ಕೋಟ್ಲಾದಲ್ಲಿ ಕದನ ಕುತೂಹಲ

7

ಕೋಟ್ಲಾದಲ್ಲಿ ಕದನ ಕುತೂಹಲ

Published:
Updated:

ನವದೆಹಲಿ: `ರಾಜಧಾನಿ~ಯನ್ನು ಇನ್ನೂ ಚಳಿಗಾಳಿ ಆವರಿಸಿಲ್ಲ. ಆದರೆ ಹೈದರಾಬಾದಿನ ಅಂಗಳದಲ್ಲಿ ಮಹೇಂದ್ರ ಸಿಂಗ್ ದೋನಿಯ ಅಬ್ಬರವನ್ನು ನೋಡಿದ್ದ ಇಂಗ್ಲೆಂಡ್ ಬಳಗಕ್ಕೆ ಇನ್ನೂ ನಡುಕ ಬಿಟ್ಟಿಲ್ಲ. ಸೋಲಿನ ಪ್ರಪಾತದಿಂದ ಪುಟಿದೆದ್ದು ನಿಂತಿರುವ ಟೀಂ ಇಂಡಿಯಾದ ಆಟಗಾರರು ಈಗ ಆತ್ಮವಿಶ್ವಾಸದ ಜೋಕಾಲಿಯಲ್ಲಿ ಜೀಕುತ್ತಿದ್ದರೆ, ಅಲಿಸ್ಟರ್ ಕುಕ್ ಮುಖದ ಮೇಲೆ ಮಂದಹಾಸ, ಕೋಚ್ ಆ್ಯಂಡಿ ಫ್ಲವರ್ ಮುಖದ ನಿರಾಳ ಭಾವ ಮಾಯವಾಗಿದೆ.ಸೋಮವಾರ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ಎರಡನೇ ಏಕದಿನ ಪಂದ್ಯವಾಡಲಿರುವ ಭಾರತದ ಆಟಗಾರರಲ್ಲಿ ಈಗ ಒತ್ತಡದ ಛಾಯೆ ಇಲ್ಲ. ಭಾನುವಾರ ಬೆಳಿಗ್ಗೆ ನೆಟ್ಸ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದ ಎಲ್ಲ ಆಟಗಾರರ ದೇಹಭಾಷೆಯಲ್ಲಿ ಅದಮ್ಯ ವಿಶ್ವಾಸ ತುಂಬಿ ತುಳುಕುತ್ತಿತ್ತು.ಭಾರತದ ನೆಲದಲ್ಲಿ ಮೊದಲ ಗೆಲುವಿನ ಉತ್ಸಾಹದಲ್ಲಿದ್ದ ಕೋಚ್ ಡಂಕನ್ ಫ್ಲೆಚರ್ ಕೂಡ ಉತ್ಸಾಹದಿಂದ ತರಬೇತಿ ನೀಡುತ್ತಿದ್ದರು. ಅದೇ ಮಧ್ಯಾಹ್ನದ ಬಿಸಿಲಿನಲ್ಲಿ ಅಭ್ಯಾಸಕ್ಕೆ ಬಂದ ಕುಕ್ ಬಳಗ ಗಂಭೀರವಾಗಿತ್ತು. ಅತ್ಯಂತ ಕಟ್ಟುನಿಟ್ಟಾಗಿ ಅಭ್ಯಾಸ ನಡೆಸಿತು.ಇಂಗ್ಲೆಂಡ್‌ನಲ್ಲಿ ಸೋತು ಸುಣ್ಣವಾಗಿದ್ದ ಭಾರತಕ್ಕೆ ಈ ಸರಣಿಯ ಮೊದಲ ಪಂದ್ಯದ ಜಯ ಟಾನಿಕ್ ಆಗಿ ಪರಿಣಮಿಸಿದೆ. ಇದೇ ಪ್ರವಾಸಿ ಬಳಗಕ್ಕೆ ಚಿಂತೆ. ಪ್ರಮುಖ ಆಟಗಾರರ ಗೈರು ಹಾಜರಿಯಲ್ಲಿಯೂ ಭಾರತ ತಂಡದ ಪ್ರದರ್ಶನಕ್ಕೆ ದಂಗಾಗಿರುವ ಇಂಗ್ಲೆಂಡ್ ದೆಹಲಿಯಲ್ಲಿ ಶತಾಯಗತಾಯ ಗೆದ್ದೇ ತೀರಬೇಕೆಂಬ ಛಲದಲ್ಲಿದೆ.ಆದರೆ, ಇಂಗ್ಲೆಂಡ್ ತಂಡದಲ್ಲಿ ಕೆವಿನ್ ಪೀಟರ್ಸನ್ ಬಿಟ್ಟರೆ ಉಳಿದ ಎಲ್ಲ ಆಟಗಾರರಿಗೆ ದೆಹಲಿಯ ಅಂಗಳ ಹೊಸದು. ಇದು ಆತಿಥೇಯ ಬೌಲರ್‌ಗಳಿಗೆ ಅನುಕೂಲವಾಗಬಹುದು. 2006ರಲ್ಲಿ ಭಾರತದ ವಿರುದ್ಧ 39 ರನ್‌ಗಳಿಂದ ಸೋತ ಇಂಗ್ಲೆಂಡ್ ತಂಡದಲ್ಲಿ ಪೀಟರ್ಸನ್ ಇದ್ದರು.ಇತಿಹಾಸ ಪುಟಗಳನ್ನು ತಿರುವಿದರೆ ಭಾರತಕ್ಕೆ ಇದು ಅದೃಷ್ಟದ ಪಿಚ್. ಕನ್ನಡಿಗ  ಅನಿಲ್ ಕುಂಬ್ಳೆ 1999ರಲ್ಲಿ ಪಾಕಿಸ್ತಾನ ವಿರುದ್ಧದ ಟೆಸ್ಟ್‌ನ ಒಂದೇ ಇನಿಂಗ್ಸ್‌ನಲ್ಲಿ  ಹತ್ತೂ ವಿಕೆಟ್‌ಗಳನ್ನು ಗಳಿಸಿ ವಿಶ್ವದಾಖಲೆ ನಿರ್ಮಿಸಿದ್ದು ಇಲ್ಲಿಯೇ. ಭಾರತ ತಂಡ ಈ ಐತಿಹಾಸಿಕ ಮೈದಾನದಲ್ಲಿ ಇದುವರೆಗೆ ಆಡಿರುವ ಒಟ್ಟು 16 ಪಂದ್ಯಗಳಲ್ಲಿ 9 ಗೆದ್ದು, 5 ಸೋತಿದೆ.ಅದರಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ ಮೂರು ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದು, ಮತ್ತೊಂದರಲ್ಲಿ ಸೋತಿತ್ತು. 2008ರ ಡಿಸೆಂಬರ್‌ನಲ್ಲಿ ಮುಂಬೈ ಮೇಲೆ ಭಯೋತ್ಪಾದನೆ ದಾಳಿಯಿಂದಾಗಿ ಇಲ್ಲಿ ನಡೆಯಬೇಕಿದ್ದ ಒಂದು ಪಂದ್ಯವನ್ನು ರದ್ದು ಮಾಡಲಾಗಿತ್ತು.2009ರಲ್ಲಿ ಭಾರತ ಮತ್ತು ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಕಳಪೆ ಪಿಚ್ ವಿವಾದ ಸೃಷ್ಟಿಯಾಗಿತ್ತು. ಯರ‌್ರಾಬಿರ‌್ರಿ ಪುಟಿಯುತ್ತಿದ್ದ ಚೆಂಡು ಶ್ರೀಲಂಕಾದ ಬ್ಯಾಟ್ಸ್‌ಮನ್‌ಗಳಿಗೆ ತೊಂದರೆಯಾಗಿದ್ದರಿಂದ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು.ನಂತರ ನಿರ್ಮಿಸಿರುವ ಹೊಸ ಪಿಚ್‌ನಲ್ಲಿ 2011ರ ವಿಶ್ವಕಪ್ ಟೂರ್ನಿಯ ನಾಲ್ಕು ಪಂದ್ಯಗಳನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಇದರಲ್ಲಿ ಭಾರತವು ಹಾಲೆಂಡ್ ವಿರುದ್ಧದ ಪಂದ್ಯದಲ್ಲಿ ಜಯ ಗಳಿಸಿತ್ತು.ಭಾರತದ ಮಟ್ಟಿಗೆ ದೆಹಲಿಯ ಪಂದ್ಯದಲ್ಲಿ ಹೈದರಾಬಾದಿನಲ್ಲಿ ಆಡಿದ ತಂಡವೇ ಇರುವುದು ಬಹುತೇಕ ಖಚಿತ. ಫೀಲ್ಡಿಂಗ್, ಬೌಲಿಂಗ್ ವಿಭಾಗಗಳು ಉತ್ತಮ ಪ್ರದರ್ಶನ ನೀಡಿರುವುದು ತಂಡದ ಪ್ಲಸ್ ಪಾಯಿಂಟ್. ಆದರೆ ಇಂಗ್ಲೆಂಡ್‌ನಲ್ಲಿ ಹೆಚ್ಚು ವೈಡ್‌ಬಾಲ್‌ಗಳನ್ನು ಹಾಕಿದ್ದ ಜೇಡ್ ಡೆನ್‌ಬ್ಯಾಚ್ ಅವರನ್ನು ಬದಲಾಯಿಸಬಹುದು.ಬ್ಯಾಟಿಂಗ್‌ನಲ್ಲಿ ಭಾರತಕ್ಕೆ ಸಮಸ್ಯೆಯಿದೆ. ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಇಲ್ಲದೇ ಇರುವುದು ಇನಿಂಗ್ಸ್‌ಗೆ ಉತ್ತಮ ಆರಂಭದ ಸಮಸ್ಯೆಯನ್ನು ತಂಡ ಎದುರಿಸುತ್ತಿದೆ. ಪಾರ್ಥಿವ್ ಪಟೇಲ್ ಮತ್ತು ಅಜಿಂಕ್ಯ ರಹಾನೆ ಮೊದಲ ಪಂದ್ಯದಲ್ಲಿ ಯಶಸ್ವಿಯಾಗಿರಲಿಲ್ಲ.ಇದರಿಂದಾಗಿ ಸ್ಥಳೀಯ ಹೀರೊ ಗೌತಮ್  ಗಂಭೀರ್ ಇನಿಂಗ್ಸ್ ಆರಂಭಿಸುವ ನಿರೀಕ್ಷೆಯಿದೆ. ಉತ್ತಮ ಆರಂಭ ದೊರಕಿದರೆ, ಮಧ್ಯಮ ಕ್ರಮಾಂಕದಲ್ಲಿ  ದೆಹಲಿಯ ವಿರಾಟ್ ಕೊಹ್ಲಿ, ಮೊದಲ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದ ಸುರೇಶ್ ರೈನಾ, ನಾಯಕ ಮಹೇಂದ್ರಸಿಂಗ್ ದೋನಿ ಮತ್ತು ರವೀಂದ್ರ ಜಡೇಜಾ ಮೇಲೆ ಹೆಚ್ಚು ಒತ್ತಡ ಬೀಳುವುದಿಲ್ಲ.

 

ಕೋಟ್ಲಾ ಅಂಗಳವು ಸ್ಪಿನ್ನರ್‌ಗಳಿಗೆ ಹೆಚ್ಚು ಸ್ನೇಹಿಯಾಗಿರುವುದು ಭಾರತಕ್ಕೆ ಖುಷಿಯ ಸಂಗತಿ. ಆದರೆ ಇಂಗ್ಲೆಂಡ್‌ನ ಗ್ರೆಮ್ ಸ್ವಾನ್ ಅವರನ್ನೂ ಕಡೆಗಣಿಸುವಂತಿಲ್ಲ. ಹೈದರಾಬಾದಿನಲ್ಲಿ ಪ್ರವಾಸಿ ತಂಡದ ಪರವಾಗಿ ಉತ್ತಮ ಬೌಲಿಂಗ್ ಮಾಡಿದ ಏಕೈಕ ಬೌಲರ್ ಅವರು.ಟಾಸ್ ಕೂಡ ಈ ಪಂದ್ಯದ ಫಲಿತಾಂಶದ ಮೇಲೆ  ಪ್ರಭಾವ ಬೀರುವುದು ಖಚಿತ. ಒಟ್ಟಿನಲ್ಲಿ ಈಗ ಐತಿಹಾಸಿಕ ಕೋಟ್ಲಾ ಕೋಟೆಯ ಅಂಗಳದಲ್ಲಿ ಕದನ ಕುತೂಹಲ ಆವರಿಸಿದೆ. ತಂಡಗಳು: ಭಾರತ: ಮಹೇಂದ್ರಸಿಂಗ್ ದೋನಿ (ನಾಯಕ), ಗೌತಮ್ ಗಂಭೀರ್, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಅಜಿಂಕ್ಯ ರಹಾನೆ, ಪಾರ್ಥಿವ್ ಪಟೇಲ್, ರವೀಂದ್ರ ಜಡೇಜಾ, ಪ್ರವೀಣಕುಮಾರ್, ಆರ್. ವಿನಯಕುಮಾರ್. ಆರ್. ಅಶ್ವಿನ್, ಉಮೇಶ್   ಯಾದವ್, ರಾಹುಲ್ ಶರ್ಮಾ, ಎಸ್. ಅರವಿಂದ್, ಮನೋಜ್ ತಿವಾರಿ. ಕೋಚ್: ಡಂಕನ್ ಫ್ಲೆಚರ್ಇಂಗ್ಲೆಂಡ್: ಅಲಿಸ್ಟರ್ ಕುಕ್ (ನಾಯಕ), ಜೊನಾಥನ್ ಬೈಸ್ಟೋ, ಇಯಾನ್ ಬೆಲ್, ರವಿ ಬೋಪಾರಾ, ಸಮಿತ್ ಪಟೇಲ್, ಕೆವಿನ್ ಪೀಟರ್ಸನ್, ಗ್ರೆಮ್ ಸ್ವಾನ್, ಜೋನಾಥನ್ ಟ್ರಾಟ್, ಸ್ಕಾಟ್ ಭಾರ್ಥವಿಕ್, ಟಿಮ್ ಬ್ರೆಸ್ನನ್, ಜೇಡ್ ಡೆನ್‌ಬ್ಯಾಚ್, ಸ್ಟೀವನ್ ಫಿನ್, ಕ್ರೇಗ್ ಕೀಸ್ವೆಟರ್, ಸ್ಟುವರ್ಟ್ ಮೀಕರ್, ಕ್ರಿಸ್ ವೋಕರ್.   ಕೋಚ್: ಆ್ಯಂಡಿ ಫ್ಲವರ್.ಅಂಪೈರ್: ಬಿಲ್ಲಿ ಬೌಡೆನ್, ಶಾವೀರ್ ತಾರಾಪುರೆ, ಟಿವಿ ಅಂಪೈರ್: ಸುಧೀರ್ ಅಸ್ನಾನಿ, ನಾಲ್ಕನೇ ಅಂಪೈರ್: ವಿನೀತ್ ಕುಲಕರ್ಣಿ, ಮ್ಯಾಚ್ ರೆಫರಿ: ರೋಷನ್ ಮಹಾನಾಮಾ.ಪಂದ್ಯದ ಆರಂಭ: ಮಧ್ಯಾಹ್ನ 2.30.ನೇರಪ್ರಸಾರ: ನಿಯೊ ಕ್ರಿಕೆಟ್ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry