದು ಪ್ರಸಾರವಾಗಲಿದೆ.  

`ಜ್ಞಾನಕ್ಕೆ ಸಂದ ಜಯ'

`ಹುಸೇನ್ ಬಾಷಾ  ತರಹದ ಸ್ಪರ್ಧಿಯನ್ನು ಈವರೆಗೆ ಕಂಡಿಲ್ಲ. ಇದು ಜ್ಞಾನಕ್ಕೆ ಸಂದ ಜಯ. ಪ್ರತಿ ಪ್ರಶ್ನೆಗೆ ಹುಸೇನ್ ಉತ್ತರಿಸಲೇಬೇಕು ಎಂದು ನಾನು ಪ್ರಶ್ನೆ ಕೇಳುತ್ತಿದ್ದೆ. ನನ್ನ ಎದೆಬಡಿತ ಹೆಚ್ಚಾಗುತ್ತಿತ್ತು. ಆದರೆ ಹುಸೇನ್ ಯಾವುದೇ ಗೊಂದಲವಿಲ್ಲದೇ ಉತ್ತರ ನೀಡುತ್ತಿದ್ದ. ನಿಜಕ್ಕೂ ಹುಸೇನ್ ಕೋಟಿ ಗೆಲ್ಲಲು ಯೋಗ್ಯ, ಅರ್ಹ ವ್ಯಕ್ತಿ ಆಗಿದ್ದ. ಆತನ ಜೊತೆ ಕಳೆದ ಎರಡು ದಿನಗಳನ್ನು ಜೀವನದಲ್ಲಿ ಮರೆಯಲಾರೆ' ಎಂದು ಪುನೀತ್ ಎದೆತುಂಬಿ ಹೇಳಿದರು.

ಪ್ರತಿಕ್ರಿಯಿಸಿ (+)