ಕೋಟ್ಯಾಧಿಪತಿ 50 ನಾಟೌಟ್

7

ಕೋಟ್ಯಾಧಿಪತಿ 50 ನಾಟೌಟ್

Published:
Updated:
ಕೋಟ್ಯಾಧಿಪತಿ 50 ನಾಟೌಟ್

ಅದೇ ಮುಗ್ಧ ನಗು, ಅದೇ ಸರಳತೆ. ಆದರೆ ಈ ಬಾರಿ ಇನ್ನಷ್ಟು ಉತ್ಸಾಹದಲ್ಲಿದ್ದಂತೆ ಕಾಣುತ್ತಿದ್ದರು ಪುನೀತ್ ರಾಜ್‌ಕುಮಾರ್. ಹಾಟ್ ಸೀಟ್‌ನಲ್ಲಿ ಕಂಡಿದ್ದ ಹಳೆ ಸ್ಪರ್ಧಿಗಳನ್ನು ಇಲ್ಲಿ ಮತ್ತೆ ಭೇಟಿ ಮಾಡಿದ ಖುಷಿಯಲ್ಲಿದ್ದರು.ಪುನೀತ್ ರಾಯಭಾರತ್ವದಲ್ಲಿ ನಡೆಯುತ್ತಿರುವ `ಕನ್ನಡದ ಕೋಟ್ಯಾಧಿಪತಿ~ ಕಾರ್ಯಕ್ರಮ 50 ಸಂಚಿಕೆ ಪೂರೈಸಿದ ಸಂತಸವನ್ನು ಹಂಚಿಕೊಳ್ಳಲೆಂದು ವಿಶೇಷ ಕೂಟವನ್ನು ಏರ್ಪಡಿಸಿತ್ತು.ಪುನೀತ್ ರಾಜ್‌ಕುಮಾರ್ ಸೇರಿದಂತೆ ಸುವರ್ಣ ವಾಹಿನಿಯ ಮುಖ್ಯಸ್ಥ ಅನೂಪ್ ಚಂದ್ರಶೇಖರ್, ಕಾರ್ಯಕ್ರಮದ ನಿರ್ದೇಶಕ ರಾಘವೇಂದ್ರ ಹುಣಸೂರು ಎಲ್ಲರೂ ಅಲ್ಲಿ ಸೇರಿದ್ದರು. `ಕನ್ನಡದ ಕೋಟ್ಯಾಧಿಪತಿ~ಯ ಹಳೆ ಸ್ಪರ್ಧಿಗಳೂ ಅಲ್ಲಿದ್ದದ್ದು ವಿಶೇಷ.`ಕಾರ್ಯಕ್ರಮ 50 ಸಂಚಿಕೆಗಳನ್ನು ಪೂರೈಸಿದ್ದು ಗೊತ್ತಾಗಲೇ ಇಲ್ಲ. ಇಷ್ಟು ಬೇಗ 50 ಸಂಚಿಕೆ ಮುಗಿದುಹೋಯಿತೆ ಎಂದು ಆಶ್ಚರ್ಯವಾಯಿತು. ಈ ಕಾರ್ಯಕ್ರಮದ ಯಶಸ್ಸಿಗೆ ಪುನೀತ್ ಅವರೇ ಕಾರಣ. ಇಡೀ ತಂಡವನ್ನು ಸದಾ ಉತ್ಸಾಹದಲ್ಲಿರುವಂತೆ ನೋಡಿಕೊಳ್ಳುತ್ತಿದ್ದರು. ಇದುವರೆಗೂ ಒಟ್ಟು 74 ಅಭ್ಯರ್ಥಿಗಳು ಪಾಲ್ಗೊಂಡಿದ್ದರು. ಒಬ್ಬೊಬ್ಬರಿಗೂ ಕಾರ್ಯಕ್ರಮ ಒಂದೊಂದು ರೀತಿ ಸಹಾಯವಾಯಿತು~ ಎಂದು ರಾಘವೇಂದ್ರ ಹುಣಸೂರು ಮಾತು ಹಂಚಿಕೊಂಡರು.`ನಾನು ಮುಂಚಿನಿಂದಲೂ ಸ್ವಲ್ಪ ಮೌನಿ. ಆದರೆ ಜನರೊಂದಿಗೆ ಬೆರೆಯುವುದು ಹೇಗೆ ಎಂಬುದನ್ನು ಈ ಕಾರ್ಯಕ್ರಮ ನನಗೆ ಕಲಿಸಿತು. ಮಾತಿನ ನಿಜವಾದ ಅರ್ಥ ಇಲ್ಲಿ ತಿಳಿಯಿತು. ಪ್ರತಿಯೊಬ್ಬ ಸ್ಪರ್ಧಿಯ ಹಿಂದಿದ್ದ ನೋವು, ಹತಾಶೆ, ಕಲೆ, ಸಂತಸ ಎಲ್ಲವೂ ನನಗೆ ಬದುಕಿನ ಹಲವು ರೀತಿಗಳನ್ನು ತೋರಿಸಿಕೊಟ್ಟಿತು~ ಎಂದು ಭಾವುಕರಾಗಿ ನುಡಿದರು.

 

ಇದುವರೆಗೂ ಗೆದ್ದ ಸ್ಪರ್ಧಿಗಳಿಗೆ ಅಲ್ಲಿ ಚೆಕ್‌ಗಳನ್ನು ಹಸ್ತಾಂತರಿಸಿದರು. ಬಹಳ ಆತ್ಮೀಯತೆಯಿಂದ ಹಳೆಯ ಸ್ಪರ್ಧಿಗಳನ್ನು ನೆನೆಸಿಕೊಂಡ ಪುನೀತ್ ಪರಿ ಎಲ್ಲರಲ್ಲೂ ಸಂತಸ ತಂದಿತ್ತು.`ಇಲ್ಲಿ ಎಲ್ಲವೂ ಪಾರದರ್ಶಕ. ಸಿನಿಮಾಗಳಂತೆ ಮಾತಿನಲ್ಲಿ ಕೃತಕತೆ ಇಲ್ಲ. ಆಟದ ಒಂದೊಂದು ಹಂತದಲ್ಲೂ ನನಗೆ ಕಾತುರ ಹೆಚ್ಚಾಗುತ್ತಿತ್ತು. ಯಾರಾದರೂ ಕೋಟಿ ಗೆಲ್ಲಲಿ ಎಂದು ಈಗಲೂ ಹವಣಿಸುತ್ತಿದ್ದೇನೆ. ಜೀವನದಲ್ಲಿ ಇದೊಂದು ಉತ್ತಮ ಅನುಭವ. ಈ ಕಾರ್ಯಕ್ರಮಕ್ಕೆ ನನ್ನನ್ನು ನಿರೂಪಕನಾಗಿ ಮಾಡಿದ್ದಕ್ಕೆ ನಿಜಕ್ಕೂ ಹೆಮ್ಮೆ ಪಡುತ್ತೇನೆ~ ಎಂದು ಅಲ್ಲಿದ್ದವರತ್ತ ನಗೆ ಚೆಲ್ಲಿದರು.`ಆಗ ನನ್ನ ಕನ್ನಡ ಉಚ್ಚಾರಣೆ ಅಷ್ಟು ಸ್ಪಷ್ಟವಿರಲಿಲ್ಲ. ಈಗ ಬದಲಾಗಿದೆ. ಕಲಿಯುವುದು ಮನುಷ್ಯನ ಜೀವನದುದ್ದಕ್ಕೂ ಇದ್ದೇ ಇರುತ್ತದೆ. ಅದನ್ನು ನಾನೂ ಅಳವಡಿಸಿಕೊಂಡಿದ್ದೇನೆ. ಇದುವರೆಗೂ ಯಾರೂ ಒಂದು ಕೋಟಿ ಗೆದ್ದಿಲ್ಲವೆಂಬ ನಿರಾಸೆಯಿದೆ. ಆದರೂ ಪರವಾಗಿಲ್ಲ, ಗೆಲ್ಲಬಹುದು ಎಂಬ ಭರವಸೆಯೂ ಇದೆ. ಕಾರ್ಯಕ್ರಮದ ಬಗ್ಗೆ ಒಂದು ರೀತಿ ಹುಚ್ಚು ಉಂಟಾಗಿದೆ~ ಎಂದರು.`ಹಾಟ್ ಸೀಟ್‌ಗೆ ಬಂದವರು 25 ಲಕ್ಷದವರೆಗೂ ಗೆದ್ದರು. ಇನ್ನೂ ಮುಂದೆ ಹೋಗಲಿ ಎಂಬುದು ನನ್ನ ಹಾರೈಕೆ, ನಮ್ಮ ಕಂಪ್ಯೂಟರ್ ಗುರುಗಳ ಕೈಲಿ ಎಲ್ಲವೂ ಇದೆ~ ಎನ್ನುತ್ತಾ.`ಈ ಬಾರಿ ಮಕ್ಕಳಿಗೆಂದು ವಿಶೇಷವಾಗಿ ಎರಡು ವಾರಗಳ ಎಂಟು ಸಂಚಿಕೆಗಳನ್ನು ಮೀಸಲಿಡುತ್ತಿದ್ದೇವೆ. ಮಕ್ಕಳೊಂದಿಗೆ ಅನುಭವ ಇನ್ನಷ್ಟು ಮುದ ನೀಡಲಿದೆ. ಯಾರಿಗೆ ಗೊತ್ತು ಅವರಲ್ಲಿ ಒಬ್ಬರು ಕೋಟ್ಯಾಧಿಪತಿಯಾಗಬಹುದು~ ಎಂದು ಮಾತು ಮುಗಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry